ಚದುರಂಗ

ಚದುರಂಗ

ಪುಸ್ತಕದ ಲೇಖಕ/ಕವಿಯ ಹೆಸರು
ಲತಾ ಗುತ್ತಿ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೪೯೫.೦೦, ಮುದ್ರಣ: ೨೦೨೩

ಹೆಸರಾಂತ ಬರಹಗಾರ್ತಿ ಲತಾ ಗುತ್ತಿಯವರ ನೂತನ ಕಾದಂಬರಿ ‘ಚದುರಂಗ' ಈ ಬೃಹತ್ (೪೭೦ ಪುಟಗಳು) ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಡಾ. ಬಸವರಾಜ ಕಲ್ಗುಡಿ. ಇವರು ತಮ್ಮ ಮುನ್ನುಡಿಯಲ್ಲಿ ಕಾದಂಬರಿಯ ಕುರಿತಾಗಿ ಬಹಳ ಸೊಗಸಾಗಿ ವರ್ಣನೆ ಮಾಡಿದ್ದಾರೆ. ಇವರ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...

“ಲತಾ ಗುತ್ತಿ ಅವರು ಕನ್ನಡದ ಹೆಸರಾಂತ ಬರಹಗಾರರು. ಇವರು ಮುಖ್ಯವಾಗಿ ಕಾದಂಬರಿ, ಕಾವ್ಯ, ಪ್ರವಾಸ ಮತ್ತು ಕಥಾ ಸಾಹಿತ್ಯದಲ್ಲಿ ತಮ್ಮ ಹೆಸರನ್ನು ಗಟ್ಟಿ ಗೊಳಿಸಿಕೊಂಡಿದ್ದಾರೆ. ಜೀವನ ಚರಿತ್ರೆ, ಅನುವಾದ ಮುಂತಾದ ಪ್ರಕಾರಗಳಲ್ಲಿಯೂ ಇವರು ಗುರುತರವಾದ ಕೆಲಸವನ್ನು ಮಾಡಿದ್ದಾರೆ. ಕನ್ನಡದ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳು ಇವರ ಬರವಣಿಗೆಗೆ ಸಂದಿವೆ. ಲತಾ ಗುತ್ತಿಯವರ ``ಕರಿನೀರು'' ಕಾದಂಬರಿಯು ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿಯು ಸೇರಿದಂತೆ ಅನೇಕ ಬಹುಮಾನ ಪುರಸ್ಕಾರಗಳನ್ನು ಪಡೆದಿದ್ದು ಕಾದಂಬರಿ ಪ್ರಕಾರದಲ್ಲಿ ಇವರಿಗೆ ಗಟ್ಟಿಯಾದ ಸ್ಥಾನವನ್ನು ಗಳಿಸಿಕೊಟ್ಟ ಕೃತಿಯಾಗಿದೆ.

