ಭವದ ಅಗುಳಿ

ಭವದ ಅಗುಳಿ

ಪುಸ್ತಕದ ಲೇಖಕ/ಕವಿಯ ಹೆಸರು
ಸಂತೋಷ ಅಂಗಡಿ
ಪ್ರಕಾಶಕರು
ಅನ್ವೇಷಣೆ ಪ್ರಕಾಶನ, ಚಿಕ್ಕಲಸಂದ್ರ, ಬೆಂಗಳೂರು -೫೬೦೦೬೧
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ : ೨೦೨೩

'ಭವದ ಅಗುಳಿ’ ಸಂತೋಷ ಅಂಗಡಿ ಅವರ ಕವನ ಸಂಕಲನ. ಈ ಕೃತಿಗೆ ಎಚ್.ಎಲ್. ಪುಷ್ಪ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಇಲ್ಲಿನ ಕವಿತೆಗಳಲ್ಲಿ ತಾನು ಕಂಡ, ಅರ್ಥೈಸಿಕೊಂಡ ಬದುಕನ್ನು ಹಿಡಿಯಲೆತ್ನಿಸುವ ಒಬ್ಬ ಕವಿಯಿದ್ದಾನೆ. ಇಲ್ಲ ಲೋಕ ಸಾಂಗತ್ಯದ ಜೊತೆಗೆ, ಅವನಿಗೆ ಆತ್ಮ ಸಾಂಗತ್ಯವೂ ಸಹ ಸಾಧ್ಯ. ಹೀಗಾಗಿ ಅವನು ಹೊರಗೂ, ಒಳಗೂ ಸಂವಾದಿಸಬಲ್ಲವನು. ಹೊರಗನ್ನು ಒಳಗೆ ತೆಗೆದುಕೊಳ್ಳುತ್ತಾ ತನ್ನ ಗ್ರಹಿಕೆಯ ಲೋಕಕ್ಕೆ ಪರಿಚಿತ ವಸ್ತು, ಶಬ್ದಗಳನ್ನು ಸೇರಿಸುತ್ತಾ ಓದುಗನನ್ನು ಒಳಗೊಳ್ಳುವ ಇನ್ನೊಂದು ಲೋಕವನ್ನು ಸೃಷ್ಟಿಸುತ್ತಾನೆ. ಇಲ್ಲ ಕವಿತೆಯೆಂಬುದು ಕವಿಯ ಇಹ-ಪರಗಳನ್ನು ತೆರೆದಿಡುವ ಲೋಕ. ಹೀಗಾಗಿಯೇ ಬರೆಯುವ ಸಂದರ್ಭದಲ್ಲಿ ಕವಿಗೂ, ಕವಿತೆಗೂ ಕಾಲದೇಶಗಳ ಚೌಕಟ್ಟಿರುತ್ತದೆ. ನಿಜವಾದ ಕವಿತೆ ಈ ಚೌಕಟ್ಟೆಂಬ ರೇಷ್ಮೆಯ ಗೂಡನ್ನು ಒಡೆದು ಸೀಮೋಲ್ಲಂಘನ ಮಾಡುತ್ತಾ ಚಿಟ್ಟೆಯಾಗಿ ಹಾರುತ್ತದೆ. ಕವಿ ಚಿಟ್ಟೆಯಾಗಲೇಬೇಕು. ಈ ಚಿಟ್ಟೆಯಾಗುವ ಕ್ರಿಯೆ ಸಂತೋಷ್ ಅವರ ಕವಿತೆಗಳಲ್ಲಿ ಕಂಡುಬರುತ್ತದೆ. ಪ್ರತಿ ಜೀವಿಗೂ ಅದರದೇ ಆದ ಆವರಣವಿದೆ. ಸತತವಾಗಿ ಆ ಅವರಣ ಒಡೆದು ಅವನು ಹೊರಬರಲು ಯತ್ನಿಸುತ್ತಲೇ ಇರುತ್ತಾನೆ. ಸಂತೋಷ ಅವರ ಬಹುತೇಕ ಕವಿತೆಗಳು ತಮ್ಮ ಚೌಕಣ್ಣನಿಂದಾಚೆ ಬಂದು ಸಂವಾದಿಸುವ ಕೆಲಸ ಮಾಡುತ್ತವೆ ಎಂದಿದ್ದಾರೆ ಕವಿ ಡಾ. ಎಚ್.ಎಲ್.ಪುಷ್ಪ.

