ಎರಡು ಕವಿತೆಗಳು

ಎರಡು ಕವಿತೆಗಳು

ಕವನ

ಹೊಳೆ  ದಾಟಿದ ಮೇಲೆ..

ಟಿಸಿಲನೊಡೆದು ಮರವು ಬೆಳೆದು

ಹೂವು ಹಣ್ಣು ಬಿಟ್ಟಿದೆ

ಪಕ್ಷಿಯೊಂದು ಹಾರಿ ಬಂದು

ಮರದಿ ಗೂಡು ಕಟ್ಟಿದೆ

 

ಹಣ್ಣು ತಿಂದು  ಖುಷಿಯ ಹೊಂದಿ

 ಪುಷ್ಟಿಯಾಗಿ ಬೆಳೆದಿದೆ

ಮೊಟ್ಟೆ ಯಿಟ್ಟು  ಮರಿಯ ಮಾಡಿ

ಬಳಗದೊಡನೆ ಬದುಕಿದೆ

 

ಸನಿಹದಲ್ಲೆ  ಬೇರೆ  ವೃಕ್ಷ

ಖಗದ ಮನವ ಸೆಳೆದಿದೆ

ವಾಸವಿದ್ದು  ಸುಖವನುಂಡ

ಮರದ ನೆರವ ಮರೆತಿದೆ

 

ಇಷ್ಟು ಕಾಲ ಬಾಳನಿತ್ತ

ಮರದ ನಾಶ ಬಯಸಿದೆ

ಆಳಕಿಳಿದು ಬೇರ ಕುಟುಕಿ 

ಕಡಿವ ಯತ್ನ ನಡಿದಿದೆ||

***

ಬೆಳೆಯ ನಡುವಿನ ಕಳೆ

ಬೆಳೆದು ಬೆಳೆಸುವ ಮನವ ಹೊಂದದೆ

ಬಳಗದೊಳಗಡೆ ಬರುವಿರೇತಕೆ

ಬೆಳೆಯ ನಡುವಲಿ ಹುಟ್ಟಿ ಬೆಳೆಯುವ ಕಳೆಯ ತರದಲ್ಲಿ

ಬಳಕೆಗೊದಗದೆ ದೂರದುಳಿಯುತ

ಮಳೆಗೆ ದೊರಕದ ಛತ್ರಿ ತರದಲಿ

ಬಳಿಕ ಬಳಗದ ಟೀಕೆ ಟಿಪ್ಪಣಿ ಹೊರಗೆ ಮಾತಲ್ಲಿ

 

ತರವಿದಲ್ಲವು ನಿಮ್ಮ ಚಟವಿದು

ಹರಿಯು ಮೆಚ್ಚನು ನಿಮ್ಮ ಹಾದಿಯ

ಬರುವ ದಿನದಲಿ ಮಾನವುಳಿಯದು ನಿಮ್ಮ ಚಟದಲ್ಲಿ

ಶರಧಿಯಂದದ ಬಾಳ ಪಯಣದೆ

ಗುರಿಯು ಬೇಕಿದೆ ಮುಂದಕೊಯ್ಯಲು

ಪರರ ಹಂಗಿಸೆ ಕಾಲಹರಣವು ಸಿಗದು ಫಲವಿಲ್ಲಿ||

-ಪೆರ್ಮುಖ ಸುಬ್ರಹ್ಮಣ್ಯ ಭಟ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್