ಕುದುರೆ ವ್ಯಾಪಾರ

ಕುದುರೆ ವ್ಯಾಪಾರ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಎಂ.ಕೃಷ್ಣ ಭಟ್
ಪ್ರಕಾಶಕರು
ಕೆ.ಎಂ.ಕೃಷ್ಣ ಭಟ್, ಅನ್ನಪೂರ್ಣಾ, ಕರಂಗಲ್ಪಾಡಿ, ಮಂಗಳೂರು-೫೭೫೦೦೩
ಪುಸ್ತಕದ ಬೆಲೆ
ರೂ. ೧೩೦.೦೦, ಮುದ್ರಣ: ೨೦೨೨

“ವಿನೋದಕ್ಕಾಗಿ ಹೇಳಿದ ಮಾತುಗಳನ್ನು ನಿಜಾರ್ಥದಲ್ಲಿ ಗಂಭೀರವಾಗಿ ಪರಿಗಣಿಸಬೇಡಿ.” ಎನ್ನುವ ಮಾತನ್ನು ಪುಸ್ತಕದ ಮೊದಲ ಪುಟಗಳಲ್ಲೇ ಓದುಗರ ಗಮನಕ್ಕೆ ತಂದಿದ್ದಾರೆ ನ್ಯಾಯವಾದಿಗಳೂ, ಲೇಖಕರೂ ಆಗಿರುವ ಕೆ ಎಂ ಕೃಷ್ಣ ಭಟ್. “ಕುದುರೆ ವ್ಯಾಪಾರ" ಎನ್ನುವ ಲಲಿತ ಪ್ರಬಂಧಗಳ ಕೃತಿಯನ್ನು ಹೊರತಂದಿರುವ ಇವರ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಲೇಖಕರಾದ ಡಾ. ವಸಂತಕುಮಾರ ಪೆರ್ಲ. ಅವರು ತಮ್ಮ ಮುನ್ನುಡಿಯಲ್ಲಿ “ಕೆ ಎಂ ಕೃಷ್ಣ ಭಟ್ಟರು ಕಾಸರಗೋಡು ಜಿಲ್ಲೆಯ ನೀರ್ಚಾಲು ಪ್ರದೇಶದವರು. ೮೩ರ ಈ ಇಳಿವಯಸ್ಸಿನಲ್ಲಿ ಯುವಕರನ್ನು ನಾಚಿಸುವಂತೆ ನ್ಯಾಯಕ್ಷೇತ್ರ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿರುವುದನ್ನು ನೋಡಿದರೆ ತುಂಬ ಸಂತೋಷವಾಗುತ್ತದೆ. ಅವರ ಉತ್ಸಾಹ ಮತ್ತು ಕಾರ್ಯಪಟುತ್ವ ಬಹಳ ದೊಡ್ದದು. ಈ ವಯಸ್ಸಿನಲ್ಲಿಯೂ ಅವರು ತಮ್ಮ ಕಚೇರಿಗೆ ಬಂದು ಅಪೇಕ್ಷಿತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲ ತನಗೆ ತೋಚಿದ ವಿಷಯಗಳ ಕುರಿತು ಪ್ರಬಂಧ-ಲೇಖನ ಬರೆಯುತ್ತಿರುತ್ತಾರೆ.

