ಇರುವೆಯಿಂದ ಕಲಿಯೋಣ !

ಇರುವೆಯಿಂದ ಕಲಿಯೋಣ !

ಇರುವೆಗಳ ಬಗ್ಗೆ ಕೇಳಿದಾಗ ಚಿಕ್ಕ ಜೀವಿಯೆಂದು ತಾತ್ಸಾರ ಮಾಡುವವರೇ ಹೆಚ್ಚು. ಇರುವೆಗಳಲ್ಲಿ ಕಣಜ ಮತ್ತು ದುಂಬಿಗಳು ಸೇರಿದಂತೆ ಹನ್ನೆರಡು ಸಾವಿರಕ್ಕೂ ಅಧಿಕ ಪ್ರಭೇದಗಳಿವೆ. ಇರುವೆಗಳು ಚಿಕ್ಕವುಗಳಾದರೂ ಅವುಗಳ ಜೀವನ ಕ್ರಮ ಬಹಳ ಚೊಕ್ಕ. ಇರುವೆಗಳಿಂದ ಮನುಷ್ಯರು ಕಲಿಯಲೇ ಬೇಕಾದ ಅನೇಕ ವಿಷಯಗಳಿವೆ.       

ಸುಸಂಘಟನೆಯಲ್ಲಿ ಇರುವೆ ನಮಗೆ ಮಾದರಿ. ಇರುವೆಯ ಕಾಲನಿಯಲ್ಲಿ ಮೂರು ತೆರನಾದ ವರ್ಗಗಳಿವೆ. ಕೆಲಸಗಾರ ಇರುವೆ, ರಾಜ ಇರುವೆ ಮತ್ತು ರಾಣಿ ಇರುವೆ. ಇವುಗಳ ಕೆಲಸಗಳೂ ವಿಭಿನ್ನ. ರಾಜ ರಾಣಿ ಇರುವೆಗಳು ನಾಯಕತ್ವ ನೀಡುವುದರೊಂದಿಗೆ ಕೆಲಸಗಾರರ ರಕ್ಷಣೆ, ಸಂತಾನೋತ್ಪತ್ತಿಗಳನ್ನು ಮಾಡುತ್ತವೆ. ಕೆಲಸಗಾರ ಇರುವೆಗಳು ಕಾಲನಿಯ ಕೆಲಸಗಳನ್ನು ಮಾಡುತ್ತವೆ. ಆಹಾರ ಶೇಖರಣೆ, ವಾಸದ ಗೂಡು ರಚನೆ, ಗೂಡಿಗೆ ಬೇಕಾದ ಒದ್ದೆ ಮಣ್ಣನ್ನು ಪೂರೈಸುವುದು ಇತ್ಯಾದಿಗಳನ್ನು ಪರಸ್ಪರ ಹಂಚಿಕೊಂಡು ಸಂಘಟಿತವಾಗಿ ಮಾಡುತ್ತವೆ. ಅವುಗಳ ಒಗ್ಗಟ್ಟು ಇತರ ಜೀವಿಗಳಲ್ಲಿ ದುರ್ಲಭ.

ಇರುವೆಗಳ ಏಕತೆ ಮತ್ತು ನಿಸ್ವಾರ್ಥ ಗುಣಗಳನ್ನು ನಾವನುಸರಿಸಬೇಕು. ತಿನ್ನುವ ವಸ್ತುಗಳು ಕಣ್ಣಿಗೆ ಬಿದ್ದೊಡನೆ ಅವು ಮಾಹಿತಿಯನ್ನು ಪ್ರತಿ ಇರುವೆಗೂ ರವಾನಿಸುತ್ತವೆ. ನಂತರ ಎಲ್ಲವೂ ಒಟ್ಟಾಗಿ ಆ ಆಹಾರವನ್ನು ಮುತ್ತುತ್ತವೆ. ತಿನ್ನುತ್ತವೆ ಮತ್ತು ಕಾಲನಿಗೆ ಸಾಗಿಸುತ್ತವೆ. ಅವುಗಳ ದೇಹದ ತೂಕ ಮತ್ತು ಗಾತ್ರ ಮೀರಿದ ವಸ್ತುಗಳನ್ನು ಒಟ್ಟಾಗಿ ಸಾಗಿಸುವ, ಏಕತೆಗಿರುವ ಶಕ್ತಿಯ ಪಾಠ ಇರುವೆಗಳಿಂದ ಮಾತ್ರವೇ ನಮಗೆ ದೊರೆಯಲು ಸಾಧ್ಯ. ದೊಡ್ಡ ಆನೆಯಾದರೂ ಇರುವೆಗಳಿಗೆ ಭಯವಿಲ್ಲ. ಅವು ಏಕತೆಯಿಂದ ದಾಳಿಮಾಡಿದರೆ ಆನೆಗೂ ಉಳಿಗಾಲವಿಲ್ಲ. ಹಂಚಿ ತಿನ್ನುವುದನ್ನು ಇರುವೆಗಳು ನಮಗೆ ಕಲಿಸುತ್ತವೆ. ಇರುವೆಗಳಿಂದ ಆಹಾರ ಇರುವ ಸುದ್ದಿಯ ರವಾನೆ, ಒಟ್ಟಾಗಿ ಅದನ್ನು ಹಂಚಿ ತಿನ್ನುವುದು ನಾವು ನಿತ್ಯ ಕಾಣುವ ದೃಶ್ಯ. ನಾವು ಆಹಾರವನ್ನು ಹಂಚಿ ತಿನ್ನಲು ಸಿದ್ಧರಿಲ್ಲ. ತಮಗೆ ದೊರೆತ ಆಹಾರ ನಮಗೇ ಉಪಯೋಗಕ್ಕೆ ಸಿಗಬೇಕೆಂದು ಹೆಚ್ಚಿನ ಪ್ರಾಣಿಗಳು ಜಗಳವಾಡುವಾಗ ಇರುವೆಯ ನಿಸ್ವಾರ್ಥ ಗುಣವದು ಮಹಾನ್ ಅಲ್ಲವೇ?

ಇರುವೆಯ ಸಾಲು ಸೇನೆಯನ್ನು ನೆನಪಿಗೆ ತರುತ್ತದೆ. ಇರುವೆಯ ದಂಡು ಎಂದೇ ಹೇಳುವರು. ಎಷ್ಟೇ ಇರುವೆಗಳಿದ್ದರೂ ಅವು ಸಾಲನ್ನು ತಪ್ಪಿಸಿವುದೇ ಇಲ್ಲ. ಒಂದರ ಹಿಂದೆ ಒಂದು ಎಷ್ಟು ಚೆನ್ನಾಗಿ ಸಾಗುತ್ತವೆ! ಅವು ಸಾಗುವಾಗ ಅಪಘಾತಗಳೇ ಆಗುವುದಿಲ್ಲ. ಮನುಷ್ಯನು ಸಾಲನ್ನು ತಪ್ಪಿಸುವುದರಲ್ಲಿ ಮತ್ತು ಒಂದು ಗುಂಪಿನಿಂದ ಹೊರ ನಡೆಯುವುದರಲ್ಲಿ ನಿಸ್ಸೀಮ. ಮನುಷ್ಯನಿಗೆ ವಿಭಜನೆಯಲ್ಲಿ ಆಸಕ್ತಿ. ಇರುವೆಯ ಶಿಸ್ತಿನ ಜೀವನ ನಮಗೆ ಮಾದರಿಯಾಗಿದೆ.         

