ಕಾಡ ನಾಡ ತೋಳಗಳು

ಕಾಡ ನಾಡ ತೋಳಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಜಗದೀಶ ಬ. ಹಾದಿಮನಿ
ಪ್ರಕಾಶಕರು
ಪ್ರತೀಕ್ಷಾ ಪ್ರಕಾಶನ, ಹುನಗುಂದ, ಬಾಗಲಕೋಟೆ - ೫೮೭೧೧೮
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೨

ಜಗದೀಶ ಬ ಹಾದಿಮನಿ ಅವರು ಬರೆದ ಕಥೆಗಳ ಸಂಗ್ರಹವೇ “ಕಾಡ ನಾಡ ತೋಳಗಳು". ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಶ್ರೀಶೈಲ ಆರ್. ಗೋಲಗೊಂಡ ಇವರು. ತಮ್ಮ ಮುನ್ನುಡಿಯಲ್ಲಿ ಇವರು ಬರೆದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ...

“ಸಾಹಿತ್ಯದ ಓದು-ಬರಹ ಹಾಗೂ ಸಂಘಟನೆಗಳಲ್ಲಿ ನಿರಂತರತೆಯನ್ನು ಮೈಗೂಡಿಸಿಕೊಂಡಿರುವ ನನ್ನ ಆತ್ಮೀಯ ವಿದ್ಯಾರ್ಥಿ ಮಿತ್ರರೂ ಮತ್ತು ಕನ್ನಡ ಉಪನ್ಯಾಸಕರೂ ಆಗಿರುವ ಜಗದೀಶ, ಬ. ಹಾದಿಮನಿ ಅವರು ಈಗಾಗಲೇ 'ಮುಗ್ಧೆ' ಕವನ ಸಂಕಲನ (2018) 'ಪ್ರೇಮಮಯಿ' ಖಂಡ ಕಾವ್ಯ (2019) ಹಾಗೂ 'ಬೆರಳಚಂದ್ರ'- ಗೀತನಾಟಕ (2020) ಪ್ರಕಟಿಸಿ ಕನ್ನಡ ಕಾವ್ಯ ಲೋಕದಲ್ಲಿ ಪ್ರತಿಭಾ ಸಂಪನ್ನ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ದಿನಗಳ ಹಿಂದೆಯೆ ನನ್ನನ್ನು ಮುಖತಃ ಭೇಟಿಯಾಗಿ ಅವರ ಕಥಾ ಸಂಕಲನಕ್ಕೆ ಮುನ್ನುಡಿ ಬರೆಯಬೇಕೆಂದು ನನ್ನ ಮೇಲೆ ಅಭಿಮಾನವಿಟ್ಟು ಕೇಳಿಕೊಂಡು ಕಥಾ ಸಂಕಲನ ಕೈಗಿಟ್ಟು ಹೋದರು. ವೃತ್ತಿ ಬದುಕಿನ ಒತ್ತಡದಲ್ಲಿ ಬರೆಯುವದು ಕೊಂಚ ತಡವಾದರೂ ಈಗಲಾದರೂ ಬರೆಯುತ್ತಿದ್ದೇನಲ್ಲಾ ಎಂಬ ಸಮಾಧಾನವಿದೆ. ಕಾವ್ಯ ಸಾಗರದ ಬಾಹುಗಳಲ್ಲಿ ಮಿಂದೆದ್ದ ಜಗದೀಶ ಈಗ ಕಥಾ ಪ್ರಪಂಚ ಪ್ರವೇಶಿಸಿ, 'ಕಾಡ-ನಾಡ ತೋಳಗಳು' ಕಥಾ ಸಂಕಲನ ಪ್ರಕಟಿಸುತ್ತಿರುವದು ಅತ್ಯಂತ ಅಭಿಮಾನದ ಹಾಗೂ ಹೆಮ್ಮೆಯ ವಿಷಯವಾಗಿದೆ.