೯೨ ಪುಟಗಳ ಈ ಪುಟ್ಟ ಪುಸ್ತಕದ ಬಗ್ಗೆ ಹಿರಿಯ ವಿಮರ್ಶಕ ಮೈಸೂರಿನ ಜಿ ಪಿ ಬಸವರಾಜು ಅವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದು ಹೀಗೆ... 

“ಇವತ್ತು ಸಂತೋಷ ಬರೀತಾಯಿದ್ದಾರೆ, ಬರೆಯುವ ಕವಿಗೆ ಯಾವಾಗಲೂ ತಡ ಆದಷ್ಟೂ ತಡ ಆದಷ್ಟೂ ದೊಡ್ಡ ದೊಡ್ಡ ಸವಾಲಿರುತ್ತೆ. ಇವತ್ತು ಬರೆಯುತ್ತಿರುವ ಕೆಲವು ಕವಿಗಳನ್ನು ಸುಮ್ಮನೆ ಹೆಸರಿಸುತ್ತೇನೆ ನೋಡಿ ಇತ್ತೀಚೆಗೆ ಬಹಳ ಶಕ್ತಿಯುತವಾಗಿ ಬರೀತಾಯಿರುವವರಲ್ಲಿ ಮೌಲ್ಯ ಸ್ವಾಮಿ,ರೇಣುಕಾ ರಮಾನಂದ,ಚೈತ್ರಾ ಶಿವಯೋಗಿಮಠ, ವೆಂಕಟ್ರಮಣ ಗೌಡ,ಭುವನಾ ಹಿರೇಮಠ,ಭಾಗ್ಯ ಜ್ಯೋತಿ ಗುಡಗೇರಿ,ಸುಮಿತ್ ಮೇತ್ರಿ,ಬಿ.ಆರ್.ಶೃತಿ,ಸಿದ್ದು ಸತ್ಯಣ್ಣವರ,ಪವಿತ್ರಾ ...ಇನ್ನೊಂದು ಸಾಲಿದೆ ಇವರಿಗಿಂತ ಹಿಂದಿನವರದ್ದು ಅದರಲ್ಲಿ ಕೆಲವು ವೀರಣ್ಣ ಮಡಿವಾಳರ,ಟಿ.ಎಸ್.ಗೊರವರ,ಆರೀಪ್ ರಾಜಾ,ಚಿದಾನಂದ ಸಾಲಿ, ಚಿದಾನಂದ ಕಮ್ಮಾರ,ಮಲ್ಲಿಕಾರ್ಜುನಗೌಡ ತೂಲಹಳ್ಳಿ,ಕಲ್ಲೇಶ್ ಕುಂಬಾರ್ ,ಈ ಪಟ್ಟಿಯನ್ನು ಇನ್ನೂ ಉದ್ದಕ್ಕೆ ಬೆಳೆಸಬಹುದು ಇವರಿಗೂ ಹಿಂದಿನ ತಲೆಮಾರಿನಲ್ಲಿ ಬರೆಯುವವರು ಲೆಕ್ಕವೇ ಇಲ್ಲದಷ್ಟು. ಇದನ್ನೆಲ್ಲಾ ಯಾಕೆ ನೆನಪಿಸಿಕೊಳ್ಳಬೇಕು ಅಂದ್ರೆ,ಬರೆಯುವರ ಮುಂದೆ ಹೊಸ ಹೊಸ ಸವಾಲಿರುತ್ತೆ.

