ಗೋಡೆಗೆ ಬರೆದ ನವಿಲು (ಕಥಾ ಸಂಕಲನ)

ಗೋಡೆಗೆ ಬರೆದ ನವಿಲು (ಕಥಾ ಸಂಕಲನ)

ಪುಸ್ತಕದ ಲೇಖಕ/ಕವಿಯ ಹೆಸರು
ಸಂದೀಪ ನಾಯಕ
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ.60/-

ಛಂದ ಪುಸ್ತಕ 2009ನೇ ಸಾಲಿನ ಬಹುಮಾನ ಪಡೆದ ಕಥಾಸಂಕಲನ ಇದು. ಕಥಾಸ್ಪರ್ಧೆಯ ತೀರ್ಪುಗಾರರಾದ ಅಮರೇಶ ನುಗಡೋಣಿ ಹತ್ತಾರು ಕತೆಗಾರರ ಸುಮಾರು 100 ಕತೆಗಳನ್ನು ಓದಿ, ಇದನ್ನು ಆಯ್ಕೆ ಮಾಡಿದ್ದಾರೆ.

"ತೀರ್ಪುಗಾರರ ಮಾತಿ”ನಲ್ಲಿ ಅವರು ಹೀಗೆ ಬರೆದಿದ್ದಾರೆ: “ಈ ಸಂಕಲನದಲ್ಲಿ ಹನ್ನೆರಡು ಕಥೆಗಳಿವೆ. ಹತ್ತು ವರ್ಷಗಳ ಅವಧಿಯಲ್ಲಿ ಈ ಕಥೆಗಳು ರಚನೆಯಾಗಿವೆ. ಸಂದೀಪ ನಾಯಕರ ಕಥೆಗಳು ಸಮಾನತೆಯನ್ನು ಕಾಯ್ದುಕೊಂಡಿವೆ. ಪಾತ್ರಗಳ ಸೃಷ್ಟಿಯಲ್ಲಾಗಲಿ, ಸನ್ನಿವೇಶಗಳ ನಿರ್ಮಾಣದಲ್ಲಾಗಲಿ, ಉದ್ಭವಿಸುವ ಸಮಸ್ಯೆಯಲ್ಲಾಗಲಿ, ದೃಷ್ಟಿಧೋರಣೆಯಲ್ಲಾಗಲಿ, ಕಥೆಯ ನಿರೂಪಣೆಯಲ್ಲಾಗಲಿ, ಭಾಷೆಯ ಬಳಕೆಯಲ್ಲಾಗಲಿ, ಒಟ್ಟು ಕಥನಕ್ರಮದಲ್ಲಾಗಲಿ ಏಕರೂಪತೆಯನ್ನು ಹೊಂದಿವೆ. ಏರುಗತಿಯಲ್ಲಾಗಲಿ, ಏರುಪೇರಾಗಲಿ ಇಲ್ಲ. ಒಂದು ಹದವನ್ನು ಕಾಯ್ದುಕೊಂಡಿವೆ. ಇದನ್ನು ಒಂದು ಗುಣವೆಂದು ಭಾವಿಸಬಹುದು. ಸಂದೀಪ ನಾಯಕರ ಆರಂಭದ ಈ ಕಥೆಗಳ ಸಾಧನೆ ಮೆಚ್ಚುಗೆಯಾಗುತ್ತದೆ.”

ಇದರಲ್ಲಿರುವ ಕತೆಗಳ ಪಾತ್ರಗಳದ್ದು ಸೀಮಿತ ಲೋಕದ ಸೀಮಿತ ಬದುಕು. ಹಾಗಾಗಿ ಅವುಗಳ ಸಮಸ್ಯೆಗಳೂ ಸೀಮಿತ. ಈ ಸಣ್ಣ ಚೌಕಟ್ಟಿನ ಒಳಗಿರುವ ತವಕ-ತಲ್ಲಣಗಳನ್ನು, ಆಶೆ-ನಿರಾಶೆಗಳನ್ನು ಇವು ಸ್ಪಷ್ಟವಾಗಿ ಕಟ್ಟಿಕೊಡುತ್ತವೆ ಎಂಬುದೇ ಇವುಗಳ ವಿಶೇಷತೆ.