ಕನ್ನಡ ಸಾರಸ್ವತ ಪ್ರಪಂಚದಲ್ಲಿ ಸಣ್ಣ ಕಥೆಯು ಅತ್ಯಂತ ಪ್ರಾಚೀನವಾದ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಪ್ರಾಚೀನ ಕಾಲದಲ್ಲಿಯೂ ಕೂಡಾ ಅನಕ್ಷರಸ್ಥ ಜನಾಂಗಗಳಲ್ಲಿ ಸಣ್ಣ ಕಥೆಯು ಜಾನಪದ ಸಾಹಿತ್ಯದ ಒಂದು ಪ್ರಕಾರವಾಗಿ ಅಸ್ಥಿತ್ವದಲ್ಲಿತ್ತು. ಕಾಲ ಕಾಲಕ್ಕೆ ಬದಲಾವಣೆಗೊಳ್ಳುವ ಗುಣ ಹೊಂದಿ, ಸಮಾಜ ನೀಡುವ ಹೊಸ ಸವಾಲುಗಳನ್ನು ಸ್ವೀಕರಿಸುತ್ತಾ ತನ್ನ ಸ್ವೋಪಜ್ಞೆ ಹಾಗೂ ಜೀವಂತಿಕೆಯನ್ನು ಕಾಪಾಡಿಕೊಂಡು ಸಣ್ಣ ಕಥೆ ಮುನ್ನಡೆಯುತ್ತಿದೆ. ಕನ್ನಡದಲ್ಲಿ ಕಥೆ ಬರೆದ ಖ್ಯಾತನಾಮರ ದೊಡ್ಡ ಪರಂಪರೆಯೇ ನಮ್ಮ ಕಣ್ಣೆದುರಿಗಿದೆ. ಮಾಸ್ತಿ, ಲಂಕೇಶ, ಚಿತ್ತಾಲ, ತೇಜಸ್ವಿ, ನಿರಂಜನ, ಅನಂತಮೂರ್ತಿ, ವೈದೇಹಿ, ಮಹಾದೇವ ಮುಂತಾದವರು ಕಥೆ ಬರೆದು ಕಥಾಸಾಗರದ ಘನತೆಯನ್ನು ಎತ್ತಿ ಹಿಡಿದವರಾಗಿದ್ದಾರೆ. ಕಥೆ ಬರೆದಷ್ಟು, ಬರೆದಷ್ಟು ಇನ್ನೂ ಹೇಳಬೇಕಾದದ್ದು ಸಾಕಷ್ಟಿದೆ ಎಂದು ಕಥೆಗಾರರಿಗೆ ಅನ್ನಿಸುವದು ಸಹಜವೇ ಆಗಿದೆ. ಕಥೆ ಬರೆಯುವುದೆಂದರೆ ಅದೊಂದು ಕಾಡುವ ಸಂಕಟಗಳಿಂದ ಬಿಡುಗಡೆಗಾಗಿ ಹಾತೊರೆಯುವ ಸಂಭ್ರಮದ ಅನುಭವವೆಂದು ನಾನು ತಿಳಿಯುತ್ತೇನೆ. ಜಗತ್ತಿನ ಬಹುತೇಕ ಹೆಚ್ಚಿನ ಕಥೆಗಾರರು ಜೀವನವನ್ನು ಒಂದು ನೋವಿನ ನಾಟಕವೆಂದೇ ಪರಿಗಣಿಸುತ್ತಾರೆ. ತಮ್ಮ ಅನುಭವದ ಆಧಾರದ ಮೇಲೆ ಜೀವನವು, ಸಮಸ್ಯೆ, ಗೋಳು ಅನಾಥ ಪ್ರಜ್ಞೆ, ನೋವುಗಳಿಂದ ತುಂಬಿದೆ ಎಂದು ಭ್ರಮಿಸಿ ಕಥೆ ಬರೆಯಲು ತೊಡಗಿ ಓದುಗರಿಗೆ ಏನೋ ಒಂದು ಸಂದೇಶ ಸೂಚಿಸಲು ಯತ್ನಿಸುತ್ತಾರೆ. ಆದರೆ, ಈ ಸಂದೇಶ ಜೀವನದ ಸಮಗ್ರ ಸಂದೇಶವಾಗಲಾರದು. ಯಾಕೆಂದರೆ, ಅವರು ಚಿತ್ರಿಸುತ್ತಿರುವದು ಜೀವನದ ಒಂದು ಮುಖವನ್ನು ಮಾತ್ರ ಸಣ್ಣ ಕಥೆಯನ್ನು ಅಭಿವ್ಯಕ್ತಿ ಕಲೆಯ ಮಾಧ್ಯಮ ಮಾಡಿಕೊಂಡಿರುವ ಕಥೆಗಾರರಿಗೆ ಜೀವನವು ನೋವಿನಿಂದ ತುಂಬಿದ್ದು ರೋಗಗ್ರಸ್ಥವಾಗಿದೆ ಎಂದು ಗ್ರಹಿಸುವದು ಅನಿವಾರ್ಯವಾಗಿದೆ.

