ಕೋಪಕ್ಕೆ ಕತ್ತರಿ ಹಾಕಿ !

ಕೋಪಕ್ಕೆ ಕತ್ತರಿ ಹಾಕಿ !

‘ಅನ್ನ ತಿನ್ನುವ ಪ್ರತಿಯೊಬ್ಬನಿಗೂ ಕೋಪ ಬರುತ್ತೆ' ಈ ಮಾತನ್ನು ನನ್ನ ಅಜ್ಜಿ ಯಾವಾಗಲೂ ಹೇಳುತ್ತಾ ಇರುತ್ತಿದ್ದರು. ಅವರಿಗೂ ಕೋಪ ಬರುತ್ತಿತ್ತು. ಆದರೆ ವಯಸ್ಸಿನ ಅನುಭವೋ ಏನೋ ಅದನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದರು. ಅವರಿಗೆ ಬಹಳಷ್ಟು ತಾಳ್ಮೆ ಇತ್ತು. ಕೋಪ ಬಂದಾಗ ಬಹುತೇಕರು ತಮ್ಮ ತಾಳ್ಮೆಯನ್ನು ಕಳೆದುಕೊಂಡು ಬಿಡುತ್ತಾರೆ. ಕೋಪ ನೆತ್ತಿಗೇರಿದಾಗ ಬೇಡದ ಕಾರ್ಯಗಳನ್ನು ಮಾಡುತ್ತಾರೆ. ಕೆಲವರು ಕೊಲೆ ಮಾಡಿದರೆ, ಕೆಲವರು ಹಲ್ಲೆ ಮಾಡುತ್ತಾರೆ, ಮತ್ತೆ ಕೆಲವರು ಆಸ್ತಿಪಾಸ್ತಿಗಳನ್ನು ನಾಶ ಮಾಡುತ್ತಾರೆ. ಕೋಪದಲ್ಲಿ ಕೈಗೊಂಡ ಯಾವುದೇ ಕಾರ್ಯವು ಕೋಪ ಇಳಿದ ಬಳಿಕ ಸರಿಯಾಗುವುದಿಲ್ಲ. ಹೆಚ್ಚೆಂದರೆ ಪಶ್ಚಾತ್ತಾಪ ಮಾತ್ರ ಉಳಿಯುತ್ತದೆ. ಈ ಕಾರಣಕ್ಕಾಗಿ ವೃಥಾ ಕೋಪಿಸಿಕೊಳ್ಳದೇ ಸಮಾಧಾನದಿಂದ ಬದುಕುವುದನ್ನು ಕಲಿಯಬೇಕು.

ನಮ್ಮ ಕೋಪದಿಂದ ಇತರರಿಗೆ ಎಷ್ಟು ತೊಂದರೆಯಾಗುವುದೋ ಅದರಷ್ಟೇ ತೊಂದರೆ ನಮಗೂ ಆಗುವ ಸಾಧ್ಯತೆ ಇದೆ. ಕೋಪದಿಂದ ಕಿರುಚಾಡಿದಾಗ ನಮ್ಮ ರಕ್ತದೊತ್ತಡ ಏರಿ ನಮ್ಮ ಆರೋಗ್ಯದಲ್ಲಿ ಏರು ಪೇರಾಗಬಹುದು. ಅಥವಾ ಹೃದಯಾಘಾತವೂ ಆಗಬಹುದು. ಮರಣವೂ ಸಂಭವಿಸಬಹುದು. ನಾವು ಸತ್ತರೆ ನಮ್ಮನ್ನು ನಂಬಿಕೊಂಡಿರುವ ನಮ್ಮ ಕುಟುಂಬದ ಗತಿ ಏನು? ಎಂಬುದಾಗಿ ಕೋಪಗೊಂಡಾಗ ಯೋಚನೆ ಮಾಡಬೇಕು. ಏಕೆಂದರೆ ಕಳೆದು ಹೋದ ಸಮಯ ಮತ್ತೆ ಬರಲಾರದು.

