ದಶಕಗಳ ಹೋರಾಟಕ್ಕೆ ಜಯ

ದಶಕಗಳ ಹೋರಾಟಕ್ಕೆ ಜಯ

ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯಿಂದ ಹುಬ್ಬಳ್ಳಿ- ಧಾರವಾಡ, ಗದಗ ಸೇರಿ ಅನೇಕ ನಗರಗಳ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಲಿದೆ. ಮಹದಾಯಿ ನದಿಯ ಉಪನದಿಗಳಾದ ಕಳಸಾ- ಬಂಡೂರಿಯ ಸುಮಾರು ೭.೫೬ ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸೋ ಯೋಜನೆ ಇದಾಗಿದ್ದು, ಎಸ್ಎಂ ಕೃಷ್ಣ ಇವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು. ಅಲ್ಲದೇ ೨೦೦೨ ರಲ್ಲಿ ಯೋಜನೆಗೆ ಕೇಂದ್ರದಿಂದ ಕರ್ನಾಟಕ ಸರಕಾರ ಒಪ್ಪಿಗೆಯನ್ನು ಕೂಡ ಪಡೆದುಕೊಂಡಿತ್ತು.

೨೦೦೬ರಲ್ಲಿ ಬೆಳಗಾವಿಯ ಕಣಕುಂಬಿಯಲ್ಲಿ ಯೋಜನೆ ಆರಂಭಕ್ಕೆ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, ಆ ನಂತರ ಬೆಳವಣಿಗೆಗಳಲ್ಲಿ ಗೋವಾ ಸರ್ಕಾರ ಈ ಯೋಜನೆ ಬಗ್ಗೆ ಆಕ್ಷೇಪಣೆ ಸಲ್ಲಿಕೆ ಮಾಡಿತ್ತು. ಪರಿಣಾಮ ಅಂದಿನ ಎನ್ ಡಿ ಎ ಸರಕಾರದ ಯೋಜನೆಯ ಅನುಮೋದನೆಯನ್ನು ತಡೆಹಿಡಿದಿತ್ತು. ಈ ಭಾಗದ ರೈತರು ನಡೆಸಿದ ನಿರಂತರ ಹೋರಾಟಕ್ಕೆ ಮಹತ್ವದ ಮುನ್ನಡೆ ಸಿಕ್ಕಿದ್ದು, ಸದ್ಯ ಕೇಂದ್ರ ಜಲ ಸಚಿವಾಲಯ ಕಳಸಾ ಬಂಡೂರಿ ನಾಲಾ ಯೋಜನೆಯ ವಿಸ್ತ್ರತ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ನೀಡಿದೆ.

೨೦೦೮ರಲ್ಲಿ ಮಹದಾಯಿ ನ್ಯಾಯ ಮಂಡಳಿಯಿಂದ ಮಹದಾಯಿ ನೀರು ಹಂಚಿಕೆ ತೀರ್ಪು ಪ್ರಕಟವಾಗಿತ್ತು. ತೀರ್ಪಿನ ಅನ್ವಯ ಕಳಸ ನಾಲಾದಿಂದ ೧.೭೨ ಟಿಎಂಸಿ, ಬಂಡೂರಿಯಲ್ಲಿ ೨.೧೮ ಟಿಎಂಸಿ ಸೇರಿ ಒಟ್ಟು ೩.೯೦ ಟಿಎಂಸಿ ನೀರನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಕರ್ನಾಟಕ ಪರಿಷ್ಕೃತ ಡಿಪಿಆರ್ ಸಲ್ಲಿಸಿತ್ತು. ಇದರ ಹೊರತಾಗಿಯೂ ಗೋವಾ ಪದೇಪದೇ ತಕರಾರು ತೆಗೆಯುತ್ತಿದ್ದ ಕಾರಣ ಯೋಜನೆ ಅನುಮೋದನೆ ದೊರೆಯದೆ ವಿಳಂಬವಾಗಿತ್ತು. ಇದರ ನಡುವೆಯೂ ಕೇಂದ್ರ ಸರ್ಕಾರ ಯೋಜನೆಗೆ ಹಸಿರು ನಿಶಾನೆ ತೋರಿದ್ದು, ಮುಂಬೈ ಕರ್ನಾಟಕದ ಜನತೆಯ ಮೊಗದಲ್ಲಿ ಹರ್ಷ ಮೂಡುವಂತೆ ಮಾಡಿದೆ.

ವಿಶೇಷವಾಗಿ ರಾಜ್ಯದ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಈ ಯೋಜನೆಗೆ ಅನುಮೋದನೆ ದೊರೆತಿರುವುದು ಆಡಳಿತ ಪಕ್ಷಕ್ಕೆ ತುಂಬಾ ಲಾಭದಾಯಕವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದೆ  ಕಳಸಾ ಬಂಡೂರಿ ಯೋಜನೆ ಜಾರಿಯ ಬಗ್ಗೆ ಹೋರಾಟದ ಮುಂಚೂಣಿಯಲ್ಲಿದ್ದರು. ಈಗವರು ಮುಖ್ಯಮಂತ್ರಿಯಾಗಿ ಇರುವಾಗಲೇ ಯೋಜನೆಗೆ ಅನುಮೋದನೆ ದೊರೆತಿರುವುದು ಇದು ಹೆಮ್ಮೆಯ ಸಂಗತಿ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೩೦-೧೨-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