ಪ್ರೆಶ್ ಆಗಿ ಬರಿಬೇಕು ಭಾಷೆ ಸವಕಲಾಗಿರಬಾರದು, ಜೊತೆಗೆ ರೂಪಕಗಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದಿರಬೇಕು. ಭಾಷೆಯಲ್ಲಿ ಲವಲವಿಕೆಯಿರಬೇಕು, ನಡೆಯಲ್ಲಿ ಚುರುಕುತನವಿರಬೇಕು ಇವೆಲ್ಲವೂ ಕಾವ್ಯಕ್ಕೆ ಸಂಬಂಧಿಸಿದ ಅಂಶಗಳು ಒಬ್ಬ ಕವಿ ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಬರಿಬೇಕಾದ್ರೆ ಅವನಿಗೆ ದಿಗಿಲಾಗಬೇಕು ಹೀಗೆ ದಿಗಿಲಾದ್ರೆ ಮಾತ್ರ ಬರಿಯೋಕೆ ಸಾಧ್ಯ. ದಿಗಿಲಿನಲ್ಲಿ ತನ್ನ ದಾರಿಯನ್ನು ಹುಡುಕಬೇಕು, ದಿಗಿಲುಗೊಳ್ಳದ ಕವಿ ಅವನು ಬಹಳ ಸಲೀಸಾಗಿ ಬರೆದುಕೊಂಡು ಹೋಗಿಬಿಡುತ್ತಾನೆ ಯಾರು ಸಲೀಸಾಗಿ ಬರೆದುಕೊಂಡು ಹೋಗಿಬಿಡುತ್ತಾನೋ ಅವನು ಕೆಟ್ಟ ಕವಿಯಾಗ್ತಾನೆ, ಅದನ್ನ ಲಂಕೇಶರು ಒಂದು ಕಡೆ ಹೇಳ್ತಾರೆ ನಿಸ್ಸಾರ ಅಹ್ಮದ್ ರವರ ಹಾಗೂ ಎ.ಕೆ.ರಮಾನುಜನ್ ರವರ ಒಂದೊಂದು ಪದ್ಯವನ್ನು ತೆಗೆದುಕೊಂಡು ಹೋಲಿಕೆ ಮಾಡುತ್ತಾ ನಿಸ್ಸಾರರು ಪ್ರಾಸ ಅನುಪ್ರಾಸ ಎಲ್ಲವನ್ನೂ ಇಟ್ಕೊಂಡು ಉದ್ದಕೆ ಪದ್ಯ ಬರೀತಾರೆ. ಎ.ಕೆ.ರಾಮಾನುಜನ್ ಬಹಳ ಚಿಕ್ಕದಾಗಿ ಹೀಗೆ ಬರೀತಾರೆ

ಶೋಕ ಷಟ್ಪದಿಯ
ನಡುವೆ
ಚಿಗುರು
ಮಾವಿನೆಲೆ ಮೂರು : ಹೀಗೆ ಬರೆದು ಮುಗಿಸಿಬಿಡುತ್ತಾರೆ, ಒಂದು ಕಾವ್ಯಕ್ಕೆ ಇರಬೇಕಾದ ಗುಣ ಏನು ಅಂದರೆ ಒಂದು ಸಂಕ್ಷಿಪ್ತತೆ ,ಹೇಳೋದನ್ನ ಬಹಳ ನಿಖರವಾಗಿ ಹೇಳೋ ನಿಖರತೆ ,ರೂಪಕಗಳ ಮೂಲಕ ಹೇಳಬೇಕು,ಇವೆಲ್ಲವನ್ನೂ ಯಾವ ಕವಿ ಸಮರ್ಥವಾಗಿ ಮಾಡುತ್ತಾನೋ ಅವನು ಉಳಿತಾನೆ , ಇವನ್ನೆಲ್ಲ ಅನುಸರಿಸದಿರುವವರು ಏನು ಆಗ್ತಾರೆ ಅಂದ್ರೆ ಹತ್ತರಲ್ಲಿ ಹನ್ನೊಂದು ಆಗ್ತಾರೆ.

