ಜಾನಪದ ಕಥಾಸಂಗ್ರಹ

ಜಾನಪದ ಕಥಾಸಂಗ್ರಹ

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್.ಬಿ. ಸರಸ್ವತಿ
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ
ಪುಸ್ತಕದ ಬೆಲೆ
ರೂ. 150/-

ಬಾಲ್ಯದಲ್ಲಿ ಅಜ್ಜ ಅಜ್ಜಿಯರಿಂದ ಜಾನಪದ ಕತೆಗಳನ್ನು ಕೇಳಿದವರಿಗೆ ಗೊತ್ತು ಅವುಗಳ ಸೊಗಡು. ಅವು ಚಿರನೂತನ ಕತೆಗಳು. ಈ ಸಂಗ್ರಹದಲ್ಲಿವೆ 42 ಜಾನಪದ ಕತೆಗಳು. “ಸುಮಾರು 70 ವರ್ಷದ ಹಿಂದೆಯೇ ಹುಬ್ಬಳ್ಳಿಯಲ್ಲಿ ಪ್ರಕಟಗೊಂಡಿದ್ದ ಜಾನಪದ ಕಥೆಗಳ ಸಂಕಲನದಲ್ಲಿವನ್ನು ಸಂಗ್ರಹಿಸಿ, ತಿದ್ದಿ, ಒಂದು ಆಕಾರವನ್ನು ಕೊಟ್ಟು, ಈ ಪುಸ್ತಕವನ್ನು ಬರೆದಿದ್ದೇನೆ” ಎಂದು “ನನ್ನುಡಿ"ಯಲ್ಲಿ ತಿಳಿಸಿದ್ದಾರೆ ಲೇಖಕಿ ಎಸ್.ಬಿ. ಸರಸ್ವತಿ.

"ಜಿಪುಣ ಮುದುಕಿ” ಎಂಬ ಕತೆಯ ಸಾರಾಂಶ: ಒಂದೂರಿನಲ್ಲಿ ಜಿಪುಣ ಮುದುಕಿ ಮಗನೊಂದಿಗೆ ವಾಸ ಮಾಡುತ್ತಿದ್ದಳು. ಅವಳು ಕಾಸಿಗೆ ಕಾಸು ಕೂಡಿಸಿ ಸಾವಿರಾರು ರೂಪಾಯಿ ಸಂಗ್ರಹಿಸಿದ್ದಳು. ಆದರೆ ಮಗನಿಗೆ ಒಂದು ಕಾಸನ್ನೂ ಕೊಟ್ಟವಳಲ್ಲ. ಮುದುಕಿ ಹಣ ಕೂಡಿಟ್ಟಿದ್ದಾಳೆ ಎಂಬುದನ್ನು ತಿಳಿದ ಕೆಲವು ದುಷ್ಟರು ಅದನ್ನು ಲಪಟಾಯಿಸಲು ಕಾಯುತ್ತಿದ್ದರು. ಒಮ್ಮೆ ಅವಳ ಮಗ ಬೇರೆ ಊರಿಗೆ ಹೋಗಬೇಕಾಯಿತು. ಅವನು ಹೊರಟಾಗ ತಾಯಿಯನ್ನು ಎಚ್ಚರಿಸಿದ್ದ, “ಅವ್ವಾ, ನೀನೊಬ್ಬಳೇ ಮನೆಯಲ್ಲಿ ಇರುತ್ತೀಯಾ, ಎಚ್ಚರವಾಗಿರು. ನಾನು ಪರವೂರಿಗೆ ಹೋದ ವಿಷಯವನ್ನು ಯಾರಿಗೂ ಹೇಳಬೇಡ.” ಆದರೆ ಆ ಮುದುಕಿ ಹಲವರ ಮನೆಗೆ ಹೋಗಿ, ಅವರ ಯೋಗಕ್ಷೇಮ ವಿಚಾರಿಸುತ್ತಾ, ತನ್ನ ಮಗ ಪರವೂರಿಗೆ ಹೋದ ಸುದ್ದಿ ಹೇಳುತ್ತಾ ಬಂದಳು. ಆ ಸುದ್ದಿ ದುಷ್ಟರಿಗೂ ತಿಳಿಯಿತು. ಆ ದಿನ ರಾತ್ರಿ ಅವರು ಮುದುಕಿಯ ಮನೆಗೆ ನುಗ್ಗಿದರು. ಮುದುಕಿ ಎಚ್ಚರವಾಗಿಯೇ ಇದ್ದಳು. ಆ ಬಡಕುಬಾಯಿ ಮುದುಕಿ ಅವರೊಂದಿಗೆ ಅನಗತ್ಯ ವಿಷಯಗಳನ್ನು ಮಾತಾಡುತ್ತಾ, ತನ್ನ ಹಣವನ್ನೆಲ್ಲ ದೇವರ ಪೀಠದ ಕೆಳಗೆ ಬಚ್ಚಿಟ್ಟ ಸಂಗತಿ ತಿಳಿಸಿದರು. ಆ ದುಷ್ಟರು ಅನಾಯಾಸವಾಗಿ ಅದನ್ನೆಲ್ಲ ಕದ್ದೊಯ್ದರು. ಆ ಜಿಪುಣ ಮುದುಕಿ ದೇವರ ಸ್ಥಳ ಮೈಲಿಗೆಯಾಯಿತು ಎಂದು ಅಳುತ್ತಾ ಕುಳಿತಳು.

