ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?

ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?

ಬರಹ

ನೀನಲ್ಲದನ್ಯದೈವವುಂಟೆಂಬವನ ಬಾಯ
ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ
ಎನ್ನ ಕೋಪವಡಗದಯ್ಯಾ
ಎನ್ನ ಬಿನ್ನಪವನವಧರಿಸು ಕೂಡಲಸಂಗಮದೇವಾ (ವಚನ ಸಂಖ್ಯೆ ೭೫೨, ಬಸವಣ್ಣನವರ ಷಟ್ಸ್ಥಲ ವಚನಗಳು, ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆ)
ಇದು ಬಸವಣ್ಣನ ಒಂದು ವಚನ. ಕೂಡಲಸಂಗಮನಲ್ಲದೆ ಬೇರೆಯ ದೇವರು ಉಂಟು ಎಂಬುವಾತನ ಬಾಯನ್ನು ಕೆನ್ನೆಯೆಲ್ಲ ಹರಿದುಹೋಗುವಂತೆ ಸೀಳುವವರೆಗೆ ನನ್ನ ಮುನಿಸು ಹೋಗದು, ನನ್ನ ಕೋಪ ತಣಿಯದು. ನನ್ನ ಬಿನ್ನಹವನ್ನು ಕೇಳು ಎಂಬುದು ವಚನದ ಅರ್ಥ.
ವಚನದ ಅರ್ಥದಲ್ಲಿ ತೊಡಕಿಲ್ಲ. ಆದರೆ "ದಯವೇ ಧರ್ಮದ ಮೂಲ" ಎಂದು ಹೇಳಿದ ಮನಸ್ಸು, ಹಬ್ಬಕ್ಕೆ ತಂದ ಹರಕೆಯ ಕುರಿಯನ್ನು ಕುರಿತು ಮರುಗಿದ ಮನಸ್ಸು ಈ ಮಾತನ್ನೂ ಹೇಳಲು ಸಾಧ್ಯವೇ? ಈ ಮಾತನ್ನು ಅರ್ಥಮಾಡಿಕೊಳ್ಳುವುದು, ವಿವರಿಸಿಕೊಳ್ಳುವುದು ಹೇಗೆ?
ಅನ್ಯ ಧರ್ಮದ ಬಗ್ಗೆ ಇಲ್ಲಿ ದೊಡ್ಡ ಪ್ರಮಾಣದ ಅಸಹನೆ ವ್ಯಕ್ತವಾಗಿದೆ. ನಾವೆಲ್ಲ ಇಂದು ಕಾಣುತ್ತಿರುವುದು ಇಂಥ ಅಸಹನೆಯನ್ನೇ. ಧರ್ಮದ ಇನ್ನೊಂದು ಮುಖ ಹಿಂಸೆ ಮತ್ತು ಅಸಹನೆ ಎನ್ನೋಣವೇ? ಅಥವಾ ಬಸವ ಕೂಡ ಸಾಮಾನ್ಯ ಮನುಷ್ಯರಂತೆ ಕೋಪ, ರೋಷ, ಹಿಂಸೆಗಳಿಗೆ ಒಳಗಾದವನೇ ಎನ್ನೋಣವೇ? ಅಥವಾ ಧರ್ಮದ ಆದರ್ಶ ಮತ್ತು ವಾಸ್ತವಗಳ ನಡುವೆ ದಾಟಲಾಗದ ಕಂದಕ ಇದ್ದೇ ಇರುತ್ತದೆ ಎನ್ನೋಣವೇ?
ಇಲ್ಲವೇ "ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ" ಎಂಬ ಮಾತು ಸುಮ್ಮನೆ ಹೇಳಿದ್ದು, ತನ್ನ ಧರ್ಮವನ್ನು ಒಲ್ಲದೆ ಅನ್ಯ ದೈವ ಮತ್ತು ಧರ್ಮವನ್ನು ಒಲಿದವರು "ಸಕಲ ಪ್ರಾಣಿಗಳು" ಎಂಬುವುದರಲ್ಲಿ ಸೇರುವುದಿಲ್ಲ ಎಂಬ ಸಂಕುಚಿತ ಮನೋಧರ್ಮ ಬಸವನದೂ ಆಗಿತ್ತು ಎನ್ನೋಣವೇ?
ಬಸವನ ನುಡಿಗಳ ಈ ಎರಡು ಧ್ರುವಗಳನ್ನು ನೀವು ಹೇಗೆ ವಿವರಿಸಿಕೊಳ್ಳುವಿರಿ?