ಪ್ರಸ್ತುತ ಲತಾ ಗುತ್ತಿಯವರ `ಚದುರಂಗ' ಕಾದಂಬರಿಯು ಅವರ ಹೊಸ ಕೃತಿ. ಈ ಕಾದಂಬರಿಯು ಹಲವು ಕಾರಣಕ್ಕಾಗಿ ನನ್ನ ಗಮನವನ್ನು ಸೆಳೆದಿದೆ. ಅವರ ಕಾದಂಬರಿಗಳನ್ನು ಓದುವ ಓದುಗರಿಗೆ ಮಂದ ಸ್ತರದಲ್ಲಿ ಕಥೆ ಹೇಳುವ ಕಲೆಯು ಇವರಿಗೆ ಒಗ್ಗಿರುವುದು ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ಅವರ ಹಿಂದಿನ ಕಾದಂಬರಿ ``ಕರಿನೀರು'' ಕೃತಿಯಲ್ಲಿಯಂತೆ ಇಲ್ಲಿಯೂ ಅದು ಅವರ ನಿರೂಪಣೆಯ ಶೈಲಿಯಾಗಿದೆ. ಇದು ಅವರ ಶೈಲಿಯ ಒಂದು ಗುಣಾತ್ಮಕ ಅಂಶವೂ ಆಗಿದೆ. ಭಾರತದಲ್ಲಿ ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತಂದ ಎಮರ್ಜೆನ್ಸಿಯ ಸಂದರ್ಭದಲ್ಲಿ ಸರ್ವಾಧಿ ಕಾರತ್ವದ ಸ್ವರೂಪವನ್ನು ಹಿನ್ನೆಲೆಯಾಗಿಟ್ಟುಕೊಂಡು, ಉತ್ತರ ಕರ್ನಾಟಕದ ಬೆಳಗಾವಿ ಶಹರ ಮತ್ತು ತಾಲೂಕು, ಹಳ್ಳಿಗಳಲ್ಲಿ ಅದು ಉಂಟು ಮಾಡಿದ ಪ್ರಭಾವವನ್ನು ಚಿತ್ರಿಸುವುದು ಕಾದಂಬರಿಯ ಒಂದು ಮುಖ. ಈ ಹಿನ್ನೆಲೆಯಲ್ಲಿ ಎಲ್ಲ ಕಾಲದ ಸರ್ವಾಧಿಕಾರತ್ವಗಳು ಪ್ರಜೆಗಳ ಧ್ವನಿಯನ್ನು, ಬಡ ಸಮುದಾಯದ ಆವಶ್ಯಕತೆಗಳನ್ನು ಹೇಗೆ ನಿರ್ಣಾಮ ಮಾಡುತ್ತದೆ ಎನ್ನುವುದು ಇಲ್ಲಿಯ ನಿರೂಪಣೆಯ ಇನ್ನೊಂದು ಪ್ರಧಾನವಾದ ಅಂಶ. ಗಮನಿಸಬೇಕಾದ ಅಂಶವೆಂದರೆ ಎಮರ್ಜೆನ್ಸಿ ಇಲ್ಲಿ ರಾಜಕೀಯ ಪಕ್ಷಪಾತದ ವಾದ ವಿವಾದದ ಕಥನವಾಗದೆ, ಸಂಪೂರ್ಣವಾಗಿ ಜನಸಾಮಾನ್ಯರ ಬದುಕಿನ ಪರಿಣಾಮವನ್ನು ಮಾರ್ಪಡಿಸುವ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ವ್ಯವಹರಿಸುವ ಒಂದು ನೋವಿನ ಅಂಶವಾಗಿ ರೂಪುಗೊಂಡಿರುವುದು. ಕಾದಂಬರಿಯ ಇತ್ಯಾತ್ಮಕ ನಿರೂಪಣೆ ಯಲ್ಲಿ ಇದು ಒಂದು ಪ್ರಧಾನವಾದ ಅಂಶವೆಂದು ನಾನು ಭಾವಿಸಿರುವೆ. ಜನಸಾಮಾನ್ಯರು ತಮ್ಮ ಬದುಕಿನ ಎಲ್ಲ ನೋವುಗಳನ್ನು ಎದುರಿಸುವಂತೆ ಈ ಒಂದು ತುರ್ತು ಪರಿಸ್ಥಿತಿಯ ನೋವನ್ನೂ ಎದುರಿಸುವ ಒಂದು ಕಥನವಾಗಿ ಈ ಕಾದಂಬರಿಯನ್ನು ಪರಿಭಾವಿಸ ಬೇಕಾಗುತ್ತದೆ. ಹೀಗಾಗಿ ಕಾದಂಬರಿಗೆ ಒಂದು ಮಂದ್ರ ಸ್ತರ ಲಭಿಸಿದೆ. ಅನೇಕ ಘಟನೆಗಳ ನಡುವೆ ಇದನ್ನು ಇಟ್ಟು ನೋಡುವ ಒಂದು ಮಾನಸಿಕ ದೂರ ಕಾದಂಬರಿಯ ವಸ್ತುವಿನಲ್ಲಿ ಆವರಿಸುತ್ತದೆ. ಈ ಕಾದಂಬರಿಯು ನನಗೆ ಇಷ್ಟವಾಗಲು ಇದು ಒಂದು ಕಾರಣ.