"ಆನೆ ಸಾಕಿದ ಮನೆಗೆ ಎರಡು ಹೂದಂಡೆ" ಎಂಬ ಮೊದಲ ಕತೆಯಲ್ಲಿ ಸಿರಿವಂತರ ಮನೆಗೆ ದಿನದಿನವೂ ಹೂದಂಡೆ ತಂದು ಕೊಡುವ ನಾಗವೇಣಿಯ ಕಥಾನಕ. ಆ ಮನೆಯ ಸಾಹುಕಾರ್ತಿ ಹಲವು ವರುಷಗಳಿಂದ ಆಕೆಗೆ ಹೂದಂಡೆಯ ಹಣ ಪಾವತಿಸಿರಲಿಲ್ಲ. ಈಗ ಮಗಳ ಮದುವೆ ನಿಶ್ಚಯವಾಗಿರುವಾಗ ನಾಗವೇಣಿಗೆ ಹಣದ ತುರ್ತು. ಆದರೆ ಹಲವು ದಿನಗಳಿಂದ ಆ ಮನೆಗೆ ಹೋದ ಹೊತ್ತಿನಲ್ಲಿ ಸಾಹುಕಾರ್ತಿ ಕಾಣಿಸುವುದೇ ಇಲ್ಲ. ಆ ಮನೆಯಲ್ಲಿ ಎದುರಾದವರನ್ನು ಕೇಳಿದಾಗ "ಅವರಿಗೆ ಆರಾಮಿಲ್ಲ” ಎಂಬರ್ಥದ ಉತ್ತರ ಸಿಗುತ್ತಿತ್ತು. ಅವರು ಬೇಕೆಂದೇ ಹೆಬ್ಬಾಗಿಲಿಗೆ ಬರುತ್ತಿಲ್ಲವೋ ಎಂಬ ಅನುಮಾನ ನಾಗವೇಣಿಯಲ್ಲಿ ಬೆಳೆಯುತ್ತದೆ. ಕೊನೆಗೊಂದು ದಿನ ಅವರು ಸಿಕ್ಕಾಗಲೂ ಇವಳಿಗೆ ದಕ್ಕಿದ್ದು ನಿರಾಶೆ.

ಎರಡನೆಯ ಕತೆ "ಕರೆ". ಇದರ ಮುಖ್ಯ ಪಾತ್ರ ಹಲವು ದಿನಗಳಿಂದ ಅಂಕೋಲೆಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಊರಿನ ಪಟೇಲನಾಗಿದ್ದ ಮೋನಪ್ಪ. ಅವನ ಊರಿನ ಬಹುಪಾಲು ಜನರು ಪೇಟೆಗೆ ಬಂದಾಗ ಆಸ್ಪತ್ರೆಗೂ ಬಂದು ಮೋನಪ್ಪನನ್ನು ಕಂಡು ಹೋಗುತ್ತಾರೆ. ಆದರೆ, ಅವನ ತಮ್ಮ ದಯಾನಂದನೇ ನೋಡಲು ಬರೋದಿಲ್ಲ. ಮೋನಪ್ಪ ಹಲವರ ಮೂಲಕ ಹೇಳಿ ಕಳಿಸಿದರೂ ದಯಾನಂದ ನೋಡಲು ಬರೋದಿಲ್ಲ. ತನ್ನಿಂದ ಪಡೆದಿದ್ದ ಹತ್ತು ಸಾವಿರ ರೂಪಾಯಿಗಳ ಸಾಲವನ್ನು ವಾಪಾಸು ಕೊಡಬೇಕಾದೀತೆಂಬ ಕಾರಣಕ್ಕಾಗಿ ದಯಾನಂದ ಬರುತ್ತಿಲ್ಲವೇ ಎಂಬ ಅನುಮಾನ ಹೆಚ್ಚುತ್ತದೆ ಮೋನಪ್ಪನ ಮನದಲ್ಲಿ. ದಯಾನಂದನ ನಿರೀಕ್ಷೆಯಲ್ಲಿ ದಣಿದು ಹೋಗುವ ಮೋನಪ್ಪನ ಚಿತ್ರಣ ಮನಕಲಕುತ್ತದೆ.

