ನೆನಪುಗಳನ್ನು ಬಿತ್ತಿ ಮರೆಯಾದ ಮಾಣಿಕ್ಯ (ಭಾಗ 2)

ನೆನಪುಗಳನ್ನು ಬಿತ್ತಿ ಮರೆಯಾದ ಮಾಣಿಕ್ಯ (ಭಾಗ 2)

ಸಚಿನ್ ಕೇವಲ ಅದ್ಭುತ ಪ್ರತಿಭೆ ಮಾತ್ರವಾಗಿರಲಿಲ್ಲ. ಅವನೊಬ್ಬ ಸ್ವಾಭಿಮಾನಿಯಾಗಿದ್ದ. ತನಗಾಗಿ ಎಂದಿಗೂ ಇತರರ ಮುಂದೆ ಕೈ ಚಾಚುತ್ತಿರಲಿಲ್ಲ. ತನಗಿರುವ ಮಾರಕ ಕ್ಯಾನ್ಸರ್ ಬಗ್ಗೆ ಮತ್ತೊಬ್ಬರಲ್ಲಿ ಹೇಳಿ ಸಿಂಪಥಿ ಗಿಟ್ಟಿಸಿಕೊಳ್ಳುವ ಜಾಯಮಾನವೂ ಅವನದ್ದಲ್ಲ. ಚಂದ್ರಶೇಖರ್ ಸರ್ ಗೆ ಅತನ ಮೇಲೆ ಎಲ್ಲಿಲ್ಲದ ಪ್ರೀತಿ. ಸಚಿನ್ ಬಗ್ಗೆ ಸದಾ ಯೋಚಿಸುತ್ತಿದ್ದ ಅವರು, ಸಚಿನ್ ಗೆ ಏನು ಕೇಳಿದರೂ ಕೊಡಲು ಸಿದ್ಧರಿದ್ದರು. (ಅವರೊಂದಿಗೆ ಇತರ ಶಿಕ್ಷಕರೂ ಅದೇ ಉದಾತ್ತ ಮನಸ್ಸಿನವರಾಗಿದ್ದರು). ಸ್ವಾಭಿಮಾನಿಯಾದ ಸಚಿನ್ ಏನನ್ನೂ ಸ್ವೀಕರಿಸಲಾರ. ಸಚಿನ್ ನ ಗೆಳೆಯರನ್ನು ಕರೆದು “ಸಚಿನ್ ಕೇಳಿದ್ದು ತೆಗೆಸಿ ಕೊಡಿ, ಅದು ನಿಮ್ಮ ದುಡ್ಡು ಅಂತ ಹೇಳಿ” ಎಂದು ಶಿಕ್ಷಕರು ಆತನ ಗೆಳೆಯರ ಕೈಯಲ್ಲಿ ಒಂದಷ್ಟು ಹಣ ಕೊಡುತ್ತಿದ್ದದ್ದುಂಟು. ಆದ್ಹೇಗೋ ಒಂದು ದಿನ ಸಚಿನ್ ಗೆ ತಿಳಿದು ಹೋಯಿತು. ಆತ ಶಾಲೆಗೆ ಬಂದವನೇ ಶಿಕ್ಷಕರನ್ನು ಅಪ್ಪಿಕೊಂಡು ಅತ್ತೇ ಬಿಟ್ಟಿದ್ದ. ಕಡೆಗೆ ಹೇಳಿದ್ದ, “ಸರ್ ನಾನು ಸಾಯುತ್ತೇನೆ ಅಂತ ನೀವು ಸಹಾಯ ಮಾಡಬೇಡಿ, ನಾನು ಸಾಯಲ್ಲ ಸರ್, ನೀವು ಧೈರ್ಯವಾಗಿರಿ” ಎಂದು ಶಿಕ್ಷಕರಿಗೇ ಧೈರ್ಯ ತುಂಬುತ್ತಿದ್ದ ಅಮೂಲ್ಯ ಚೇತನ ಆತನಾಗಿದ್ದ.

