ಮರೆಯಾಗುತ್ತಿರುವ ಪೂರ್ವ ಶಿಷ್ಟ ಕೃಷಿ ಪದ್ದತಿಗಳು (ಭಾಗ ೧)

ಮರೆಯಾಗುತ್ತಿರುವ ಪೂರ್ವ ಶಿಷ್ಟ ಕೃಷಿ ಪದ್ದತಿಗಳು (ಭಾಗ ೧)

ಕೃಷಿ ಕ್ಷೇತ್ರವು ಅನಾದಿಕಾಲದಿಂದ ಪೂರ್ವ ಶಿಷ್ಟ ಪದ್ದತಿಯ ಕಾನೂನು ಚೌಕಟ್ಟಿನಲ್ಲಿ ನಡೆದುಕೊಂಡು ಬಂದಿತ್ತು. ಈ ಪದ್ದತಿಯನ್ನು ಎಲ್ಲರೂ ಪಾಲಿಸಿಕೊಂಡು ಕೃಷಿ ಮಾಡಿದ್ದೇ ಆದರೆ ಎಲ್ಲರಿಗೂ ಕ್ಷೇಮ. ಹಾಗಾದರೆ ಏನಿದು ಪೂರ್ವ ಶಿಷ್ಟ ಪದ್ದತಿ? 

ಪೂರ್ವ ಶಿಷ್ಟ ಪದ್ದತಿ (Customs and Usages) ಎಂದರೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವ್ಯವಸ್ಥೆ. ಇದು  ಕಾನೂನಾತ್ಮಕವಾಗಿಲ್ಲದಿದ್ದರೂ ಇದನ್ನು ಕಾನೂನು ರಕ್ಷಕರು ಅಥವಾ ನ್ಯಾಯಾಲಯ ತಳ್ಳಿ ಹಾಕುವಂತಿಲ್ಲ. ಪೂರ್ವ ಪದ್ದತಿಗಳನ್ನು ಮೀರಿ ಕಾನೂನು ಅಲ್ಲ ಎಂಬುದನ್ನು ಸರ್ವೋಚ್ಚ ನ್ಯಾಯಾಯಲವೂ ಒಪ್ಪಿಕೊಳ್ಳುತ್ತದೆ. ಇವು ಬ್ರಿಟೀಷ್ ಸರಕಾರ ವ್ಯವಸ್ಥೆಯಲ್ಲಿ ಗವರ್ನರ್ ಜನರಲ್ ಗಳು ಕೊಡುತ್ತಿದ್ದ ತೀರ್ಮಾನ. ಇದು ಎಲ್ಲರೂ ಒಪ್ಪಿರುವ ನ್ಯಾಯಸಮ್ಮತವಾದ ಪದ್ದತಿ. ಅನಾದಿ ಕಾಲದಿಂದಲೂ ಇದು ಚಾಲ್ತಿಯಲ್ಲಿತ್ತು. ಇದನ್ನು ಪ್ರತೀಯೊಬ್ಬ ಕೃಷಿಕನೂ ಅನುಸರಿಸಿದ್ದೇ ಆದರೆ ಪರಸ್ಪರ ಜಗಳ, ತಕರಾರು ಇರುವುದಿಲ್ಲ. ಇಂತಹ ಪದ್ದತಿಯಲ್ಲಿ ಇರುವಂತಹ ಕೆಲವು ಸಂಗತಿಗಳ ಬಗ್ಗೆ ಇಲ್ಲಿ ಚರ್ಚಿಸೋಣ.

