ಮಡದಿ ಮತ್ತೊಬ್ಬ ಚೆಲುವಗೆ

ಮಡದಿ ಮತ್ತೊಬ್ಬ ಚೆಲುವಗೆ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಮೀನಗುಂಡಿ ಸುಬ್ರಹ್ಮಣ್ಯ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. 50/-

ಡಾ. ಮೀನಗುಂಡಿ ಸುಬ್ರಹ್ಮಣ್ಯ ಅವರ ಜನಪ್ರಿಯ ಪುಸ್ತಕ “ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?” ಅದರ 2ನೇ ಭಾಗ ಈ ಪುಸ್ತಕ. ಇದರಲ್ಲಿವೆ ಒಂಭತ್ತು ವೃತ್ತಾಂತಗಳು ಮತ್ತು ಎರಡು ಲೇಖನಗಳು: “ವಿಪಶ್ಯನ ಧ್ಯಾನ ಶಿಬಿರ - ಒಂದು ಅನುಭವ” ಮತ್ತು “ವಿಜ್ನಾನಕ್ಕೆ ಅಪಚಾರ.”

ಹಲವರು ಮಾನಸಿಕ ಸಮಸ್ಯೆಯಿಂದ ಸಂಕಟ ಪಡುತ್ತಾ ಇರುತ್ತಾರೆ - ಒಂದೆರಡಲ್ಲ, ಹಲವಾರು ದಶಕಗಳ ಕಾಲ. ಇಲ್ಲಿನ ವೃತ್ತಾಂತಗಳನ್ನು ಓದಿದಾಗ ಅವರು ಎಷ್ಟು ಸುಲಭವಾಗಿ ತಮ್ಮ ಸಂಕಟ ಹೋಗಲಾಡಿಸಿಕೊಳ್ಳಬಹುದು ಎಂದು ಸ್ಪಷ್ಟವಾಗುತ್ತದೆ. ಅದಕ್ಕಾಗಿ, ನಮಗೆ ಹೊಟ್ಟೆನೋವು ಅಥವಾ ತಲೆನೋವು ಬಂದಾಗ ನಾವು ಡಾಕ್ಟರ್ ಬಳಿ ಹೋಗಿ ಚಿಕಿತ್ಸೆ ಪಡೆದು ಸಂಕಟದಿಂದ ಮುಕ್ತರಾಗುವಂತೆಯೇ ಮಾನಸಿಕ ಸಮಸ್ಯೆ ಇದ್ದಾಗಲೂ ಅದರಿಂದ ಮುಕ್ತರಾಗಲು ನಾವು ಸೈಕೊಥೆರಪಿಸ್ಟ್ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಮುನ್ನುಡಿಯಲ್ಲಿರುವ ಲೇಖಕರ ಸಲಹೆಗಳನ್ನು ಅನುಸರಿಸುವುದುಬಹಳ ಮುಖ್ಯ: “ವ್ಯಕ್ತಿಯೊಬ್ಬ ಇತರರೊಡನೆ ಮತ್ತು ತನ್ನೊಡನೆ ನಡೆದುಕೊಳ್ಳುವ ರೀತಿಯನ್ನು ವರ್ತನೆ ಎಂದು ಸ್ಥೂಲವಾಗಿ ವ್ಯಾಖ್ಯಾನಿಸ ಬಹುದು. ಸಮಾಜ ಮತ್ತು ಕಾನೂನು, ಈ ಎರಡರಲ್ಲಿ ಒಂದಾದರೂ ಒಪ್ಪಿಕೊಳ್ಳುವಂತೆ ತನಗೆ ಬೇಕಾದದ್ದನ್ನು ಪಡೆಯುವ ವರ್ತನೆಯನ್ನು ಯಶಸ್ವಿ ಎಂದೂ, ತನಗೆ ಬೇಕಾದದ್ದನ್ನು ಪಡೆಯದಂತಿರುವ ವರ್ತನೆಯನ್ನು ಅಯಶಸ್ವಿ ಎಂದು ಕರೆಯಲಾಗುತ್ತದೆ.

