ಅಮೀಬಾ

ಅಮೀಬಾ

ಪುಸ್ತಕದ ಲೇಖಕ/ಕವಿಯ ಹೆಸರು
ಭಗೀರಥ
ಪ್ರಕಾಶಕರು
ಟೋಟಲ್ ಕನ್ನಡ, ಜಯನಗರ, ಬೆಂಗಳೂರು -೫೬೦೦೧೧
ಪುಸ್ತಕದ ಬೆಲೆ
ರೂ. ೩೫೦.೦೦, ಮುದ್ರಣ: ೨೦೨೪

‘ಅಮೀಬಾ’ ಎನ್ನುವ ರೋಚಕ ಕಾದಂಬರಿಯನ್ನು ಬರೆದದ್ದು ಉದಯೋನ್ಮುಖ ಕಾದಂಬರಿಕಾರರಾದ ಭಗೀರಥ. ಅವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಪುಸ್ತಕದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಅದರ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

“ನಾನು ನಾಲ್ಕನೇ ಅಥವಾ ಐದನೇ ತರಗತಿಯಲ್ಲಿದ್ದಾಗ ಮನು ಮತ್ತು ಮೀನು, ಅಕ್ಬರ್-ಬೀರಬಲ್, ತೆನಾಲಿರಾಮ, ಪಂಡಿತ ತಾರಾನಾಥ, ಪುಣ್ಯಕೋಟಿ, ಈ ರೀತಿಯ ಹಲವು ಸ್ವಾರಸ್ಯಕರ ಕಥೆಗಳ ಹೆಸರು ಮತ್ತು ಅದಕ್ಕೆ ಸಂಬಂಧಪಟ್ಟಂತೆ ಇರುತ್ತಿದ್ದ ಛಾಯಾಚಿತ್ರಗಳಿಗೆ ಹೆಚ್ಚು ಆಕರ್ಷಿತನಾಗುತ್ತಿದ್ದರಿಂದ ಶಿಕ್ಷಕರು ಹೇಳಿಕೊಡುವ ಮುನ್ನವೇ ಈ ಎಲ್ಲಾ ಕಥೆಗಳನ್ನು ಓದಿ ಮುಗಿಸಿಬಿಟ್ಟಿರುತ್ತಿದ್ದೆ ಎನ್ನುವುದಕ್ಕಿಂತ ಕಲ್ಪಿಸಿಕೊಂಡು ನೋಡುವುದಕ್ಕೆ ಶುರುಮಾಡಿದೆ. ಉದಾಹರಣೆಗೆ ಈ ಕಾದಂಬರಿಯಲ್ಲಿ ರೇವಂತ್ ಕುಮಾರ್ ಎಂಬ ಪಾತ್ರ ಹೇಳುವ ಅಕ್ಬರ್- ಬೀರಬಲ್ ಕಥೆ ನಾನು ಆರನೇ ತರಗತಿಯಲ್ಲಿದ್ದಾಗ ಸೋಮಶೇಖರ್ ಎಂಬ ಶಿಕ್ಷಕರು ಹೇಳಿದ್ದು, ಈಗ ಅದಕ್ಕೆ ಕೊಂಚ ಬಣ್ಣ ಕಟ್ಟಿ ನಾನು ಬರೆದಿದ್ದೇನಷ್ಟೇ. ಬಡತನವೇ ನನ್ನ ಬಾಲ್ಯ ಸ್ನೇಹಿತನಾಗಿದ್ದರೂ, ಅವನನ್ನು ಮರೆಸುವಲ್ಲಿ ಪ್ರತಿಸಾರಿ ಗೆದ್ದು ನನಗೇ ಅತ್ಯಾಪ್ತ ಸ್ನೇಹಿತನಾದವನು ಸಿನಿಮಾ. 

