ಓದಿನ ಒಕ್ಕಲು

ಓದಿನ ಒಕ್ಕಲು

ಪುಸ್ತಕದ ಲೇಖಕ/ಕವಿಯ ಹೆಸರು
ರಂಗನಾಥ ಕುಂಟನಕುಂಟೆ
ಪ್ರಕಾಶಕರು
ಚಿಂತನ ಚಿತ್ತಾರ, ಆಂದೋಲನ ಸರ್ಕಲ್ ಹತ್ತಿರ, ಮೈಸೂರು -೫೭೦೦೨೨
ಪುಸ್ತಕದ ಬೆಲೆ
ರೂ. ೪೦೦.೦೦, ಮುದ್ರಣ: ೨೦೨೩

“ಓದಿನ ಒಕ್ಕಲು” ಕೃತಿಯು ರಂಗನಾಥ ಕಂಟನಕುಂಟೆ ಅವರ ಸಾಹಿತ್ಯ ಚಿಂತನೆಯ ಬರೆಹಗಳ ಸಂಕಲನವಾಗಿದೆ. ಓದಿನ ಒಕ್ಕಲು' ಸಾಹಿತ್ಯ ಚಿಂತನೆಯ ಬರೆಹಗಳು, ಸಾಹಿತ್ಯದ ಮೂಲಕ ಸಮಾಜ, ಸಂಸ್ಕೃತಿ, ಅಧಿಕಾರ ರಾಜಕಾರಣ, ಭಾಷೆ, ಜನಪದ ಸಾಹಿತ್ಯ, ಹೆಣ್ಣು ಕಥನಗಳನ್ನು ಒಳಗೊಂಡಂತೆ ಲೋಕದ ಸ್ಥಾಪಿತ ಮೌಲ್ಯಗಳನ್ನು, ಬದುಕಿನ ವಿವಿಧ ಮಗ್ಗುಲುಗಳನ್ನು ಮುಖಾಮುಖಿಯಾಗಲು ಯತ್ನಿಸ ಲಾಗಿದೆ. ಸಾಹಿತ್ಯದ ನೆಲೆಯಲ್ಲಿ ನಿಂತು ಲೋಕಸಂವಾದ ಮತ್ತು ವ್ಯಕ್ತಿಯ ಒಳಸಂವಾದ ನಡೆಸಲಾಗಿದೆ. ಲೋಕಸಂವಾದ ನಡೆಸುತ್ತಲೇ ಸಾಹಿತ್ಯ ಸಂವಾದವನ್ನು ನಡೆಸಲಾಗಿದೆ. ಹೀಗೆ ಸಂವಾದ ನಡೆಸುವ ಹೊತ್ತಿನಲ್ಲಿ ಇದುವರೆಗೂ ಕಟ್ಟಿಕೊಂಡಿರುವ ಕಥನಗಳಲ್ಲಿನ ತಾತ್ವಿಕ ಸಮಸ್ಯೆ ಗಳನ್ನೂ, ಸ್ಥಾಪಿತ ಮೌಲ್ಯಗಳನ್ನು ಎದುರುಗೊಳ್ಳಲು ಯತ್ನಿಸಲಾಗಿದೆ. ನಮ್ಮ ಕೆಲವು ಆಲೋಚನೆಗಳಲ್ಲಿ ಹುದುಗಿರುವ ಅಪಕಲ್ಪನೆಗಳನ್ನು ಬಿಡಿಸಿನೋಡುವ ಕೆಲಸ ಮಾಡಲಾಗಿದೆ. 