ಸಣ್ಣ ಕಥೆಯ ಈ ಮೂಲ ದ್ರವ್ಯಗಳನ್ನು ಮನಸಿನಲ್ಲಿಟ್ಟುಕೊಂಡು ಜಗದೀಶ 'ಕಾಡ ಮತ್ತು ನಾಡ ತೋಳಗಳು' ಕಥಾ ಸಂಕಲನದ ಒಂದಿಷ್ಟು ಬರೆಯಲೆತ್ನಿಸುತ್ತೇನೆ. ಕೃತಿಯಲ್ಲಿ ಒಟ್ಟು 13 ಕಥೆಗಳಿವೆ. ಎಲ್ಲ ಕಥೆಗಳು ಹಳ್ಳಿಗಾಡಿಗೆ ಸಂಬಂಧಿಸಿದ ಕಥೆಗಳಾಗಿದ್ದು, ಅಲ್ಲಿರುವ ಜಗಳ, ಜೋಟಿ, ಮತ್ಸರ, ಬಡತನ, ಅಸ್ಪೃಶ್ಯತೆ, ಈರ್ಷೆ, ಮೌಡ್ಯತೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಆದರೂ ವಿಮರ್ಶಾ ದೃಷ್ಟಿಯಿಂದ ಸಂಕಲನದಲ್ಲಿ ಮೂಡಿಬಂದ ಕಥೆಗಳನ್ನು ದುರಂತ ಕಥೆಗಳು ಹಾಗೂ ದುರಂತಲ್ಲದ ಕಥೆಗಳೆಂದು ಎರಡು ಗುಂಪುಗಳಾಗಿ ವಿಂಗಡಿಸಬಹುದು. 'ಅದು ನನ್ನ ಪಾಲಿನ ಅಮೃತ', ದೇವು ನೋಡ್ತಾನಲೇ', 'ಹೌದು, ಅವನದೇ ಚಿತ್ರ' “ಕಾಡ-ನಾಡ ತೋಳಗಳು', 'ಝೀರೋ ಬಲ್ಸ್', ಕೊಡು ನಾಯಿ ಜನ್ಮ', 'ನಂಜಪ್ಪ ಮಾಸ್ತರ', 'ರಜೆ ಉಳಿಸಿಕೊಂಡವರು' ಕಥೆಗಳನ್ನು ಮೊದಲ ಗುಂಪಿಗೆ ಸೇರಿಸಬಹುದಾದರೆ; 'ಆರೈದು ಉದಕವನೆರೆವೆ', ಬಚ್ಚಳ ನೀರಿನ ಚೊಚ್ಚಲ ಕೇಸು 'ನಾಳೆ ಸಾಯುವದಿಲ್ಲ', 'ತನ್ನೆರಡು ಕಾಲ್ಗಳನ್ನು ಎಳೆದುಕೊಂಡೇ ಹೊರಟ', ಮುತ್ತಾಗಬೇಕಾಗಿದ್ದ ಮಾತು' ಎರಡನೆಯ ಗುಂಪಿಗೆ ಸೇರಿಸಬಹುದಾದ ಕಥೆಗಳಾಗಿವೆ. ಮೊದಲ ಕಥೆಗಳಲ್ಲಿ ಮುಖ್ಯ ಪಾತ್ರಗಳಿಗೆ ದಿಢೀರನೇ ಸಂಭವಿಸಿ ಓದುಗರನ್ನು ಕಲಕುವಂತೆ ಮಾಡುತ್ತವೆ. ಎರಡನೆಯ ಕಥೆಗಳು ಕೆಲವು ಸಾಮಾಜಿಕ ಸಮಸ್ಯೆಗಳಿಗೆ ಕನ್ನಡಿ ಹಿಡಿಯುತ್ತವೆ.