ಇಂದು ಪ್ರತೀಯೊಬ್ಬ ಕೃಷಿಕನೂ ಕ್ಷೇಮದಲ್ಲಿ ಇಲ್ಲ. ಕಾರಣ ನೆರೆಹೊರೆಯವರೊಂದಿಗೆ ಜಾಗದ ತಕರಾರು. ದಾರಿ ನೀರಿನ ತಕರಾರು ಇದು ಬಿಟ್ಟರೆ ಬೇರೆ ಅವರೊಳಗೆ ಯಾವುದೇ ಮನಸ್ತಾಪಗಳು ಇರುವುದಿಲ್ಲ. ಇದೆಲ್ಲಾ ಯಾಕೆ ಆಗುತ್ತದೆ ಎಂದರೆ ಪರಸ್ಪರರಲ್ಲಿ ಒಬ್ಬ ಈ “ಪೂರ್ವ ಶಿಷ್ಟ ಪದ್ದತಿ”ಯನ್ನು ಪಾಲಿಸಿರುವುದಿಲ್ಲ. ಇದು ಮತ್ತೊಬ್ಬನನ್ನು ಕೆಣಕುವಂತಾಗಿ ಪರಸ್ಪರ ಜಗಳಗಳು, ಕೋರ್ಟು ಕಚೇರಿ ಅಲೆದಾಟ ಪ್ರಾರಂಭವಾಗುತ್ತದೆ. ಜೀವಮಾನದ ಹೆಚ್ಚಿನ ಸಮಯವನ್ನು ನ್ಯಾಯ ಪಡೆಯುವುದಕ್ಕಾಗಿ ವ್ಯಯಿಸುವಂತಾಗುತ್ತದೆ. ಈ ವೈಮನಸ್ಸು ತಮ್ಮ ನಂತರದ ತಲೆಮಾರಿಗೂ ವರ್ಗಾವಣೆಯಾಗುವುದೂ ಇರುತ್ತದೆ. ಬಹುಷಃ ಕೃಷಿ ಕುಟುಂಬಗಳಲ್ಲಿ ನೆರೆಹೊರೆಯವರೊಡನೆ ಮುಸುಕಿನ ಗುದ್ದಾಟ ಇಲ್ಲದೆ ಇರುವ ಕುಟುಂಬಗಳೇ ಇರಲಿಕ್ಕಿಲ್ಲ. ಇನ್ನು ಬಹಿರಂಗ ಜಗಳ, ಹೊಡೆದಾಟಗಳು ಸಾಕಷ್ಟು ಇದೆ. ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲೂ ಇಂತವರ ಮನೆ ಎಲ್ಲಿ ಎಂದು ಆ ಮನೆಯ ನೆರೆಹೊರೆಯವನಲ್ಲಿ ಕೇಳಿದರೆ ಆತ ಗೊತ್ತಿಲ್ಲ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿದೆ. ಇದನ್ನು ಹಿಂದೆಲ್ಲಾ ಸ್ಥಳೀಯ ಹಿರಿಯರು, ಪಂಚಾಯಿತಿ (ಊರಿನ ಹಿರಿಯರು ಸೇರಿ ಮಾಡುವ ತೀರ್ಮಾನ) ಮಾಡುವವರು ಬಗೆಹರಿಸುತ್ತಿದ್ದರು. ಈಗ ಅದನ್ನು ಒಪ್ಪುವವರು ಇಲ್ಲ. ಜನ “ನೀನು ಎಂದರೆ ನಿನ್ನಪ್ಪ” ಎನ್ನುವಷ್ಟು ಮುಂದುವರಿದಿದ್ದಾರೆ. ಹಾಗಾಗಿ ಯಾರೂ ಈ ವಿಷಯದಲ್ಲಿ ಮಧ್ಯಪ್ರವೇಶಕ್ಕೆ ಬರುವುದೂ ಇಲ್ಲ. ಇದೆಲ್ಲವೂ ಪೋಲೀಸ್ ಸ್ಟೇಷನ್, ತಾಲೂಕು ಕಚೇರಿ ಕಚೇರಿ, ಏಸಿ ಕಚೇರಿ, ಡಿ ಸಿ ಕಚೇರಿ, ಕೋರ್ಟು ಇತ್ಯಾದಿ ವ್ಯವಸ್ಥೆಗಳ ಅಂಗಳಕ್ಕೆ ತಲುಪಿ ಅಲ್ಲಿ ವಾದ ವಿವಾದಗಳೇರ್ಪಟ್ಟು ತೀರ್ಮಾನ ಅಗದ ಸ್ಥಿತಿಯಲ್ಲೇ ಮುಂದುವರಿಯುತ್ತಾ ಇದೆ. ಇಂತಹ ಮೂಲಭೂತ ಸಮಸ್ಯೆಗಳಿಗೆ ಕಾನೂನಾತ್ಮಕ ಚೌಕಟ್ಟು ಇಲ್ಲದೆ ವಿನಹ ಕೃಷಿಕರು ನೆಮ್ಮದಿಯಲ್ಲಿ ಬದುಕಲು ಸಾಧ್ಯವಿಲ್ಲ.