ಮನೆಯ ಸುತ್ತಲು ಕಾಣುತ್ತಿದ್ದ ಹೊಸ ಸಿನಿಮಾಗಳ ಪೋಸ್ಟರ್‌ಗಳು, ಇಸ್ತ್ರಿ ಅಂಗಡಿ, ಕಟಿಂಗ್ ಶಾಪ್‌ಗಳಲ್ಲಿದ್ದ ಟೇಪ್ ರೆಕಾರ್ಡ್‌ರ್ಗಳಿಂದ ಕೇಳಲು ಸಿಗುತ್ತಿದ್ದ ಅದೇ ಸಿನಿಮಾಗಳ ಹಾಡುಗಳು ಶಾಲೆಯಲ್ಲಿ ಹೇಳಿಕೊಡುತ್ತಿದ್ದ ವಿಷಯಗಳಿಗಿಂತ ಹೆಚ್ಚು ರುಚಿಸುತ್ತಿತ್ತು. "ಚಿಗುರಿದ ಕನಸು" ಎಂಬ ಸಿನಿಮಾದ ಪೋಸ್ಟರೊಳಗಿದ್ದ “ಶಿವರಾಮ ಕಾರಂತರ ಕಾದಂಬರಿ ಆಧಾರಿತ" ಎಂಬ ಸಾಲುಗಳು ನನ್ನನ್ನು ಸರ್ಕಾರಿ ಲೈಬ್ರೆರಿಯೊಳಗೆ ಮೆಂಬರ್ ಶಿಪ್ ಪಡೆಯುವಂತೆ ಮಾಡಿತು. ಅದೇ ದಾರಿಯಲ್ಲಿ ಮುಂದುವರಿದಾಗ ಕುವೆಂಪು, ತರಾಸು, ಅನಕೃ, ರವಿಬೆಳಗೆರೆ, ಡಿವಿಜಿ, ಬೀಚಿ, ಸರ್ವಜ್ಞ, ಕೆ.ವಿ.ಅಯ್ಯರ್, ಯಶವಂತ್ ಚಿತ್ತಾಲ, ಎಂ.ಕೆ.ಇಂದಿರಾ, ಸಾಯಿಸುತೆ, ವಾಣಿ, ತ್ರಿವೇಣಿ, ಆ್ಯಂಟನ್ ಚೆಕಾವ್, ಸತ್ಯಜಿತ್ ರೇ, ಶಿವರಾಮ ಕಾರಂತರು, ಪೂರ್ಣಚಂದ್ರ ತೇಜಸ್ವಿ, ಯಂಡಮೂರಿ ವೀರೇಂದ್ರನಾಥ್, ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ, ಕುಂ. ವೀರಭದ್ರಪ್ಪ, ದೇವನೂರು ಮಹಾದೇವ, ಎ.ಆರ್. ಮಣಿಕಾಂತ್, ಜಯಂತ್ ಕಾಯ್ಕಿಣಿ, ಸುಧಾಮೂರ್ತಿ, ಜೋಗಿ, ಜಗದೀಶ್ ಕೊಪ್ಪ, ಅಮೀಶ್, ಹೀಗೆ ಇನ್ನಷ್ಟು ಘಟಾನುಘಟಿ ಲೇಖಕರ ಕಥೆ-ಕಾದಂಬರಿಗಳನ್ನು ಪುಸ್ತಕಗಳ ಮುಖಾಂತರ ಕಣ್ಣುಂಬಿಕೊಳ್ಳುವಂತೆ ಮಾಡಿತ್ತು. 

ಜೊತೆಗೆ ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸ್ಸು ಕೂಡ ಮೊಳಕೆಯೊಡೆಯಲು ಕಾರಣವಾಯಿತು. ಸಿನಿಮಾರಂಗದೊಳಕ್ಕೆ ಬರಬೇಕೆಂಬ ಪ್ರಯತ್ನದಲ್ಲಿ ಮೊದಲು ನಾಟಕಗಳಲ್ಲಿ ಬ್ಯಾಕ್‌ಸ್ಟೇಜ್ ಹೆಲ್ಪರ್ ಆಗಿ, ನಂತರ ಧಾರಾವಾಹಿ, ತದ ನಂತರ ಸಿನಿಮಾವೊಂದರ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಅಲ್ಲಿಂದ ಅದೇ ಹಾದಿಯಲ್ಲಿ ಸಾಗುತ್ತಿರುವ ಪಯಣ ಯಶಸ್ವಿಯಾಗಿ ಸಾಗುತ್ತಲೇ ಇದೆ.

