ನಾಗರಿಕ ಸಮಾಜಕ್ಕೆ ಭ್ರೂಣಹತ್ಯೆ ಶೋಭೆಯಲ್ಲ

ನಾಗರಿಕ ಸಮಾಜಕ್ಕೆ ಭ್ರೂಣಹತ್ಯೆ ಶೋಭೆಯಲ್ಲ

ನಮ್ಮ ಸಮಾಜದಲ್ಲಿ ಯಾವುದೇ ಹತ್ಯೆಯನ್ನು ಮಹಾಪಾಪ ಎಂದೇ ಪರಿಗಣಿಸಲಾಗುತ್ತದೆ. ಪ್ರಾಣಿ ಹತ್ಯೆಯನ್ನೇ ವಿರೋಧಿಸುವ ಈ ನಾಗರಿಕ ಸಮಾಜದಲ್ಲಿ ಭ್ರೂಣ ಹತ್ಯೆಯಂತಹ ಪಾಪಕೃತ್ಯಕ್ಕೆ ಕ್ಷಮೆಯೇ ಇಲ್ಲ. ಆಧುನಿಕ ಸಮಾಜದಲ್ಲಿ ಇಂತಹ ಘೋರ ದುರ್ವರ್ತನೆಗಳು ಮರುಕಳಿಸುತ್ತಿವೆ ಎಂಬುದು ಆಘಾತಕಾರಿ. 

ಬೆಂಗಳೂರಿನ ಬೈಯಪ್ಪನಹಳ್ಳಿ ಪೋಲೀಸರು ಇಂತಹದೊಂದು ಜಾಲವನ್ನು ಭೇದಿಸಿ, ವೈದ್ಯರೂ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಇದರಿಂದ ಕಳೆದ ೩ ವರ್ಷಗಳಲ್ಲಿ ಈ ತಂಡವು ೯೦೦ ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಈ ಹಿಂದೆ ಮಹಾರಾಷ್ಟ್ರದ ಗಡಿ ಜಿಲ್ಲೆಗಳಿಂದ ವಿಜಯಪುರ ಸೇರಿದಂತೆ  ಕಲ್ಯಾಣ ಕರ್ನಾಟಕದ ಕೆಲವು ಭಾಗಗಳಿಗೆ ಬಂದು ಗರ್ಭಪಾತ ಮಾಡಿಸಿಕೊಂಡು ಹೋಗುತ್ತಿದ್ದ ಪ್ರಕರಣಗಳು ಬಯಲಾಗಿದ್ದವು.

ಮನೆ ತುಂಬ ಮಕ್ಕಳಿರುತ್ತಿದ್ದ ಕಾಲವೊಂದಿತ್ತು. ಹೆಣ್ಣು ಮಕ್ಕಳ ಜನನದ ಬಗ್ಗೆ ತಪ್ಪು ಕಲ್ಪನೆಗಳಿದ್ದದ್ದೂ ನಿಜ. ಗಂಡು ಹುಟ್ಟಿದರಷ್ಟೇ ಮುಕ್ತಿ ಎನ್ನುವ ಮೌಢ್ಯದಿಂದಾಗಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿತ್ತು. ಈಗೀಗ ಆರುತಿಗೊಂದು, ಕೀರುತಿಗೊಂದು ಎನ್ನುವ ಕಾಲವೂ ಹೋಗಿ, ಹೆಣ್ಣಿರಲಿ, ಗಂಡಿರಲಿ - ಮನೆಗೊಂದು ಮಗುವಿರಲಿ ಎನ್ನುವ ಕಾಲ ಬಂದಿದೆ. ಮಕ್ಕಳಾದರೆ ಸಾಕು ಎಂದು ಹಂಬಲಿಸುವ ಎಷ್ಟೋ ದಂಪತಿಗಳಿದ್ದಾರೆ.

ಹೀಗಿದ್ದೂ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ ಎಂದರೆ, ಇದಕ್ಕೆ ಕಾರಣಗಳೇನು? ಇವುಗಳನ್ನು ತಡೆಯಲು ಏನು ಕ್ರಮ ವಹಿಸಬೇಕು ಎಂಬುದನ್ನು ಸರಕಾರ ಗಂಭೀರವಾಗಿ ಪರಾಮರ್ಶಿಸಬೇಕಿದೆ. ಅದರಲ್ಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾನೂನು, ಗೃಹ ಮತ್ತು ಆರೋಗ್ಯ ಇಲಾಖೆಗಳು ಹೆಚ್ಚು ಗಮನ ಹರಿಸಬೇಕಾಗಿದೆ. ಒಟ್ಟಾಗಿ ಕೆಲಸ ಮಾಡಬೇಕಿದೆ.

ಭ್ರೂಣ ಹತ್ಯೆ ನಿಷೇಧಿಸಿ ಕಠಿನ ಕಾನೂನುಗಳನ್ನು ತರಲಾಗಿದೆ. ಬೀದಿ ನಾಟಕ ಸೇರಿದಂತೆ ಇನ್ನಿತರ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಇದರ ಅರಿವು ಜನಸಾಮಾನ್ಯರಲ್ಲಿ ಹೆಚ್ಚಬೇಕಿದೆ. ವೈದ್ಯಕೀಯ ವಿಜ್ಞಾನ ಓದಿಕೊಂಡು ಅದನ್ನು ಜನರ ಒಳಿತಿಗಾಗಿ ಬಳಕೆ ಮಾಡಬೇಕಾದ ವೈದ್ಯರಿಗಾದರೂ ಈ ಬಗ್ಗೆ ಜ್ಞಾನ ಇರಬೇಕು. ಕಾನೂನಿನ ಪ್ರಜ್ಞೆ ಇದ್ದೂ ಇಂತಹ ಹೀನ ಕೃತ್ಯಕ್ಕೆ ಇಳಿದರೆ ಎಂತಹ ಶಿಕ್ಷೆ ಕೊಡಬೇಕು? ಇವೆಲ್ಲವೂ ಇಡೀ ಸಮಾಜ ತಲೆತಗ್ಗಿಸುವಂತಹ ಅನಾಗರಿಕ ಹಾಗೂ ಮೃಗೀಯ ವರ್ತನೆ ಅಲ್ಲದೆ ಮತ್ತೇನು? ಇಂತಹ ಸುಶಿಕ್ಷಿತ ವೈದ್ಯರಿಂದ ಸಮಾಜ ಏನನ್ನು ನಿರೀಕ್ಷೆ ಮಾಡಲು ಸಾಧ್ಯ?

ಗರ್ಭದಲ್ಲಿರುವ ಮಗುವಿನ ಲಿಂಗ ಪತ್ತೆ ಮಾಡುವುದಕ್ಕೆ ಕಾನೂನಿನಲ್ಲಿ ಸಾಕಷ್ಟು ಪರಿಮಿತಿಗಳನ್ನು ವಿಧಿಸಿದೆ. ಅಲ್ರಾ ಸೌಂಡ್ ಸ್ಕ್ಯಾನಿಂಗ್ ಮೂಲಕ ಲಿಂಗಪತ್ತೆ ಮಾಡುವುದಕ್ಕೆ ನಿಷೇಧವಿದೆ. ಭ್ರೂಣದ ಆರೋಗ್ಯ ಸ್ಥಿತಿ ಅರಿಯಲಷ್ಟೇ ಬಳಸಲು ಅನುಮತಿಸಲಾಗಿದೆ. ಇದನ್ನರಿತ ವೈದ್ಯರು ಪೋರ್ಟೆಬಲ್ ಸ್ಕ್ಯಾನರ್ ಗಳನ್ನು ಅಲೆಮನೆ ಮತ್ತಿತರೆಡೆ ಬಳಸಿ ಲಿಂಗಪತ್ತೆ ಮಾಡುತ್ತಾರೆಂದರೆ ಕಾನೂನಿನ ಭಯ ಇಲ್ಲ ಎಂದೇ ಅರ್ಥ. ಸರಕಾರ, ಕಾನೂನುಗಳು ಚಾಪೆ ಕೆಳಗೆ ತೂರಿದರೆ ಪಾತಕಿಗಳು ರಂಗೋಲಿ ಕೆಳಗೇ ತೂರುತ್ತಾರೆ. ಈ ಬಗ್ಗೆ ಸರಕಾರ ಮತ್ತಷ್ಟು ಕಠಿನವಾಗಬೇಕಿದೆ. ಕಾನೂನು ಕಟ್ಟುನಿಟ್ಟಾಗುವುದು ಒಂದೆಡೆಯಾದರೆ, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವತ್ತಲೂ ದೃಷ್ಟಿ ಹಾಯಿಸಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೭-೧೧-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