ದೇಹಾಂಗ ದಾನವೆ?

ದೇಹಾಂಗ ದಾನವೆ?

ಕವನ

ಪ್ರಕೃತಿಯ ಮಡಿಲಲಿ ಬೆಳೆದಿಹ ಮರವದು

ಇಂದಿಗೆ ಕೇವಲ ನೆನಪಿನಲಿ

ಮನುಜನ ಕ್ರೌರ್ಯದ ಕೊಡಲಿಯ ದಾಳಿಗೆ

ಬೆಳೆದಿಹ ವೃಕ್ಷವು ಧರೆಗುರುಳಿ

 

ಉಳಿದಿಹ ಕಾಂಡವ ಬಿಸಿಲಿನ ತಾಪವು

ಇರಿಸಿದೆ ನಡುವಲಿ ಅದಸೀಳಿ

ಯಾವುದೊ ಸಸ್ಯದ ಬಲಿತಿಹ ಬೀಜವ

ತಂದಿದೆ ಬೀಸಿದ ತಂಗಾಳಿ

 

ಸೀಳಲಿ ಉಳಿದಿಹ ಬೀಜವ ನೆನೆಸಿತು

ಮೇಘವು ಮಳೆಯನು ತಾ ಸುರಿಸಿ

ಇದ್ದೆಡೆಯಲ್ಲಿಯೆ ಮೊಳಕೆಯನೊಡೆಯಿತು

ಚಂದದಿ ನಗುತಿದೆ ಅದು ಚಿಗುರಿ

 

ಜೀವವ ಕಳೆದಿಹ ವೃಕ್ಷವು ಕಾಂಡವ

ದಾನವ ಮಾಡಿತೆ ತ್ಯಾಗಮಯಿ?

ಮಾನವಗಿತ್ತಿದೆ ಮಾದರಿ ಪಾಠವ

ಸಾರ್ಥಕ ಬದುಕಿನ ಅನುಯಾಯಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

(ಚಿತ್ರ ಕೃಪೆ ವಾಟ್ಸಾಪ್) 

ಚಿತ್ರ್