ಕಲೆ ಎಂಬುದನ್ನು ವಿಸ್ತರಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಅವಳಿ ಸಹೋದರರಾದ ಸಾಹಿತ್ಯ ಕ್ಷೇತ್ರ ಮತ್ತು ಸಿನಿಮಾ ಜಗತ್ತಿಗೆ ನಾನು ಸದಾ ಚಿರರುಣಿ. ಸದಾ ನನ್ನ ಬೆನ್ನ ಹಿಂದೆ ನಿಂತು ಕಾಯುತ್ತಿರುವ ನನ್ನಮ್ಮ ಮತ್ತು ನನ್ನಕ್ಕನ ಪಾದಗಳಿಗೆ ಕೋಟಿಕೋಟಿ ನಮಸ್ಕಾರಗಳು. ಪ್ರೂಫ್ ರೀಡಿಂಗ್ ಮಾಡಿದ ಪ್ರತಿಯೊಬ್ಬರಿಗೂ ಅನಂತ ಧನ್ಯವಾದಗಳು. ಅವರ ನಿತ್ಯಬಾಳ್ವೆಯಲ್ಲಿರುವ ಒಳ್ಳೆಯ ಮಾರ್ಗದ ದರ್ಶನವನ್ನು ನನಗೆ ಸಿಗುವಂತೆ ಅವಕಾಶ ಮಾಡಿಕೊಟ್ಟಿರುವ ಈ ಜನ್ಮದಲ್ಲಿ ದೇವರು ಕೊಟ್ಟ ಅಣ್ಣನಾಗಿರುವ ನನ್ನ ಸಿನಿಮಾರಂಗದ ಮತ್ತು ವೈಯಕ್ತಿಕ ಜೀವನದ ಏಕಮಾತ್ರ ಗುರುಗಳಾದ ಗುರುರಾಜ್ ಎಂ. ದೇಸಾಯಿರವರ ಪಾದಗಳಿಗೆ ನನ್ನ ಶಿರಮುಟ್ಟಿ ನಮಸ್ಕಾರಗಳನ್ನು ತಿಳಿಸುತ್ತೇನೆ. ಪ್ರತಿ ಸಾರಿ ಬೆನ್ನು ತಟ್ಟಿ ಮುಂದೆ ಹೋಗೆಂದು ಹೇಳುತ್ತಿರುವ ಆತ್ಮೀಯ ಗೆಳೆಯ ಪ್ರಶಾಂತ್ ಆರಾಧ್ಯನಿಗೆ ಆತ್ಮೀಯ ಅಪ್ಪುಗೆ. ನನ್ನ ಇಬ್ಬರು ಮಕ್ಕಳು ಕೈಹಿಡಿದು ಈ ಕಾದಂಬರಿಯನ್ನು ಬರೆಸಿದ್ದಕ್ಕೆ ಅವರಿಗೆ ಆಭಾರಿಯಾಗಿದ್ದೇನೆ. (ನನ್ನ ಮೊದಲನೇಯ ಮಗನ ಹೆಸರು ಫಾರೆಸ್ಟ್, ಎರಡನೇಯ ಮಗ ಚಾರ್ಲಿ. ಅವರಿಬ್ಬರೂ ಪರ್ಷಿಯನ್ ತಳಿ ಬೆಕ್ಕುಗಳು.) ಮುಖಪುಟ ವಿನ್ಯಾಸ ಮಾಡಿಕೊಟ್ಟ ಧನ್ಯವಾದಗಳು. ಕರಣ್ ಆಚಾರ್ಯರವರಿಗೆ 'ಕಡೆಯದಾಗಿ ಹಾಗೂ ಮುಖ್ಯವಾಗಿ ಟೋಟಲ್ ಕನ್ನಡ ಪ್ರಕಾಶಕರು ಮತ್ತು ಅದರ ಮಾಲೀಕರಾದ ವಿ. ಲಕ್ಷ್ಮೀಕಾಂತರು ಈ ಪುಸ್ತಕಕ್ಕೆ ಕೊಟ್ಟ ಪ್ರೋತ್ಸಾಹಕ್ಕಾಗಿ ಅನಂತ ಅನಂತ ಧನ್ಯವಾದಗಳು.

