ಬಲವಂತವಾಗಿ ಕೋಚಿಂಗ್ ಸೆಂಟರ್ ಗಳಿಗೆ ತಳ್ಳಬೇಡಿ

ಬಲವಂತವಾಗಿ ಕೋಚಿಂಗ್ ಸೆಂಟರ್ ಗಳಿಗೆ ತಳ್ಳಬೇಡಿ

ಕೋಚಿಂಗ್ ಸೆಂಟರ್ ಗಳ ಅಭ್ಯಾಸದ ಒತ್ತಡ ತಾಳಲಾರದೆ ರಾಜಸ್ಥಾನದ ಕೋಟಾದಲ್ಲಿ ಗುರುವಾರ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವರ್ಷದಲ್ಲಿ ಇದು ೨೭ನೇ ಆತ್ಮಹತ್ಯೆ ಪ್ರಕರಣವಾಗಿದ್ದು, ಈ ಸರಣಿ ಆತ್ಮಹತ್ಯೆಗಳು ಆತಂಕ ಹುಟ್ಟಿಸುತ್ತಿವೆ. ನೀಟ್, ಜೆ.ಇ.ಇ., ಯು ಪಿ ಎಸ್ ಸಿ ಸೇರಿದಂತೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಪ್ರತಿ ವರ್ಷ ಇಲ್ಲಿಯ ಕೋಚಿಂಗ್ ಸೆಂಟರ್ ಗಳಲ್ಲಿ ದೇಶದ ಮೂಲೆಮೂಲೆಗಳಿಂದ ಸುಮಾರು ೨ ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ವರ್ಷವೊಂದರಲ್ಲಿ ಈ ಕೋಚಿಂಗ್ ವಹಿವಾಟಿನಿಂದಲೇ ಸುಮಾರು ೫ ಸಾವಿರ ಕೋಟಿ ರೂ. ಆದಾಯ ಬರುತ್ತಿದೆ ಎಂದರೆ ಇದರ ವ್ಯಾಪಕತೆ ಅರ್ಥ ಮಾಡಿಕೊಳ್ಳಬಹುದು. ಇಲ್ಲಿಯ ಕೆಲವು ವಿದ್ಯಾರ್ಥಿಗಳು ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರ ಸ್ಥಾನ ಪಡೆಯುತ್ತಿರುವುದೂ ನಿಜ. ಹಾಗಾಗಿ ಪೋಷಕರು ಭಾರಿ ಮಹತ್ವಾಕಾಂಕ್ಷೆ ಇರಿಸಿಕೊಂಡು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಕೋಟಾದ ಕೋಚಿಂಗ್ ಕ್ಲಾಸ್ ಗಳ ಮಧ್ಯೆ ವಿಪರೀತ ಸ್ಪರ್ಧೆ ಏರ್ಪಟ್ಟಿದೆ. ಹೆಚ್ಚಿನ ರಾಂಕ್ ಗಿಟ್ಟಿಸುವ ಉದ್ಡೇಶದಿಂದ ವಿದ್ಯಾರ್ಥಿಗಳ ಮೇಲೆ ವಿಪರೀತ ಒತ್ತಡ ಹೇರಲಾಗುತ್ತಿದೆ. ಇನ್ನೊಂದೆಡೆ, ತಮ್ಮ ಮಕ್ಕಳ ಮೇಲೆ ಭಾರಿ ಮಹತ್ವಾಕಾಂಕ್ಷೆ ಹೊಂದಿರುವ ಪೋಷಕರು ಕೂಡ ಒತ್ತಡ ಹಾಕುತ್ತಾರೆ. ಹಾಗಾಗಿ ಸಹಜವಾಗಿಯೇ ವಿದ್ಯಾರ್ಥಿಗಳು ಅತಿಯಾದ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಸನ್ನಿವೇಶ ತಪ್ಪಿಸಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ದೂರದ ರಾಜಸ್ಥಾನದ ಕೋಟಾಗೇ ಮಕ್ಕಳನ್ನು ಕಳುಹಿಸಿಕೊಡಬೇಕಿಲ್ಲ. ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳಲ್ಲೇ ಸಾಕಷ್ಟು ಉತ್ತಮ ಕೋಚಿಂಗ್ ಸೆಂಟರ್ ಗಳಿವೆ. ಕೆಲವು ಕಡೆ ರಾಜ್ಯ ಸರಕಾರವೇ ಉಚಿತವಾಗಿ ಇಂಥ ಕೋಚಿಂಗ್ ಸೆಂಟರ್ ಗಳನ್ನು ನಡೆಸುತ್ತಿದೆ. ಯಾವುದೇ ಕೋಚಿಂಗ್ ಸೆಂಟರ್ ಗೆ ಹೋಗದೆಯೂ ಪ್ರತಿ ವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ರಾಂಕ್ ಗಿಟ್ಟಿಸಿದ ವಿದ್ಯಾರ್ಥಿಗಳು ನಮ್ಮ ಕಣ್ಣ ಮುಂದೆ ಇದ್ದಾರೆ. ಹಾಗಾಗು ಪೋಷಕರು, ಕೋಟಾ ಕೋಚಿಂಗ್ ಸೆಂಟರ್ ಗಳ ಮೋಡಿಯಿಂದ ಹೊರಬಂದು ತಮ್ಮ ಮಕ್ಕಳ ಆಸಕ್ತಿಗೆ ಸ್ಪಂದಿಸಬೇಕಾಗಿದೆ. ಬಲವಂತವಾಗಿ ಇಂಥ ಕೋಚಿಂಗ್ ಸೆಂಟರ್ ಗಳಿಗೆ ತಳ್ಳಿ ಮಕ್ಕಳನ್ನು ಮಾನಸಿಕವಾಗಿ ಘಾಸಿಗೊಳಿಸುವುದು ಸರಿಯಲ್ಲ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೯-೦೯-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