ಲೇಖಕರಾದ ರಂಗನಾಥ ಕುಂಟನಕುಂಟೆ ಇವರು ತಮ್ಮ ಕೃತಿಗೆ ಬರೆದ ಲೇಖಕರ ಮಾತುಗಳಿಂದ ಆಯ್ದ ಭಾಗ ಇಲ್ಲಿದೆ...“ಓದಿನ ಒಕ್ಕಲು' ಸಾಹಿತ್ಯ ಚಿಂತನೆಯ ಬರೆಹಗಳು. 'ಓದಿನ ಜಾಡು' ಕೃತಿಯ ನಂತರ ಪ್ರಕಟವಾಗುತ್ತಿರುವ ಸಾಹಿತ್ಯ ವಿಮರ್ಶೆಯ ಕೃತಿಯಿದು. ಇಲ್ಲಿ ಸಾಹಿತ್ಯದ ಮೂಲಕ ಸಮಾಜ, ಸಂಸ್ಕೃತಿ, ಅಧಿಕಾರ ರಾಜಕಾರಣ, ಭಾಶೆ, ಜನಪದ ಸಾಹಿತ್ಯ, ಹೆಣ್ಣು ಕಥನಗಳನ್ನು ಒಳಗೊಂಡಂತೆ ಲೋಕದ ಸ್ಥಾಪಿತ ಮೌಲ್ಯಗಳನ್ನು, ಬದುಕಿನ ವಿವಿಧ ಮಗ್ಗುಲುಗಳನ್ನು ಮುಖಾಮುಖಿಯಾಗಲು ಪ್ರಯತ್ನಿಸಲಾಗಿದೆ. ಸಾಹಿತ್ಯ ಕೇಂದ್ರದಿಂದ 'ಲೋಕ ಸಂವಾದ' ಮತ್ತು ವ್ಯಕ್ತಿಯ ಒಳಸಂವಾದ ನಡೆಸಲಾಗಿದೆ.

ಸಾಹಿತ್ಯ ವಿಮರ್ಶೆ ಲೋಕವಿಮರ್ಶೆಯೂ ಆಗಿರುವ ಈಗಿನ ದಿನಮಾನಗಳಲ್ಲಿ ಸಾಹಿತ್ಯವನ್ನು 'ಶುದ್ಧ ಸಾಹಿತ್ಯ'ಕ್ಕೆ ಮಾತ್ರ ಸೀಮಿತಗೊಳಿಸಿ ನೋಡಲು ಸಾಧ್ಯವೇ ಇಲ್ಲ. ಹಾಗಾಗಿ ಸಾಹಿತ್ಯ ಮತ್ತು ಲೋಕಗಳ ಸಂವಾದವೇ ಇಂದಿನ ವಿಮರ್ಶೆಯ ಕೇಂದ್ರವೂ ಆಗಿ ಎರಡರ ವಿಮರ್ಶೆಯು ಒಟ್ಟಿಗೆ ನಡೆಯುತ್ತಿರುತ್ತದೆ. ಹಾಗಾಗಿ ಇಲ್ಲಿನ ಬರೆಹಗಳಲ್ಲಿ ಲೋಕಸಂವಾದ ನಡೆಸುತ್ತಲೇ ಸಾಹಿತ್ಯ ಸಂವಾದವನ್ನು ನಡೆಸಲಾಗಿದೆ. ಹೀಗೆ ಸಂವಾದ ನಡೆಸುವ ಹೊತ್ತಿನಲ್ಲಿ ಇದುವರೆಗೂ ಕಟ್ಟಿಕೊಂಡಿರುವ ಕಥನಗಳಲ್ಲಿನ ತಾತ್ವಿಕ ಸಮಸ್ಯೆಗಳನ್ನೂ, ಸ್ಥಾಪಿತ ಮೌಲ್ಯಗಳನ್ನು ಎದುರುಗೊಳ್ಳುವ ಕೆಲಸ ಮಾಡಲಾಗಿದೆ. ಹಾಗಾಗಿ ಇದುವರೆಗಿನ ನಮ್ಮ ಕೆಲವು ಆಲೋಚನೆಗಳಲ್ಲಿ ಹುದುಗಿರುವ ಅಪಕಲ್ಪನೆಗಳನ್ನು ಬಿಡಿಸಿನೋಡುವ ಕೆಲಸವನ್ನು ಮಾಡಲಾಗಿದೆ. ಆ ಮೂಲಕ ಕನ್ನಡದ ಚಿಂತನೆಗಳನ್ನು ಇನ್ನೊಂದಿಷ್ಟು ವಿಸ್ತರಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂಬ ನಮ್ರ ನಂಬಿಕೆಯಿದೆ.