“ಬುದ್ಧಿವಂತ ರೈತ” ಎಂಬ ಕತೆಯ ಸಾರಾಂಶ: ಅದೊಂದು ಹಳ್ಳಿ. ಅಲ್ಲಿನ ಆಲದ ಮರದ ಕೆಳಗೆ ಸಾಯಂಕಾಲ ಕುಳಿತು ಹರಟೆ ಹೊಡೆಯುವುದು ಆ ಊರಿನವರ ಹವ್ಯಾಸ. ಪಕ್ಕದಲ್ಲೇ ರಾಚಪ್ಪನ ಅಂಗಡಿ. ಒಮ್ಮೆ ಅವನೂ ರೈತರೊಂದಿಗೆ ಮಾತಾಡುತ್ತಾ, ಊರಿನ ಸಾಹುಕಾರರು ಮನೆಗೆ ಬರಬೇಕೆಂದು ನನಗೆ ಎರಡು ಸಲ ಹೇಳಿ ಕಳಿಸಿದ್ದರು; ಆದರೆ ಮರೆತೇ ಹೋಯಿತು ಎಂದು ಬಡಾಯಿ ಬಿಟ್ಟ. ಆಗೊಬ್ಬ ರೈತ, “ಅದೇನು ಮಹಾ! ನಾನು ಸಾಹುಕಾರನ ಮನೆಗೆ ಹೋಗಿ ಊಟ ಮಾಡಿ ಬರಬಲ್ಲೆ” ಎಂದ. ಆಗ ರಾಚಪ್ಪನಿಗೆ ರೇಗಿತು. ಆತ ಹೀಗೆಂದು ರೈತನಿಗೆ ಸವಾಲು ಹಾಕಿದ: ನೀನು ಸಾಹುಕಾರನ ಮನೆಯಲ್ಲಿ ಉಂಡು ಬಂದ್ರೆ, ನಿನಗೆ ಒಂದು ಜೊತೆ ಎತ್ತು ಕೊಡಿಸುತ್ತೇನೆ. ನೀನು ಉಂಡು ಬಾರದಿದ್ದರೆ, ನನ್ನ ಹೊಲವನ್ನು ಎರಡು ವರುಷ ಪುಕ್ಕಟೆಯಾಗಿ ಬಿತ್ತಿ ಕೊಡಬೇಕು. ಆ ರೈತ ಸವಾಲನ್ನು ಸ್ವೀಕರಿಸಿದ. ರೈತ ನೇರವಾಗಿ ಸಾಹುಕಾರರ ಮನೆಗೆ ಹೋದ. ಒಂದು ನಿಂಬೆ ಹಣ್ಣಿನ ಗಾತ್ರದ ಬಂಗಾರದ ಬೆಲೆ ಎಷ್ಟಾಗುತ್ತದೆ ಎಂದು ರೈತ ಸಾಹುಕಾರನ ಬಳಿ ವಿಚಾರಿಸಿದ. ಅವರು ಇವನಿಂದ ಬಂಗಾರ ಲಪಟಾಯಿಸುವ ಹಂಚಿಕೆ ಮಾಡಿದರು. “ಅಷ್ಟೇ ತಾನೇ, ಹೇಳೋಣ. ಈಗ ಊಟದ ಹೊತ್ತು. ಜೊತೆಯಾಗಿ ಊಟ ಮಾಡೋಣ. ಅನಂತರ ನಿಧಾನವಾಗಿ ಮಾತಾಡೋಣ” ಎಂದು, ಅವನೊಂದಿಗೆ ಊಟ ಮಾಡಿದರು! ಅನಂತರ ಸಾಹುಕಾರ “ನಿನ್ನ ಬಳಿಯಿರುವ ಬಂಗಾರ ತೋರಿಸು” ಎಂದರು. “ನಮ್ಮಂತಹ ಬಡವರಲ್ಲಿ ಬಂಗಾರವೆಲ್ಲಿಂದ ಬರಬೇಕು” ಎಂದು ಕೈಮುಗಿದು, ಹೊರಟು ಬಂದ ಆ ರೈತ. ಸವಾಲನ್ನು ಗೆದ್ದು ಬಂದ ರೈತನಿಗೆ ರಾಚಪ್ಪ ಒಂದು ಜೊತೆ ಎತ್ತು ಕೊಡಬೇಕಾಯಿತು.