ಇರುವೆಗಳು ನಿರಂತರ ಸಕ್ರಿಯ. ಪಾದರಸದಂತೆ ಓಡಾಡುತ್ತಾ ಕಾಯಕದಲ್ಲೇ ಲೀನವಾಗಿರುವುದು ಇರುವೆಯ ಗುಣ. ಇರುವೆಗಳು ಒಂದೆಡೆ ನಿದ್ದೆ ಮಾಡಿರುವುದನ್ನು ನಾವು ನೋಡಲು ಸಾಧ್ಯವಿಲ್ಲ ಯಾಕೆಂದರೆ ಅವು ಸೋಮಾರಿತನ, ಆಲಸ್ಯಗಳನ್ನು ಮೈಗೂಡಿಸಿಕೊಂಡಿಲ್ಲ. ಬಸವಣ್ಣನವರು ಹೇಳುವ ಕಾಯಕವೇ ಕೈಲಾಸ ಎಂಬ ಮಾತು ಇರುವೆಗಳಿಗೆ ಚೆನ್ನಾಗಿ ಅರ್ಥವಾಗಿದೆ. ನಮಗೆ ಕೆಲಸ ಮಾಡಲು ಒಬ್ಬ ಯಜಮಾನ ಅಥವಾ ಉಸ್ತುವಾರಿ ಬೇಕೇ ಬೇಕು. ಇರುವೆಗಳಿಗೆ ಮೇಲಧಿಕಾರಿಗಳಿಲ್ಲ. ಹಾಗೆ ಮಾಡು, ಹೀಗೆ ಮಾಡು ಎಂದು ಪದೇ ಪದೇ ಹೇಳುವವರಿಲ್ಲ. ತಮ್ಮ ಕರ್ತವ್ಯಗಳನ್ನು ಸ್ವಯಂ ಪ್ರಜ್ಞೆಯಿಂದ ಇರುವೆಗಳು ಈಡೇರಿಸುತ್ತಾ ಇರುತ್ತವೆ. ನಮಗೆ ಕೆಲಸದ ಅವಧಿಗಿಂತ ವಿಶ್ರಾಂತಿಯ ಅವಧಿ ಅಧಿಕ ಬೇಕು. ಇರುವೆಗಳಿಗೆ ವಿಶ್ರಾಂತಿಯೇ ಇರದು. ದಿನದ ಇಪ್ಪತ್ತನಾಲ್ಕು ಘಂಟೆಯೂ ಅದರ ಕೆಲಸ ನಿರಂತರವಾಗಿರುತ್ತದೆ.

ಇರುವೆಗಳು ಚಿಕ್ಕವುಗಳಾದರೂ ಅವುಗಳ ಕಾಯಕ ಬಹಳ ವೇಗವಾಗಿ ಮುಗಿಯುತ್ತದೆ. ಗಾತ್ರವನ್ನು ಪರಿಗಣಿಸಿದಾಗ ಇರುವೆಗಳ ಕಾರ್ಯಕ್ಷಮತೆಯೂ ಬಹಳ ಹೆಚ್ಚು. ನಡಿಗೆಯ ವೇಗವೂ ಹೆಚ್ಚು. ಒಂದು ಇರುವೆಯನ್ನು ಹಿಡಿದು ನಿಲ್ಲಿಸುವುದು ಬಹಳ ಕಷ್ಟ. ಮನುಷ್ಯರನ್ನು ಹಿಡಿದು ನಿಲ್ಲಿಸುವುದು ಬಹಳ ಸುಲಭ.

ಇರುವೆಗಳು ಉತ್ತಮ ಯೋಜಕರು. ಮಳೆಗಾಲ ಚಳಿಗಾಲಗಳಿಗೆ ಸಾಕಾಗುವಷ್ಟು ಆಹಾರವನ್ನು ಅವು ಸಂಗ್ರಹಿಸಿಡುತ್ತವೆ. ನೆರೆ ಬರಲಿ, ಬರ ಬರಲಿ ಇರುವೆಗಳ ಆಹಾರ ಸಂಗ್ರಹಾಲಯ ಬರಿದಾಗದು. ಇರುವೆ ಲಘುವಲ್ಲ. ಅದನ್ನು ಲಘುವೆಂದು ಪರಿಗಣಿಸುವ ಮನುಜನೇ ಲಘು. ದಾಸರು ಮಾನವನನ್ನು ಹುಲು ಮಾನವ ಎಂದಿದ್ದಾರೆ. ಇರುವೆಗೆ ಹುಲು ಜೀವಿಯೆಂಬ ಪಟ್ಟವನ್ನು ಯಾರೂ ಕಟ್ಟುವುದಿಲ್ಲ. ಅವುಗಳ ಚತುರತನ, ಚುರುಕುತನ, ಸಹಕಾರ ಗುಣ, ಹಂಚಿ ತಿಂದು ಆನಂದಿಸುವ ಗುಣ, ಭವಿಷ್ಯದ ಬಗ್ಗೆ ಎಚ್ಚರಿಕೆ, ಸಂಘಟನೆ, ದುಡಿಮೆ, ಸ್ವಾರ್ಥರಹಿತ ಬದುಕು ಇತ್ಯಾದಿಗಳನ್ನು ಇರುವೆಗಳಿಂದ ಕಲಿಯೋಣ...

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