ಸಚಿನ್ ಜಾಣ್ಮೆಯ ಅಮೂಲ್ಯ ಖನಿಯಾಗಿದ್ದ. ಅವನು ಕುಣಿಯುತ್ತಿದ್ದ. ಇತರರಂತೆ ನಲಿದಾಡುತ್ತಿದ್ದ. ಅವನೆಷ್ಟೇ ಸಂತೋಷದಲ್ಲಿದ್ದರೂ, ಆತನ ಮೇಲೆ ಆ ಕ್ಯಾನ್ಸರ್ ಗೆ ಸ್ವಲ್ಪವೂ ಕರುಣೆಯಿರಲಿಲ್ಲ. ಅದು ಆತನ ಹೆಜ್ಜೆಯ ದೃಢತೆಯನ್ನು ಅಲುಗಾಡಿಸುತ್ತಿತ್ತು. ಅದಕ್ಕೆ ಚಿಕಿತ್ಸೆಯ ಮೇಲೆ ಚಿಕಿತ್ಸೆಗಳು ನಡೆಯುತ್ತಲೇ ಇತ್ತು. ಕೆಲವೊಮ್ಮೆ ಮುಖದಲ್ಲಿ ಕಪ್ಪಾದ ಗುಳ್ಳೆಗಳು ಬಿದ್ದು ಆತನ ಮುಖದ ರೂಪವನ್ನೇ ಅದು ಬದಲಾಯಿಸುತ್ತಿತ್ತು. ಕೀಮಿಯೋಥೆರಫಿ ಆತನ ದೇಹವನ್ನು ಜರ್ಝರಗೊಳಿಸಿತ್ತು. ತಲೆಗೂದಲುಗಳೆಲ್ಲಾ ಉದುರಿ ಹೋದರೂ, ಕೀಮಿಯೋಥೆರಫಿಯಂತಹ ಕಠಿಣ ಚಿಕಿತ್ಸೆಯ ಮರುದಿನವೇ ಟೋಪಿ ಧರಿಸಿ ಶಾಲೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದ ಆತನಿಗೆ ಸರಿಸಾಟಿ ಇನ್ನೊಬ್ಬ ಇರಲು ಸಾಧ್ಯವೇ ಇರಲಿಲ್ಲ. ತಂದೆ ಪ್ರಾಥಮಿಕ ಶಾಲೆಯ ಬಡಪಾಯಿ ಶಿಕ್ಷಕ. ಹೆತ್ತಮ್ಮ ಮನೆಯನ್ನು ನೋಡಿಕೊಳ್ಳುತ್ತಿದ್ದ ಸಭ್ಯ ಗೃಹಿಣಿ. ಅಜ್ಜ ನಿವೃತ ಶಿಕ್ಷಕ. ಅಜ್ಜ ಸಚಿನ್ ನನ್ನು ಗಿಣಿಯಂತೆ ಆರೈಕೆ ಮಾಡಿದ್ದ. ಆತನನ್ನು ಬದುಕಿಸಬೇಕೆಂಬ ಹಟ ಅಜ್ಜನಿಗೆ. ಆಸ್ಪತ್ರೆಗಳ ಮೇಲೆ ಆಸ್ಪತ್ರೆಗಳನ್ನು ಸುತ್ತಿ ಮೊಮ್ಮಗನಿಗೆ ಚಿಕಿತ್ಸೆ ಕೊಡಿಸಿದ್ದ. ಹೆಚ್ಚು ಕಮ್ಮಿ 25 ಲಕ್ಷಕ್ಕಿಂತಲೂ ಹೆಚ್ಚು ಹಣ ಸಾಲಶೂಲ ಅದಾಗಲೇ ವ್ಯಯಿಸಲಾಗಿತ್ತು.

