ನನ್ನದೊಂದು ಬದುಕಿನ ಪುಸ್ತಕ…(ಭಾಗ 1)

ನನ್ನದೊಂದು ಬದುಕಿನ ಪುಸ್ತಕ…(ಭಾಗ 1)

ವಿಶ್ವ ಪುಸ್ತಕ ದಿನದ ಅಂಗವಾಗಿ, ಏಪ್ರಿಲ್ 23. ಈ ದಿನದ ನೆನಪಾಗಿ ನನಗೂ ಪುಸ್ತಕ ಬರೆಯುವ ಆಸೆಯಾಗುತ್ತಿದೆ. ಬಹಳಷ್ಟು ಜನರು, ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ, ಬರೆಯುತ್ತಲು ಇದ್ದಾರೆ. ಆ ಪುಸ್ತಕಗಳ ಶೀರ್ಷಿಕೆಗಳೇ ನನಗೊಂದು ಅದ್ಭುತ, ಆಶ್ಚರ್ಯ, ಕುತೂಹಲಕರ.

ಎಂತೆಂತಹ ಹೆಸರುಗಳು, ಅದನ್ನು ಓದುತ್ತಿದ್ದರೆ ಯಾವುದೋ ಮಾಯಾ ಲೋಕದಲ್ಲಿದ್ದಂತೆ ಭಾಸವಾಗುತ್ತದೆ. ಕೆಲವರು ಕಾವ್ಯವನ್ನು, ಮತ್ತೆ ಕೆಲವರು ಕಥೆ ಕಾದಂಬರಿಗಳನ್ನು, ಇನ್ನೊಂದಷ್ಟು ಜನ ಪ್ರಬಂಧಗಳನ್ನು, ಮತ್ತೊಂದಷ್ಟು ಜನ ಅಂಕಣಗಳನ್ನು, ಮತ್ತೆ ಕೆಲವರು ವೈಚಾರಿಕ ಲೇಖನಗಳನ್ನು, ಇನ್ನು ಹಲವರು ಆತ್ಮಕಥೆಗಳನ್ನು, ಬೇರೆಯವರು ಅವರವರಿಗೆ ಅನಿಸಿದ ವಿಜ್ಞಾನ, ಕ್ರೀಡೆ, ಸಾಹಸ, ಪ್ರವಾಸ, ಕೌತುಕ, ಪತ್ತೆದಾರಿ ಹೀಗೆ ಬರೆಯುತ್ತಲೇ ಇರುತ್ತಾರೆ.

ಅದನ್ನು ಓದುತ್ತಾ ಓದುತ್ತಾ ಬೆಳೆದಿದ್ದೇನೆ. ಶಾಲೆಗಳಲ್ಲಿ ಅಂದು ಪಠ್ಯವಾಗಿದ್ದ ಪುಸ್ತಕಗಳು ಇಂದು ಬದುಕಿನ ದಾರಿ ದೀಪಗಳಾಗಿರುವುದು ಸಹ ನಿಜ. ಅಂದು ಪುಸ್ತಕದಲ್ಲಿ ಅದನ್ನು ಬರೆದವರ ಹೆಸರು ಮತ್ತು ಪರಿಚಯ ನೋಡಿ ನಾನು ಹಾಗೆಯೇ ಪುಸ್ತಕ ಬರೆಯಬೇಕು, ಅವರಂತೆ ಬದುಕಬೇಕು ಎಂದು ಕನಸು ಕಂಡವನು. ನಿದ್ದೆಯಲ್ಲೂ ಬೃಹತ್ ಕಥೆ ಕಾದಂಬರಿಗಳನ್ನು ಬರೆದು ಪ್ರಖ್ಯಾತನಾಗಿದ್ದೇನೆ ಎಂದೇ ಅನೇಕ ಸಲ ಭಾಸವಾಗಿದೆ.

ಎಲ್ಲರಂತೆ ನಾನು ಸಹ ಪುಸ್ತಕಗಳನ್ನು ಓದುತ್ತಾ ಅತ್ತಿದ್ದೇನೆ, ನಕ್ಕಿದ್ದೇನೆ, ಭಯಗೊಂಡಿದ್ದೇನೆ, ಆತ್ಮವಿಶ್ವಾಸ ಬೆಳೆಸಿಕೊಂಡಿದ್ದೇನೆ, ನಿರಾಶನಾಗಿದ್ದೇನೆ, ಅಸಹಾಯಕನಾಗಿದ್ದೇನೆ, ಸ್ಪೂರ್ತಿ ಪಡೆದಿದ್ದೇನೆ. ಅದು ಆಯಾ ಸಂದರ್ಭವನ್ನು, ಪುಸ್ತಕದ ವಿಷಯವನ್ನು ಅವಲಂಬಿಸಿರುತ್ತದೆ. ಎಷ್ಟೋ ಬಾರಿ ತೀರಾ ದು:ಖಿತನಾದಾಗ ಓದಿದ ಕೆಲವು ಆತ್ಮ ಕಥೆಗಳು ನನಗೆ ಮತ್ತೆ ಜೀವನೋತ್ಸಾಹ ನೀಡಿದೆ. ಬದುಕುವ ಉತ್ಸಾಹ ಮೂಡಿಸಿದೆ.