ಇದು ಏನೇ ಇದ್ದರೂ ದಿನಗಳು ಉರುಳಿದಂತೆ ಲೋಕವನ್ನು ಅರಿತುಕೊಳ್ಳುವ ನೋಟಕ್ರಮಗಳಲ್ಲಿ ಬದಲಾವಣೆಗಳು ನಡೆಯುತ್ತಿರುತ್ತವೆ. ಅಂದರೆ ವಿಮರ್ಶೆಯಲ್ಲಿ 'ಸಾರ್‍ವತ್ರಿಕ' ಎಂಬ ಚಿಂತನೆ-ಸಿದ್ದಾಂತಗಳು ಇರುವುದಿಲ್ಲ. ಅವು ತಲೆಮಾರಿನಿಂದ ತಲೆಮಾರಿಗೆ ಪಲ್ಲಟಗೊಳ್ಳುತ್ತಲೇ ಇರುತ್ತವೆ. ಬದಲಾದ ಸಂದರ್ಭದಲ್ಲಿ ನಾವು ಹೇಗೆ ಸಾಹಿತ್ಯ ಕಥನಗಳನ್ನು ಎದುರುಗೊಳ್ಳಬಹುದು ಎಂಬುದನ್ನು ಅರಿಯಲು ಇಲ್ಲಿನ ಬರೆಹಗಳ ಮೂಲಕ ಯತ್ನಿಸಲಾಗಿದೆ. ಇಂದು ವಿಮರ್ಶೆಯನ್ನೇ ಸಹಿಸದ ಕಾಲದಲ್ಲಿ ಸಮಾಜವಿದೆ. ಇಂತಹ ಹೊತ್ತಿನಲ್ಲಿ ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಕೊಳ್ಳುವುದು ಬಲುಕಷ್ಟದ ಕೆಲಸ, ಇದನ್ನು ಅರಿತೇ ಓದಿಗೆ ದಕ್ಕಿದ ಅನುಭಗಳನ್ನು ಬರೆಹವಾಗಿಸುವ ಕೆಲಸ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿಯೇ ಇಲ್ಲಿನ ಬರೆಹಗಳನ್ನು ಎದುರುಗೊಳ್ಳಬೇಕಿದೆ.

ಈ ಬರೆಹಗಳನ್ನು ಈ ಕಾಲದ ಚೌಕಟ್ಟಿನಲ್ಲಿಟ್ಟು ನೋಡಬೇಕಿದೆ. ಇವುಗಳನ್ನು ಓದಿದವರು ನಿಶ್ಟುರವಾದ ಅಭಿಪ್ರಾಯಗಳನ್ನು ತಿಳಿಸಿದರೆ ನನ್ನ ಸಾಹಿತ್ಯ ಚಿಂತನೆಗಳನ್ನು ಇನ್ನಶ್ಟು ಸ್ಪಶ್ಟಪಡಿಸಿಕೊಳ್ಳಲು ಸಾಧ್ಯವಾಗುವುದು. ಹಾಗಾಗಿ ನಿಮ್ಮ ನಿಶ್ಟುರ ಅಭಿಪ್ರಾಯಗಳನ್ನು ಮುಕ್ತವಾಗಿ ಸ್ವೀಕರಿಸುತ್ತೇನೆ.” ಸುಮಾರು ೩೦೦ ಪುಟಗಳಷ್ಟಿರುವ ಈ ಕೃತಿಯು ಸೊಗಸಾದ ಓದಿಗೆ ಸಹಾಯಕ.