'ಬಚ್ಚಲು ನೀರಿನ ಚೊಚ್ಚಲ ಕೇಸು' ಕಥೆ ತಹಸೀಲ್ದಾರ ಕಛೇರಿಯಲ್ಲಿ ಕ್ಲಾರ್ಕ್‌ ಆಗಿ ಕೆಲಸ ಮಾಡುತ್ತಿದ್ದ ರಾಜೇಶನ ಅನೈತಿಕ ಸಂಬಂಧವನ್ನು ಅಮರ ಎನ್ನುವ ವ್ಯಕ್ತಿ ಪತ್ತೆ ಹಚ್ಚಿ ಈ ವಿಷಯವನ್ನು ಹೆಂಡತಿಯೊಂದಿಗೆ ಹಾಸ್ಯಭರಿತವಾಗಿ ಹಂಚಿಕೊಂಡದ್ದನ್ನು ವಿವರಿಸುತ್ತದೆ. ಇಲ್ಲಿ ರಾಜೇಶ, ದಾಂಪತ್ಯದ ಲೈಂಗಿಕ ಕಟ್ಟುಪಾಡುಗಳನ್ನು ಮುರಿದ ವ್ಯಕ್ತಿಯಾಗಿ ಚಿತ್ರಿತನಾಗಿದ್ದಾನೆ. ಲೈಂಗಿಕ ನಿಷ್ಠೆ ಮೀರಿದ ಹೆಣ್ಣಿಗೆ ಹಾದರ , ವ್ಯಭಿಚಾರ ಎನ್ನುವ ಪದಗಳು ದಕ್ಕುವಾಗ ಈ ಪದಗಳು ಗಂಡಿಗೂ ಅನ್ವಯವಾಗಬೇಕು ಎನ್ನುವ ಇರಾದೆ ಲೇಖಕರಿಗಿದೆ ಎನ್ನುವುದನ್ನು ಕಥೆ ಎತ್ತಿ ತೋರಿಸಲು ಸಫಲವಾಗಿದೆ.

