ಪ್ರವಾಸ ಕಥನ : ಅಮೇರಿಕಾ... ಅಮೇರಿಕಾ... (ಭಾಗ 1)

ಪ್ರವಾಸ ಕಥನ : ಅಮೇರಿಕಾ... ಅಮೇರಿಕಾ... (ಭಾಗ 1)

(ಅಮೇರಿಕಾ ಪ್ರವಾಸ ಹೊರಡುವ ಮೊದಲು... ಬೆಂಗಳೂರಿನ ವಿಜ್ಞಾನ ಬರಹಗಾರ ಕೆ ನಟರಾಜ್ ಅವರು ತಮ್ಮ ಕುಟುಂಬದ ಜೊತೆ ಅಮೇರಿಕಾಗೆ ಪ್ರವಾಸ ಹೋಗಿದ್ದರು. ಆ ಪ್ರವಾಸದಲ್ಲಿ ಅವರು ಕಂಡ, ತಿರುಗಾಡಿದ ಸ್ಥಳಗಳ ಬಗ್ಗೆ ಪ್ರವಾಸ ಕಥನ ಬರೆದಿದ್ದಾರೆ. ಈ ಪ್ರವಾಸ ಕಥನವು ಧಾರವಾಹಿ ರೂಪದಲ್ಲಿ ಪ್ರತೀ ಶುಕ್ರವಾರ 'ಸಂಪದ' ದಲ್ಲಿ ಪ್ರಕಟವಾಗಲಿದೆ. ಈ ಪ್ರವಾಸ ಕಥನವನ್ನು ಪ್ರಕಟಿಸಲು ಅನುಮತಿ ನೀಡಿದ ಶ್ರೀಯುತ ಕೆ ನಟರಾಜ್ ಅವರಿಗೆ ಕೃತಜ್ಞತೆಗಳು.)

ಪ್ರವಾಸಿಗರ ನಿಸರ್ಗ ಧಾಮ ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್

ಅಮೇರಿಕಾದ ಪಶ್ಚಿಮ ಭಾಗದಲ್ಲಿರುವ ಈ ಬೃಹತ್ ವನ್ಯಧಾಮ ಭೂಮಿಗಿಳಿದ ಸ್ವರ್ಗವೇ ಸರಿ. ಇದು ಅಮೇರಿಕಾದ ಮೂರು ರಾಜ್ಯಗಳಾದ ಮೊಂಟಾ ನಾ, ಇದಾಹೋ ಹಾಗೂ ವ್ಯೂಮಿಂಗ್ ಗಳಲ್ಲಿ ಹರಡಿದ ಬೃಹತ್ ವನ್ಯ ಶ್ರೇಣಿ. ಇದನ್ನು 1,ಮಾರ್ಚ್ 1872 ರಲ್ಲಿ ಅಂದಿನ ಅಮೇರಿಕಾದ ಅಧ್ಯಕ್ಷ  ಯೂಲಿಸಿಸ್ ಎಸ್ ಗ್ರ್ಯಾಂಟ್ ರಾಷ್ಟ್ರಕ್ಕೆ ಅರ್ಪಿಸಿದ್ದರು. ಯೆಲ್ಲೋ ಸ್ಟೋನ್ ಅಮೇರಿಕಾದ ಪ್ರಥಮ ನ್ಯಾಷನಲ್ ಪಾರ್ಕ್. ಈ ಪಾರ್ಕ್ ಅನೇಕ ಪ್ರಾಣಿ ಹಾಗೂ ಸಸ್ಯ ಸಂಕುಲಕ್ಕೆ ವಾಸಸ್ಥಾನವಾಗಿದೆ.

ಈ ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್ ಸುಮಾರು 8,983 ಚದುರ ಕಿ ಮೀ ವಿಸ್ತಾರದಲ್ಲಿ ಪಸರಿಸಿದ್ದು, ಇದರಲ್ಲಿ ಬಹು ಭಾಗ ಭೂ ಉಷ್ಣವಲಯವೆಂದೂ ಗುರುತಿಸಲಾಗಿದೆ. ಈ ಕಾರಣದಿಂದಲೇ ಇದು ಅನೇಕ ಬಿಸಿ ನೀರಿನ ಕೊಳಗಳು ಹಾಗೂ ಬುಗ್ಗೆ ( Geysers) ಗಳಿಗೆ ಈ ಪ್ರದೇಶ ಹೆಸರುವಾಸಿ ಆಗಿದೆ.

ಯಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್: ಇದೊಂದು ಅಮೇರಿಕಾದ ಪ್ರಮುಖ ಪ್ರವಾಸೀ ತಾಣ. ಜಗತ್ತಿನ ಎಲ್ಲೆಡೆಯಿಂದ ಪ್ರವಾಸಿಗರು ಇಲ್ಲಿಗೆ ಹರಿದು ಬರುತ್ತಾರೆ. ಸುಂದರ ಬೆಟ್ಟಗಳು, ಭೀಕರ ಪ್ರಪಾತಗಳು, ದಟ್ಟವಾದ ಕಾಡು, ಹರಿವ ಹೊಳೆ, ಭೋರ್ಗರೆವ ಜಲಪಾತಗಳು, ವಿಶಿಷ್ಠ ಬಿಸಿನೀರಿನ ಕೊಳಗಳು, ಚಿಮ್ಮುವ ಬಿಸಿ ನೀರ ಬುಗ್ಗೆಗಳು, ವೈವಿಧ್ಯಮಯ ಪ್ರಾಣಿ ಸಂಕುಲ. ಒಬ್ಬ ನಿಸರ್ಗ ಪ್ರಿಯ ಪ್ರವಾಸಿಗೆ ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು...? ಇಲ್ಲಿ 500ಕ್ಕೂ ಹೆಚ್ಚಿನ ಬಿಸಿನೀರಿನ ಬುಗ್ಗೆಗಳಿವೆ. ಇದು ಇಡೀ ಪ್ರಪಂಚದಲ್ಲಿರುವ ಒಟ್ಟು ಬಿಸಿ ನೀರ ಬುಗ್ಗೆಗಳ ಅರ್ಧದಷ್ಟು!

