ಬಿಡುಗಡೆ

ಬಿಡುಗಡೆ

ಪುಸ್ತಕದ ಲೇಖಕ/ಕವಿಯ ಹೆಸರು
ಎ.ಎನ್.ಪ್ರಸನ್ನ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೯೫.೦೦, ಮುದ್ರಣ: ೨೦೨೧

ಎ.ಎಸ್.ಪ್ರಸನ್ನರ ಕಥಾಸಂಕಲನವೇ ‘ಬಿಡುಗಡೆ' . ಪುಸ್ತಕದ ಬೆನ್ನುಡಿಯಲ್ಲಿ ಸಿ.ಎನ್. ರಾಮಚಂದ್ರನ್ ಅವರು ಹೀಗೆ ಬರೆಯುತ್ತಾರೆ “ ಪ್ರಸನ್ನರ ಪ್ರಸ್ತುತ ಕಥಾ ಸಂಕಲನ ಅವರ ಆರನೆಯದು. ಸದಾ ಪ್ರಯೋಗಶೀಲರಾಗಿರುವ ಪ್ರಸನ್ನ ಅವರ ಈ ಸಂಕಲನದ ಕಥೆಗಳು ಹಿಂದಿನ ಸಂಕಲನದ ಕಥೆಗಳಿಗಿಂತ ಭಿನ್ನವಾಗಿವೆ. ಈವರೆಗಿನ ಕಥೆಗಳು ಬಹುಮಟ್ಟಿಗೆ ವ್ಯಕ್ತಿ ಸಮಾಜಗಳ ನಡುವೆ ಇರುವ ಸಂಬಂಧವಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದೆ. ಈ ಸಂಕಲನದ ಕಥೆಗಳು ಸಂಪೂರ್ಣವಾಗಿ ವ್ಯಕ್ತಿಗಳ ಭಾವನೆಗಳು ಹಾಗೂ ಮಾನಸಿಕ ತುಮುಲಗಳಿಗೆ ಒತ್ತುಕೊಡುತ್ತಾ ವ್ಯಕ್ತಿಯ ಕೌಟುಂಬಿಕ ಸಂಬಂಧಗಳನ್ನು ಆಳವಾಗಿ ವಿಶ್ಲೇಷಿಸುತ್ತವೆ. ಈ ಸಂಕಲನದ ಕಥೆಗಳನ್ನು, ಸ್ಥೂಲವಾಗಿ, ಎರಡು ವರ್ಗಗಳಲ್ಲಿ ನೋಡಬಹುದು. ವರ್ಷ ಇಡೀ ವಿಶ್ವವನ್ನು ಆಕ್ರಮಿಸಿರುವ ಕೊರೋನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಬರೆದಿರುವ ಕಥೆಗಳು ನಾಲ್ಕು ಹಾಗೂ ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ಹಿನ್ನಲೆಯಲ್ಲಿ ಬರೆದಿರುವ ಕಥೆಗಳು ಆರು. ಮೊದಲನೆಯ ವರ್ಗದ ಕಥೆಗಳಲ್ಲಿ ತುಂಬಾ ಹೃದಯಸ್ಪರ್ಶಿಯಾಗಿರುವ ಸಫಲ ಕಥೆಗಳೆಂದರೆ ‘ಬಿಡುಗಡೆ' ಮತ್ತು ‘ಹೊರಳು'. ಮಾನವೀಯತೆ ಕರೋನಾ ಕಾಲದಲ್ಲಿಯೂ ಗೆಲ್ಲುತ್ತದೆ ಎಂಬುದನ್ನು ಮನೋಜ್ಞವಾಗಿ ಈ ಕಥೆಗಳು ದಾಖಲಿಸುತ್ತದೆ.

ಎರಡನೆಯ ವರ್ಗದಲ್ಲಿ ಬರುವ ಆರು ಕಥೆಗಳಲ್ಲಿ ವ್ಯಕ್ತಿಯ ಭಾವಕೋಶದ ಆಳವಾದ ವಿಶ್ಲೇಷಣೆ ಮುಖ್ಯವಾಗುತ್ತದೆ. ಎಲ್ಲ ಕಥೆಗಳೂ ಕಥನದ ನೆಲೆಯಲ್ಲಿ ಸಫಲವಾದರೂ, ‘ಪಾರ್ಕ್' ಮತ್ತು ‘ಹುಡುಕಾಟ' ತನ್ನ ವಿಶಿಷ್ಟ ವಸ್ತುವಿನ ಕಾರಣದಿಂದ ಎದ್ದು ಕಾಣುತ್ತದೆ.

ಪ್ರಾರಂಭದಿಂದಲೂ ಪ್ರಸನ್ನ ಅವರ ಕಥೆಗಳನ್ನು ಹಾಗೂ ಅನುವಾದಗಳನ್ನು ಓದುತ್ತಿರುವ ನನಗೆ ವಸ್ತು ಹಾಗೂ ನಿರೂಪಣೆ ಇವೆರಡು ನೆಲೆಗಳಲ್ಲಿಯೂ ಅವರು ಸದಾ ಹೊಸತನದ ಹುಡುಕಾಟದಲ್ಲಿರುವ ಪರಿ ವಿಸ್ಮಯವನ್ನುಂಟುಮಾಡಿದೆ. ಸಂತೋಷವನ್ನು ಕೊಟ್ಟಿದೆ. ಇದೇ ಶೋಧ ಮುಂದುವರೆಯಲಿ."