ದೇವಕಾರ - ಶಾಪಗ್ರಸ್ತ ಸ್ವರ್ಗ
ಸುಮಾರು ೩ ವರ್ಷಗಳ ಹಿಂದೆ ಉದಯವಾಣಿಯಲ್ಲಿ ದೇವಕಾರದ ಬಗ್ಗೆ ಸೀತಾರಾಮ ಭಟ್ಟರ ಲೇಖನವೊಂದು ಬಂದಿತ್ತು. ದೇವಕಾರಿಗೆ ಭೇಟಿ ನೀಡಬೇಕೆಂದು ಅಂದೇ ನಿರ್ಧರಿಸಿಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಕದ್ರಾದಿಂದ ೨೫ಕಿಮಿ ದೂರದಲ್ಲಿದೆ ದೇವಕಾರು. ಕದ್ರಾ ಜಲಾಶಯದ ಒಂದು ಮಗ್ಗುಲಲ್ಲಿ ದೇವಕಾರಿದ್ದರೆ ಮತ್ತೊಂದು ಮಗ್ಗುಲಲ್ಲಿರುವುದು ಕೈಗಾ.
ನನ್ನ ೩ ಭೇಟಿಗಳಲ್ಲಿ ಮೊದಲ ಭೇಟಿಯೇ ಅವಿಸ್ಮರಣೀಯ. ಅಕ್ಟೋಬರ್ ೨, ೨೦೦೪ರಂದು ನಾವು ದೇವಕಾರ ಕಡವು ತಲುಪಿದಾಗ ಸಂಜೆ ೫ ಆಗಿತ್ತು. ದೋಣಿಯವನಿಗೆ 'ಕೂ' ಹಾಕಿ, ಆತ ಬಂದು ನಮ್ಮನ್ನು ಕದ್ರಾ ಹಿನ್ನೀರು ದಾಟಿಸಿ, ನಾವು ದೇವಕಾರ ಹಳ್ಳಿಯೊಳಗೆ ಪ್ರವೇಶಿಸಿದಾಗ ೬.೦೦ ದಾಟಿತ್ತು. ಗೆಳೆಯ ಲಕ್ಷ್ಮೀನಾರಾಯಣನಿಗೆ ರಾತ್ರಿಯ ಊಟ ಮತ್ತು ಮಲಗುವ ಸ್ಥಳದ ಬಗ್ಗೆ ಚಿಂತೆ. ದೋಣಿಯವನಲ್ಲಿ 'ಮಧುಕರ್ ಕಳಸ್' ಬಗ್ಗೆ ಕೇಳಿದಾಗ ಆತ ಮುಂದೆ ಹೋಗಿ ಅಲ್ಲಿ ಸಿಗುತ್ತಾರೆ ಎಂದು ನಮ್ಮನ್ನು ಸಾಗಹಾಕಿದ.
ಮುಂದೆ ಮನೆಯೊಂದರಿಂದ ಹತ್ತಾರು ಜನರು ಜೋರಾಗಿ ಮಾತಾಡುವ ಸದ್ದು. ನಮ್ಮನ್ನು ನೋಡಿದ ಕೂಡಲೇ ಮಾತು ಬಂದ್. ಸುಮಾರು ೨೦ರಷ್ಟು ಕಣ್ಣುಗಳು ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದವು. ಮಧುಕರ್ ಅಲ್ಲೇ ಇದ್ದರು. ಅವರ ಪರಿಚಯವಾಗಿ ನಂತರ ನಮ್ಮನ್ನೂ ಅಲ್ಲೇ ಕುತ್ಕೊಳ್ಳಿಸಿ ಮಾತುಕತೆ ಮುಂದುವರಿಯಿತು. ಮಾತುಕತೆ ನಿಧಾನವಾಗಿ ದೇವಕಾರದ ಕಡೆ ತಿರುಗಿತು.
