ನಮ್ಮ ಪಯಣ…

ನಮ್ಮ ಪಯಣ…

“ಎಲ್ಲಿಗೇ ಪಯಣ...ಯಾವುದೋ ದಾರಿ...ಏಕಾಂಗಿ ಸಂಚಾರಿ...ಈ ಗೀತೆ ಕನ್ನಡ ಚಿತ್ರದ್ದು. ಎಷ್ಟೊಂದು ಸತ್ಯವಾದ ನುಡಿಗಳನ್ನು ತುಂಬಿರುವ ಹಾಡು ಅಲ್ಲವೇ? ಮಾನವ ಎಷ್ಟೇ ಸಂಘ ಜೀವಿಯಾದರೂ ಅಂತರಂಗದಲ್ಲಿ ಏಕಾಂಗಿಯೇ ಅಲ್ಲವೇ? ಬಾಳ ಪಯಣದಲ್ಲಿ ಕೊನೆಯಲ್ಲಿ ಆತನಿಗೆ ಉಳಿಯುವುದು ಏಕಾಂಗಿತನದ ಭಾವ ಮಾತ್ರ. ನಮ್ಮ ಬದುಕಿನ ಪಯಣವನ್ನು ನಾವು ಎಷ್ಟೇ ಲೆಕ್ಕಾಚಾರದಲ್ಲಿ ನಿರ್ವಹಿಸಲು ಬಯಸಿದರೂ ಹಲವಾರು ಬಾರಿ ನಮ್ಮ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗುತ್ತದೆ. ಎಲ್ಲಿಗೋ ಹೊರಟ ನಾವು ಮತ್ತೆಲ್ಲಿಗೋ ತಲುಪುತ್ತೇವೆ. ಇದು ಬದುಕಿನ ಪಯಣದ ಜೊತೆಗೆ ನಮ್ಮ ಪ್ರವಾಸದಂತಹ ಪ್ರಯಾಣಕ್ಕೂ ಅನ್ವಯವಾಗುತ್ತದೆ.

ಒಮ್ಮೆ ಶಿಷ್ಯನೊಬ್ಬ ಗುರುವಿನೊಂದಿಗೆ ಕೇಳಿದನಂತೆ: “ಸ್ವತಂತ್ರನಾಗಬೇಕಾದರೆ ನಾನೇನು ಮಾಡಲಿ?” ಎಂದು.

ಗುರು ಹೇಳಿದನಂತೆ “ನಿನ್ನನ್ನು ಯಾರು ಬಂಧಿಸಿದ್ದಾರೆಂದು ಮೊದಲು ತಿಳಿದುಕೊ.”

ಈ ಮಾತಿಗೆ ಮರುಮಾತನಾಡದೇ ಮೌನವಾಗಿ ಮರಳಿದ ಶಿಷ್ಯ ಸ್ವಲ್ಪ ದಿನ ಕಳೆದು ಮತ್ತೆ ಬಂದ. ಬಂದು ಹೇಳಿದ “ಗುರುಗಳೇ, ನನ್ನನ್ನು ಯಾರೂ ಬಂಧಿಸಿಲ್ಲ." ಈ ಮಾತನ್ನಾಡಿದ ಕೂಡಲೇ ಆತ ನಿಜಕ್ಕೂ ಸ್ವತಂತ್ರನಾದ. ಈ ಪುಟ್ಟ ಕಥೆ ಇರುವುದು ಗುರುಗಳಾದ ಟೋನಿ ಡಿಮೆಲ್ಲೊ ಅವರ ‘ವನ್ ಮಿನಿಟ್ ವಿಸ್ಡಂ’ ಎಂಬ ಪುಸ್ತಕದಲ್ಲಿ. 

ನಮ್ಮ ಬದುಕೇ ಹಾಗೆ. ನಾವೆಲ್ಲರೂ ನಮ್ಮ ಚಿಂತನೆಗಳ, ನಮ್ಮ ದುರಾಸೆಗಳ, ಅಧಿಕ ಸಂಪತ್ತಿನ ಬಂಧಿಗಳಾಗಿದ್ದೇವೆ. ನನ್ನತನದ ಅರಿವು ಮೂಡಿ, ಜ್ಞಾನೋದಯವಾದಾಗ ಮಾತ್ರ ನಾವು ಸ್ವತಂತ್ರರು. ನಮ್ಮನ್ನು ನಾವೇ ಸಂಕೋಲೆಗಳಿಂದ ಸುತ್ತಿಕೊಂಡಿದ್ದೇವೆ. ಕಟ್ಟಿ ಹಾಕಿದ್ದೇವೆ. ಬಹಳ ಜಾಗರೂಕತೆಯಿಂದ ಈ ಕೆಲಸವನ್ನು ಮಾಡಿದ್ದೇವೆ. ಪ್ರತೀ ವಿಷಯದಲ್ಲಿ ಆಸೆ, ಮೋಹಗಳಂತಹ ಹೊರೆಯಿಂದ ನಮ್ಮ ತಲೆ, ಬೆನ್ನು, ಸೊಂಟ ಬಾಗಿ ಹೋಗಿದೆ. ಈ ಹೊರೆಯನ್ನು ನಮ್ಮ ತಲೆ ಮೇಲೆ ಹೊರಿಸಿದವರು ಯಾರು? ಹಿರಿಯರೇ?, ಗುರುಗಳೇ? ನಮ್ಮ ಮಾಲೀಕರೇ, ರಾಜಕಾರಣಿಗಳೇ?

