ಅಗತ್ಯ ಔಷಧಿಗಳ ಬೆಲೆಯೇರಿಕೆ : ಗಾಯದ ಮೇಲೆ ಬರೆ

ಅಗತ್ಯ ಔಷಧಿಗಳ ಬೆಲೆಯೇರಿಕೆ : ಗಾಯದ ಮೇಲೆ ಬರೆ

ಬರುವ ಎಪ್ರಿಲ್ ತಿಂಗಳಿಂದ ಅಗತ್ಯ ಔಷಧಗಳ ಬೆಲೆಯು ಹೆಚ್ಚಳವಾಗುತ್ತಿರುವುದು ಈಗಾಗಲೇ ಬೆಲೆಯೇರಿಕೆಯಿಂದ ಬಳಲುತ್ತಿರುವ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಈ ಬಾರಿ ಔಷಧಗಳ ಬೆಲೆಗಳು ದಾಖಲೆ ಪ್ರಮಾಣದಲ್ಲಿ ಅಂದರೆ, ಶೇ.೧೨ಕ್ಕಿಂತಲೂ ಹೆಚ್ಚಳವನ್ನು ಕಾಣಲಿರುವುದು ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಆರ್ಥಿಕವಾಗಿ ಬಹುದೊಡ್ಡ ಹೊರೆಯಾಗಿ ಪರಿಣಮಿಸಲಿದೆ.

ಭಾರತದಲ್ಲಿ ಔಷಧಗಳ ಬೆಲೆಯನ್ನು ನಿಯಂತ್ರಿಸುವ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವೇ (ಎನ್ ಪಿ ಪಿ ಎ) ಈ ಏರಿಕೆಗೆ ಸಮ್ಮತಿಯ ಮೊಹರನ್ನು ಒತ್ತಿದೆ. ಕೇಂದ್ರ ಸರ್ಕಾರವು ಸೂಚಿಸಿದಂತೆ ಸಗಟು ಬೆಲೆ ಸೂಚ್ಯಂಕದ (ಡಬ್ಲ್ಯುಪಿಐ) ವಾರ್ಷಿಕ ಬದಲಾವಣೆಯು ೨೦೨೨ರಲ್ಲಿ ಶೇ ೧೨.೧೨ರಷ್ಟು ಇದೆ ಎಂದು ಎನ್ ಪಿ ಪಿ ಎ ತಿಳಿಸಿದೆ. ಇದಕ್ಕೆ ಅನುಗುಣವಾಗಿಯೇ ನೋವು ನಿವಾರಕಗಳು, ಸೋಂಕು ನಿವಾರಕಗಳು, ಹೃದಯಕ್ಕೆ ಸಂಬಂಧಿಸಿದ ಔಷಧಿಗಳು, ಆಂಟಿಬಯೋಟಿಕ್ ಗಳು ಸೇರಿದಂತೆ ಅಗತ್ಯ ಔಷಧಗಳ ಬೆಲೆಗಳು ಎಪ್ರಿಲ್ ನಿಂದ ಏರಿಕೆಯಾಗಲಿವೆ. ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯ ಭಾಗವಾಗಿರುವ ೩೮೪ ಮೂಲ ಔಷಧಗಳ (ಸಂಯುಕ್ತ ರಸಾಯನಗಳ) ಬೆಲೆಗಳನ್ನು ಎನ್ ಪಿ ಪಿ ಎ ನಿಯಂತ್ರಿಸುತ್ತದೆ. ಆದರೆ, ವಾಸ್ತವದಲ್ಲಿ ಈ ೩೮೪ ಮೂಲ ಔಷಧಗಳಿಂದ ೮೦೦ ಕ್ಕೂ ಹೆಚ್ಚು ಅಗತ್ಯ ಔಷಧಗಳನ್ನು ತಯಾರಿಸುವುದರಿಂದ ಇವೆಲ್ಲವುಗಳ ಬೆಲೆಯೂ ಹೆಚ್ಚಾಗುತ್ತದೆ. ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ ಮಧುಮೇಹ, ಕ್ಯಾನ್ಸರ್, ಹೈಪಟೈಟಿಸ್, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆ ಇತ್ಯಾದಿಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಗಳು ಕೂಡ ಸೇರಿವೆ.