ಇಂತಹ ಕೆಲವು ಪೂರ್ವ ಶಿಷ್ಟ ಪದ್ದತಿಗಳ ಬಗ್ಗೆ ತಿಳಿದುಕೊಳ್ಳುವುದು ಪ್ರತೀಯೊಬ್ಬ ನಾಗರೀಕನ ಕರ್ತವ್ಯ. ಇದನ್ನು ಪ್ರತೀಯೊಬ್ಬರೂ ಗೌರವಯುತವಾಗಿ ಪಾಲಿಸಿದರೆ ಇತ್ತಂಡಗಳಿಗೂ ಕ್ಷೇಮ. ಇಬ್ಬರ ಜಗಳದಲ್ಲಿ ಬೇರೆಯವರಿಗೆ ಲಾಭವಾಗುತ್ತದೆಯೇ ವಿನಹ ಜಗಳ ಮಾಡಿದವರಿಗೆ ಕೊನೆಗೂ ಸಮಸ್ಯೆ ಪರಿಹಾರ ಆಗುವುದಿಲ್ಲ. ಯಾರೂ ಹುಟ್ಟುವಾಗ ಭೂಮಿಯನ್ನು ಜೊತೆಗೆ ತರುವುದಿಲ್ಲ. ಹೋಗುವಾಗ ಒಯ್ಯುವುದೂ ಇಲ್ಲ. ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ನಾವು ಮಾಡಿಟ್ಟದ್ದನ್ನು ಮುಂದುವರಿಸಿಯಾರೂ ಎಂಬ ಆಕಾಂಕ್ಷೆ ಯಾರಿಗೂ ಬೇಡ. ಹಾಗಾಗಿ ನಮ್ಮ ಪೂರ್ವಜರಿಂದ ಲಾಗಾಯ್ತು ನಡೆದುಕೊಂಡು  ಬಂದ ಪೂರ್ವ ಶಿಷ್ಟ ಪದ್ದತಿಗಳನ್ನು ಪಾಲಿಸಿ ಬದುಕುದು ಉತ್ತಮ.