“ಮರೆತುಹೋದ ಒಂದು ಸಂಬಂಧ” (ಮೂರನೇ ಕತೆ) ಹೆಸರೇ ಸೂಚಿಸುವಂತೆ, ತಹಸೀಲ್ದಾರರ ಕಚೇರಿಯಲ್ಲಿ ಅಚಾನಕ್ಕಾಗಿ  ವೆಂಕಟಣ್ಣ ಎದುರಾಗಿ, ತನ್ನ ಗುರುತು ಹಿಡಿದಾಗ ಕಥಾನಾಯಕನಿಗೆ ಆತನ ಜೊತೆಗಿನ ಬಾಲ್ಯದ ಸಂಗತಿಗಳು ಧುತ್ತನೆ ನೆನಪಾಗುವ ಕಥಾನಕ.

ನಂತರದ ಕತೆ “ಇಲ್ಲಿ ಬಂದೆವು ಸುಮ್ಮನೆ”. ಇದರ ಮುಖ್ಯ ಪಾತ್ರಗಳು ಯುವಕ ಮೋಹನ, ಅವನ ಅವ್ವ ಮತ್ತು ಜಾಯಕ್ಕ. ಮುಂಬೈಯಲ್ಲಿ ಎರಡು ವಾರ ಮಗಳ ಮನೆಯಲ್ಲಿ ಇದ್ದು ಬರಲು ಹೊರಟ ಜಾಯಕ್ಕ, ಆಗ ರಾತ್ರಿ ತನ್ನ ಮನೆ ಕಾಯಲು ಮೋಹನನನ್ನು ಕಳಿಸಬೇಕೆಂದು ಅವನ ಅವ್ವನಿಗೆ ತಾಕೀತು ಮಾಡುತ್ತಾಳೆ. ಅವಳ ಮುಂಬೈಯ ಅಳಿಯನ ಸಹಾಯದಿಂದ ತನ್ನ ಮಗನಿಗೆ ಅಲ್ಲೊಂದು ಕೆಲಸ ಸಿಗುವಂತಾಗಲಿ… ಎಂಬ ಆಸೆಯಿಂದ ಮುಂಚಿನಂತೆ ಈಗಲೂ ಅವ್ವ ಇದಕ್ಕೆ ಒಪ್ಪಿಕೊಳ್ಳುತ್ತಾಳೆ. ಆದರೆ, ಎರಡು ವಾರಗಳ ನಂತರ ಮಗಳು-ಅಳಿಯನೊಂದಿಗೆ ಜಾಯಕ್ಕ ಮರಳಿದಾಗ ಭ್ರಮನಿರಸನ.

