ಬಳಕೆಗಾಗದ ಹೂವು

ಬಳಕೆಗಾಗದ ಹೂವು

ಕವನ

ಗುಡಿಯ ಸೇರದ ಹೂವು

ಮುಡಿಯಲಾಗದ ಸುಮವು

ಗಿಡದಲರಳದೆ ಬರಿದೆ ನಗುವ ಹೂವು

 

ಗಂಧವಿಲ್ಲದ ಹೂವು

ಬಂಧಕೆಳಸದ ಸುಮವು

ಬಂದ ದುಂಬಿಗೆ ಜೇನು ಕೊಡದ ಹೂವು

 

ಮೊಗ್ಗು ಅರಳುವ ಹಿತದ

ಹಿಗ್ಗು ನೀಡದ ಸುಮವು

ಕುಗ್ಗಿ ಹೋಗಿದೆ ಮನದೆ ನೊಂದ ಹೂವು

 

ಸುದ್ಧಿಯಾಗದ ಹೂವು

ಮುದ್ದು ಎನಿಸದ ಸುಮವು

ಬುದ್ಧಿಗೆಟಕುವೆನೆಂಬ ಕಸದ ಹೂವು

 

ನಿಂದು ನೋಡುವಿರೇಕೆ

ಕುಂದುಕೊರತೆಗಳುಂಟು

ಎಂದು ನುಡಿಯುತಲಿಹುದು ಕೃತಕ ಹೂವು||

(ತಮಾಷೆಗಾಗಿ)

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್