ನೆನೆಯೋಣ ನರಸಿಂಹನ...

ನೆನೆಯೋಣ ನರಸಿಂಹನ...

ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಉಗ್ರ ಮತ್ತು ಭಯಂಕರ ರೂಪಿನ ಅವತಾರವೇ ನರಸಿಂಹವವತಾರ ಎಂದು ಪುರಾಣಗಳಲ್ಲಿ ಓದಿದ ನೆನಪು. ವಿಷ್ಣು ಭಕ್ತನಾದ ಶಿಶು ಪ್ರ‌ಹ್ಲಾದನ ಕಷ್ಟವನ್ನು, ಪ್ರಜೆಗಳ ನಂಬಿಕೆಯನ್ನು ಉಳಿಸಲು, ಕಾಪಾಡಲು ದೇವ ನರಸಿಂಹ ಭೂಮಿಗಿಳಿದನಂತೆ. ಅಸುರರಾಜ ಹಿರಣ್ಯಕಶ್ಯಪುವನ್ನು ವಧಿಸಿ ಲೋಕಕ್ಷೇಮ ಉಂಟುಮಾಡಿದ ದೇವನೀತ. ತನ್ನ ಪ್ರಜೆಗಳು ಸಹ ಭಗವಾನ್ ವಿಷ್ಣುವನ್ನು ಪೂಜಿಸಬಾರದೆಂಬ ಮನೋಭಾವ ಹೊಂದಿದ ದೈತ್ಯನೀತ. ಮಗ ಪ್ರಹ್ಲಾದನು ತದೇಕಚಿತ್ತದಿಂದ ವಿಷ್ಣುನಾಮ ಹೇಳುವುದು, ಧ್ಯಾನಿಸುವುದನ್ನು ಕಂಡ ರಾಜನು ತನ್ನ ಪತ್ನಿ ಕಯಾದುವಿನ ಕೈಯಲ್ಲಿ ಮಗನಿಗೆ ವಿಷಪ್ರಾಶನ ಮಾಡಿಸಿದ ಕ್ರೂರಿಯಾಗಿದ್ದನು. ಕೊಡಬಾರದ ಕಷ್ಟಗಳನ್ನು ಪುಟ್ಟ ಬಾಲಕನಿಗೆ ಕೊಟ್ಟವನು. ಮಿತಿಮೀರಿದಾಗ ಸಿಂಹದ ತಲೆ ಮತ್ತು ಮಾನವದೇಹವನ್ನು ಹೊತ್ತ ನರಸಿಂಹನಾಗಿ ಭೂಮಿಗಿಳಿದ ಭಗವಂತ ಹಿರಣ್ಯಕಶ್ಯಪುವಿನ ಪ್ರಾಣಹರಣ ಗೈಯ್ದ. ಬ್ರಹ್ಮದೇವನ ವರಬಲವೂ ಹಾಗಿತ್ತು.

ವೈಶಾಖ ಮಾಸದ ಶುಕ್ಲಪಕ್ಷ ಚತುರ್ದಶಿಯಂದು ಅವತಾರವೆತ್ತಿದ ನರಸಿಂಹನನ್ನು ಧ್ಯಾನ, ಭಜನೆ, ಉಪವಾಸದ ಮೂಲಕ ಭಜಿಸುತ್ತಾರೆ. ಜೊತೆಗೆ ಲಕ್ಷ್ಮೀ ಮಾತೆಯನ್ನು ಪೂಜಿಸುವರು. ಮಾನಸಿಕ ದೃಢತೆ, ಧೈರ್ಯ, ಬದುಕಿನ ಹಾದಿಯಲಿ ಬರುವ ತೊಂದರೆಗಳ ನಿವಾರಣೆ, ಶತ್ರು ನಿವಾರಣೆ ಆಗಿ ನೆಮ್ಮದಿ ನೆಲೆಸುವುದೆಂಬ ನಂಬಿಕೆ. ಸಿಹಿ ಖಾದ್ಯಗಳು, ಹಣ್ಣು, ಕೇಸರಿ, ಹಾಲು ಸಮರ್ಪಿಸಿ, ಕುಂಕುಮ ನೀಡಿ, ಸ್ತೋತ್ರ ಪಠಿಸಿ ಪೂಜಿಸುವರು. ಭಕ್ತರ ಇಷ್ಟಾರ್ಥ ಸಿದ್ಧಿಸುವುದೆಂಬ ಬಲವಾದ ನಂಬಿಕೆ. ಕೆಲವು ಕಡೆ ಉಪವಾಸ ವ್ರತ ಸಹ ಆಚರಿಸುವ ಪದ್ಧತಿ ಇದೆ. ಭಗವಂತನ ಆರಾಧನೆಯಿಂದ ತೃಪ್ತಿ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ.ಸರ್ವರಿಗೂ ನರಸಿಂಹ ಜಯಂತಿಯ ಶುಭಾಶಯಗಳು.

(ಆಧಾರ: ಪುರಾಣ ಕಥಾ ಮಾಲಾ)

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