“ಕರ್ಮಯೋಗಿ ಶಂಕರ್‌ನಾಗ್" ಅವರು ಸಿನಿಮಾ ರಂಗದಲ್ಲಿ ಜನಪ್ರಿಯ ನಾಯಕ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡವರು. ಜೊತೆಗೆ ರಂಗಭೂಮಿಯೊಂದಿಗೂ ಅಷ್ಟೇ ಒಡನಾಟವನ್ನಿಟ್ಟುಕೊಂಡಿದ್ದರು. ಸದಾ ಹೊಸತನದ ಅನ್ವೇಷಣೆಯಲ್ಲಿರುತ್ತಿದ್ದ ಶಂಕರ್ ನಾಗ್ ಒಂದಷ್ಟು ಕಥೆಗಳನ್ನು ಮೊದಲು ನಾಟಕವನ್ನಾಗಿ ಮಾಡಿ ತದನಂತರ ಅದೇ ಕಥೆಯನ್ನು ಸಿನಿಮಾವನ್ನಾಗಿ ಮಾಡಿ ಗೆದ್ದ ನಿಸ್ಸಿಮರು. "ಕಥೆಯನ್ನು ಹೇಳುತ್ತಿರುವ ವೇದಿಕೆಗಳು ಯಾವುದಾಗಿದ್ದರೂ ಅದು ತಲುಪಬೇಕಾಗಿರುವುದು ಪ್ರೇಕ್ಷಕರನ್ನೇ" ಎನ್ನುವ ಸಾಲನ್ನು ನಂಬಿದವರಂತೆ ದುಡಿದವರು ಶಂಕರ್‌ರು. ಇದೇ ಸಾಲನ್ನು ನಂಬಿರುವ ನಾನು ವೆಬ್‌ ಸಿರೀಸ್ ಕಥೆಯೊಂದನ್ನು ಕಾದಂಬರಿಯ ಮುಖಾಂತರ ನಿಮ್ಮೆಲ್ಲರಿಗೂ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ. 

ಈ ಕಾದಂಬರಿಯ ಮೊದಲ ಕೆಲವು ಪುಟಗಳು ಸ್ವಲ್ಪ ನೀರಸವೆಂದು ಅನಿಸಿದರೂ ನಂತರ ಕಾದಂಬರಿ ತುಂಬಾ ವೇಗವಾಗಿ ಮುಂದುವರೆಯುತ್ತದೆ. ಈ ಕಾದಂಬರಿಯಲ್ಲಿ ನೀವು ಎಷ್ಟು ತನ್ಮಯರಾಗಿ ಬಿಡುತ್ತೀರೆಂದರೆ ಪುಸ್ತಕದ ೩೫೦ ಪುಟಗಳನ್ನು ಒಂದೇ ಗುಟುಕಿನಲ್ಲಿ ಓದಿ ಬಿಡುತ್ತೀರಿ ಎನ್ನುವಷ್ಟು. ರೋಚಕ ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಬಂದರೂ ಸ್ವಾರಸ್ಯವಾಗಿಲ್ಲ ಎನ್ನುವ ಕೊರತೆಯನ್ನು ‘ಅಮೀಬಾ’ ನೀಗಿಸುವಂತಿದೆ.