ಸಿಟ್ಟು ಎಂಬುದು ತನ್ನನ್ನೇ ಉರಿಸುತ್ತದೆ ಮತ್ತು ಅದಕ್ಕೆ ಕೊನೆ ಎಂಬುದೇ ಇಲ್ಲ. ಕೆಲವರಂತೂ ವಿನಾಕಾರಣ ಜಗಳ ಮಾಡಲು ಹಾತೊರೆಯುತ್ತಿರುತ್ತಾರೆ. ಪ್ರತೀ ದಿನ ಗಲಾಟೆ ಮಾಡದೇ ಇದ್ದರೆ ಅವರಿಗೆ ನಿದ್ರೆ ಬಾರದು. ಅಂತವರಿಗೆ ಇಂತಹದೇ ಕಾರಣ ಬೇಕೆಂದೇನೂ ಇಲ್ಲ. ಸಿಟ್ಟು ಬಂದಾಗ ದ್ವೇಷ ಕಾರುವುದಷ್ಟೇ ಗೊತ್ತು ಅವರಿಗೆ. ಸಿಟ್ಟು ಬಂದು ಪ್ರೀತಿಸಿದವರನ್ನೇ ಕೊಂದು, ಆಕೆಯನ್ನು ಚೂರು ಚೂರಾಗಿ ತುಂಡರಿಸಿ ಬಿಸಾಕಿದ ಘಟನೆಗಳೂ ಸಾಕಷ್ಟಿವೆ. ಮಾನವನಲ್ಲಿ ವಿವೇಚನೆ, ಯೋಜನೆ, ಯೋಚನೆ, ತರ್ಕಬದ್ಧ ಜೀವನ ಇದ್ಯಾವುದರ ಪರಿವೆಯೇ ಇಲ್ಲದಿರುವಾಗ ಆತನಿಂದ ಈ ಎಲ್ಲಾ ಘಟನೆಗಳು ಸಂಭವಿಸುತ್ತವೆ. 

ಕೆಲವರಿಗಂತೂ ತಾವು ಯಾರಿಗಾದರೂ ಫೋನ್ ಮಾಡಿದಾಗ ಕೂಡಲೇ ಸ್ವೀಕರಿಸಬೇಕು. ಇಲ್ಲವಾದಲ್ಲಿ ಅಪಾರ ಕೋಪ ಬರುತ್ತದೆ. ತಾವು ಕರೆ ಮಾಡಿದ ವ್ಯಕ್ತಿ ಬೇರೆ ಕೆಲಸಗಳಲ್ಲಿ ವ್ಯಸ್ತನಾಗಿರಬಹುದು ಅಥವಾ ಮೀಟಿಂಗ್ ನಲ್ಲಿರಬಹುದು ಎಂಬ ಸಾಮಾನ್ಯ ಪ್ರಜ್ಞೆಯೂ ಅವರಿಗೆ ಇರುವುದಿಲ್ಲ. ಎರಡನೇ ಸಲ ಫೋನ್ ಮಾಡಿ ಯಾವ ವಿಷಯಕ್ಕೆ ಫೋನ್ ಮಾಡಿದ್ದು ಎಂದು ಹೇಳುವ ಬದಲು, ಮೊದಲು ಕರೆ ಮಾಡಿದಾಗ ಏಕೆ ಸ್ವೀಕರಿಸಲಿಲ್ಲ ಎಂಬ ವಿಷಯವನ್ನೇ ಪ್ರಧಾನ ಮಾಡಿಕೊಳ್ಳುತ್ತಾರೆ. ಆತನ ಸಮಜಾಯಿಷಿ ಕೇಳುವಷ್ಟೂ ಸಹನೆ ಇರುವುದಿಲ್ಲ. ಇದರಿಂದಾಗಿ ಅಂತಹ ಮುಂಗೋಪಿ ವ್ಯಕ್ತಿ ತನ್ನ ಉತ್ತಮ ಸಂಪರ್ಕಗಳನ್ನು ಕಳೆದುಕೊಳ್ಳುತ್ತಾನೆ. ಗೆಳೆಯರು, ಸಂಬಂಧಿಕರು ದೂರವಾಗುತ್ತಾರೆ.