ಸಚಿನ್ 2015ರ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದ. ಮೂರು ಗಂಟೆಗಳ ಪರೀಕ್ಷೆ. ಆತನಿಗೆ ನಿರಂತರ ಬರೆಯಲು ಅಸಾಧ್ಯವಾಗಿತ್ತು. ಅರ್ಧ ಗಂಟೆಗೊಮ್ಮೆ ನಡುಗುತ್ತಿದ್ದ ಕೈಗೆ ಹತ್ತು ನಿಮಿಷಗಳ ವಿರಾಮ ನೀಡಬೇಕಿತ್ತು. ಕಷ್ಟ ಪಟ್ಟು ಬರೆದ ಪರೀಕ್ಷೆಯ ಫಲಿತಾಂಶ ಬಂದಾಗ ಗಣಿತಕ್ಕೆ 99 ಅಂಕಗಳು ಬಂದಿತ್ತು. ಆತ ನಡುಗುವ ಕೈಯಲ್ಲಿ ಬರೆದಿದ್ದರೂ, ತಪ್ಪು ಮಾಡದೇ ಬರೆದಿದ್ದೇನೆ ಎಂಬ ವಿಶ್ವಾಸವಿತ್ತು. “100 ಅಂಕಗಳು ಬರಲೇ ಬೇಕಿತ್ತು” ಎಂಬ ವಾದ ಅವನದ್ದಾಗಿತ್ತು. ಆತನ ಉತ್ತರ ಪತ್ರಿಕೆ ತರಿಸಲಾಯಿತು. ಆತ ಎಲ್ಲವನ್ನೂ ಸ್ಪಷ್ಟವಾಗಿ ಬರೆದಿದ್ದ. ಆದರೆ ಒಂದು ಅಂಕದ ಒಂದು ಉತ್ತರವನ್ನು, ನಡುಗುವ ಕೈ ಅರಿಯದೆ ಉತ್ತರ ಪತ್ರಿಕೆಯ ಕೆಳಗಿರುವ ರಫ್ ವರ್ಕ ಕಾಲಂ ನಲ್ಲಿ ಬರೆದಿತ್ತು. ಅದರಿಂದ ಅಮೂಲ್ಯವಾದ ಅಂಕವೊಂದು ಆತನಿಗೆ ನಷ್ಟವಾಗಿತ್ತು. ಉತ್ತಮ ಅಂಕ ಪಡೆದ ಸಚಿನ್ ನನ್ನು ಅಂದು ಸನ್ಮಾನಿಸಲಾಗಿತ್ತು. ಸನ್ಮಾನಿತನಾದ ಸಚಿನ್ ನ ಅಂದಿನ ಮಾತಿನಿಂದ ಪ್ರೇರಣೆ ಪಡೆದು  ಗಣಿತದಲ್ಲಿ 100 ಅಂಕ ಪಡೆದು ವೈದ್ಯಕೀಯ ವಿದ್ಯಾರ್ಥಿಯಾಗಲು ಕಾರಣವಾದದ್ದನ್ನು  ಅದೇ ಊರಿನ  ಕಾರ್ತಿಕ್ ಜಿ.ಸಿ. ಇಂದಿಗೂ ನೆನಪಿಕೊಳ್ಳುತ್ತಾನೆ.

ಸಚಿನ್ ಗೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಕಲಿಯಬೇಕೆಂಬ ತುಡಿತವಿತ್ತು. ಕಿಮಿಯೋಥೆರಪಿಯಿಂದ ಜರ್ಝರಿತವಾದ ದೇಹ ಅದಕ್ಕೆ ಸಹಕರಿಸಲಿಲ್ಲ. ತನ್ನೂರಿನ ಕೆ.ಎಲ್.