ಬೆಳಕಿನುತ್ಸವ ಬದುಕ

ಬೆಳಕಿನುತ್ಸವ ಬದುಕ

ಕವನ

ಬನ್ನಿ ಹಾಡೋಣ ಇಂದು

 ಈ ಬೆಳಕಿನುತ್ಸವಕೆ ಬಂದು|

ಮಗು ಮುಗ್ಧ ಬೆರಗಿನಲಿ

ಬಾಳ ನಿತ್ಯೋತ್ಸವಕೆ

   ಎದೆಯ ತೆರೆಯೋಣ ಇಂದು

   ನಾವಾಗಿ ಬೆಳಕೊಳೊಂದು!

 

ಈ ತೆರೆದೆದೆಯ ಬೆಳಕಿನಲ್ಲಿ

ತೋರೀತು ಇರವೆ ಅರಳಿ

ನಮ್ಮಂತರಾಳದೊಳ

ಬಾಳ ಬೆಳಕಿನ ಹಾಡೆ

    ಬದುಕಿನುತ್ಸವವು ಎಂದು

    ಎಲ್ಲ ಅದೆ ಬೆಳಕೊಳೊಂದು!

 

.ಹೊಂಬೆಳಕೆ ತಾನಾಗಿ ಅರಳಿ

ಕೋಟಿ ಸ್ವರ  ಲಹರಿಗಳಲಿ

ಮಿಡಿದೆದ್ದು ಜಗಕೆ ಜಗ

ಜೀವ ಜಾಲದಖಂಡ

   ಗಾನ ಸಮ್ಮೇಳವೊಂದು!

 

ಹೆಬ್ಬಳಕಿನುತ್ಸವವೆ ಬದುಕು

ಎಲ್ಲು ನಗೆ ನಲ್ಮೆ ತುಳುಕು

ಬಣ್ಣಬಣ್ಣದ ಬೆಳಕು

ಬೆರಗಿನೀ ಕಡಲಲ್ಲೆ

   ನಲಿಯೋಣ ಮುಳುಗಿ ಮಿಂದು!

 

ನಮ್ಮೆದೆಯ ಬೆಳಕಿನಲ್ಲಿ

ಈ ಕ್ಷಣ ಕ್ಷಣದ ಬದುಕು ಅರಳಿ

ನಳನಳಿಸದಿರೆ ಒಳಗೆ

ಬಾಳೇನು !ಕನಸು ಬರೆ

   ಬಗೆಯ ಬಂಧನಕೆ ಸಂದು!

     

(ಸಕಲ ಸೃಷ್ಟಿಗೆ ಕಾರಣವಾದ ವಿಶ್ವ ಚೇತನವೇ ನಮ್ಮೊಳಗಿರುವ ಅರಿವಿನ ಬೆಳಕು.ಅದೇ  ಸಚ್ಚಿದಾನಂದ .ಅದರ  ಅಭಿವ್ಯಕ್ತಿ ಯೇ (ಹಾಡು) ಬದುಕು, ಜಗತ್ತು ಎಂಬ ನಿತ್ಯೋತ್ಸವ.) 

  

 

ಚಿತ್ರ್