ಒಂದು ಸಂತೋಷದ ಸಂಗತಿಯೆಂದರೆ ಈ "ಭವದ ಅಗುಳಿ"ಯ ಕವಿ ಇದ್ದಾರಲ್ಲ ಈ ಸಂತೋಷ ಇವರು ಹತ್ತರಲ್ಲಿ ಹನ್ನೊಂದನೆ ಕವಿಯಲ್ಲ ,ಇದು ಮೊದಲ ಸಂಕಲನ ಅಂತಾ ಹೇಳೋಕೂ ಆಗಲ್ಲ ಯಾಕೆ ಅಂದ್ರೆ ಆ ಪ್ರಬುದ್ಧತೆ ಇದೆಯಲ್ಲ ಭಾಷೆಯ ಬಳಕೆಯಲ್ಲಿ ಎಲ್ಲಾ ವಿಚಾರಗಳಲ್ಲೂ ಪ್ರೆಶ್ ಆಗಿರುವಂತಹ ಭಾಷೆ ಬಳಸಿದ್ದಾರೆ ಆಮೇಲೆ ಅವರು ನೋಡುವ ನೋಟವಿದೆಯಲ್ಲ ಅವರ ಗ್ರಹಿಕೆಯಲ್ಲಿ ಅದನ್ನು ನಿರೂಪಿಸುವ ಕ್ರಮದಲ್ಲಿ ಈ ಎಲ್ಲದರಲ್ಲೂ ಸಂಪೂರ್ಣವಾಗಿ ಒಂದು ಸ್ಥಿತಿಯನ್ನು ದಾಟಿದಂತಿದೆ. ಇದು ಪ್ರಾರಂಭಿಕ ಹಂತವಲ್ಲ ಮೊದಲ ಸಂಕಲನ ಅಂತಾ ನನಗೆ ಅನಿಸಲೇ ಇಲ್ಲ ಇದನ್ನ ಓದಿದಾಗ ಬಹಳ ಗಂಭೀರವಾದ ಒಬ್ಬ ಕವಿ ಕಾವ್ಯದ ಜೊತೆಗೆ ಮುಖಾ ಮುಖಿಯಾಗ್ತಾ ಇದ್ದಾನೆ, ಕಾವ್ಯದ ಜೊತೆಗೆ ಸಂವಾದ ನಡೆಸ್ತಾ ಇದ್ದಾನೆ ಇದನ್ನು ಗಂಭೀರ ಕೃತಿಯಾಗಿ ಕಟ್ಟಬೇಕೆಂಬ ಮಹತ್ವದ ಆಕಾಂಕ್ಷೆ ಇದೆ ಇದು ಈ ಸಂಕಲನದಲ್ಲಿ ಗೊತ್ತಾಗ್ತಾಯಿದೆ.

ಇಲ್ಲಿ ಭವದ ಅಗುಳಿ ಎನ್ನೋ ಶಬ್ದ ಇದೆಯಲ್ಲ ಇದು ತಮಗೆಲ್ಲ ಗೊತ್ತಿದೆ , " ಭವ" ಕೂಡಾ ನಿಮಗೆ ಗೊತ್ತಿದೆ. ಈ ಸಂಕಲನದ ಮುಖಪುಟದಲ್ಲಿ ಒಂದು ಚಿತ್ರವಿದೆ ಅದು ಏಕತಾರಿಯನ್ನು ನುಡಿಸುತ್ತಿರುವ ಚಿತ್ರ ಏಕತಾರಿ ಅಂದಾಕ್ಷಣ ನಿಮಗೆ ಗೊತ್ತಾಗಿಬಿಡುತ್ತದೆ ಈ ನಾದದ ನಡಿಗೆ ಇದೆಯಲ್ಲ ಅದು ಯಾವ ಕಡೆ ಅಂದರೆ ಅದು ಆಧ್ಯಾತ್ಮದ ಕಡೆಗೆ .