ಕೆಲವರಿಗೆ ಕೋಪ ಬರುವುದು ವಿನಾಕಾರಣ ಬೇರೆಯವರನ್ನು ಹಳಿಯಲು ಮಾತ್ರ. ಆತ ಹೀಗೆ, ಈತ ಹಾಗೆ ಎನ್ನುತ್ತಾ ಬೇರೆಯವರ ಜೊತೆ ಇತರರ ಬಗ್ಗೆ ಕೋಪಾವೇಷ ತೋರ್ಪಡಿಕೆ ಮಾಡುವುದರ ಹೊರತಾಗಿ ಅವರಿಗೆ ಬೇರೆ ಕೆಲಸವಿರುವುದಿಲ್ಲ. ಒಂದು ಸಂಸ್ಥೆಯ ಬಾಸ್ ಆಗಿರುವ ಕೆಲವರು ಸಿಬ್ಬಂದಿಗಳ ಮೇಲೆ ಕೋಪಗೊಳ್ಳುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದೇ ತಿಳಿದುಕೊಂಡಿರುತ್ತಾರೆ. ಕಚೇರಿಗೆ ಬಂದೊಡನೆಯೇ ವಿನಾಕಾರಣ ಸೆಕ್ಯೂರಿಟಿಯಿಂದ ಮೆನೇಜರ್ ತನಕ ಬೈಯುತ್ತಾ ಇರುತ್ತಾರೆ. ಅವರಿಗೆ ತಾನು ಬಾಸ್ ಎಂದು ಹೇಳಿಕೊಳ್ಳುವ ವಿಚಿತ್ರ ಖಯಾಲಿ. ಬಾಸ್ ಎಂದರೆ ತನ್ನ ಕೈಕೆಳಗೆ ದುಡಿಯುತ್ತಿರುವ ಕೆಲಸಗಾರರ ಮೇಲೆ ವಿನಾಕಾರಣ ಕೋಪಿಸಿಕೊಂಡು ದಬ್ಬಾಳಿಕೆ ಮಾಡುವುದು ಎಂದುಕೊಂಡಿರುತ್ತಾರೆ. 

‘ಸಿಡುಕು ಮೂತಿ ಸಿದ್ಧ' ತರಹದ ಜನಗಳು ನಿಮಗೆ ಗಲ್ಲಿಗಲ್ಲಿಗಳಲ್ಲಿ ದೊರೆಯುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರು ತಮ್ಮ ರೋಗಿಗಳ ಮೇಲೆ, ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳ ಮೇಲೆ ಕೋಪಗೊಂಡು ಹಾರಾಡುತ್ತಲೇ ಇದ್ದರೆ ಏನು ಚಂದ? ಯಾವುದೇ ಕೆಲಸದಲ್ಲಿ ತಪ್ಪಾಗುವುದು ಸಹಜ. ಅದಕ್ಕೆ ಕೋಪಗೊಂಡರೆ ಏನಾದರೂ ಪ್ರಯೋಜನ ಇದೆಯೇ? ‘ಕೋಪದಲ್ಲಿ ಕುಯ್ದುಕೊಂಡ ಮೂಗು ಎಂದಿಗೂ ಸರಿಯಾಗದು' ಎನ್ನುವ ಮಾತಿನಂತೆ ನಾವು ನಮ್ಮ ಕೋಪವನ್ನು ಆದಷ್ಟು ನಿಯಂತ್ರಣದಲ್ಲಿರಿಸಬೇಕು. ಇದರಿಂದ ನಮ್ಮ ಸ್ವಾಸ್ಥ್ಯದ ಜೊತೆಗೆ ಸಮಾಜದ ಆರೋಗ್ಯವೂ ಸುಧಾರಿಸುತ್ತದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