ಬಿಸಿಲಿನಿಂದ ಮಕ್ಕಳ ರಕ್ಷಣೆ ಹೇಗೆ?

ಬಿಸಿಲಿನಿಂದ ಮಕ್ಕಳ ರಕ್ಷಣೆ ಹೇಗೆ?

ಮಾರ್ಚ್ ತಿಂಗಳ ಅಂತ್ಯದಲ್ಲಿರುವಾಗಲೇ ಬಿಸಿಲಿನ ಝಳ ರಾಜ್ಯಾದ್ಯಂತ ನಿರಂತರವಾಗಿ ಏರಿಕೆಯಾಗುತ್ತಿದೆ. ಅಲ್ಲಲ್ಲಿ ಸ್ವಲ್ಪ ಮಳೆ ಬಂದು ತಂಪಾದರೂ ಮರುದಿನದ ಬಿಸಿಲು ಮತ್ತಷ್ಟು ತೀಕ್ಷ್ಣವಾಗುತ್ತಿದೆ. ಈ ಬಿಸಿಲು ಹಿರಿಯರು, ಕಿರಿಯರು ಎಂಬ ಬೇಧಭಾವವಿಲ್ಲದೇ ದಹಿಸುತ್ತಿದೆ. ಹಿರಿಯರು ಹೇಗಾದರೂ ಸಹಿಸಿಕೊಂಡರೂ ಕಿರಿಯ ಮಕ್ಕಳಿಗೆ ಬಿಸಿಲಿನ ಝಳ ಅನೇಕ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಬೇಸಿಗೆಯ ಬಿರು ಬಿಸಿಲಿನಿಂದ ಪುಟ್ಟ ಮಕ್ಕಳನ್ನು ರಕ್ಷಿಸುವ ಕೆಲವೊಂದು ಉಪಾಯಗಳನ್ನು ಇಲ್ಲಿ ನೀಡಲಾಗಿದೆ. 

ಬಿಸಿಲಿನ ಝಳಕ್ಕೆ ಮಕ್ಕಳನ್ನು ಒಡ್ಡುವುದರಿಂದ ಅವರಿಗೆ ಸನ್ ಸ್ಟ್ರೋಕ್ ಆಗುವ ಸಾದ್ಯತೆ ಇದೆ. ದೇಹದಲ್ಲಿ ನೀರಿನ ಕೊರತೆಯಾಗಿ ನಿರ್ಜಲೀಕರಣ (ಡಿ ಹೈಡ್ರೇಷನ್) ಆಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ರೋಗವೂ ಬರುವ ಸಾಧ್ಯತೆ ಇದೆ. ಮನುಷ್ಯರ ಜೊತೆ ಪ್ರಾಣಿ ಪಕ್ಷಿಗಳೂ ಈ ಬಿಸಿಲಿನ ತಾಪಕ್ಕೆ ತತ್ತರಿಸುತ್ತಿವೆ. ಪುಟ್ಟ ಮಕ್ಕಳಲ್ಲಿ ಬಿಸಿಲಿನ ಕಾರಣ ಉರಿಮೂತ್ರ, ಬೆವರು ಗುಳ್ಳೆ ಇವೆಲ್ಲಾ ಸಾಮಾನ್ಯ ಸಂಗತಿಯಾಗಿದೆ. ಮಕ್ಕಳಿಗೆ ಈ ಸಮಯ ಶಾಲೆಗೆ ರಜೆಯೂ ಇರುವ ಕಾರಣ ಅವರು ಹೊರಗಡೆ ಹೋಗಿ ಆಡುವ ಸಂಗತಿ ಸರ್ವೇ ಸಾಮಾನ್ಯ. ಈ ಸಮಯದಲ್ಲಿ ಅವರು ತಲೆಗೆ ಟೊಪ್ಪಿ (ಹ್ಯಾಟ್) ಧರಿಸುವುದು, ಯಥೇಚ್ಛ ನೀರನ್ನು ಸೇವಿಸುವುದು ಮಾಡುವುದು ಅಗತ್ಯ. 