ಇದಕ್ಕೆ ಪುಷ್ಠಿ ನೀಡುವ ಹಾಗೆ ಇವರು ಸುಮ್ಮನೇ ಹೀಗೆ "ಭವದ ಅಗುಳಿ" ಅಂತಾ ಹೆಸರಿಟ್ಟಿದ್ದಾರಾ ..? ಭವದ ಬಾಗಿಲು ಅಂತಾ ಇಡಬಹುದಿತ್ತು ಹಾಗೆ ಇಟ್ಟಿಲ್ಲ "ಭವದ ಅಗುಳಿ" ಅಂತಾ ಇಟ್ಟಿದ್ದಾರೆ ಯಾಕೆ ಇಟ್ಟಿದ್ದಾರೆ ಅದು ? ಭವದ ಬಾಗಿಲು ಅಂದರೆ ಅದು ಮುಚ್ವಿರಲೂ ಬಹುದು ಅಥವಾ ತೆರೆದಿರಲೂ ಬಹುದು ಈ ಅಗುಳಿಯ ನೆನಪು ಯಾವಾಗ ಆಗುತ್ತೆ ಅಂದರೆ ಮುಚ್ಚಿದಾಗ ಆಗುತ್ತೆ ಅಗುಳಿಯನ್ನು ತೆಗೆ ,ಹಾಕು ,ಅಂತೆಲ್ಲ ಹೇಳ್ತಾರೆ ಸಾಮಾನ್ಯವಾಗಿ ಹಳ್ಳಿಗರ ಮನೆಗಳಲ್ಲಿ ರಾತ್ರಿಯಾದಾಗ ಬಾಗಿಲನ್ನು ಮುಚ್ಚಿ ಅಗುಳಿಯನ್ನು ಹಾಕ್ತಾರೆ ಆಗ ಒಳಗೆಲ್ಲ ಕತ್ತಲು ತುಂಬಿರುತ್ತೆ ಕಿಡಕಿ ಬಾಗಿಲುಗಳನ್ನು ಮುಚ್ಚಿದಾಗ ಗಾಳಿಯಾಡೋದಿಲ್ಲ ಇದರಿಂದ ಬಿಡುಗಡೆ ಆಗಬೇಕಾದರೆ ಅಗುಳಿಯನ್ನು ತೆರೆಯಬೇಕು ಯಾವ ಅಗುಳಿಯಂದರೆ " ಭವದ ಅಗುಳಿ " ಈ ಭವ ಎಂಬುದೇ ಕತ್ತಲು ಗಾಳಿಯಿಲ್ಲದ ಪರಿಸ್ಥಿತಿ, ಅನೇಕ ಸಂಕಷ್ಟಗಳು ಅನೇಕ ನೋವುಗಳು,ಈ ಅಗುಳಿಯನ್ನು ತೆಗೆದರೆ ಮಾತ್ರ ಹೊಸಬೆಳಕನ್ನು ಪಡೆಯುತ್ತೇವೆ ಹೊಸ ಗಾಳಿಯನ್ನು ಪಡೆಯುತ್ತೇವೆ, ಹೊಸ ನೋಟವನ್ನು ಪಡೆಯುತ್ತೇವೆ.

ಬದುಕಿನ ಬಗ್ಗೆ " ಎಂಬ ಸಾಲು ಮುಖ್ಯವಾದದ್ದು. ಯಾವುದೇ ಕವಿ ಬದುಕಿನ ಆಚೆಗೆ ಹೋಗಬಾರದು ಇಲ್ಲಿಯ ತುಡಿತ ಆಧ್ಯಾತ್ಮದ ಕಡೆಗೆ ಇದ್ದರೂ ಅದು ಬದುಕನ್ನು ಇಡಿಯಾಗಿ ತಬ್ಬಿಕೊಂಡೇ ಆಧ್ಯಾತ್ಮವನ್ನು ಧ್ಯಾನಿಸುತ್ತದೆ.

ಈ ಸಂಕಲನದಲ್ಲಿ "ವ್ಯಕ್ತಮಧ್ಯ" ಇದೆಯಲ್ಲ ಅದು ಬಹಳ ಮುಖ್ಯವಾದದ್ದು ಇಲ್ಲಿ ವ್ಯಕ್ತದ ಆಚೆಗೆ ಬಂದು ಈಚೆಗೆ ನೋಡುವುದು ಸರಿಯೇ ಆದರೂ ವ್ಯಕ್ತಮಧ್ಯದ ಬದುಕಿದೆಯಲ್ಲ ಇದು ಬಹಳ ಮುಖ್ಯವಾದದ್ದು ಇಂಥದ್ದನ್ನ ಹಿಡಿಯೋದಕ್ಕಾಗಿ ಒಬ್ಬ ತರುಣ ಕವಿ ಪ್ರಯತ್ನ ಮಾಡೋದಿದೆಯಲ್ಲ ಅದು ಬಹಳ ದೊಡ್ಡದು ಇಲ್ಲಿ ಆ ದೋಷವಿದೆ ಈ ದೋಷವಿದೆ ಅಂತಾ ಹೇಳಲಿಕ್ಕೆ ಅವಕಾಶವಿರಬಹುದು ಇಲ್ಲ ಅಂತೇನು ಹೇಳಲ್ಲ ಆದರೆ ಅಂತಾ ದೋಷಗಳ ಮಧ್ಯ ಕೂಡಾ ಕವಿಯೊಬ್ಬನ ಪ್ರಯತ್ನ ಚಿಂತನೆ ಉನ್ನತ ಮಟ್ಟದಲ್ಲಿ ಹೋಗುವಾಗ ನಾವು ಅಂತಹ ಕವಿಯನ್ನ ಸ್ವಾಗತಿಸಬೇಕು ಸಂತೋಷನನ್ನು ನಾವೆಲ್ಲ ಸೇರಿ ಸ್ವಾಗತಿಸೋಣ”