'ನಾಳೆ ಸಾಯುವದಿಲ್ಲ' ಕಥೆಯು ಯಾವ ಸಾಮಾಜಿಕ ಸಮಸ್ಯೆಯನ್ನು ಚರ್ಚಿಸದಿದ್ದರೂ ಕೂಡ ಶಾಲೆಯಿಂದ ತಪ್ಪಿಸಿಕೊಂಡ ಉಪದ್ಯಾಪಿ ಕೆಲಸಗಳಲ್ಲಿ ವೇಳೆ ಕಳೆಯುವ ಮಕ್ಕಳ ಮನೋಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ಉಪದ್ಯಾಪಿ ಕೆಲಸವೆನಿಸಿದರೂ ಮಾಡುವ ಕೆಲಸದಲ್ಲಿ ತೋರುವ ಕೈಚಳಕ, ಮನಸ್ಸಿನ ಏಕಾಗ್ರತೆಯನ್ನು ಮೆಚ್ಚಲೇಬೇಕು. ಕಥೆಯ ಕಥಾನಾಯಕ ಶಾಲಾ ಪಠ್ಯಪುಸ್ತಕಗಳಲ್ಲಿ ಕಿಂಚಿತ್ತು ಆಸಕ್ತಿ ತೋರಿಸದೇ ಶಿಕ್ಷಕರಿಗೆ ಸಬೂಬು ಹೇಳಿ ಮನೆಯಲ್ಲಿ ಕುಳಿತುಕೊಂಡು ರೇಡಿಯೋವನ್ನು ಸ್ಕೂಡ್ರೈವರ್‌ನಿಂದ ಜೋಡಿಸಿ ಹಾಡು ಕೇಳಿ ಆನಂದಿಸುವ, ಪೋಲಿಯೋದಿಂದ ಕಾಲು ಊನ ಮಾಡಿಕೊಂಡ ಕುಂಟ ಹುಡುಗ. ಇದು ತಂದೆಗೆ ಗೊತ್ತಾಗಿ ದಂಡಿಸಿ ಶಾಲೆಗೆ ಹೋಗಿ ಬಿಟ್ಟು ಬಂದರೂ ತನ್ನ ಈ ರೇಡಿಯೋ ಕೆಲಸವನ್ನು ಬಿಡಲಾಗದ ಹಠವಾದಿ. ಹೀಗೆ ಕಥೆ ಮಕ್ಕಳು ಯಂತ್ರ ಮಾಡುವ ಕೆಲಸಗಳ ಬಗ್ಗೆ ತಾಳಿದ ಕುತೂಹಲ ಅವರ ಚಿಕಿತ್ಸಕ ಬುದ್ಧಿಯ ಮೇಲೆ ಗಮನ ಕೇಂದ್ರಿಕರಿಸುವಲ್ಲಿ ಯಶಸ್ವಿಯಾಗಿದೆ.

ಮನುಷ್ಯ ಜೀವನದ ದುರಂತದ ಪ್ರಲಾಪಗಳಂತೆ ತೋರುವ ಜಗದೀಶ ಅವರ ಈ ಸಂಕಲನದ ಹೆಚ್ಚಿನ ಕಥೆಗಳನ್ನು ನಮಗೆ ವಿಮರ್ಶಕರಾದ ಓ ಕಾನ‌ರ್‌ ಅವರು ಸಣ್ಣ ಕಥೆಗಳ ಬಗ್ಗೆ ಆಡಿದ ಮಾತು ನೆನಪಿಗೆ ಬರುತ್ತದೆ. ಅವರು ಹೇಳುವ ಹಾಗೆ 'ಸಣ್ಣ ಕಥೆಗೆ ನಿಜವಾದ ನಾಯಕನಿಲ್ಲ. ಅಲ್ಲಿ ಮೂಡಿಬರುವ ಎಲ್ಲ ಪಾತ್ರಗಳೂ ಮೂಲತಃ ಜೀವನದಲ್ಲಿ ಮುಳುಗಿ ಹೋದವರೇ ಆಗಿರುತ್ತಾರೆ. ಈ ಪಾತ್ರಗಳು ಬದುಕಿನ ಬಲಿಪಶುಗಳು, ಅವಮಾನಿತರು, ನೊಂದವರು, ಹತಾಶರು, ಅನಾಥರು ಆಗಿದ್ದಾರೆ. ಕಥೆಗಳಲ್ಲಿ ಬರುವ ದುರಂತ ನಾಯಕರ ಅವಮಾನಕರವಾದ ಸೋಲಾಗಿದೆ. ಕೆಲವು ಸಲ ಹೋರಾಟವಿಲ್ಲದೇ ಸೋಲೊಪ್ಪಿಕೊಂಡು ಸತ್ತು ಹೋಗುವ ಸನ್ನಿವೇಶ ಉಂಟಾಗುತ್ತದೆ. ಈ ಅರ್ಥದಲ್ಲಿ ಈ ಸಂಕಲನದಲಿ ಮೂಡಿ ಬಂದಿರುವ ಹೆಚ್ಚಿನ ಕಥೆಗಳು ನಾಯಕನನ್ನು ಅಸಹಾಯಕ ಸ್ಥಿತಿಯಲ್ಲಿ ನಿಲ್ಲಿಸಿ ಬಹಳ ಖೇದಕರ ಪರಿಸ್ಥಿತಿಯಲ್ಲಿ ಮುಕ್ತಾಯಗೊಳ್ಳುವದು ವಿಶೇಷವಾಗಿದೆ.