ಇತ್ತೀಚೆಗೆ ಏನನ್ನಾದರೂ ಬರೆಯಬೇಕು, ಅದು ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕು ಎಂದು ಮನಸ್ಸು ಒತ್ತಡ ಹಾಕುತ್ತಿದೆ. ಏನು ಬರೆಯುವುದು ಅದೇ ದೊಡ್ಡ ಸಮಸ್ಯೆಯಾಗಿದೆ. ಹೇಗೆ ಬರೆಯುವುದು, ಏನನ್ನು ಬರೆಯುವುದು, ಯಾವ ಪ್ರಕಾರದಲ್ಲಿ ಬರೆಯುವುದು, ಯಾರಿಗಾಗಿ ಬರೆಯುವುದು, ಎಷ್ಟು ಬರೆಯುವುದು, ಇದೇ ಮನಸ್ಸಿನಲ್ಲಿ ಕೊರೆಯುತ್ತಿದೆ.

ಕೆಲವೊಮ್ಮೆ ಯೋಚಿಸುತ್ತೇನೆ, ಈ ಪರಿಸರ ಬಹುತೇಕ ವಿನಾಶದ ಅಂಚಿಗೆ ಬಂದು ತಲುಪಿದೆ. ಗಾಳಿ ನೀರು ಆಹಾರ ಮಲಿನವಾಗುತ್ತಿರುವುದನ್ನು ತಡೆಯಲು ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬರೆಯಲೇ !. ಈಗಾಗಲೇ ಎಷ್ಟೋ ಜನ ಬರೆದಿದ್ದಾರೆ. ಏನೂ ಪ್ರಯೋಜನವಾಗುತ್ತಿಲ್ಲ. ಇನ್ನು ನೀನು ಬರೆದರು ಏನೂ ಆಗುವುದಿಲ್ಲ. ಪರಿಸರ ರಕ್ಷಣೆ ಬರೆಯುವುದಲ್ಲ. ಅದನ್ನು ರಕ್ಷಿಸುವುದು ಮತ್ತು ಹಾಗೆಯೇ ಅದನ್ನು ಉಳಿಸುವುದು ಎಂದು ಮನಸ್ಸು ಹೇಳುತ್ತದೆ.

ತಲೆ ಕೊಡವಿದಾಗ ಮತ್ತೆ ಬೇರೊಂದು ವಿಷಯ ಕೊರೆಯಲಾರಂಭಿಸುತ್ತದೆ. ಬಾಲ್ಯದಲ್ಲಿ ನಾನು ಕಂಡಂತಹ ಮನುಷ್ಯ ಸಂಬಂಧಗಳು, ಅಪ್ಪ ಅಮ್ಮ ಅಣ್ಣ ಅಕ್ಕ ಅಜ್ಜ ಅಜ್ಜಿ ತಮ್ಮ ತಂಗಿ ಮುಂತಾದ ಒಡಹುಟ್ಟಿದವರ ನಡುವೆ ಬೆಳೆದಿದ್ದ ಆ ಬಾಂಧವ್ಯ, ಒಬ್ಬರಿಗೊಬ್ಬರು ತೋರಿಸುತ್ತಿದ್ದ ನಿಸ್ವಾರ್ಥ ಪ್ರೀತಿ, ಕುಟುಂಬದಲ್ಲಿ ಸದಾ ನಳನಳಿಸುತ್ತಿದ್ದ ಮುಗ್ಧ ನಗುವಿನ ವಾತಾವರಣ, ಆಗಿನ ಆಹಾರದ ರುಚಿ, ಆಗಿನ ಹಬ್ಬಗಳ ಸಂಭ್ರಮ, ಹಾಗೇನೇ ನಿದ್ರಾ ಸುಖ, ಎಲ್ಲವನ್ನು ಬರೆದು ಮತ್ತೆ ನಾನು ಅನುಭವಿಸಬೇಕು, ಸಮಾಜಕ್ಕೂ ಅರ್ಥ ಮಾಡಿಸಬೇಕು ಎಂದು ಆಸೆಯಾಗುತ್ತದೆ. ಆದರೆ ವಾಸ್ತವಕ್ಕೆ ಮರಳಿದಾಗ ಈ ದುಡ್ಡಿನ ಹಪಾಹಪಿ ಸಮಾಜದಲ್ಲಿ ಸಂಬಂಧಗಳೆಲ್ಲವೂ ವ್ಯಾಪಾರಿಕರಣವಾಗಿ, ಎಲ್ಲ ಸಂಬಂಧಿಕರು ದೂರ ದೂರವಾಗಿ, ಈಗ ಒಂಟಿಯಾಗಿ ಮನೆಯಲ್ಲಿ ಕುಳಿತಿರುವಾಗ ಅದೆಲ್ಲ ಇನ್ನು ನೆನಪು ಮಾತ್ರ, ಅದನ್ನು ಬರೆದು ಪ್ರಯೋಜನವಾದರೂ ಏನು ಎಂದು ನಿರಾಶನಾಗುತ್ತೇನೆ.

