ರಾಘವೇಂದ್ರಪಾಟೀಲರ "ತೇರು" ಕಾದಂಬರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಬಹುಮಾನ
ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ, ಐವತ್ತು ಸಾವಿರ ರೂ ಮತ್ತು ಪ್ರಶಸ್ತಿ ಫಲಕ, ಕನ್ನಡದ ಕಾದಂಬರಿ "ತೇರು" ಗೆ ಬಂದಿದೆ. ಇದನ್ನು ಬರೆದ ರಾಘವೇಂದ್ರಪಾಟೀಲರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಅಲ್ಲಿನ ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾರೆ. ಜೀವಶಾಸ್ತ್ರ ಅವರ ಅಧ್ಯಯನ ವಿಷಯ. ಒಟ್ಟು ಹದಿಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೇ ಆನಂದಕಂದ ಗ್ರಂಥಮಾಲೆಯನ್ನು ನಡೆಸುತ್ತಿದ್ದಾರೆ. ಸಂವಾದ ಎಂಬ ಸಾಹಿತ್ಯ ಪತ್ರಿಕೆಯನ್ನು ಕಳೆದ ಎರಡು ದಶಕಗಳಿಂದ ಸಂಪಾದಿಸುತ್ತಿದ್ದಾರೆ. ಹಳ್ಳಿಯ ಆ ಶಾಲೆಯ ಮಕ್ಕಳಿಗಾಗಿ ಕಳೆದ ಮೂರು ವರ್ಷಗಳಿಂದ ರಂಗತರಬೇತಿ ಶಿಬಿರ ನಡೆಸುತ್ತಿದ್ದಾರೆ. ಈ ವರ್ಷದ ನಾಟಕೋತ್ಸವನ್ನು ನೋಡಿ ನನಗೆ ಬಹಳ ಸಂತೋಷ ಮತ್ತು ಹೆಮ್ಮೆ ಅನ್ನಿಸಿತು. ಸಾಹಿತ್ಯದಲ್ಲಿ ಒಳ್ಳೆಯ ಕೆಲಸಮಾಡಲು, ನಮ್ಮ ಜನರ ಬದುಕನ್ನು ಒಂದಿಷ್ಟು ಉತ್ತಮಗೊಳಿಸಲು ಅಪಾರ ಹಣ, ನಗರದ ಮಾಧ್ಯಮಗಳ ಪ್ರಚಾರ ಇವೆಲ್ಲಕ್ಕಿಂತ ನಮ್ಮ ಸುತ್ತಲಿನವರ ಬಗ್ಗೆ ಕಳಕಳಿ, ಮಾಡುವ ಕೆಲಸದಲ್ಲಿ ನಿಷ್ಠೆ ಮುಖ್ಯ ಅನಿಸಿತು. ಪಾಟೀಲರಿಗೆ ಬಂದ ಪ್ರಶಸ್ತಿ ಸಜ್ಜನರೊಬ್ಬರಿಗೆ ದೊರೆತದ್ದು ಇನ್ನೂ ಅಚ್ಚರಿ ಸಂತೋಷಗಳನ್ನು ಮೂಡಿಸಿತು.