ಹರಿಯುವ ನದಿಗೆ ಉಪಕಾಲುವೆಗಳು ಸೇರಿಕೊಳ್ಳುವಂತೆ ಕಾದಂಬರಿಯಲ್ಲಿ ಅನೇಕ ಕಥನಗಳು ಕಾದಂಬರಿಯ ವಸ್ತುವನ್ನು ಸ್ಪಷ್ಟಗೊಳಿಸಲು ಸಹಾಯಕವಾಗುತ್ತವೆ. ರುದ್ರಾಪೂರವೆಂಬ ಹಳ್ಳಿಯ ಜನ ಸಮುದಾಯದ ಕಥನ ಇಲ್ಲಿ ರೂಪುಗೊಂಡು ಕ್ರಮೇಣ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಗುರುಪಾದ, ಚಂದ್ರು, ಅರವಿಂದ, ಶ್ರೀಮಂತ ಶ್ರೀಕಂಠಪ್ಪ, ಶಿವನಗೌಡ, ಇವರ ಸುತ್ತ ಕಥೆ ಆರಂಭವಾಗುತ್ತಾ ಬೆಳಗಾವಿಯ ಶಹರದ ವಾತಾವರಣದಲ್ಲಿ ಬೆಳೆಯುತ್ತಾ, ಶಹರ ಮತ್ತು ಹಳ್ಳಿಗಳ ನಡುವೆ ಜೀವಂತ ಸಂಬಂಧವನ್ನು ಉಳಿಸಿಕೊಳ್ಳುತ್ತಾ ಸಾಗುತ್ತದೆ. ಇಲ್ಲಿಯ ಕಥೆ, ವಿಭಿನ್ನ ಬಗೆಯ ಸಂಕಟ ಮತ್ತು ನೋವು ಗಳನ್ನು ಅನುಭವಿಸುವ ಹೆಣ್ಣು ಮಕ್ಕಳೂ ಸಹ ಈ ಕಥೆಯಲ್ಲಿ ಪ್ರಧಾನ ಪಾತ್ರವಹಿಸಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಹನ್ನೆರಡನೆಯ ಶತಮಾನದ ವಚನಕಾರರ ನೈತಿಕ ಮೌಲ್ಯ ನಡಾವಳಿ ಮತ್ತು ಆದರ್ಶಗಳು ಈಗಲೂ ಇಲ್ಲಿಯ ಅನೇಕರನ್ನು ಪ್ರಭಾವಿಸಿವೆ. ವರ್ತಮಾನ ಕಾಲದ ಬದುಕಿನ ಸಂಕಟಗಳಿಗೆ ಮತ್ತೆ ಮತ್ತೆ ಹನ್ನೆರಡನೇ ಶತಮಾನಕ್ಕೆ ತಿರುಗಿ ನೋಡುವ ಅನೇಕ ಪಾತ್ರಗಳು ಇಲ್ಲಿ ಕಾದಂಬರಿಗೆ ಒಂದು ವಿಭಿನ್ನವಾದ ಮೌಲ್ಯವನ್ನು ಒದಗಿಸುತ್ತವೆ. ಆಸಹಾಯಕತನ, ಹಾಗೂ ಓಡಿ ಹೋಗಿ ಮರೆಯಾಗುವುದು, ಈ ಕಾದಂಬರಿಯ ಒಂದು ಘಟ್ಟದ ಮುಖ್ಯ ವಸ್ತು. ಇನ್ನೊಂದು ಘಟ್ಟದಲ್ಲಿ ಅನುಭವಗಳೇ ಒಂದು ಬಗೆಯಲ್ಲಿ ಹೊಸ ತಿಳುವಳಿಕೆ ಮತ್ತು ಕ್ರಿಯಾಶೀಲತೆಯನ್ನು ಉಂಟುಮಾಡುವುದು. ಈ ಎರಡು ವಸ್ತುಗಳು ಒಂದಕ್ಕೊಂದು ಪೂರಕವಾಗುತ್ತಾ ಒಟ್ಟು ಕಾದಂಬರಿಯ ವಸ್ತುವಿಗೆ ವಿಶಾಲ ಬಂಧವನ್ನು ಒದಗಿಸಿವೆ. ಇಲ್ಲಿಯ ಅನೇಕ ಪಾತ್ರಗಳು ಮರೆಯಾಗು ವುದು ವಿಭಿನ್ನ ಬಗೆಯ ಕಾರಣಗಳಿಗಾಗಿ. ಆಸ್ತಿಯ, ಭೂಮಿಯ ವ್ಯಾಮೋಹ ಮತ್ತು ಸ್ವಾರ್ಥ ಮನುಷ್ಯ ಸಂಬಂಧವನ್ನು ನಾಶ ಮಾಡುವ ವಾತಾವರಣವು ಆಧುನಿಕ ಫ್ಯೂಡಲ್ ವ್ಯವಸ್ಥೆಯ ಪರಿಣಾಮಗಳಲ್ಲಿ ಒಂದಾಗಿದೆ. ಕಾದಂಬರಿಯಲ್ಲಿ ಬರುವ ಒಂದು ಪಾತ್ರ ಚೆನ್ನಬಸು ತನ್ನ ಎರಡನೆಯ ಹೆಂಡತಿಯು ತಳೆದ ಈ ಬಗೆಯ ವ್ಯಾಮೋಹ ಮತ್ತು ರಾಕ್ಷಸ ಪ್ರವೃತ್ತಿಯಿಂದ ಜರ್ಜರಿತನಾಗಿ, ತೋಟ ಆಸ್ತಿ ಎಲ್ಲವನ್ನು ಹೆಂಡತಿ ಮತ್ತು ಅವಳ ಮಕ್ಕಳಿಗೆ ಬರೆದುಕೊಟ್ಟು ಕಣ್ಮರೆಯಾದವನು ಎಲ್ಲಿ ಹೋದನೆಂದು ಗೊತ್ತಾಗುವುದಿಲ್ಲ. ಅವನ ಮೊದಲ ಹೆಂಡತಿಯ ಮಗ ಗುರುಪಾದ ನೋವನ್ನು ಅವಮಾನವನ್ನು ತಾಳಲಾರದೆ ಬೆಳಗಾವಿಗೆ ಓಡಿ ಬಂದು ಶಿಕ್ಷಣ ಪಡೆಯಲು ಉದ್ಯುಕ್ತನಾಗುತ್ತಾನೆ. ರಕ್ತ ಸಂಬಂಧಗಳ ಆಚೆ ನಿಜವಾದ ಸಂಬಂಧದ ಅರ್ಥವೇನು ಎಂದು ಹುಡುಕುವ ಸಂದರ್ಭವು ಇದರಿಂದಾಗಿ ಇವನಿಗೆ ಎದುರಾಗುತ್ತದೆ.