ಮತ್ತೆ ಇನ್ನೊಂದು ದಿನ ಇದ್ದಕ್ಕಿದ್ದಂತೆ ಇನ್ನೇನಾದರೂ ಬರೆಯುವ ತುಡಿತ ಪ್ರಾರಂಭವಾಗುತ್ತದೆ. ಮತ್ತೆ ಏನು ಬರೆಯುವುದು ಎಂದು ಯೋಚಿಸುತ್ತೇನೆ. ಈ ಸಮಾಜ ಇಲ್ಲಿಯವರೆಗೂ ಕ್ರಮಬದ್ಧವಾಗಿ ಮುಂದುವರೆದುಕೊಂಡು ಬರಲು ಅನೇಕ ಮಹನೀಯರ, ವಿದ್ವಾಂಸರ, ಚಿಂತಕರ, ದಾರ್ಶನಿಕರ ಪುಸ್ತಕಗಳು, ಗ್ರಂಥಗಳು ಕಾರಣವಾಗಿದೆ. ಆ ರೀತಿ ನಾನು ಕೂಡ ನನ್ನ ಅನುಭವಗಳನ್ನು ಬರೆದು ಈ ಸಮಾಜದಲ್ಲಿ, ಜನರ ಚಿಂತನೆಯಲ್ಲಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ, ನಾಗರೀಕ ಪ್ರಜ್ಞೆಯನ್ನು ಬೆಳೆಸುವ, ಜನರ ಜೀವನಮಟ್ಟ ಸುಧಾರಿಸುವ, ಅವರನ್ನು ಮಾನಸಿಕವಾಗಿ ಜಾಗೃತಗೊಳಿಸುವ, ಬರಹಗಳನ್ನು ಬರೆದು ಪುಸ್ತಕ ರೂಪದಲ್ಲಿ ಹಂಚಬೇಕು ಎಂದು ಆಗಾಗ ಯೋಚಿಸುತ್ತೇನೆ. ಆದರೆ ಹೀಗೆ ಬರೆಯಬೇಕೆಂದು ಕೆಲವು ಮಿತ್ರರಲ್ಲಿ ವಿಷಯ ಹಂಚಿಕೊಂಡಾಗ ' ಅಯ್ಯೋ ಈಗ ಯಾರು ಓದುವವರಿಲ್ಲ, ಎಲ್ಲರೂ ನೋಡುಗರು ಕೇಳುಗರಾಗಿದ್ದಾರೆ. ಮೊಬೈಲ್ ಬಂದ ನಂತರ ಓದು ಮರೆಯಾಗಿದೆ. ನೀವು ಯಾರಿಗಾಗಿ ಬರೆಯುವಿರಿ. ಈಗೆಲ್ಲಾ ದೀರ್ಘ ಲೇಖನಗಳನ್ನು ಯಾರು ಓದುವುದಿಲ್ಲ. ಶಾರ್ಟ್ ಅಂಡ್ ಸ್ವೀಟ್ ಆಗಿ ವಿಡಿಯೋ ಮಾಡಿ, ಆಡಿಯೋ ಮಾಡಿ, ಎಂದು ಸಲಹೆ ನೀಡುತ್ತಾರೆ. ಆಗ ಬರೆಯಬೇಕೆಂದಿದ್ದ ಉತ್ಸಾಹ ಕರಗಿ ಮತ್ತೆ ಗೊಂದಲಕ್ಕೀಡಾಗಿ ಬೇರೊಂದು ವಿಷಯ ಚಿಂತಿಸುತ್ತೇನೆ.

(ಇನ್ನೂ ಇದೆ)

-ವಿವೇಕಾನಂದ, ಎಚ್. ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