ಕಾಡುಹಂದಿಯ ಕಣ್ಣು ನನ್ನ ಮೇಲೆ..! (ಭಾಗ 2)

ಕಾಡುಹಂದಿಯ ಕಣ್ಣು ನನ್ನ ಮೇಲೆ..! (ಭಾಗ 2)

ಆದರೆ ಈ ಹಂದಿಗಳು ಮತ್ತು ಆನೆಗಳು ಅಪಾಯದ ಸಂದರ್ಭದಲ್ಲಿ ಎದುರುಗಡೆ ಇರುವ ಶತ್ರುಗಳನ್ನು ಹೊಡೆದುರುಳಿಸುವ ಕನಿಷ್ಟ ಪ್ರಯತ್ನವನ್ನು ಮಾಡೇ ಮಾಡುತ್ತವೆ. ಹಂದಿ ತಿವಿಯಲು ಬಂದಾಗ ಅದು ಬರುವ ಸರಳರೇಖೆಯಿಂದ ಆಚೆ-ಈಚೆ ಸರಿಯಬೇಕು ಎಂದು ಅಪ್ಪ, ಅಣ್ಣ ಇತರರು ಹೇಳಿದ್ದು ಕೇಳಿದ್ದೇನೆ. ಅದು ನನಗೆ ಅರಿವಿದೆ ಆದರೆ ಆ ಸರ್ಕಾರಿ ಜಾಲಿ ಗಿಡಗಳ ಮುಳ್ಳಿನ ವ್ಯೂಹದಲ್ಲಿ ಅರ್ಧ ಅಡಿಯೂ ಸರಿದಾಡಲು ಸ್ಥಳಾವಕಾಶ ಇರಲಿಲ್ಲ..! ತಕ್ಷಣಕ್ಕೆ ಮಂದೆಹೆಜ್ಜೆ ಇಡುವುದನ್ನು ತತ್‌ಕ್ಷಣವೇ ನಿಲ್ಲಿಸಿ ಉಸಿರು ಬಿಗಿಹಿಡಿದು ಮುಂದೆ ಇಡುತ್ತಿದ್ದ ಹೆಜ್ಜೆಗಳನ್ನು ನಿಧಾನಕ್ಕೆ ಹಿಂದೆ ಹಿಂದೆ ಇಡುತ್ತಾ ಸರಿದೆ. ಶಬ್ಧಮಾಡಿದರೆ ಎದ್ದೇಳುವ ಅಪಾಯ ಹೆಚ್ಚಿತ್ತು. ಎಲ್ಲಿ ಎದ್ದುಬಂದು ನನ್ನನ್ನು ತಿವಿದು ಹಾಕುತ್ತೋ ಎಂದು ತುಂಬಾ ಭಯವಾಗಿತ್ತು. ಈ ಘಟನೆಗೆ ಕೆಲವೇ ದಿನಗಳ ಮುಂಚೆ ಯುಗಾದಿಯ ನಂತರ ನಮ್ಮ ಕಡೆ ಹಂದಿಯ ಶಿಕಾರಿ ಮಾಡುವವರು. ಅದು ಗ್ರಾಮಸ್ಥರು ಹುಕುಂ ಹೊರಡಿಸುತಿದ್ದರು. ಪ್ರತಿ ಮನೆಗೆ ಒಬ್ಬರು ಶಿಕಾರಿಯ ಬೇಟೆಯ ಗುಂಪಿಗೆ ಜೊತೆಯಾಗಿ ಹೋಗಲೇ ಬೇಕಿತ್ತು. ತಮ್ಮ ಮನೆಯಲ್ಲಿದ್ದ ಮಾರಕಾಸ್ತ್ರದೊಂದಿಗೆ ತೆರಳುತಿದ್ದರು. ಇದು ಒಂದು ಮೋಜಿನ , ವಿನೋದದ, ಮನೋರಂಜನೆಯ ಸಂಗತಿಯಾಗಿ ಯುವ ಸಮೂಹ, ಹಳೇ ಶಿಕಾರಿ ಪಂಟರೆಲ್ಲಾ ಬಹು ಸಂತಸದಿ ಯುದ್ಧೋತ್ಸಹ ಉನ್ಮಾದದಿಂದ ಕೇಕೆ ಹಾಕುತ್ತಾ ಶಿಕಾರಿಗೆ ತೆರಳುತಿದ್ದರು. ಮೊದಲದಿನ ಶಿಕಾರಿ ಆಗದೇ ಇದ್ದರೆ ಎರಡನೇ ದಿನ ಇನ್ನಷ್ಟು inspiration ನಿಂದ ದಿಕ್ಕನ್ನು ಬದಲಿಸಿ ಬೇರೆ ಬೇರೆ ಕಡೆಗೆ ತೆರಳುತ್ತಿದ್ದರು. ಹಂದಿಯ ಬೇಟೆಯಾಡಿ ಕೊಂದ ಹಂದಿಗಳನ್ನು ಅಲಂಕೃತಗೊಳಿಸಿ ಟ್ರಾಕ್ಟರ್ /ಎತ್ತಿನಗಾಡಿಯಲ್ಲಿ ತಮಟೆ ನಗಾರಿ ಭಾರಿಸುತ್ತಾ , ಕುಣಿಯುತ್ತಾ, ಹೋಳಿ-ಯುಗಾದಿ ಮಿಶ್ರಣ ಮಾಡಿ ಕುಂಕುಮ ಭಂಡಾರಗಳನ್ನು ಪರಸ್ಪರರು ಹಚ್ಚುವುದು ಎರಚುತ್ತಾ ತಮಟೆಯ ವಿವಿಧ ಬೀಟ್ ಗೆ ವಿಭಿನ್ನವಾಗಿ ಸ್ಟೆಪ್ ಹಾಕುತ್ತಾ ಕೆಲವರು ಸ್ಟಂಟ್ ಮಾಡುತ್ತಾ ಊರುತುಂಬಾ ಮೆರವಣಿಗೆ ಮಾಡುತ್ತಿದ್ದರು. ಹಂದಿ ಶಿಕಾರಿಮಾಡಿದ ವೀರನಿಗೆ ವಿಶೇಷ ಸನ್ಮಾನ ಮೆರವಣಿಗೆಯಲ್ಲಿ ಟ್ರಾಕ್ಟರ್ನಲ್ಲಿ ಹಂದಿಗಳ ಜೊತೆಗೆ ನಿಂತುಕೊಳ್ಳುವ/ಕುಳಿತುಕೊಳ್ಳುವ ಅವಕಾಶ ಇದ್ದುದರಿಂದ ಹೀರೋ ಆಗಲು ಪ್ರತಿಯೊಬ್ಬರೂ ಹವಣಿಸುತಿದ್ದರು. ಈತರ ಶಿಕಾರಿ ಮಾಡಿ ಮೆರವಣಿಗೆ ಮಾಡಿದರೆ ಉತ್ತಮ ಮಳೆ ಬೆಳೆಯಾಗುವುದೆಂಬ (ಮೂಢ) ನಂಬಿಕೆ ಇತ್ತು. ಈಗ ಇದು ನಿಷೇಧಿಸಲಾಗಿದೆ. ಅಂದು ಆ ಬೇಟೆಗೆ ತೆರಳಿದ್ದವರ ಜೊತೆಯಲ್ಲಿ ನಾನೂ ಹೋಗಿದ್ದೆ. ಹಂದಿಯನ್ನು ಎಲ್ಲಿ ಹೇಗೆ ಹೊಡೆಯುವರು ಎಂಬ ಕುತೂಹಲದಿಂದ ನೋಡಲು ಕಾತುರನಾಗಿ ನಾನು ಅವರ ಜೊತೆ ಹೋಗಿದ್ದೆ. ಅವತ್ತೇನಾಯಿತೆಂದರೇ ಪೊದೆಯಿಂದ ಒಂದು ದೊಡ್ಡ ಹಂದಿ ಎದ್ದು ಓಡಿದೆ. ನಾವು ಎಂಟತ್ತು ಜನ ಅದನ್ನು