ಅಯಶಸ್ವಿ ವರ್ತನೆಗಳನ್ನು ಬದಲಾಯಿಸಲು ವೈಜ್ನಾನಿಕವಾಗಿ ಸಹಾಯ ಮಾಡುವ ತಂತ್ರ ಸೈಕೊಥೆರಪಿ. ಸೈಕೊಥೆರಪಿಯಲ್ಲಿ ಕೋಚಿಂಗ ಮತ್ತು  ಕೌನ್ಸೆಲಿಂಗ್ ಎಂಬ ಎರಡು ತಂತ್ರಗಳನ್ನು ಬಳಸಲಾಗುತ್ತದೆ. ಎಲ್ಲೆಡೆ ಪ್ರಚಾರದಲ್ಲಿರುವ “ಪರ್ಸನಾಲಿಟಿ ಡೆವಲಪ್‌ಮೆಂಟ್ ವರ್ಕ್-ಶಾಪ್‌”ಗಳಲ್ಲಿ (ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳಲ್ಲಿ) ಸಾಮಾನ್ಯವಾಗಿ ನಡೆಯುವುದು ಕೋಚಿಂಗ್, ಎಂದರೆ ಭಾಗಿಗಳಿಗೆ ಹೊಸ ಮಾಹಿತಿ ಪೂರೈಸಿ ಅದರಂತೆ ನಡೆದುಕೊಂಡರೆ ಅಯಶಸ್ವಿ ವರ್ತನೆಗಳನ್ನು ಇಲ್ಲವಾಗಿಸಬಹುದು ಎಂಬ ಮಾರ್ಗದರ್ಶನ. ಈ “ಕೋಚಿಂಗ್ ಕಾರ್ಯಾಗಾರ”ಗಳಲ್ಲಿ ಭಾಗವಹಿಸಿಯೂ ಅಯಶಸ್ವಿ ವರ್ತನೆಗಳನ್ನು ಹೋಗಲಾಡಿಸಿ ಕೊಳ್ಳಲು ಸಾಧ್ಯವಾಗದವರಿಗೆ ಕೌನ್ಸೆಲಿಂಗ್ ಬೇಕಾಗುತ್ತದೆ.”

"ಈ ಕೌನ್ಸೆಲಿಂಗ್ ಎಂಬುದು, ತುಂಬ ದುರ್ಬಳಕೆ ಮತ್ತು ಮಿಥ್ಯಾಕಲ್ಪನೆಗಳಿಗೆ ಒಳಗಾಗಿರುವ ಶಬ್ದ" ಎಂದು ಎಚ್ಚರಿಸುತ್ತಾರೆ ಲೇಖಕರು. 2001ನೆಯ ಇಸವಿಯಲ್ಲಿ, ಇವರು ಬರೆದಿರುವ ಕೆಲವು ಕೌನ್ಸೆಲಿಂಗ್ ಕಥೆಗಳು "ಮನಸ್ಸು ಇಲ್ಲದ ಮಾರ್ಗ" ಎಂಬ ಶೀರ್ಷಿಕೆಯಲ್ಲಿ ಕನ್ನಡದ ಒಂದು ಟಿ.ವಿ. ಚಾನೆಲಿನಲ್ಲಿ ಧಾರಾವಾಹಿಯಾಗಿ ಎಂಟು ಸಂಚಿಕೆ ಪ್ರಸಾರವಾದವು. ಏಳನೆಯ ಸಂಚಿಕೆ ಪ್ರಸಾರಗೊಂಡಾಗ ಧಾರಾವಾಹಿಯ ನಿರ್ದೇಶಕರಿಗೆ ಇದರ ಬಗ್ಗೆ ಬರೆದ್ ಪತ್ರವನ್ನು ಪರಿಷ್ಕರಿಸಿ, “ವಿಜ್ನಾನಕ್ಕೆ ಅಪಚಾರ” ಎಂದು ಈ ಪುಸ್ತಕದ ಕೊನೆಯಲ್ಲಿ ಪ್ರಕಟಿಸಿದ್ದಾರೆ. “ಸೈಕೊಥೆರಪಿಯ/ ಕೌನ್ಸೆಲಿಂಗ್‌ನ ವಾಸ್ತವಗಳಿಗೂ ಇದರ ಬಗ್ಗೆ ಇರುವ ಜನಸಾಮಾನ್ಯರ, ವಿಶೇಷತಃ ದೃಶ್ಯಮಾಧ್ಯಮಮಾನ್ಯರ ಕಲ್ಪನೆಗಳಿಗೂ ಇರುವ ವ್ಯತ್ಯಾಸ ವಿವರಿಸಿರುವ ಈ ಪತ್ರವನ್ನು ಮೊದಲು ಓದಿ, ನಂತರ ಪುಸ್ತಕದ ಉಳಿದ ವೃತ್ತಾಂತಗಳನ್ನು ಓದಿ” ಎಂಬುದು ಲೇಖಕರ ಸಲಹೆ.

