ಇವಿಎಂ ಕುರಿತ ಗೊಂದಲ, ಶಂಕೆ ಇನ್ನಾದರೂ ನಿಲ್ಲಲಿ

ಇವಿಎಂ ಕುರಿತ ಗೊಂದಲ, ಶಂಕೆ ಇನ್ನಾದರೂ ನಿಲ್ಲಲಿ

ಎಲೆಕ್ಟ್ರಾನಿಕ್ ಮತಯಂತ್ರಗಳ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೆಲ ಸಂಸ್ಥೆಗಳು, ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿವಿಪ್ಯಾಟ್ ಸ್ಲಿಪ್ ಹಾಗೂ ಇವಿಎಂ ನ ಮತಗಳನ್ನು ತಾಳೆ ಹಾಕುವ ಅಗತ್ಯವಿಲ್ಲ ಎಂದು ಇದೇ ವೇಳೆ ನ್ಯಾಯಪೀಠ ಹೇಳಿದೆ. ಅಲ್ಲದೆ, ಹಿಂದೆ ಇದ್ದಂತೆ ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆ ಮರುಜಾರಿ ಮಾಡಬೇಕು ಎಂದು ಕೋರಿದ್ದ ಅರ್ಜಿದಾರರನ್ನು ‘ನೀವು ಮತ್ತೆ ಓಬಿರಾಯನ ಕಾಲಕ್ಕೆ ಹೋಗಲು ಬಯಸುತ್ತೀರಾ?’ ಎಂದು ತರಾಟೆ ತೆಗೆದುಕೊಂಡು ಆ ಮನವಿಯನ್ನೂ ತಿರಸ್ಕರಿಸಿದೆ. ಈ ತೀರ್ಪು ನೀಡುವ ವೇಳೆ ನ್ಯಾಯಮೂರ್ತಿಗಳು ‘ಕೆಲ ಸ್ಥಾಪಿತ ಹಿತಾಸಕ್ತಿಗಳು ದೇಶದ ಅಭಿವೃದ್ಧಿಯನ್ನು ಸಹಿಸದೆ ಎಲ್ಲಾ ವಿಷಯಗಳಲ್ಲೂ ತಕರಾರು ಮಾಡುತ್ತಿದ್ದಾರೆ. ದೇಶವು ಮಾಡಿರುವ ಸಾಧನೆಯನ್ನು ಪರಿಗಣಿಸಿದೆ ಘನತೆಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಅಂತಹ ಪ್ರಯತ್ನ ಮೊಳಕೆಯಲ್ಲೇ ಚಿವುಟಿ ಹಾಕಬೇಕು' ಎಂದು ತೀಕ್ಷ್ಣ ಮಾತುಗಳಲ್ಲಿ ಹೇಳಿದ್ದಾರೆ. ಇದರಿಂದ ಒಂದು ಸಂಗತಿಯಂತೂ ಸ್ಪಷ್ಟ. ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುವ ಪ್ರವೃತ್ತಿಗೆ ನ್ಯಾಯಾಂಗದಲ್ಲಿ ಉತ್ತೇಜನ ಸಿಗುವುದಿಲ್ಲ. 

ಇವಿಎಂ ಮತಗಳನ್ನು ತಿರುಚಬಹುದು ಎಂಬ ಶಂಕೆಗೆ ಪರಿಹಾರವಾಗಿ ಕೋರ್ಟ್ ೨ ಪರಿಹಾರ ಹೇಳಿದೆ. ೧. ಇವಿಎಂಗಳಿಗೆ ಚಿಹ್ನೆ ಲೋಡ್ ಮಾಡಿದ ಬಳಿಕ ಅದಕ್ಕೆ ಬಳಸಿದ ಯಂತ್ರಗಳನ್ನು ೪೫ ದಿನ ಸ್ಟ್ರಾಂಗ್ ರೂಮಲ್ಲಿ ರಕ್ಷಿಸಿಡಬೇಕು. ೨. ಸೋತ ಮೊದಲ ಇಬ್ಬರು ಅಭ್ಯರ್ಥಿಗಳು ಕೇಳಿದರೆ ಮೈಕ್ರೋಕಂಟ್ರೋಲರ್ ಗಳನ್ನು ಇವಿಎಂ ತಯಾರಕ ಇಂಜಿನಿಯರ್ ಗಳು ತಪಾಸಣೆ ನಡೆಸಬೇಕು. ಈ ಎರಡು ಪರಿಹಾರಗಳು ನ್ಯಾಯೋಚಿತವಾಗಿಯೇ ಇವೆ. ಮೇಲಾಗಿ, ಈಗಾಗಲೇ ಸಾಕಷ್ಟು ಬಾರಿ ಚುನಾವಣಾ ಆಯೋಗವು ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ ಎಂದು ಪಾರದರ್ಶಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ನಂಬಿಕೆ ಹಾಗೂ ವಿಶ್ವಾಸದ ಮೇಲೆ ನಿಂತಿರುವಾಗ ಪ್ರತಿಯೊಂದು ಸಂಗತಿಯನ್ನೂ ಅನುಮಾನದಿಂದ ನೋಡುವುದು ವ್ಯವಸ್ಥೆಯ ಬಗ್ಗೆ ಸಿನಿಕತೆಯನ್ನು ಸೃಷ್ಟಿಸುತ್ತದೆ ಎಂದು ಕೋರ್ಟ್ ಹೇಳಿರುವುದು ಗಮನಾರ್ಹ ಸಂಗತಿ. ಈ ತೀರ್ಪನ್ನು ಗೊಂದಲ ನಿವಾರಣೆಗೆ ಆಯೋಗ ಕೈಗೊಂಡ ಕ್ರಮಗಳನ್ನು ಹಾಗೂ ಇವಿಎಂ ತಯಾರಕ ಸರ್ಕಾರಿ ಕಂಪೆನಿಗಳ ಕಾರ್ಯಕ್ಷಮತೆಯನ್ನು ಗೌರವಿಸಿ ಇನ್ನಾದರೂ ಗೊಂದಲ ಹಾಗೂ ಶಂಕೆಗಳು ನಿಲ್ಲಬೇಕು.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೭-೦೪-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