ದಾಟಿ ಆಗಲೇ ಸ್ವಲ್ಪಮುಂದೆ ಹೋಗಿದ್ದೆವು. ಹಂದಿ ಹೊರಬಂದ ತಕ್ಷಣ ಅದನ್ನು ಕಂಡವರು ಕೇಕೆ ಹಾಕಿ ಕೂಗಿದರು. ಹಿಂದಿರುಗಿ ನೋಡಲು ಅದು ನಮ್ಮ ಕಡೆ ಮುನ್ನುಗ್ಗಿ ಬರುತ್ತಿದೆ. ಅದು ಬರುತ್ತಿರುವ ಪರಿ ನೋಡಿದರೆ ಸುಮಾರಾದ ಎಮ್ಮೆಯ ಕರುವೋ ಕೋಣದ ಕರುವಿನಂತೆ ಕಾಣುತ್ತಿತ್ತು. ನಮ್ಮ ಜೊತೆ ಇದ್ದ ರಾಮುಡು ಎಂಬ ದೈತ್ಯ ಅಳು ಒಬ್ಬರು ಭರ್ಜಿ ಹಿಡಿದಿದ್ದರು. ಕೆಲವರು ಕೊಡಲಿ, ಒಬ್ಬರು ಪರುಶುರಾಮನ ಗಂಡುಗೊಡಲಿ ಹೀಗೆ ನಾನಾ ಅಯುಧ ಹಿಡಿದಿದ್ದರು. ಹಿಂದಿನವರು ಕೇಕೆ ಹಾಕಿದ ತಕ್ಷಣ ಅಲ್ಲೊಬ್ಬರು ಇಲ್ಲೊಬ್ಬರು ಆಯುಧ ಇದ್ದವರು ಹಂದಿ ಹೊಡೆಯಲು ಸಿದ್ಧವಾಗಿ ನಿಂತರು. ಭರ್ಜಿ ಹಿಡಿದ ರಾಮುಡು ಅದಕ್ಕೆ ಭರ್ಜಿಯಿಂದ ಚುಚ್ಚಲು ತಲೆಗೆ ವಲ್ಲಿಯಬಿಗಿದು ಸಿದ್ಧವಾಗಿ ನಿಂತರು. ನಿರಾಯುಧವಾದ ನಾವು ಅದು ಓಡಿ ಬರುತ್ತಿದ್ದ ನೇರ ಬಿಟ್ಟು ಪಕ್ಕಕ್ಕೆ ಓಡಿಹೋಗಿದ್ದೆವು. ನಾನು ಅವಕ್ಕಾಗಿ ನಿಂತು ಕಣ್ರೆಪ್ಪೆ ಮಿಟುಕಿಸದೇ ನೋಡುತ್ತಲೇ ಇದ್ದೆ. ಇನ್ನೇನು ರಾಮುಡು ಆ ಹಂದಿಗೆ ಚುಚ್ಚುವರು ಎನ್ನುವಾಗಲೇ ಆ ಹಂದಿ ಕ್ಷಣಾರ್ಧದಲ್ಲಿ ತನ್ನ ಕೋರೆಹಲ್ಲಿನಿಂದ ಅವರ ಮೀನ ಖಂಡಕ್ಕೆ ತಿವಿಯಿತು. ಬರ್ಚಿ ಸಮೇತ ಅವರು ನೆಗೆದು ಕಾಲು ಕಿಸಿದು ಕೆಳಗೆ ಬಿದ್ದರು. ಎಂಭತ್ತು ಎಂಭತ್ತೈದು ಭಾರದ ರಾಮುಡು ತರಗೆಲೆಯಂತೆ ತಿರುಗಿ ತಿರುಗಿ ಬಿದ್ದು ನೆಲದಲ್ಲಿ ಒದ್ದಾಡುತ್ತಿದ್ದ. ಹಂದಿ ಹಿಂತಿರುಗಿ ಬಂದು ಮತ್ತೊಂದು Shot ತಿವಿಯುತ್ತದೆ ಎಂದು