ಕಾನೂನು ಕ್ಷೇತ್ರ ಅವರು ವೃತ್ತಿಯಾಗಿ ಆಯ್ದುಕೊಂಡ ಕ್ಷೇತ್ರ. ಆ ಕ್ಷೇತ್ರದಲ್ಲಿ ಅವರು ಯಶಸ್ಸು ಪಡೆಯಲು ಕಾರಣವಾದದ್ದು ಬಾಲ್ಯದಲ್ಲಿ ಅವರಿಗೆ ಸಿಕ್ಕಿದ ಜೀವನ ಶಿಕ್ಷಣ ಮತ್ತು ಮೌಲ್ಯಪ್ರಜ್ಞೆ. ಈ ಸಂಸ್ಕಾರ ವಿಶೇಷದಿಂದಾಗಿ ನ್ಯಾಯಕ್ಷೇತ್ರದಲ್ಲಿ ಹೇಗೋ ಬರವಣಿಗೆಯಲ್ಲಿಯೂ ಸೃಜನಶೀಲರಾಗಿರುವುದಕ್ಕೆ ಅವರಿಗೆ ಸಾಧ್ಯವಾಗಿದೆ. ವ್ಯಕ್ತಿ, ಸಮಾಜ ಮತ್ತು ವಸ್ತು ವಿಷಯಗಳ ಕುರಿತ ಲೇಖಕರ ವಿಚಿಕಿತ್ಸಕ ದೃಷ್ಟಿಕೋನ, ಹೊಸ ಒಳನೋಟಗಳನ್ನು ಕೊಡುವ ಚಿಂತನೆ, ಪ್ರಾಚೀನದೊಂದಿಗೆ ಸಮಕಾಲೀನ ಮತ್ತು ಅರ್ವಾಚೀನವನ್ನು ಬಳಸುವ ಹರಿತವಾದ ಭಾಷೆ ಮತ್ತು ಅಡಕತೆ ಹಾಗೂ ಸಂಕ್ಷಿಪ್ತತೆ ಈ ಲಲಿತ ಪ್ರಬಂಧಗಳನ್ನು ಮೆಚ್ಚಿಕೊಳ್ಳಲು ಇರುವ ಅಂಶಗಳು.” ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ತಮ್ಮ ಲೇಖಕರ ನುಡಿಯಲ್ಲಿ ಕೃಷ್ಣ ಭಟ್ಟರು “ಇಲ್ಲಿರುವ ಲೇಖನಗಳನ್ನು ಹರಟೆಗಳು ಅಥವಾ ಲಲಿತ ಪ್ರಬಂಧಗಳು ಎನ್ನಬಹುದು. ಪುಸ್ತಕಗಳನ್ನು, ಪತ್ರಿಕೆಗಳನ್ನು ಓದುವಾಗ ಅವುಗಳಲ್ಲಿ ನನಗೆ ಕಂಡುಬಂದ ನುಡಿಮುತ್ತುಗಳು, ನುಡಿಗಟ್ಟುಗಳು, ಶ್ಲೋಕಗಳು ಇನ್ನೇನಾದರೂ ವಿಶಿಷ್ಟ ವಿಷಯಗಳಿದ್ದರೆ ಅವುಗಳನ್ನು ಚೀಟಿಗಳಲ್ಲಿ ಅಥವಾ ನೋಟ್ ಬುಕ್ ಗಳಲ್ಲಿ ಬರೆದಿಟ್ಟುಕೊಳ್ಳುವುದು ನನ್ನ ಅಭ್ಯಾಸ. ಇತ್ತೀಚೆಗೆ ಅವುಗಳನ್ನು ತಿರುವಿ ಹಾಕಿದಾಗ ಕೆಲವು ವಿಷಯಗಳ ಕುರಿತು ವಿಸ್ತೃತವಾಗಿ ಬರೆಯಬೇಕೆನಿಸಿತು. ಜ್ಯೋತಿಷ್ಯ, ತುರಿಕೆ ಮುಂತಾದ ಪ್ರಬಂಧಗಳಲ್ಲಿರುವ ಶ್ಲೋಕಗಳನ್ನು ಓದಿದಾಗ ಅವುಗಳ ಸುತ್ತ ಒಂದೊಂದು ಕತೆಗಳನ್ನು ಹೆಣೆದೆ. ವರ್ತಮಾನ ಕಾಲದ ಘಟನೆಗಳನ್ನೂ ಸೇರಿಸಿದೆ. ಹಾಗೆಯೇ ನಾನು ಆಗಾಗ ಅರ್ಧಂಬರ್ಧ ಬರೆದಿಟ್ಟಿದ್ದ ಪ್ರಬಂಧಗಳನ್ನೂ ಪೂರ್ತಿಗೊಳಿಸಿದೆ. ಮತ್ತೆ ಕೆಲವನ್ನು ಹೊಸದಾಗಿ ಬರೆದು ಸೇರಿಸಿದೆ. ಇಂತಹ ‘ತ್ರಿವೇಣಿ ಸಂಗಮ'ವೇ ‘ಕುದುರೆ ವ್ಯಾಪಾರ' ಇವುಗಳಲ್ಲಿ ಕೆಲವು ವಿನೋದ, ತಮಾಷೆಗಾಗಿ ಬರೆದವುಗಳು. ಇನ್ನೂ ಕೆಲವೆಡೆ ತುಸು ಗಂಭೀರ ವಿಚಾರಗಳೂ ಅಡಕವಾಗಿವೆ.” ಎಂಬ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ. 

ಸುಮಾರು ೧೧೦ ಪುಟಗಳ ಈ ಪುಸ್ತಕದಲ್ಲಿ ೨೧ ಲಲಿತ ಪ್ರಬಂಧಗಳಿವೆ. ಸರಳ ವಾಕ್ಯಗಳು, ಪುಟ್ಟ ಪುಟ್ಟ ಬರಹಗಳ ಕಾರಣದಿಂದ ಅನಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಪುಸ್ತಕದ ಕೊನೆಯಲ್ಲಿ ಕೃಷ್ಣಭಟ್ಟರ ಇತರೆ ಬರಹಗಳ ಕುರಿತಾಗಿ ವಿಧ್ವಾಂಸರ ಮತ್ತು ಪತ್ರಿಕೆಗಳ ಅಭಿಪ್ರಾಯಗಳಿವೆ.