ಇ. ಕಾಲೇಜಿಗೆ ಸೇರಿದ. ಪ್ರಥಮ ಪಿಯುಸಿ ಮಧ್ಯಾವಧಿ ಪರೀಕ್ಷೆ ಬರೆಯಬೇಕಿತ್ತು. ಅಂದು ಕೆಮೆಸ್ಟ್ರಿ ಪರೀಕ್ಷೆ. ಹಿಂದಿನ ದಿನ ತೀವೃ ಅಸ್ವಸ್ಥಗೊಂಡು ಆಸ್ಪತ್ರಗೆ ದಾಖಲಾಗಿದ್ದ. ಆತನಿಗೆ ಬದಲಿ ರಕ್ತ ನೀಡಬೇಕಿತ್ತು. ರಕ್ತ ಪಡೆದು ಮನೆಯಲ್ಲಿ ಮಲಗಬೇಕಿದ್ದ ಸಚಿನ್ ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆದಿದ್ದ. ಆಶ್ಚರ್ಯವೆಂದರೆ ಆಸ್ಪತ್ರೆಯಿಂದ ನೇರವಾಗಿ ಕಾಲೇಜಿಗೆ ಬಂದು ಬರೆದ ಕೆಮೆಸ್ಟ್ರಿ ಪರೀಕ್ಷೆಯಲ್ಲಿ ಶೇಕಡಾ 100 ಅಂಕಗಳನ್ನು ಪಡೆದಿದ್ದ. ಅದನ್ನು ಸ್ಮರಿಸಿಕೊಂಡಾಗ ಅವನ ಗುರುಗಳ ಕಣ್ಣಲ್ಲಿ ಇಂದಿಗೂ ಕಣ್ಣೀರು ತುಂಬಿ ಬರುತ್ತದೆ. ದ್ವಿತೀಯ ಪಿಯುಸಿಯಲ್ಲಿ ಸಚಿನ್ ತನ್ನ ಶಕ್ತಿಯನ್ನು ಕ್ರಮೇಣ ಕಳೆದುಕೊಳ್ಳುತ್ತಿದ್ದ. ವರ್ಷದ ಕೊನೆಯವರೆಗೂ ಚಿಕಿತ್ಸೆಯ ಹೊರತು ಕಾಲೇಜು ತಪ್ಪಿಸಲಿಲ್ಲ. 2018ರ ಮಾರ್ಚ್ ಬರುತ್ತಿದ್ದಂತೆ ಆತ ಮತ್ತಷ್ಟು ಕೃಶವಾಗತೊಡಗಿದ.

ಎಸ್.ಎಸ್.ಎಲ್.ಸಿ.ಯಲ್ಲಿ ಅದ್ಭುತ ಸಾಧನೆ ತೋರಿದಾಗ, ನನ್ನ ಮಿತ್ರರಾದ ಚಂದ್ರಶೇಖರ್ ಹಾದಿಮನಿಯವರ ಸಲಹೆಯಂತೆ ಸಚಿನ್ ನೊಂದಿಗೆ ಮಾತನಾಡಿದ್ದೆ. ಆತನ ಮಾತು ಕೇಳಿ ನಾನು ದಂಗಾಗಿದ್ದೆ. ಅದೊಂದು ರೋಮಾಂಚನ ಅನುಭವವಾಗಿತ್ತು. ಯಾವುದೇ ಪ್ರಶ್ನೆಗೆ ಮುಲಾಜಿಲ್ಲದೆ ಉತ್ತರಿಸುತ್ತಿದ್ದ. ನಾನು ಮಾತಾಡ ತೊಡಗಿದೆ. “ಮಗಾ ಸಚಿನ್, ಬೇಸರವಿಲ್ಲವೆಂದರೆ ಒಂದು ಮಾತು ಕೇಳಲಾ?”