ನಿರೀಕ್ಷೆಯಲ್ಲಿ ಹಂದಿಯನ್ನೇ ನೋಡುತ್ತಿದ್ದ ನಾನು ಅದು ಹಿಂತಿರುಗದೇ ಶರವೇಗದಲ್ಲಿ ಮುಂದೆ ಓಡುತ್ತಲೇ ಇತ್ತು. ಕೆಲವರು ರಾಮುಡುನನ್ನು ಎಬ್ಬಿಸಲು ಹೋದರೆ ಇನ್ನೂ ಕೆಲವರು ಓಡುತ್ತಿದ್ದ ಹಂದಿಯ ಹಿಂದೆ ಅದನ್ನು ಹೊಡೆಯಲು ಹಿಂಬಾಲಿಸಿ ಇವರೂ ಓಡುತಿದ್ದರು. ಹಂದಿಯಿಂದ ತಿವಿಸಿಕೊಂಡ ವ್ಯಕ್ತಿಯ ಮೀನ ಖಂಡದ ಅರ್ಧ ಭಾಗ ಒಂದೆರಡು ಇಂಚು ಗಾಯ ಆಗಿ ರಕ್ತ ಬಳ ಬಳನೇ ಸೋರುತಿತ್ತು. ಅದರಲ್ಲಿನ ಜಾನುವಾರು ವೈದ್ಯ ಮಾಡುತ್ತಿದ್ದ ಮಾರೆಪ್ಪ ಎಂಬುವವರು ಎರಡು ಕೈಯಿಂದ ಅದನ್ನು ಒತ್ತಿಹಿಡಿದು ಹೊಂಗೆ ಎಲೆ ಇಟ್ಟು ಟವೆಲ್ ನಿಂದ ಬಿಗಿದರು. ನೋಡು ನೋಡುತ್ತಲೇ ಆ ಗಾಯಕ್ಕೆ ಬಿಗಿದಿದ್ದ ವಲ್ಲಿಯೂ ನೆನೆದು ರಕ್ತ ಸೋರುತ್ತಿತ್ತು. ಅಲ್ಲೇ ಇದ್ದ ಹೊಂಗೆಯ ಮರದಡಿ ಕಾಲು ಎತ್ತರದಲ್ಲಿರಿಸಿ ಒಂದು ಗಂಟೆಗೂ ಅಧಿಕ ಕಾಲ ಅಲ್ಲೇ ಇದ್ದು ಆಮೇಲೆ ನಡೆಯಲು ಶುರುಮಾಡಿದರೆ ಮತ್ತೆ ರಕ್ತಹರಿದು ಚೆಲ್ಲಲಾರಂಭಿಸಿತು. ಮತ್ತೊಮ್ಮೆ ಅವರನ್ನು ಅಲ್ಲೇ ಮಲಗಿಸಿ ಆ ಗಾಯ ಬಿಗಿಯಾಗಿ ಕಟ್ಟಿ ಊರೊಳಗೆ ಹೋಗಿ ಎತ್ತಿನಗಾಡಿ ಕಟ್ಟಿಕೊಂಡು ಬಂದು ಅವರನ್ನು ಗಾಡಿಯಲ್ಲಿ ಹಾಕಿಕೊಂಡು ಹೋಗಿ ವೈದ್ಯ ಮಾಡಿಸಿದ್ದರು. ಅದೆಲ್ಲದೂ ನನಗೆ ನೆನಪಾಗಿ ಜೀವ ಬಾಯಿಗೆ ಬಂದ ಹಾಗೆ ಆಗಿ ಜೇನು ಬೇಡ ಏನು ಬೇಡ ಹಂದಿಯಿಂದ ಬಚಾವಾದೇ ಎಂದು ಏದುಸಿರಲ್ಲೇ ಸೀದಾ ನಮ್ಮ ತೋಟದ ಕಡೆ ಓಡಿಬಂದೆ. ಬರುವ ಹಾದಿಯಲ್ಲೇ ನಮ್ಮ ಪಕ್ಕದ ತೋಟ ಲಂಬಾಣಿ ಮೂರ್ತಿನಾಯ್ಕ ಎಂಬಾತನಿಗೆ ನಾನು ಅಲ್ಲಿ ಹಂದಿ ಇರುವ ಮಾಹಿತಿ ತಿಳಿಸಿದೆ. ಮೂರ್ತಿ ನಾಯ್ಕ ಬಿಡುವಿನ ದಿನಗಳಲ್ಲಿ ಮೊಲದ ಬಲೆ, ಮುಂಗುಸಿ ಬಲೆ ಹಿಡಿದು ಓಡಾಡುತ್ತಿದ್ದ. ಈತನಿಗೆ ಬೇಟೆಯ ಕ್ರೇಜ್ ಇದ್ದುದರಿಂದ ನಿಜ ಇದೇಯೇನೋ ಎಂದು ಎರಡೆರಡು ಬಾರಿ ಖಾತರಿ ಮಾಡಿಕೊಂಡ ಅವರು ಊರೊಳಗೆ ಹೋಗಿ ಹತ್ತಾರು ಜನ ಆಯುಧಗಳೊಂದಿಗೆ ಜನರನ್ನು ಕರೆತಂದರು. ಮೂರ್ತಿನಾಯ್ಕ ನನ್ನಲ್ಲಿಗೆ ಮತ್ತೆ ಬಂದು ಬೇಟಿಯಾಗಿ "ಬಾರ ಆ ಹಂದಿ ಎಲ್ಲಿ ಮಲಗಿದೆ ತೋರಿಸು" ಎಂದ. ಸರಿ ಎಂದು ನಾನು ಪುನಃ ಅವರೊಂದಿಗೆ ಆ ಸ್ಥಳಕ್ಕೆ ಧಾವಿಸಿದೆ. ಎಲ್ಲರಿಗೂ ಕಾತರ. 'ಏಯ್ ಹಂದಿ ದೊಡ್ಡದಾ ಸಣ್ಣದಾ? ಬಹಳ ದಟ್ಟವಾದ ಪೊದೆಯಲ್ಲಿದೆಯಾ ?? ಮುಳ್ಳು ಗಿಡಗಂಟೆ ತುಂಬ ಇದಾವಾ? ಪಾಲಯ್ಯ ಎಂಬಾತನಿಗೆ ಮಾಮ ನೀನು ಭರ್ಜಿ ನೀನೇ ಹಿಡಿದಿರಬೇಕು ಇವತ್ತು ಮಿಸ್ ಮಾಡಂಗಿಲ್ಲ 'ಹಾಕಬೇಕು ಮಾಮ' ಎಂದು ಇತರರಿಗೂ ಹೇಳುತಿದ್ದರು. ನೀವು ಕಾಡು ಹಂದಿಯ ತಿನ್ನತ್ತೀರಾ?? ಎಂದರು ಇಲ್ಲಾ ತಿನ್ನಲ್ಲ ಎಂದೆ ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳುತಲಿದ್ದರು. ಅವರಿಗೆಲ್ಲ ಉತ್ತರಿಸುತಾ ಆ ಸ್ಥಳಕ್ಕೆ ಧಾವಿಸಿ ಒಬ್ಬ ವೃತ್ತೀ ಬೇಟೆಗಾರನಿಗೆ "ಅಗೋ ಆ ಪೊದೆಯಡಿ ಕಾಲುವೆಯಲ್ಲಿ ಮಲಗಿದೆ ನೋಡು.." ಎಂದು ಹೇಳಿದೆ. ಎಲ್ಲರೂ ಪೊಜಿಷನ್ ತಗೊಂಡು ರೆಡಿಯಾಗಿ ನಿಂತರು. ಮುಖ್ಯ ವೃತ್ತಿಯ ಬೇಟೆಗಾರ ಒಂದು ಭರ್ಚಿ ಹಿಡಿದು ನಿಧಾನಕ್ಕೆ ಆ ಹಂದಿ ಮಲಗಿರುವ ಕಡೆ ಹೆಜ್ಜೆ ಹಾಕುತಾ ಹೋದ. ಇವರ ಚಲನ ವಲನ ಗಮನಿಸಿದ ಅದು ಮುಖ ಮಾಡಿದ್ದ ನೇರಕ್ಕೇ ಎದ್ದು ಓಡಿತು. ಹಂದಿ ಹೊಡೆಯಲು ಬಂದ ಕೆಲವರು ಆ ಹಂದಿಯ ಎತ್ತರ, ಗಾತ್ರನೋಡಿ ಹಂದಿ ಹೊಡೆಯುವ ಪ್ರಯತ್ನವೂ ಮಾಡದೇ ಹಿಂದೆ ಸರಿದರು. ನಾನು ಜೇನು ನೋಡಲು ನೋಡಿದಾಗ ನೆಲಕ್ಕೆ ಅಡರಿ ಮಲಗಿದ್ದ ಅದು ಇಷ್ಟೊಂದು ದೊಡ್ಡ ಹಂದಿ ಎಂದು ಭಾವಿಸಿರಲಿಲ್ಲ. ಸಾಧಾರಣದ್ದು ಎಂದು ಭಾವಿಸಿದ್ದೆ. ಅದು ನೋಡಿದರೆ ಸರಿಯಾಗಿ ಒಂದು ಎಮ್ಮೆ ಮೊಣಕದ ತರ ಎತ್ತರ ದಪ್ಪ ಇದೆ. ನೋಡು ನೋಡುತ್ತಲೇ "ಹಾಕು ಹಾಕು" ಎನ್ನುತ್ತಲೇ ಅವರ್ಯಾರಿಗೂ ಸಿಗದೇ ಓಡಿ ಹೋಗಿಬಿಟ್ಟಿತ್ತು. ಹೀಗೆ ಒಂದೈದಾರು ಸರಿ ಪೊದೆಗಳಲ್ಲಿ ಜೇನು ಹುಡುಕುವಾಗ ನನ್ನನ್ನು ದೂರದಿಂದಲೇ ನೊಡಿದ ಹಂದಿಗಳು ಓಡಿ ಹೋಗಿದ್ದವು. ಮೊಲಗಳಂತೂ ಲೆಕ್ಕಕ್ಕೆ ಸಿಗದಷ್ಟು ಈ ಪೊದೆಯಿಂದ ಓಡಿವೆ. ಹಾಗೆ ಎಲ್ಲೆಂದರಲ್ಲೆ ಹೋಗಬೇಡ ಆಕಸ್ಮಿಕ ಧಾಳಿ ಮಾಡಿದರೆ ಕಷ್ಟ ನೋಡು ಎಂದು ಅಪ್ಪ ಅಮ್ಮ ಮತ್ತು ಇತರರು ನನಗೆ ಬಹಳ ಸರಿ ಎಚ್ಚರಿಸಿದ್ದರು. ನಾನು ಅವರೆಲ್ಲರ ಮಾತುಗಳನ್ನು ಉದಾಸೀನ ಮಾಡಿದ್ದೆ. ಆದರೆ ಈ ದೊಡ್ಡ ಬಂಡ ಹಂದಿ ಮಾತ್ರ ಅಂದು ನನ್ನ ಮೇಲೆ ಧಾಳಿ ಮಾಡಿದ್ದರೆ ನನ್ನ ಗತಿ ಏನಾಗುತ್ತಿತ್ತೋ ಗೊತ್ತಿಲ್ಲ. ಆದರೆ ಅದೃಷ್ಟವಶಾತ್ ಅದೂ ಅಂದು ನನ್ನ ಮೇಲೆ ಧಾಳಿ ಮಾಡಲಿಲ್ಲ. ನಾನು ಅದರ ಮೇಲೆ ಧಾಳಿ ಮಾಡಿಸಿದರೂ ಅದು ಬಲಿಯಾಗದೇ ಬದುಕಿ ಹೋಯಿತು.

ಚಿತ್ರ - ಬರಹ :ನಾಗೇಂದ್ರ ಬಂಜಗೆರೆ, ಬಳ್ಳಾರಿ