“ಉರುಳಿತೊಂದು ಮರ” ಹಳೆಯ ಮಾವಿನ ಮರವೊಂದನ್ನು ಕಡಿಯಲು ಊರಿನ ಹಲವರು ಒತ್ತಾಯಿಸಿ, ಕೊನೆಗೂ ಅದನ್ನು ಕಡಿಸುವ ಕಥಾನಕ. ಇದಕ್ಕೆ ನೆವನ: ಹಳ್ಳಿಯ ಅಂಚಿನ ರಸ್ತೆಯಿಂದ ಬಸ್ಸು ಊರೊಳಗೆ ಬರಲು ಈಗಿರುವ ರಸ್ತೆ ಅಗಲ ಮಾಡಬೇಕಾದರೆ ಇದನ್ನು ಕಡಿಯಲೇ ಬೇಕು ಎಂಬುದು. ಆ ಮರ ಕಡಿಯಬಾರದೆನ್ನುವ ಒಬ್ಬನೇ ಒಬ್ಬ ವ್ಯಕ್ತಿ ಕಥಾನಾಯಕ.
“ಒಂಬತ್ತು, ಎಂಟು, ಎಂಟು…" ಎಂಬ ಕತೆ ಯುವತಿ ದೇವಿಯ ಕೆಲವು ತಿಂಗಳುಗಳ ಬದುಕನ್ನು ಚಿತ್ರಿಸುತ್ತದೆ. ಅವಳ ಅಕ್ಕ ನೀಲಾ ಯಾರೊಂದಿಗೋ ಮನೆ ಬಿಟ್ಟು ಓಡಿ ಹೋಗಿದ್ದಳು. ಅವಳು ಪತ್ತೆಯಾಗದ ಆತಂಕದಲ್ಲಿದ್ದ  ಅಮ್ಮ ಸಾವಿತ್ರಿ, ಎರಡನೇ ಮಗಳು ದೇವಿಯನ್ನು ಮುದುಕಿ ಮಂಕಾಳಮ್ಮಳನ್ನು ನೋಡಿಕೊಳ್ಳಲು ಕಳಿಸಿಕೊಡುತ್ತಾಳೆ. ಅಲ್ಲಿಗೆ ಹೋದ ದೇವಿಗೆ ಅಕ್ಕ ನೀಲಾ ಅದೇ ಊರಿನಲ್ಲಿದ್ದಾಳೆ ಎಂಬ ಸುಳಿವು ಸಿಕ್ಕಿ, ಅಕ್ಕನ ಫೋನ್ ನಂಬರಿಗೆ ಮತ್ತೆಮತ್ತೆ ಫೋನ್ ಮಾಡುತ್ತಾಳೆ.

“ಕಂಡಷ್ಟೇ ಆಕಾಶ” ಮತ್ತು “ಬಾಗಿಲ ಮುಂದೆ” - ಇವು ಯಾವುದೇ ಊರಿನಲ್ಲಿ ಯಾರದೇ ಬದುಕಿನಲ್ಲಿ ನಡೆಯಬಹುದಾದ ಎರಡು ಘಟನೆಗಳನ್ನು ಕೊನೆಯ ವರೆಗೂ ಕುತೂಹಲ ಉಳಿಸಿಕೊಳ್ಳುವಂತೆ ಹೆಣೆದ ಕತೆಗಳು. ಇನ್ನುಳಿದ ನಾಲ್ಕು ಕತೆಗಳು: “ಬೊಂಬೆಗೊಂದು ಸೀರೆ”, “ಸಹಿ”, "ಇನ್ನೊಂದೇ ಕಥೆ” ಮತ್ತು “ನಿನ್ನಲ್ಲೇ ಇರಲಿ". ಇವು ಜನಸಾಮಾನ್ಯರ ಬದುಕಿನ ವಿವಿಧ ಮುಖಗಳನ್ನು ಆಪ್ತವೆನಿಸುವ ರೀತಿಯಲ್ಲಿ ತೆರೆದಿಡುವ ಕತೆಗಳು. ಎಲ್ಲ ಕತೆಗಳನ್ನೂ ಸಶಕ್ತವಾಗಿಸಿರುವುದು ಗೋಕರ್ಣದವರಾದ ಕತೆಗಾರ ಸಂದೀಪ ನಾಯಕರು ಹತ್ತಿರದಿಂದ ಕಂಡ ಉತ್ತರಕನ್ನಡದ ಕರಾವಳಿಯ ಬದುಕು ಕತೆಗಳಿಗೆ ಒದಗಿಸಿರುವ ಹಿನ್ನೆಲೆ.