ಉಳಿದ ನಿಗದಿತವಲ್ಲದ ಔಷಧಗಳ ಬೆಲೆಗಳು ಎನ್ ಪಿ ಪಿ ಎ ನಿಯಂತ್ರಣದ ವ್ಯಾಪ್ತಿಯಿಂದ ಹೊರಗಿವೆ. ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ ಇಲ್ಲದ ಇತರ ಔಷಧಗಳ ಬೆಲೆಗಳನ್ನು ವಾರ್ಷಿಕವಾಗಿ ಶೇಕಡಾ ೧೦ರವರೆಗೆ ಹೆಚ್ಚಿಸಲು ಔಷಧ ತಯಾರಕ ಕಂಪೆನಿಗಳಿಗೆ ಅವಕಾಶ ನೀಡಲಾಗಿದೆ. 

೨೦೨೧ರಲ್ಲಿ ಅಗತ್ಯ ಔಷಧಗಳ ದರವನ್ನು ಕೇವಲ ಶೇ. ೦.೫೩ರಷ್ಟು ಹೆಚ್ಚಿಸಲಾಗಿತ್ತು. ೨೦೨೦ರಲ್ಲಿ ಶೇ ೧.೮೮ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಕಳೆದ ವರ್ಷ ೨೦೨೨ರಲ್ಲಿ ಶೇ. ೧೦.೮ರಷ್ಟು ದರ ಏರಿಕೆ ಮಾಡಿದ್ದೇ ಇದುವರೆಗಿನ ಗರಿಷ್ಟ ವಾರ್ಷಿಕ ಹೆಚ್ಚಳವಾಗಿತ್ತು. ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮವಾಗಿ ಔಷಧ ತಯಾರಿಕೆ ಅಗತ್ಯವಾದ ಅಚ್ಚಾ ವಸ್ತುಗಳ ಕೊರತೆ ಉಂಟಾಗಿ ಅವುಗಳ ಬೆಲೆ ಏರಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ೨೦೨೨ರಲ್ಲಿ ಗರಿಷ್ಟ ಏರಿಕೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಹೇಳಲಾಗಿತ್ತು. ಆದರೀಗ, ಹಣದುಬ್ಬರ ತಕ್ಕಮಟ್ಟಿಗೆ ಹತೋಟಿಯಲ್ಲಿದ್ದರೂ ಔಷಧ ಬೆಲೆಗಳನ್ನು ಶೇ.೧೨ರಷ್ಟು ಏರಿಕೆ ಮಾಡಲು ಏಕೆ ಅವಕಾಶ ನೀಡಲಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆಯನ್ನು ಶೇ ೪ ರಷ್ಟು ಹೆಚ್ಚಳ ಮಾಡಿದೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ ಅನುಸಾರ ಪ್ರಸ್ತುತ ಹಣದುಬ್ಬರ ದರವು ಶೇ.೬ರ ಒಳಗಿದೆ. ಹೀಗಿರುವಾಗ ಅಗತ್ಯ ಔಷಧಗಳ ಬೆಲೆಗಳನ್ನು ಶೇ ೧೨ ಕ್ಕಿಂತ ಹೆಚ್ಚು ಮಾಡಲು ಅನುವು ಮಾಡಿಕೊಟ್ಟಿರುವುದು ಸಮರ್ಥನೀಯ ಕ್ರಮವಾಗಿ ಕಂಡುಬರುತ್ತಿಲ್ಲ.

ಪ್ಯಾರಸಿಟಮಾಲ್, ಆಂಟಿಬಯಾಟಿಕ್, ಅಜಿತ್ರೋಮೈಸಿನ್, ಬ್ಯಾಕ್ಟೀರಿಯಲ್ ಸೋಂಕು ನಿವಾರಕಗಳು ಮುಂತಾದವು ಅಗತ್ಯ ಔಷಧಗಳ ಪಟ್ಟಿಯಲ್ಲಿರುವ ಪ್ರಮುಖ ಔಷಧಗಳಾಗಿವೆ. ಈ ಪೈಕಿ ಕೆಲವು ಔಷಧಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಲಾಗುತ್ತಿದೆ. ಕೋವಿಡ್ ಪ್ರಕರಣಗಳು ಮತ್ತೆ ಕಾಣಿಸಿಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲೇ ಇವುಗಳ ಬೆಲೆ ಏರಿಕೆಯಾಗುತ್ತಿರುವುದು ಕಳವಳ ಹೆಚ್ಚಿಸಿದೆ. 

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೯-೦೩-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