. ಎಂದಾಗ “ಕೇಳಿ ಸರ್, ನಿಮ್ಮಂತಹ ಗುರುಗಳೊಂದಿಗೆ ನಾನು ಮಾತಾಡುತ್ತಿರುವುದೇ ನನ್ನ ಪುಣ್ಯ” ಅಂದ. “ಸಚಿನ್, ನೀನು ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದಿ ಎಂದು ನಿನಗೆ ಗೊತ್ತಿದೆ ಅಲ್ವಾ?” ಎಂದು ಕೇಳಿದಾಗ “ಹೌದು ಸರ್” ಎಂದು ಅಷ್ಟೇ ದೃಢವಾಗಿ ಉತ್ತರಿಸಿದ್ದ. “ಮಾರಕವಾದ ಆ ರೋಗದಿಂದಾಗಿ ಸಾವು ನಿನ್ನ ಬಳಿಯಿದೆ ಎಂದು ತಿಳಿದಿದ್ದರೂ, ಇಷ್ಟೊಂದು ಉತ್ಸಾಹ ನಿನ್ನಲ್ಲಿದೆಯಲ್ವಾ? ಅದರ ಗುಟ್ಟೇನು?” ಎಂದು ಭಾರವಾದ ಹೃದಯದಿಂದ ಕೇಳಿಯೇ ಬಿಟ್ಟೆ. ಆದರೆ ಅವನು ನೀಡಿದ ಉತ್ತರ ನನ್ನನ್ನು ಬೆರಗುಗೊಳಿಸಿತು. “ಸರ್, ನಿಮಗೆ ಸ್ಟೀಫನ್ ಹಾಕಿನ್ಸ್ ಗೊತ್ತಾ?, ಅವರು ಇಂದು ಬದುಕಿರುವ ಜಗತ್ತಿನ ಸರ್ವಶ್ರೇಷ್ಠ ಖಗೋಳ ವಿಜ್ಞಾನಿ ಸರ್. ಅವರು 19 ವರ್ಷವಿದ್ದಾಗ ಮಾರಕ ಕಾಯಿಲೆಗೆ ತುತ್ತಾಗಿ ಕುಸಿದು ಬಿದ್ದಾಗ, ಪರೀಕ್ಷೆ ಮಾಡಿದ ವೈದ್ಯರು ಅವರಿನ್ನು ಎರಡೇ ವರ್ಷ ಬದುಕಬಲ್ಲರು ಎಂದು ಹೇಳಿಲ್ವಾ ಸರ್?. ಹಾಗಿದ್ದೂ ಅವರು ಸಾಯಲಿಲ್ಲ. ಎದೆಗುಂದಲಿಲ್ಲ. ವ್ಹೀಲ್ ಚೇರ್ ನಲ್ಲಿ ನಡೆದಾಡಿದ ಅವರು 73 ವರ್ಷವಾದರೂ ಇಂದಿಗೂ ಬದುಕಿದ್ದಾರೆ ಸರ್. ಜಗತ್ತಿಗೆ ಬೆಳಕು ನೀಡಿದ ಶ್ರೇಷ್ಠ ವಿಜ್ಞಾನಿಯಾಗಿ ಬೆಳಗುತ್ತಿದ್ದಾರೆ ಸರ್. ಅದೇ ಸ್ಟೀಫನ್ ಹಾಕಿನ್ಸ್ ನನಗೆ ಪ್ರೇರಣೆ. ನಾನು 9 ವರ್ಷದವನಿದ್ದಾಗ  11ನೇ ವರ್ಷದಲ್ಲಿ ಸಾಯುತ್ತೇನೆ ಎಂದು ವೈದ್ಯರು ಹೇಳಿದ್ದಾರೆ ಸರ್. ಆದರೆ ನಾನು ಇನ್ನೂ ಬದುಕಿದ್ದೇನೆ. ನಾನು ಸಾಯೊಲ್ಲ ಸರ್. ಇನ್ನೂ ನೂರು ವರ್ಷ ಬದುಕುತ್ತೇನೆ. ನಾನೊಬ್ಬ ಶ್ರೇಷ್ಠ ವಿಜ್ಞಾನಿಯಾಗಿ ಜಗತ್ತಿಗೆ ಬೆಳಕು ಕೊಡುತ್ತೇನೆ” ಎಂದು ಒಂದೇ ಉಸಿರಿನಲ್ಲಿ ಸಚಿನ್ ಹೇಳುತ್ತಿದ್ದಂತೆ ನನ್ನಲ್ಲಿ ಮಾತುಗಳಿಲ್ಲದೆ ಮೌನವಾದೆ.