ಎಮರ್ಜೆನ್ಸಿಯು ಇಲ್ಲಿ ಹಲವರನ್ನು ಅಡಗಿಕೊಳ್ಳುವಂತೆ ಮಾಡಿದೆ. ಗುರುಪಾದ ಲೆಕ್ಚರರ್ ಆಗಿ ಹುಡುಗರಿಗೆ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ಮಾಡಿದ ಬೋಧನೆಯು ಒಂದು ಬಗೆಯಲ್ಲಿ ಅಧಿಕಾರಿಗಳಿಗೆ ಕಣ್ಣು ಕೆಂಪಾಗುವಂತೆ ಮಾಡಿದೆ. ನಕ್ಸಲರಿಗೆ ಸಿಂಪತಿ ತೋರಿಸುವವನು ಎಂದು ಇವನನ್ನು ಪೊಲೀಸರು ಹುಡುಕಲು ಶುರು ಮಾಡುತ್ತಾರೆ. ಇವನು ಅಡಗಿಕೊಳ್ಳಬೇಕಾಗುತ್ತದೆ. ಇವನ ಗೆಳೆಯ ಮತ್ತು ಬಂಧು ಆದಂಥ ಚಂದ್ರು ಶಾಲಾ ಶಿಕ್ಷಕ, ಗಂಡು ಮಕ್ಕಳು ಬೇಕೆಂದು ಹಂಬಲಿಸುವ ಇವನ ಹೆಂಡತಿ ಶಕುಂತಲಾ ಮೂರು ಹೆಣ್ಣು ಮಕ್ಕಳಾದ ಮೇಲೆ ಇನ್ನೊಂದು ಗಂಡು ಮಗು ಬೇಕೆಂದು ನಿರೀಕ್ಷೆಯಲ್ಲಿ ಇರುತ್ತಾಳೆ. ಆದರೆ ಎಮರ್ಜೆನ್ಸಿಯ ಸಂದರ್ಭದಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಕಡ್ಡಾಯವಾಗಿ, ಸರ್ಕಾರಿ ಕೆಲಸದಲ್ಲಿರುವವರು ಮಾಡಿಸಿ ಕೊಳ್ಳಲೇಬೇಕಾಗುವ ಒಂದು ನಿಯಮ ಜಾರಿಗೆ ಬಂದಿರುತ್ತದೆ. ಇದರಿಂದಾಗಿ ಶಿಕ್ಷಕನಾದ ಚಂದ್ರು ತಲೆ ಮರೆಸಿಕೊಳ್ಳಬೇಕಾದ ಪ್ರಸಂಗ ಬರುತ್ತದೆ.