ದಾರಿ, ರಸ್ತೆಗಳು: ಪ್ರತೀಯೊಬ್ಬನ ಮನೆಗೆ ಹೊಲಕ್ಕೆ ಹೋಗಲು ಕಾಲು ದಾರಿ ಎಂಬುದು ಅವನ ಮೂಲಭೂತ ಹಕ್ಕು. ಇದನ್ನು ಬಹುತೇಕ ಎಲ್ಲಾ ಕಡೆಯಲ್ಲೂ ಭೂಮಿಯನ್ನು ವಿಂಗಡಿಸಿಕೊಡುವಾಗ ಮೀಸಲು ಇಟ್ಟಿರುತ್ತಾರೆ. ಕಾಲು ದಾರಿ ಹಕ್ಕಿಗೆ ಇರುವುದು ೫ ಲಿಂಕ್ಸ್  ಅಗಲದ ಪ್ರದೇಶ. ಮೂಲತಹ ಇದನ್ನು ಭೂಮಿ ಮಂಜೂರು ಮಾಡುವಾಗ ನಕಾಶೆಯಲ್ಲಿ ಕೆಂಪು  ಗೆರೆಯಲ್ಲಿ ತೋರಿಸಿರುತ್ತಾರೆ. ಹಾಗೆಯೇ ಪಹಣಿಯಲ್ಲಿ  ಹಕ್ಕುಗಳು ಕಾಲಂ ನಲ್ಲಿ ಇದನ್ನು ಬರೆದಿರುತ್ತಾರೆ. ಹಕ್ಕು ಪತ್ರ D Form ನಲ್ಲಿ ಇದನ್ನು ಬರೆದಿರುತ್ತಾರೆ. ಇದನ್ನು ಪ್ರತೀಯೊಬ್ಬನೂ ಬಿಡಬೇಕು. ಹಾಗೆಂದು ಕೃಷಿ ಭೂಮಿಯ ಮಧ್ಯದಲ್ಲಿ ಈ ಕಾಲು ದಾರಿ ಹಾದು ಹೋಗುತ್ತಿದ್ದರೆ ಅದನ್ನು ಒಂದು ಒತ್ತಟ್ಟಿಗಿರುವಂತೆ ಮಾಡಿಕೊಡಲು ಅವಕಾಶ ಇರುತ್ತದೆ. ಈ ರೀತಿ ಬದಲಾವಣೆ ಮಾಡುವಾಗ ಅದು ತೀರಾ ಸುತ್ತು ಆಗಿರಬಾರದು.

ದಾಖಲೆಯಲ್ಲಿ ದಾರಿ ಇಲ್ಲದಿದ್ದ ಪಕ್ಷದಲ್ಲೂ ಒಂದು ಮನೆಗೆ ಅಥವಾ ಮುದಿನ ಊರಿಗೆ ನಡೆದುಕೊಂಡು ಹೋಗಲು ದಾರಿಯೇ ಇಲ್ಲದಿದ್ದ ಪಕ್ಷದಲ್ಲಿ, ಅನಾದಿ ಕಾಲದಿಂದಲೂ ದಾಖಲೆ ರಹಿತವಾಗಿ ಆಲ್ಲೇ ನಡೆದು ಹೋಗುತ್ತಿದ್ದರೆ ಅದು ಸಹ ಮುಚ್ಚಬಹುದಾದ ದಾರಿ ಅಲ್ಲ.

ರಸ್ತೆಗಳ ವಿಚಾರದಲ್ಲಿ ಹಿಂದೆ ಕೆಲವೇ ಕೆಲವು ಕಡೆ ಮಾತ್ರ ಇದನ್ನು ದಾಖಲೆಯಲ್ಲಿ ನಮೂದಿಸಲಾಗಿತ್ತಾದರೂ ಈಗ ಅಂದರೆ ಸುಮಾರು ೨೦ ವರ್ಷಗಳಿಂದ ಸ್ಥಳ ವಿಂಗಡನೆ ಮಾಡುವಾಗ ರಸ್ತೆಯ ಹಕ್ಕನ್ನು(೧೫೦ ಲಿಂಕ್ಸ್) ಇಟ್ಟಿರುತ್ತಾರೆ. ಹಿಂದಿನಿಂದಲೂ  ಇದ್ದ ರಸ್ತೆ, ಈಗ ಊರ್ಜಿತದಲ್ಲಿರುವ  ಉಪಯೋಗವಾಗುತ್ತಿರುವ ರಸ್ತೆಗಳನ್ನು ಹಕ್ಕಿನಲ್ಲಿ ನಮೂದಿಸಲ್ಪಡದಿದ್ದರೂ ಅದನ್ನು ಮುಚ್ಚುವಂತಿಲ್ಲ.

(ಇನ್ನೂ ಇದೆ)

ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