ಒಟ್ಟಾರೆ ಜಗದೀಶ ಅವರ ಈ ಕಥಾ ಸಂಕಲನವು ದುರಂತ ಬದುಕಿನ ಆಯಾಮಗಳನ್ನು ಹಾಗೂ ಸಮಾಜದ ಸಮಸ್ಯೆಗಳನ್ನು ಚಿತ್ರಿಸುತ್ತ ನಾವಿನ್ಯತೆ ಮೆರೆದಿದೆ. ಕಥೆಗಳಲ್ಲಿ ಬರುವ ಅಲಂಕಾರಗಳು, ಉತ್ತರ ಕರ್ನಾಟಕದಲ್ಲಿ ಬಳಸುವ ಭಾಷೆ, ನುಡಿಗಟ್ಟುಗಳು, ಗಾದೆಮಾತುಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಕಥೆ ಹೇಳುವ ವಿಧಾನಗಳಲ್ಲಾಗಲೀ, ಅಥವಾ ಬಳಸುವ ಭಾಷೆಯಲ್ಲಾಗಲೀ ಅನ್ಯ ಸಾಹಿತಿಗಳ ಪ್ರಭಾವ ಎದ್ದು ಕಾಣುವುದಿಲ್ಲ. ಎಲ್ಲ ಕಥೆಗಳು ಲೇಖಕರ ಕಲಾ ಪ್ರತಿಷ್ಠೆಯ ಮೂಸೆಯಿಂದಲೆ ಹೊರಬಂದಿವೆ ಎಂದೆನಿಸುತ್ತದೆ. ಕಥೆಗಳಲ್ಲಿ ದೀರ್ಘವಾದ ವರ್ಣನೆಗಳಾಗಲೀ, ವೈಚಾರಿಕ ಗೊಂದಲಗಳ ವಿಶ್ಲೇಷಣೆಗಳಾಗಲೀ ಇಲ್ಲವೇ ಇಲ್ಲ. ಆದರೆ ಕಥೆಗಾರರಿಗೆ ಕಥೆ ಹೇಳುವ ತೀವ್ರ ತುಡಿತ ಎದ್ದು ಕಾಣುತ್ತದೆ. ಬರವಣಿಗೆ ಸರಳವಾಗಿದ್ದು, ಓದಿಸಿಕೊಂಡು ಹೋಗುವ ಗುಣ ಹೊಂದಿದೆ. ಕಥಾ ನಿರೂಪಣೆಯಲ್ಲಿ ಕಟು ವಾಸ್ತವದ ದರ್ಶನ ಮೇಲುಗೈ ಪಡೆದಿದೆ. ಕಥೆ ಬರೆಯುವ ತಮ್ಮ ಇತಿಮಿತಿಗಳನ್ನು ಕಥೆಗಾರರು ಚೆನ್ನಾಗಿ ತಿಳಿದವರಾಗಿ ಅಚ್ಚುಕಟ್ಟಾಗಿ ಕಥೆಗಳನ್ನು ಹೆಣೆಯುವ ಕೌಶಲ್ಯ ಹೊಂದಿದ್ದಾರೆ.”