ಬಣ್ಣದೋಕುಳಿಯಾಡುವ ಗ್ರ್ಯಾಂಡ್ ಪ್ರಿಸ್ಮ್ಯಾಟಿಕ್ ಸ್ಪ್ರಿಂಗ್: ಗ್ರ್ಯಾಂಡ್ ಪ್ರಿಸ್ಮ್ಯಾಟಿಕ್ ಸ್ಪ್ರಿಂಗ್ ಯೆಲ್ಲೋಸ್ಟೋನ್ ನ ಅತ್ಯಂತ ದೊಡ್ಡ ಬಿಸಿನೀರಿನ ಕೊಳ. ಇದು ಅಮೇರಿಕಾದಲ್ಲೇ ಅತ್ಯಂತ ದೊಡ್ಡ ಹಾಗೂ ಪ್ರಪಂಚದ ಮೂರನೆಯ ಅತೀ ದೊಡ್ಡ ಬಿಸಿ ನೀರಿನ ಕೊಳ. ಇದರ ಆಳ 160 ಅಡಿಗಳಾಗಿದ್ದು, ಪ್ರತಿ ನಿಮಿಷಕ್ಕೆ ಸುಮಾರು 2,100 ಲೀಟರ್ ಬಿಸಿ ನೀರನ್ನು ಹೊರಹಾಕುತ್ತದೆ. ಇದು ಅಲ್ಲೇ ಇರುವ ಯಲ್ಲೋಸ್ಟೋನ್ ನದಿಯನ್ನು ಸೇರುತ್ತೆ. ಈ ಬಿಸಿ ನೀರಿನ ಕೊಳವನ್ನು 1871 ರ ಸರ್ವೇಕ್ಷಣೆಯಲ್ಲಿ ಗುರುತಿಸಲಾಯಿತು.

ಇದರ ವಿಶೇಷವೆಂದರೆ ಈ ಕೊಳದ.ನೀರಿನ ಮೇಲ್ಭಾಗದಲ್ಲಿ ಕಾಮನಬಿಲ್ಲಿನ ಏಳು ಬಣ್ಣಗಳನ್ನು ಒಮ್ಮೊಮ್ಮೆ ಕಾಣಬಹುದು. ಅದಕ್ಕೆಂದೇ ಇದಕ್ಕೆ ಗ್ರ್ಯಾಂಡ್ ಪ್ರಿಸ್ಮ್ಯಾಟಿಕ್ ಸ್ಪ್ರಿಂಗ್ ಎಂದೇ ಕರೆಯುತ್ತಾರೆ. ಇದು ಗಾಜಿನ ಪಟ್ಟಕದಂತೆ ವರ್ತಿಸಿ ನಯನಮನೋಹರ ಬಣ್ಣಗಳ ಚಿತ್ತಾರದಿಂದ ಪ್ರವಾಸಿಗರನ್ನು ಆಕರ್ಷಿಸಿಬಿಡುತ್ತದೆ. ಈ ಕೊಳ ಸದಾ ಬಿಸಿ ಬಿಸಿ ಕಾಫಿಯ ಹಾಗೆ ಹೊಗೆಯಾಡುತ್ತಲೇ ಇರುತ್ತದೆ. ಈ ಕೊಳದ ವ್ಯಾಸ 370 ಅಡಿಗಳು. ಇದರ ಸುತ್ತಲೂ ಮರದ ಪುಟ್ಟ ಸೇತುವೆಯನ್ನೇ ನಿರ್ಮಾಣ ಮಾಡಿದ್ದಾರೆ. ನೀವು ಅಪ್ಪಿ ತಪ್ಪಿಯೂ ಕುಸಿಯುವ ಮಣ್ಣಿನ ಮೇಲೆ ಕಾಲಿಡುವ ಹಾಗಿಲ್ಲ! ಇಲ್ಲಿ ನೀವು ಮೂಗು ಮುರಿಯುವ ಒಂದೇ ಸಂಗತಿ ಎಂದರೆ: ಈ ವಾತಾವರಣ ಪೂರ್ತಿ ಒಂದು ರೀತಿಯ ಘಾಟು ವಾಸನೆ. ಇದೊಂದನ್ನು ಒಪ್ಪಿಕೊಂಡರೆ ಇದು ಎಲ್ಲ ರೀತಿಯಲ್ಲೂ ಅದ್ಭುತ ಪ್ರವಾಸೀ ತಾಣ!

(ಮುಂದುವರೆಯುವುದು)

ಚಿತ್ರದಲ್ಲಿ: ಲೇಖಕರಾದ ಕೆ.ನಟರಾಜ್ ಅವರು ತಮ್ಮ ಪತ್ನಿಯ ಜೊತೆ ಗ್ರ್ಯಾಂಡ್ ಪ್ರಿಸ್ಮ್ಯಾಟಿಕ್ ಸ್ಪ್ರಿಂಗ್ ಎದುರು

ಚಿತ್ರ ಮತ್ತು ಬರಹ : ಕೆ. ನಟರಾಜ್, ಬೆಂಗಳೂರು