ಕಾಫಿ

ಕಾಫಿ

ಕವನ

ಕೈಲಾಸ ಪರ್ವತದರಮನೆಯಲ್ಲಿ


ತಲೆ ನೋವ್ ಬಂದಿತು ಶಿವನಿಗೆ ಅಲ್ಲಿ


ಕಾವಲುಗಾರರ ಗತಿ ಗೋಳಾಟ


ಪಾರ್ವತಿಗ್ಬಂದಿತು ಪಿಕಲಾಟ


 


ಗಿರಿಜೆಯು ಹೊಡೆದಳು ಗಣಪತಿಯನ್ನು


ಮುರಿದಳು ಕೈಲಿದ್ದ ಕಡುಬನ್ನು


ಕೆಲವರು ಹೋದರು ಕೆಲವರು ಬಂದರು


ಕೆಲವರು ಮೇಲ್ಗಡೆ ನೋಡುತ ನಿಂತರು


 


ತಲೆನೋವ್ ಸಹಿಸದೆ ಈಶ್ವರನಾಗ


ಕಳುಹಿದ ಕಪಿಯನು ಕರೆತರಲಾಗ


ಓಡುತ ಹೋದರು ಮಾರುತಿಬಳಿಗೆ


ಕಾಡಿಸುತಿದೆ ತಲೆನೋವ್ ಈಶ್ವರನಿಗೆ


 


ಎಂದರು ಜನರೆಲ್ಲಾ ಒಂದಾಗಿ


ಬಂದನು ಮಾರುತಿ ಮುಂದಾಗಿ


ಸಂದಿಯಲ್ನೋಡಿದ ಈಶ್ವರನಾಗ


ವಂದಿಸಿದನು ಮಾರುತಿ ಬೇಗ


 


ಏನೆಲೊ ಮಾರುತಿ ತಾರೋ ಔಷಧಿ


ನೀನೇ ಹೋಗು ಭಟರುಗಳ್ಬೇಡ


ಎಂದೇಳಿದ ಹರ ತೊದಲುತನಾಗ


ಮುಂದಕೆ ನಡೆದನು ಕಪಿವೀರ


 


ಬಾಬಾಬುಡನ್ ಗಿರಿ ದಾಟಿದನು


ಗಿಡದಿಂದ ಬೀಜವ ಬಿಡಿಸಿದನು


ಕಪಿರಾಜನು ಕೈಲಾಸಕೆ ಬಂದು


ಈಶ್ವರ ಬೀಜವ ತೆಗೆದುಕೊ ಅಂದ


 


ಕೆಂಪಗೆ ಬಾಣಲೆಯಲಿ ಹುರಿದು


ಮರಳುವ ನೀರಿಗೆ ಪುಡಿಬೆರೆಸಿ


ಶೋಧಿಸಿ ಹಾಲೂ ಸಕ್ಕರೆ ಬೆರೆಸಿ


ಬಿಸಿಬಿಸಿಯಾಗಿ ಪಾನವ ಮಾಡಿ


 


ಈಪರಿ ಹೇಳಿದ ಕಪಿಯೊಡೆಯ


ಮಾಡಿಸಿಕುಡಿದನು ಜಗದೊಡೆಯ


ಅಂತೂ ಈಶ್ವರನ್ ತಲೆನೋವು


ನಿಲ್ಲದೆ ಓಡಿತು ಅಲ್ಲಿಂದ


 


ಕಪಿಯೂ ತಂದಿದ್ದು ಕಪಿಬೀಜವೆಂದು


ಹೆಸರಿಟ್ಟನು ಈಶ್ವರನಂದು


ಜನಗಳ ಬಾಯಲಿ ದೀರ್ಘವು ಬಂದು


ಆಯಿತು ಕಾಫೀ ಬೀಜವೆಂದು.

Comments