ಅಂದಿನಿಂದ ಸಚಿನ್ ನನ್ನ ಪಾಠದ ಒಂದಶವಾಗಿದ್ದ. ನಾನು ಯಾವುದೇ ಊರಿಗೆ ಹೋದರೂ, ಸಚಿನ್ ಬಗ್ಗೆ ಮಾತಾಡದೇ ಇರುತ್ತಿರಲಿಲ್ಲ. ಅಂದು 2018ರ ಮಾರ್ಚ್ 14. ಗಣಿತ ಪ್ರಿಯರಿಗೆ ವಿಶೇಷವಾಗಿರುವ “ವಿಶ್ವ ಪೈ ದಿನ” (ಮಾರ್ಚ್ 14 ಅಂದರೆ, ಪೈ ಬೆಲೆ 3.14ನ್ನು ಪ್ರತಿನಿಧಿಸುತ್ತದೆ). ಬೆಳಿಗ್ಗಿನ ವಾರ್ತಾ ಪತ್ರಿಕೆ ತಿರುವುತ್ತಿದ್ದಂತೆ ಕಂಡ ವರದಿ ನೋಡಿ ಖೇದವಾಯಿತು. “ಖ್ಯಾತ ಖಗೋಳ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ಇನ್ನಿಲ್ಲ” ಎಂಬ ತಲೆ ಬರಹ ನೋಡಿ, ನನಗೆ ನನ್ನ ಮುದ್ದು ಸಚಿನ್ ನ ನೆನಪಾದ. ಅದೇ ಸಚಿನ್ ಹಾಕಿನ್ಸ್ ಬಗ್ಗೆ ನನ್ನನ್ನು ತಿಳಿದುಕೊಳ್ಳುವಂತೆ ಮಾಡಿದ್ದ. ಆದರೆ ಇದಕ್ಕಿಂತಲೂ ಅಸಹನೀಯವಾದ ಸುದ್ದಿಯೊಂದು ಕೆಲವೇ ಕ್ಷಣದಲ್ಲಿ ಬಂದೆರಗಿತು. ಸ್ಟೀಫನ್ ಹಾಕಿನ್ಸ್ ನಿಂದ ಪ್ರೇರಣೆ ಪಡೆದಿದ್ದ ಹಾವೇರಿಯ ಸಚಿನ್, ಎಲ್ಲಾ ನೊವುಗಳಿಗೂ ಶಾಶ್ವತ ವಿದಾಯ ಹೇಳಿದ್ದ. ಸ್ಟೀಫನ್ ಹಾಕಿನ್ಸ್ ನೊಂದಿಗೆ ಸಚಿನ್ ತನ್ನ ಜೀವನದ ಯಾತ್ರೆಯನ್ನು ಅದೇ ದಿನ ಅದೇ ಸಮಯಕ್ಕೆ ಮುಗಿಸಿದ್ದ.

ಸಚಿನ್ ಬದುಕಬೇಕಿತ್ತು. ಅದು ಆತನಿಗಾಗಿ ಅಲ್ಲ. ಸಚಿನ್ ಬದುಕಿದ್ದರೆ ಭವಿಷ್ಯದ ಶ್ರೇಷ್ಠ ತಾರೆಯೊಂದು ಈ ದೇಶದಲ್ಲಿ ಬೆಳಗುತ್ತಿತ್ತು. ಆ ಶಕ್ತಿ ಸಚಿನ್ ನಲ್ಲಿತ್ತು. ಐಎಎಸ್, ಐಪಿಎಸ್…ಮುಂತಾದವುಗಳು ಆತನಿಗೆ ನಗಣ್ಯವಾಗಿರುತ್ತಿತ್ತು. ಆತನೊಬ್ಬ ಶ್ರೇಷ್ಠ ವಿಜ್ಞಾನಿಯಾಗಿ ಬೆಳೆಯುವ ಎಲ್ಲಾ ಲಕ್ಷಣಗಳಿದ್ದವು. ಕಲಾಂ, ರಾಮನ್ …ಇವರೆಲ್ಲರನ್ನೂ ಮೀರಿಸುವ ಅಪೂರ್ವದಲ್ಲಿ ಅಪೂರ್ವವಾದ ಬುದ್ಧಿವಂತಿಕೆ ಅವನಲ್ಲಿತ್ತು. ನಾವೊಂದು ಬಗೆದರೆ ವಿಧಿ ಇನ್ನೊಂದು ಬಗೆಯುವುದು ಪ್ರಕೃತಿ ನಿಯಮ. ವಿಧಿಯ ಕ್ರೂರ ನಿರ್ಣಯಕ್ಕೆ ಬಲಿಯಾಗಿ ಸಚಿನ್ ನಮ್ಮೆಲ್ಲರ ಹೃದಯದಲ್ಲಿ ಶಾಶ್ವತ ಮುದ್ರೆಯೊತ್ತಿ ನಮ್ಮಿಂದ ಭೌತಿಕವಾಗಿ ಎಂದೆಂದಿಗೂ ಮರೆಯಾಗಿ ಹೋದ….!

(ನೈಜ ಕತೆ ಆಧರಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಿ ಎಂಬ ಉದ್ದೇಶದಿಂದ ಬರೆಯಲಾಗಿದೆ)

-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