ಗರಿ ಗರಿ ಕಚೋರಿ

ಗರಿ ಗರಿ ಕಚೋರಿ

ಬೇಕಿರುವ ಸಾಮಗ್ರಿ

ಮೈದಾ ಹಿಟ್ಟು ೨ ಕಪ್, ಅಜ್ವಾನ ಅರ್ಧ ಚಮಚ, ಕೊತ್ತಂಬರಿ ಹುಡಿ ೧ ಚಮಚ, ಜೀರಿಗೆ ೧ ಚಮಚ, ಸೋಂಪು ೧ ಚಮಚ, ಈರುಳ್ಳಿ ೩, ಹಸಿಮೆಣಸು ೨-೩, ಕಡಲೆ ಹಿಟ್ಟು ೨ ಚಮಚ, ಮೆಣಸಿನ ಹುಡಿ ೧ ಚಮಚ, ಗರಂ ಮಸಾಲೆ ಅರ್ಧ ಚಮಚ, ಕಾಳುಮೆಣಸಿನ ಹುಡಿ ಅರ್ಧ ಚಮಚ, ಅರಸಿನ ಹುಡಿ ಸ್ವಲ್ಪ, ಅಡುಗೆ ಎಣ್ಣೆ ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಬೇಯಿಸಿದ ಆಲೂಗಡ್ಡೆ ೩, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ೧ ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಸಕ್ಕರೆ ೧ ಚಮಚ, ಸ್ವಲ್ಪ ಇಂಗು

ತಯಾರಿಸುವ ವಿಧಾನ

ಮೈದಾಹಿಟ್ಟಿಗೆ ಉಪ್ಪು, ಅಜ್ವಾನ, ಎರಡು ಚಮಚ ಅಡುಗೆ ಎಣ್ಣೆ ಹಾಗೂ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಇಪ್ಪತ್ತು ನಿಮಿಷಗಳ ಕಾಲ ತೆಗೆದಿಡಿ. ಕೊತ್ತಂಬರಿ ಕಾಳು (ಧನಿಯಾ), ಜೀರಿಗೆ ಹಾಗೂ ಸೋಂಪನ್ನು ಹುಡಿ ಮಾಡಿ. ಪಾತ್ರೆಯೊಂದಕ್ಕೆ ಮೂರು ಚಮಚ ಅಡುಗೆ ಎಣ್ಣೆ, ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಡಲೆ ಹಿಟ್ಟು, ಮೆಣಸಿನ ಹುಡಿ, ಗರಂ ಮಸಾಲೆ, ಕಾಳುಮೆಣಸಿನ ಹುಡಿ, ಅರಸಿನ ಹುಡಿ, ಇಂಗು ಹಾಗೂ ಈಗಾಗಲೇ ಹುಡಿ ಮಾಡಿಟ್ಟುಕೊಂಡ ಹುಡಿಗಳನ್ನು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಕೈಯಾಡಿಸಿ.

ಈ ಮಿಶ್ರಣಕ್ಕೆ ಹುಡಿ ಮಾಡಿದ ಆಲೂಗಡ್ಡೆ, ಕೊತ್ತಂಬರಿ ಸೊಪ್ಪು, ಸಕ್ಕರೆ ಸೇರಿಸಿ ಕಲೆಸಿ. ಇದನ್ನು ಉಂಡೆಗಳನ್ನಾಗಿ ಮಾಡಿ. ಮೈದಾ ಹಿಟ್ಟಿನ ಮಿಶ್ರಣವನ್ನು ಉಂಡೆ ಮಾಡಿ ಅಂಗೈ ಅಗಲಕ್ಕೆ ಲಟ್ಟಿಸಿ, ಅದರ ಒಳಗೆ ಆಲೂಗಡ್ಡೆ ಉಂಡೆಯನ್ನು ಇರಿಸಿ ಲಟ್ಟಿಸಿ. ಇದನ್ನು ಎಣ್ಣೆಯಲ್ಲಿ ಕರಿದರೆ ಗರಿ ಗರಿ ಕಚೋರಿ ತಯಾರು.