ದೇವಕಾರಿನಲ್ಲಿ ರಸ್ತೆಗಳಿಲ್ಲ, ಅಂಗಡಿಗಳಿಲ್ಲ, ವಿದ್ಯುತ್ ಸಂಪರ್ಕವಿಲ್ಲ, ವಾಹನಗಳಿಲ್ಲ, ದೂರವಾಣಿ ಇಲ್ಲ, ಆಸ್ಪತ್ರೆಯಿಲ್ಲ ಮತ್ತು ನಾಲ್ಕನೇ ತರಗತಿಯ ನಂತರ ಶಾಲೆಯಿಲ್ಲ. ಹೆಚ್ಚಿನ ಹಳ್ಳಿಗರು ನಾಲ್ಕನೆ ತರಗತಿಯ ತನಕ ಓದಿದವರು. ಸುಮಾರು ೩೫೦ರಷ್ಟು ಜನಸಂಖ್ಯೆಯುಳ್ಳ ಪುಟ್ಟ ಗ್ರಾಮವಿದು. ಒಂದು ಕಡೆಯಿಂದ ಕದ್ರಾ ಜಲಾಶಯದ ಹಿನ್ನೀರು, ಮತ್ತೊಂದು ಕಡೆಯಿಂದ ಕೊಡಸಳ್ಳಿ ಜಲಾಶಯದ ಹಿನ್ನೀರು ಮತ್ತು ಮಗದೊಂದು ಕಡೆಯಿರುವುದೇ ಕೈಗಾ ಎಂಬ ಅಣುಭೂತ. ಯಲ್ಲಾಪುರ ತಾಲೂಕಿನ ಬಾರೆ ಸಮೀಪದಿಂದ ೩ ತಾಸುಗಳ ಕಾಲುದಾರಿಯಿದೆ ದೇವಕಾರಿಗೆ. ಇರುವ ನೇರ ಸಂಪರ್ಕವೆಂದರೆ ಇದೊಂದೆ. ಹಳ್ಳಿಗರ ಜೀವನ ಭತ್ತದ ಒಂದು ಬೆಳೆಯ ಮೇಲೆ ನಿರ್ಭರ. ಕೈಗಾದಿಂದ ವಿದ್ಯುತ್ ತಂತಿಗಳು 'ಸುಂಯ್' ಎಂದು ಶಬ್ದ ಮಾಡುತ್ತಾ ದೇವಕಾರ್ ಮೂಲಕ ಹಾದುಹೋದರೂ ಇಲ್ಲಿ ವಿದ್ಯುತ್ ಸಂಪರ್ಕ ಇಲ್ಲ!
ಇಲ್ಲಿಗಿರುವುದು ಕೂಡಾ ಒಂದೇ ಬಸ್. ರಾತ್ರಿ ೮-೮.೩೦ ರ ಸುಮಾರಿಗೆ ಕದ್ರಾದಿಂದ ಹೊರಡುವ ಈ ಬಸ್ಸು ಸುಮಾರು ೯-೯.೧೫ಕ್ಕೆ ದೇವಕಾರು ಕಡವಿನಿಂದ ಒಂದು ಕಿಮಿ ದೂರವಿರುವ ಬಸ್ ನಿಲ್ದಾಣದಲ್ಲಿ ಹಳ್ಳಿಗರನ್ನು ಇಳಿಸಿ ಹಾಗೆ ಮುಂದೆ ಕೊಡಸಳ್ಳಿಗೆ ತೆರಳಿ ಅಲ್ಲೇ ಹಾಲ್ಟ್. ಮರುದಿನ ಮುಂಜಾನೆ ೬.೧೫ರ ಸುಮಾರಿಗೆ ದೇವಕಾರು ಕಡವಿನ ಸಮೀಪದಿಂದ ಹಾದುಹೋಗುತ್ತದೆ. ಮುಂಜಾನೆಯ ಈ ಬಸ್ಸಿಗಾಗಿ ೫ ಗಂಟೆಗೇ ದೋಣಿಯವನನ್ನು ಎಬ್ಬಿಸಿ ಕರ್ರಗೆ ಭಯಾನಕವಾಗಿ ಕಾಣುವ ಕಾಳಿ ಹಿನ್ನೀರನ್ನು ದಾಟಿ ನಂತರ ೧ ಕಿಮಿ ನಡೆದು ರಸ್ತೆಯ ಬಳಿ ಬರಬೇಕು. ಈ ಬಸ್ಸು ಎಲ್ಲಾದರೂ ತಪ್ಪಿದರೆ ೨೫ಕಿಮಿ ನಡೆದೇ ಕದ್ರಾ ತಲುಪಬೇಕು ಅಥವಾ ಮರಳಿ ನಾಳೆ ಬರಬೇಕು. ಈ ಬಸ್ಸಿನಲ್ಲಿ ಕದ್ರಾಕ್ಕೆ ತೆರಳಿ ಮುಂಜಾನೆ ೧೦-೧೧ರ ಹಾಗೆ ತಮಗಿದ್ದ ಎಲ್ಲಾ ಕೆಲಸಗಳನ್ನು ಮುಗಿಸಿ ಮರಳಿ ಬರಲು ಹಳ್ಳಿಗರು ಮತ್ತೆ ರಾತ್ರಿ ೮.೩೦ರ ವರೆಗೆ ಕಾಯಬೇಕು! ರಾತ್ರಿ ಸುಮಾರು ೯.೩೦ಕ್ಕೆ ಕಡವಿನ ಬಳಿ ಆಗಮಿಸಿ ಮತ್ತದೇ ಪೆಟ್ರೊಮ್ಯಾಕ್ಸ್ ದೀಪದ ಸಹಾಯದಿಂದ ಕತ್ತಲಲ್ಲಿ ದೋಣಿಯಲ್ಲಿ ಹಿನ್ನೀರು ದಾಟುವುದು.