ಉತ್ತರ- ಯಾರೂ ಅಲ್ಲ. ನಮ್ಮ ಸ್ವ ಇಚ್ಛೆಯಿಂದಲೇ ನಾವು ಈ ಹೊರೆಯನ್ನು ನಮ್ಮ ತಲೆಯ ಮೇಲೆ ಹೊತ್ತುಕೊಂಡು ತಿರುಗಾಡುತ್ತಿದ್ದೇವೆ. ನಮ್ಮ ಹೊಣೆಯನ್ನು ಬೇರೆಯವರ ತಲೆಗೆ ವರ್ಗಾಯಿಸುವ ಮಸಲತ್ತು ಮಾಡುತ್ತಿದ್ದೇವೆ. ಬೇರೆಯವರ ತಲೆಗೆ ನಮ್ಮ ಭಾರವನ್ನು ವರ್ಗಾಯಿಸಿ ನಾವು ನೆಮ್ಮದಿಯ ನಿದ್ರೆ ಮಾಡುವ ಕನಸಿನಲ್ಲಿದ್ದೇವೆ. ಆದರೆ ನಿಮಗೆ ಗೊತ್ತೇ? ನಮ್ಮನ್ನು ನಾವು ಅರಿತುಕೊಂಡಾಗ, ನಮ್ಮ ಹೃದಯದಲ್ಲಿ ಜ್ಞಾನದ ದೀಪ ಹಚ್ಚಿಕೊಂಡಾಗ ಮಾತ್ರ ನಾವು ಸ್ವತಂತ್ರ ಜೀವಿಯಾಗಬಹುದು. ದೇವರ ಸ್ಪರ್ಶ, ನಮ್ಮ ಆತ್ಮದ ಬೆಳಕು ನಮ್ಮನ್ನು ಈ ಕತ್ತಲೆಯಿಂದ ಹೊರ ತರುತ್ತದೆ. 

ನಮ್ಮ ಯಾತ್ರೆಗಳು ಒಂದು ರೀತಿಯ ಸುದೀರ್ಘ ಪ್ರಯಾಣ. ಕೆಲವರು ಅನ್ನುತ್ತಾರೆ ನಾನು ಮೌಂಟ್ ಎವರೆಸ್ಟ್ ಹತ್ತಿದೆ, ಚಂದ್ರನ ಮೇಲೆ ಕಾಲಿರಿಸಿ ಬಂದೆ ಎಂದು. ಆದರೆ ಅವುಗಳು ಕೇವಲ ನಮ್ಮಿಂದ ಭೌತಿಕವಾಗಿ ದೂರವಿದೆ ಅಷ್ಟೇ. ಈ ದೂರವನ್ನು ಯಾರೂ ತಲುಪಬಹುದು. ಆದರೆ ಅಂತರಂಗದ ಪ್ರಯಾಣ ಇದೆಯಲ್ಲಾ ಅದು ಸುದೀರ್ಘ ಪ್ರಯಾಣ. ದೇವರನ್ನು ಸಂಪರ್ಕಿಸುವ, ಆತನ ಜೊತೆ ಸಂವಾದಿಸುವ ಈ ಪ್ರಯಾಣ ನಮ್ಮೆಲ್ಲರದ್ದೂ ಆಗಬೇಕಿದೆ. ಇದರಿಂದಲೇ ನಮಗೆಲ್ಲಾ ಶಾಶ್ವತ ನೆಮ್ಮದಿ ಸಿಗಲಿದೆ. ನಮ್ಮ ಜಂಜಾಟದ ಬದುಕಿಗೆ ಇದೊಂದು ನೆಮ್ಮದಿಯ ಪಯಣ. ಈ ಪ್ರಯಾಣ ಮಾಡುವ ಸಂತಸ ನಮ್ಮೆಲ್ಲರದ್ದೂ ಆಗಿರಲಿ. ಅಲ್ಲವೇ?

ಚಿತ್ರ ಕೃಪೆ: ಅಂತರ್ಜಾಲ ತಾಣ