ಮಕ್ಕಳ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆಯಾಗದಂತೆ ಪೋಷಕರು ಎಚ್ಚರ ವಹಿಸಬೇಕು. ಮಕ್ಕಳಿಗೆ ಆಗಾಗ ನೀರು ಕುಡಿಯುವಂತೆ ನೆನಪಿಸಬೇಕು. ತಂಪು ನೀರು ಕುಡಿಯುವ ಬದಲು ಕುದಿಸಿ ಆರಿದ ನೀರನ್ನು ಅಥವಾ ತುಸು ಬೆಚ್ಚಗೆಯ ನೀರನ್ನು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ನೈಸರ್ಗಿಕ ಪಾನೀಯಗಳಾದ ಎಳನೀರು, ಕೋಕಂ ಶರಬತ್ತು, ಕಬ್ಬಿನ ರಸ ಇವುಗಳನ್ನು ಕುಡಿಯುವಂತೆ ಪ್ರೋತ್ಸಾಹಿಸಿ. ಅತಿಯಾದ ಸಕ್ಕರೆ ಅಂಶ ಹೊಂದಿರುವ ಕಾರ್ಬನೇಟಡ್ ಪಾನೀಯಗಳನ್ನು ಕುಡಿಯಲು ಬಿಡಬೇಡಿ. ಹಣ್ಣಿನ ರಸವನ್ನು ಕೊಡುವಾಗಲೂ ಸಕ್ಕರೆ ಪ್ರಮಾಣ ಅಧಿಕ ಬಳಸದಂತೆ ನೋಡಿಕೊಂಡು ಕುಡಿಸಿ.

ಮದ್ಯಾಹ್ನದ ಸಮಯದ ಬಿಸಿಲಿನಲ್ಲಿ ಹೊರಗಡೆ ಮಕ್ಕಳ ಜೊತೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ. ಮಕ್ಕಳಿಗೆ ಕಾಟನ್ (ಹತ್ತಿ) ಬಟ್ಟೆಯನ್ನು ಧರಿಸಿ. ಹತ್ತಿಯ ಬಟ್ಟೆಗಳು ಬೆವರನ್ನು ಹೀರಿ, ಮಕ್ಕಳ ದೇಹವನ್ನು ತಂಪಾಗಿ ಇಡುತ್ತದೆ. ಹತ್ತಿ ಬಟ್ಟೆಗಳು ಬೆವರಿನ ಗುಳ್ಳೆಗಳಾಗದಂತೆ ತಡೆಯುತ್ತದೆ. ಬೆವರನ್ನು ಹತ್ತಿಯ ಬಟ್ಟೆಯಿಂದ ಆಗಾಗ ಒರೆಸುತ್ತಿರಿ. ರಜೆಯ ಸಮಯದಲ್ಲಿ ನಾವು ಏನೇ ಮಾಡಿದರೂ ಮಕ್ಕಳು ಬಿಸಿಲಿನಲ್ಲಿ ತಿರುಗಾಡುವುದನ್ನು, ಆಟವಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಸ್ವಲ್ಪಮಟ್ಟಿನ ಬಿಸಿಲು ಮಕ್ಕಳ ಆರೋಗ್ಯಕ್ಕೆ ಹಿತಕರ. ಅದು ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿಯನ್ನು ಮಕ್ಕಳಲ್ಲಿ ಹೆಚ್ಚಿಸುತ್ತದೆ. 

ಮಕ್ಕಳ ಕಣ್ಣುಗಳನ್ನು ಬಿಸಿಲು ಮತ್ತು ಧೂಳಿನಿಂದ ರಕ್ಷಿಸಲು ಆದಷ್ಟು ಉತ್ತಮ ದರ್ಜೆಯ ತಂಪು ಕನ್ನಡಕ (ಕೂಲಿಂಗ್ ಗ್ಲಾಸ್) ವನ್ನು ಬಳಕೆ ಮಾಡಿ. ಒಳಾಂಗಣದ ಆಟಗಳನ್ನು ನಡು ಮದ್ಯಾಹ್ನದ ಬಿಸಿಲಿನ ಸಮಯದಲ್ಲಿ ಆಡಿ, ನಂತರ ಸಂಜೆಯ ಹೊತ್ತಿಗೆ ಹೊರಗಡೆ ಆಟವನ್ನು ಆಡುವುದು ಹಿತಕರ. ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಮಕ್ಕಳಿಗೆ ಪೋಷಕರು ತಿಳಿಸಬೇಕು. ಮಕ್ಕಳನ್ನು ಬಿಸಿಲಿನ ಬೇಗೆಯಿಂದ ರಕ್ಷಿಸಿ, ಅವರ ಆರೋಗ್ಯವನ್ನು ಕಾಪಾಡಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