ಸಂಸದರಾಗಿದ್ದ ದಿವಂಗತ ವಸಂತ ಕುಮಾರ್ ಅಸ್ನೋಟಿಯವರು ದೇವಕಾರಿನ ಪುನರ್ವಸತಿಗೆ ಪ್ರಯತ್ನ ಮಾಡುತ್ತಿದ್ದರು. ಅವರ ಮರಣದ ನಂತರ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ರಾಕೇಶ್ ಶರ್ಮರವರು ಜನರ ಪುನರ್ವಸತಿಗೆ ಯತ್ನಿಸುತ್ತಿದ್ದರು. ಇವರಿಗೆ ವರ್ಗವಾದ ನಂತರ ಯಾರಿಗೂ ದೇವಕಾರದಲ್ಲಿರುವವರ ಬಗ್ಗೆ ಆಸಕ್ತಿ ಇಲ್ಲ. ಹತ್ತು ವರ್ಷಗಳ ಮೊದಲು ಕೈಗಾ ಕೇವಲ ಒಂದು ತಾಸಿನ ನಡಿಗೆಯಾಗಿತ್ತು. ಆದರೆ ಅಣುಸ್ಥಾವರ ಬಂದ ಮೇಲೆ ಆ ದಾರಿಯಲ್ಲಿ ತಿರುಗಾಟ ನಿಷೇಧಿಸಲಾಗಿದೆ. ಕದ್ರಾಗೆ ಇದ್ದ ನೇರ ರಸ್ತೆ ಸಂಪರ್ಕವನ್ನು ಕದ್ರಾ ಆಣೆಕಟ್ಟು ನುಂಗಿಹಾಕಿತು. ಯಲ್ಲಾಪುರಕ್ಕೆ ಇದ್ದ ಸಂಪರ್ಕ ಕೊಡಸಳ್ಳಿ ಆಣೆಕಟ್ಟಿನಿಂದ ಕಡಿದುಹೋಯಿತು. ದೇವಕಾರದ ಈ ತ್ರಿಶಂಕು ಸ್ಥಿತಿಗೆ ತನ್ನ ಆಣುಸ್ಥಾವರ ಪರೋಕ್ಷವಾಗಿ ಕಾರ್‍ಅಣವಾಗಿದೆ ಎಂಬುದನ್ನು ಅರಿತಿರುವ ಕೈಗಾ ಅಣುಸ್ಥಾವರ ಸಂಸ್ಥೆ ಒಂದಷ್ಟು ಮೊತ್ತವನ್ನು ಜಿಲ್ಲಾಧಿಕಾರಿ ಕಛೇರಿಯಲ್ಲಿ ಇಡುಗಂಟು ರೂಪದಲ್ಲಿ, ಪುನರ್ವಸತಿ ಸಮಯದಲ್ಲಿ ಬಳಸುವ ಸಲುವಾಗಿ ಇರಿಸಿದೆ. ಆದರೆ ಎರಡು ಆಣೆಕಟ್ಟುಗಳನ್ನು ನಿರ್ಮಿಸಿ ದೇವಕಾರಿನ ಇಂದಿನ ಸ್ಥಿತಿಗೆ ಪ್ರತ್ಯಕ್ಷವಾಗಿ ಕಾರಣವಾಗಿರುವ ಕರ್ನಾಟಕ ವಿದ್ಯುತ್ ನಿಗಮ ಮಾತ್ರ ತೆಪ್ಪಗೆ ಕುಳಿತಿದೆ. ಇರುವ ಒಂದೇ ಬಸ್ಸನ್ನು ರದ್ದುಮಾಡಲು ಕ.ರಾ.ರ.ಸಾ.ಸಂ ಕಾರಣವನ್ನು ಹುಡುಕುತ್ತಿದೆ.
- Read more about ದೇವಕಾರ - ಶಾಪಗ್ರಸ್ತ ಸ್ವರ್ಗ
- 6 comments
- Log in or register to post comments