ಈ ಸಂಕಲನದಲ್ಲಿ ಇಂತಹ ಕುತೂಹಲಕಾರಿ ಸಣ್ಣ ಕತೆಗಳು ಹಲವಾರಿವೆ. ದೀರ್ಘ ಕತೆಗಳೂ ಇವೆ. ಕೆಲವು ಕತೆಗಳನ್ನು ಓದಿದಾಗ, ನಾವು ಹಿಂದೊಮ್ಮೆ ಎಲ್ಲೋ ಕೇಳಿದ್ದ ಅಥವಾ ಓದಿದ್ದ ಅಂತಹದೇ ಕತೆಗಳು ನೆನಪಾಗುತ್ತವೆ. ಉದಾಹರಣೆಗೆ ಜಾಣ ಅತಿಥಿಯೊಬ್ಬ ಮನೆಗೆ ಬಂದಾಗ ಮನೆಯಲ್ಲಿದ್ದ ಮುದುಕಿ ಅವನಿಗೆ ಯಾವುದೇ ಆಹಾರ ಕೊಡಲು ನಿರಾಕರಿಸುತ್ತಾಳೆ. ಅತಿಥಿ ಉಪಾಯದಿಂದ ಅವಳಿಂದ ಒಂದೊಂದೇ ವಸ್ತು ಕೇಳಿ ಪಡೆದು, ರುಚಿಯಾದ ಗಂಜಿ ಬೇಯಿಸಿ ಅವಳಿಗೂ ನೀಡುತ್ತಾನೆ.

ಇವೆಲ್ಲವೂ ಎಳೆಯ ಮಕ್ಕಳಿಗೂ, ವಯಸ್ಕರಿಗೂ, ಹಿರಿಯರಿಗೂ ಖುಷಿ ನೀಡುವ ಜಾನಪದ ಕತೆಗಳು. ಜೊತೆಗೆ ಪ್ರತಿಯೊಂದು ಕತೆಯೂ ನೀತಿಯೊಂದನ್ನು ತಿಳಿಸುತ್ತದೆ. ಆದ್ದರಿಂದ, ಮಕ್ಕಳಿಗೆ ಓದಿ ಹೇಳಲು ಇಲ್ಲಿನ ಕತೆಗಳು ಸೂಕ್ತ.