ಈ ಕಾದಂಬರಿಯಲ್ಲಿ ವೈವಿಧ್ಯಮಯ ಸ್ತ್ರೀ ಪಾತ್ರಗಳನ್ನು ಕಾಣಬಹುದು. ಕುಟುಂಬದ ಸುಖದುಃಖಗಳಲ್ಲಿ ಸಂಕಷ್ಟಗಳನ್ನು ಎದುರಿಸುತ್ತಾ ಅದನ್ನು ನಿವಾರಿಸುವ ಪ್ರಯತ್ನದಲ್ಲಿರುವ ಹೆಣ್ಣು ಪಾತ್ರಗಳು ಇಲ್ಲಿವೆ. ಸಾವಕ್ಕ, ಉಮಾ, ಶಕುಂತಲಾ, ರತ್ನವ್ವ, ಅಂಥ ಪಾತ್ರಗಳು. ಶಿಕ್ಷಣ ಪಡೆದು ತಮ್ಮ ತಮ್ಮ ಬದುಕನ್ನು ತಮ್ಮ ಇಚ್ಛೆಯಂತೆ ಆಯ್ದುಕೊಳ್ಳಲು ಹುಡುಕಾಟ ಮಾಡುವ ಸ್ತ್ರೀ ಪಾತ್ರಗಳು ಇಲ್ಲಿವೆ. ಶಾಲಿನಿ, ಕುಸುಮ ಅಂಥ ಪಾತ್ರಗಳು.

ಕಾದಂಬರಿಯು ಎಲ್ಲಿಯೂ ನಾಯಕರನ್ನು ಕಟ್ಟುವ, ಬೆಳೆಸುವ ಉದ್ದೇಶವನ್ನು ಹೊಂದಿಲ್ಲ. ಎಲ್ಲವೂ ಸಾಮಾನ್ಯ ಪಾತ್ರಗಳು ಮತ್ತು ಎಲ್ಲವೂ ತಮ್ಮ ಸಂಸಾರ ಹಾಗೂ ಸಮಾಜದ ಸಂಕಟಗಳಲ್ಲಿ ಮಿಳಿತವಾಗಿ, ಅವುಗಳನ್ನು ನಿವಾರಿಸಿಕೊಳ್ಳುವ ಪ್ರಯತ್ನ- ಶೀಲ ವ್ಯಕ್ತಿತ್ವಗಳೆ ಆಗಿವೆ. ಈ ಕಾದಂಬರಿಯು ಅನೇಕ ರಾಜಕೀಯ ಸಾಮಾಜಿಕ ಕಾದಂಬರಿಗಳಂತೆ ಒಡಲಲ್ಲಿ ಮಹತ್ವಾಕಾಂಕ್ಷೆಯನ್ನು ಮೆರೆಯುವ ಭಾಷೆಯನ್ನು ಹೊಂದಿಲ್ಲ ಎನ್ನುವುದು ಕಾದಂಬರಿಯ ಗುಣಗಳಲ್ಲಿ ಒಂದಾಗಿದೆ. ಇದೊಂದು ಕ್ರಿಯಾಶೀಲ, ಸೃಜನಶೀಲ ವ್ಯಕ್ತಿತ್ವಗಳಿಗೆ ಒಂದು ಸವಾಲು ಕೊಡುವ ಭಾಷೆಯೇ ಆಗಿದೆ. ಅಂತಹ ಸವಾಲನ್ನು ಈ ಕಾದಂಬರಿಯು ಮುಖಾಮುಖಿಯಾಗಿಸುತ್ತದೆ. ಈ ಕಾದಂಬರಿಯು ಕನ್ನಡಕ್ಕೆ ಕೊಟ್ಟ ಹೊಸ ತಿಳುವಳಿಕೆ ಆಗಿದೆ ಎಂದೇ ನನ್ನ ಭಾವನೆ. ಅದಕ್ಕಾಗಿ ಕಾದಂಬರಿಗಾರ್ತಿಯನ್ನು ಅಭಿನಂದಿಸುತ್ತೇನೆ."