ಕಾಲಮಿತಿ ಯಕ್ಷಗಾನ: ಬದಲಾವಣೆಯ ಪಥದಲ್ಲಿ ಪಾರಂಪರಿಕ ಕಲೆ

ಕಾಲಮಿತಿ ಯಕ್ಷಗಾನ: ಬದಲಾವಣೆಯ ಪಥದಲ್ಲಿ ಪಾರಂಪರಿಕ ಕಲೆ

ಮೇ 31ರಂದು ಯಕ್ಷಗಾನ ಮೇಳಗಳ ವರುಷದ "ತಿರುಗಾಟ"ಕ್ಕೆ ತೆರೆ ಬಿದ್ದಿದೆ. ಕಳೆದ ವರುಷದ ತಿರುಗಾಟದಲ್ಲಿ ಗಮನಿಸಲಾದ ಸಂಗತಿ: ಕಾಲಮಿತಿ ಯಕ್ಷಗಾನ ಹೆಚ್ಚಿನ ಜನಮನ್ನಣೆ ಗಳಿಸಿದ್ದು. ಈಗ ಕಲಾವಿದರು ರಾತ್ರಿ ಸರಿದಂತೆ ಪ್ರೇಕ್ಷಕರು ಎದ್ದು ಹೋಗುವುದನ್ನು ಕಾಣ ಬೇಕಾಗಿಲ್ಲ. ಬದಲಾಗಿ, ಸಭೆಯಲ್ಲಿ ತುಂಬಿದ ಪ್ರೇಕ್ಷಕರ ಎದುರು ತಮ್ಮ ಯಕ್ಷಗಾನ ಪ್ರದರ್ಶನವನ್ನು ಮುಂದುವರಿಸುವಂತಾಗಿದೆ.

ಅಂದ ಹಾಗೆ, ಯಕ್ಷಗಾನ ಪ್ರದರ್ಶನಗಳೆಂದರೆ ರಾತ್ರಿ 10 ಗಂಟೆಗೆ ಶುರುವಾಗಿ ಮುಂಜಾನೆ 6 ಗಂಟೆ ತನಕ ಜರಗುತ್ತಿತ್ತು; ಇದು ಕಳೆದ 100 ವರುಷಗಳಲ್ಲಿ ನಡೆದು ಬಂದ ಪರಿಪಾಠ. ಅದರ ಬದಲಾಗಿ, ಕೆಲವು ವರುಷಗಳಿಂದೀಚೆಗೆ ಕೆಲವು ಮೇಳಗಳು ಯಕ್ಷಗಾನವನ್ನು “ಕಾಲಮಿತಿ”ಯಲ್ಲಿ ಪ್ರದರ್ಶಿಸಲು ಶುರು ಮಾಡಿದವು. ಅಂದರೆ, ಮುಸ್ಸಂಜೆ 5.45ಕ್ಕೆ ಪ್ರದರ್ಶನ ಶುರು ಮಾಡಿ, ನಡುರಾತ್ರಿ 12.30ಕ್ಕೆ ಮುಗಿಸುವುದು.

ಈ ಬದಲಾವಣೆ ಆರಂಭಿಸಿದವರು (2016ರಿಂದೀಚೆಗೆ) ಶ್ರೀ ಧರ್ಮಸ್ಥಳ ಮೇಳದವರು. 24 ನವಂಬರ್ 2022ರಿಂದ ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಲಿಯ ಆರು ಮೇಳಗಳೂ ಈ ಬದಲಾವಣೆ ಅಳವಡಿಸಿಕೊಂಡವು. ವರುಷದ ಮೊದಲನೆಯ ಮತ್ತು ಕೊನೆಯ ಪ್ರದರ್ಶನದ ಹೊರತಾಗಿ, ಕಟೀಲು ಮೇಳಗಳ ಇತರ ಎಲ್ಲ ಪ್ರದರ್ಶನಗಳು ಕಾಲಮಿತಿಯಲ್ಲೇ ಜರಗಿದವು. ಇತರ ಹಲವು ಮೇಳಗಳೂ ಇದೇ ಬದಲಾವಣೆಯ ಪಥದಲ್ಲಿ ಸಾಗಿದ್ದು ಗಮನಾರ್ಹ.

ಕಾಲಮಿತಿ ಯಕ್ಷಗಾನವನ್ನು ಮಕ್ಕಳು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಿರುವುದು ದಾಖಲಾಗಿದೆ. ಪಾರಂಪರಿಕ ಕಲೆಯೊಂದನ್ನು ವೀಕ್ಷಿಸಲು ಅವಕಾಶ ಸಿಕ್ಕಿದ್ದು ಮಕ್ಕಳಿಗಂತೂ ಒಂದು ಸುವರ್ಣಾವಕಾಶ. ರಾತ್ರಿಯಿಡೀ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದಾಗ ಮಕ್ಕಳಿಗೆ ಅದನ್ನು ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ, ರಾತ್ರಿಯಿಡೀ ಯಕ್ಷಗಾನ ನೋಡಿದರೆ, ಮರುದಿನ ಶಾಲೆಗೆ ಚಕ್ಕರ್ ಹೊಡೆಯಬೇಕಾಗುತ್ತಿತ್ತು. ಈ ಸಮಸ್ಯೆಯಿಂದಾಗಿ ಕಳೆದ 50-60 ವರುಷಗಳಲ್ಲಿ ಕರಾವಳಿ ಕರ್ನಾಟಕದ ಎರಡು ತಲೆಮಾರಿನ ಮಕ್ಕಳು ಅದ್ಭುತ ಪಾರಂಪರಿಕ ಕಲೆಯೊಂದನ್ನು ಅಸ್ವಾದಿಸುವ, ಅದರ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವ ಅವಕಾಶದಿಂದ ವಂಚಿತರಾದದ್ದಂತೂ ಹೌದು.