ಇಲ್ಲಿ ವಿವರಿಸುವ ಪ್ರಸಂಗಗಳು ತನ್ನ ವೃತ್ತಿಯಲ್ಲಿ ನಡೆದವು ಎಂದು ತಿಳಿಸುವ ಲೇಖಕರು, “ಈ ಕಥನಗಳಲ್ಲಿ ವವರಿಸಿರುವ ಸಮಸ್ಯೆ ನಿಮಗೂ ಇದೆ ಎಂದಾದರೆ, ಆ ಪಾತ್ರದ ಜೊತೆ ನಿಮ್ಮನು ನೀವು ಗುರುತಿಸಿಕೊಳ್ಳಿರಿ. ಅಲ್ಲಿರುವ ಪ್ರಶ್ನೆಗಳಿಗೆ ಆ ಪಾತ್ರದ ಉತ್ತರದ ಬದಲು ನಿಮ್ಮ ಉತ್ತರ ಕಂಡುಕೊಂಡು ಸಮಸ್ಯೆಯಿಂದ ಮುಕ್ತರಾಗಬಹುದು" ಎಂದು ಸೂಚಿಸುತ್ತಾರೆ.

"ಕೆಲವು ಕಡೆ ಟಿಪ್ಪಣಿಗಳನ್ನು ಕೊಟ್ಟಿದ್ದೇನೆ. ಅವನ್ನು ಅನುಸರಿಸಿ ಆಯಾ ಸಮಸ್ಯೆಗಳಿಂದ ಬಿಡುಗಡೆ ಹೊಂದಬಹುದು. … ಈ ಪ್ರಯೋಗಗಳನ್ನು ಮಾಡಿಯೂ ನಿಮ್ಮ ಅಸಂಗತ ಅನುಭವಗಳು ಹೋಗಲಿಲ್ಲವೆಂದಾದರೆ ನಿಮ್ಮ ಹತ್ತಿರದ ಕ್ಲಿನಿಕಲ್ ಸೈಕಾಲಜಿಸ್ಟರನ್ನು ಭೇಟಿ ಮಾಡಿ" ಎಂಬುದು ಅವರ ಸಲಹೆ.
“ನಾಸ್ತಿಕನೊಳಗಿನ ಆಸ್ತಿಕ" ಎಂಬದು ದೇವರನ್ನು ನಂಬಬೇಕೋ ಬೇಡವೋ ಎಂಬ ದ್ವಂದ್ವದಿಂದ ತೊಳಲಾಡುವ ವ್ಯಕ್ತಿಗೆ ಅದರಿಂದ ಪಾರಾಗಲು ಲೇಖಕರು ಸಹಕರಿಸಿದ ವೃತ್ತಾಂತ. “ನೀವು ನನ್ನನ್ನು ಕೆಡಿಸ್ತೀರಿ!” - ಇದು ಅರ್ಥವಿಲ್ಲದ ಭಯವೊಂದನ್ನು ತಲೆಯಲ್ಲಿ ತುಂಬಿಕೊಂಡು ಮುಜುಗರ ಅನುಭವಿಸುತ್ತಿದ್ದ ಮಹಿಳೆಗೆ ಆ ವರ್ತನೆ ತೊರೆಯಲು ಲೇಖಕರು ನೆರವಾದ ಕಥನ.

ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಬಲವತ್ತರವಾದ ಒತ್ತಡ ಅನುಭವಿಸುತ್ತಿರುವವರು ಮತ್ತು ಆತ್ಮಹತ್ಯೆಗೆ ಪ್ರಯತ್ನಿಸಿ ಸೋತು ಬದುಕಿದವರು - ಈ ಎರಡೂ ವಿಧದ ಜನರಿಗೆ ನೀಡಬೇಕಾದ ಸೈಕಾಲಜಿ ಚಿಕಿತ್ಸೆಯನ್ನು ಸವಿಸ್ತಾರವಾಗಿ ಪ್ರಸ್ತುತಪಡಿಸಿದ್ದಾರೆ “ಸಾವಿನ ನದಿ" ವೃತ್ತಾಂತದಲ್ಲಿ. ಹಾಗೆಯೇ, ತೀರಿಕೊಂಡ ಮಗಳ ನೆನಪಿನಿಂದ ಹೊರಬರಲಾಗದೆ, ಅವಳ ನೋವನ್ನು ತನಗೇ ಆಹ್ವಾನಿಸಿಕೊಂಡು ಮಾನಸಿಕವಾಗಿ ಮತ್ತು ದೈಹಿಕವಾಗಿ ಅನಾರೋಗ್ಯದಿಂದ ಬವಣೆ ಪಡುತ್ತಿದ್ದ ತಾಯಿಯನ್ನು ಅದರಿಂದ ಪಾರು ಮಾಡಿದ ಪ್ರಕರಣ “ತಿಲೋದಕ.”

“ಗ್ ಗ್ ಗ್ ಗ್ ಗಣೇಶನು ಗಣೇಶನಾದನು” ಎಂಬುದು ಒಂದು ವಿಧದ ಉಗ್ಗು ಮಾತಿನ ವರ್ತನೆಯನ್ನು ಚಿಟಿಕೆ ಹೊಡೆಯುವಷ್ಟು ಸುಲಭವಾಗಿ ವಾಸಿ ಮಾಡಿದ ಕಥನ. “ಕನಸಿಗೆ ವಿದಾಯ” - ಇದು ನನಸಾಗದ ಕನಸಿಗೆ ಜೋತು ಬಿದ್ದು ಹಲುಬುವವನನ್ನು ಆ ಬಲೆಯಿಂದ ಬಿಡಿಸಿದ ವೃತ್ತಾಂತ. ತಾನೇ ಸೃಷ್ಟಿಸಿಕೊಂಡ ಮಾನಸಿಕ ತೊಡಕಿನಿಂದಾಗಿ ಯಾವುದೇ ಕೆಲಸವನ್ನು ಸರಿಯಾಗಿ ಮಾಡಲಾಗದೆ ಒದ್ದಾಡುವವನಿಗೆ ಅದರಿಂದ ಪಾರಾಗುವ ಚಿಕಿತ್ಸಾ ವಿಧಾನದ ವಿವರಣೆ “ಒಳಗಿನ ಆನೆ ಹೊರಟೇ ಹೋಯ್ತು”.

ಪುಸ್ತಕದ ಶೀರ್ಷಿಕೆ “ಮಡದಿ ಮತ್ತೊಬ್ಬ ಚೆಲುವಗೆ” ಮೊದಲನೆಯ ವೃತ್ತಾಂತ. ಒಬ್ಬ ವ್ಯಕ್ತಿಯ ವಿಚಿತ್ರ ಮಾನಸಿಕ ಸಮಸ್ಯೆಯನ್ನು "ಒಡವೆ ಅರಸಗೆ, ಒಡಲು ಅಗ್ನಿಗೆ, ಮಡದಿ ಮತ್ತೊಬ್ಬ ಚೆಲುವಗೆ" ಎಂಬ ಪುರಂದರದಾಸರ ಕೃತಿಯನ್ನು ದುಡಿಸಿಕೊಂಡು ಪರಿಹರಿಸಿದ ಕಥನ ಇದು.