ಯಕ್ಷಗಾನ ಕಲಾವಿದರಿಗೂ ಕಾಲಮಿತಿ ಯಕ್ಷಗಾನ ಅನುಕೂಲಕರವಾಗಿ ಪರಿಣಮಿಸಿದೆ. ಅವರಿಗೆ ಯಕ್ಷಗಾನ ಪ್ರದರ್ಶನದ ನಂತರ, ನಡುರಾತ್ರಿಯಿಂದ ಮುಂಜಾನೆ ತನಕ ನಿದ್ದೆ ಮಾಡಿ, ಹಗಲಿನಲ್ಲಿ ಯಾವುದಾದರೂ ಉದ್ಯೋಗ ಮಾಡುವ ಅವಕಾಶ ಲಭಿಸಿದೆ. ಆದರೆ, ಹೊಸ ಕಲಾವಿದರಿಗೆ ರಾತ್ರಿಯುದ್ದಕ್ಕೂ ಜರಗುತ್ತಿದ್ದ ಯಕ್ಷಗಾನ ಪ್ರದರ್ಶನಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಕಷ್ಟು ಅವಕಾಶ ಸಿಗುತ್ತಿತ್ತು; ಅದೀಗ ಕಡಿಮೆಯಾಗಿದೆ.

ಕರಾವಳಿ ಕರ್ನಾಟಕದ ಅಪ್ರತಿಮ ಪಾರಂಪರಿಕ ಕಲೆ ಯಕ್ಷಗಾನ. ಭಾಗವತರಿಂದ ಹಾಡುಗಾರಿಕೆ, ಕಲಾವಿದರಿಂದ ಸಂಭಾಷಣೆ, ಕುಣಿತ ಮತ್ತು ಅಭಿನಯ, ವಿದೂಷಕರಿಂದ ಹಾಸ್ಯ, ಮನಸೂರೆಗೊಳ್ಳುವ ವೇಷಭೂಷಣಗಳು, ಚಂಡೆವಾದ್ಯಗಳ ಹಿಮ್ಮೇಳ - ಇವೆಲ್ಲದರ ರೋಚಕ ಸಂಯೋಜನೆಯಿಂದ ವಿಧವಿಧ ಕಥನಗಳ ಮೂಲಕ ಪ್ರೇಕ್ಷಕರನ್ನು ಉನ್ನತ ಮಟ್ಟದ ಕಲಾಲೋಕಕ್ಕೆ ಕರೆದೊಯ್ಯುವ ಯಕ್ಷಗಾನಕ್ಕೆ ಸರಿಸಾಟಿಯಾದ ಬೇರೊಂದು ಕಲೆ ಜಗತ್ತಿನಲ್ಲೆಲ್ಲೂ ಇಲ್ಲವೆನ್ನಬಹುದು.

ಪ್ರತಿ ವರುಷ ಇಂತಹ ಯಕ್ಷಗಾನದ 10,000ಕ್ಕಿಂತ ಹೆಚ್ಚಿನ ಪ್ರದರ್ಶನಗಳು ಕರ್ನಾಟಕದ ಕರಾವಳಿಯುದ್ದಕ್ಕೂ ಜನಸಾಗರದ ಮನಸೂರೆಗೊಳ್ಳುತ್ತಿರುವುದು ಅಭಿಮಾನದ ಸಂಗತಿ. ಕನ್ನಡ ಭಾಷೆಯ ಉಳಿವಿಗೆ ಮತ್ತು ಮಹಾಭಾರತ, ರಾಮಾಯಣ ಹಾಗೂ ಪುರಾಣ ಕಥೆಗಳನ್ನು ಮುಂದಿನ ತಲೆಮಾರುಗಳಿಗೆ ದಾಟಿಸುವಲ್ಲಿ ಯಕ್ಷಗಾನದ ಕೊಡುಗೆ ಬೆಲೆಕಟ್ಟಲಾಗದ್ದು. ಇಂತಹ ಪಾರಂಪರಿಕ ಕಲೆ ಸೂಕ್ತ ಬದಲಾವಣೆಯ ಪಥದಲ್ಲಿ ಸಾಗುತ್ತಿರುವುದು ಒಳ್ಳೆಯ ಬೆಳವಣಿಗೆ.

ಫೋಟೋಗಳು: ವಿಶಿಷ್ಠ ವೇಷಭೂಷಣಗಳಲ್ಲಿ ಮಿಂಚುತ್ತಿರುವ ಯಕ್ಷಗಾನ ಕಲಾವಿದರು … ಕೃಪೆ: ಜಾಲತಾಣಗಳು