ಮರ್ಯಾದ ಹತ್ಯೆಯಲ್ಲ ಮನುಷ್ಯತ್ವದ ಹತ್ಯೆ..!

ಮರ್ಯಾದ ಹತ್ಯೆಯಲ್ಲ ಮನುಷ್ಯತ್ವದ ಹತ್ಯೆ..!

ಬೇರೆ  ಜಾತಿಯವನನ್ನು ಮಗಳು ಪ್ರೀತಿಸಿದಳು ಎಂಬ ಕಾರಣಕ್ಕಾಗಿ ಸ್ವಂತ ಮಗಳನ್ನೇ ಉಸಿರುಗಟ್ಟಿಸಿ ಕೊಂದ ವೀರ ತಂದೆ. ಇದು ಯಾರೋ ಎಂದೋ ಮಾಡಿದ್ದಲ್ಲ.‌ ಈ ಕ್ಷಣದ ಸುದ್ದಿ ಮತ್ತು ಈಗಲೂ ನಮ್ಮೊಳಗೆ ಅನೇಕರಲ್ಲಿ ಆ ವೀರತ್ವ ಸದಾ ಜಾಗೃತವಾಗಿದೆ ಜಾತಿಗಾಗಿ. 

ಮತ್ತೊಂದು ಅಂತಹ ಆತ್ಮಕಥನವನ್ನು ಆ ವೀರನಿಂದಲೇ ಕೇಳಿ. ಮಂಜೇಗೌಡನೆಂಬ ನಾನು… ಇಂದಿಗೆ ಮೂರು ವರ್ಷಗಳ ಹಿಂದೆ ಇದೇ ದಿನ ಚಾಕುವಿನಿಂದ ನನ್ನ ಕೈಯಾರೆ ನಾನೇ ನನ್ನ 6 ತಿಂಗಳ ಗರ್ಭಿಣಿ ಅಕ್ಕ ಸುಮಂಗಳ ಮತ್ತು ಅವಳ ಗಂಡನೆಂದು ಹೇಳಲಾದ (ಅದನ್ನು ಪ್ರಾಣ ಇರುವವರೆಗೂ ಒಪ್ಪುವುದಿಲ್ಲ) ದಲಿತನಾದ ಕರಿಯ ನವೀನನನ್ನು ಕೊಡಲಿಯಿಂದ ಕೊಚ್ಚಿ ಕೊಂದು ಬಿಟ್ಟೆ. ಮಾರನೆಯ ದಿನ ಪೋಲೀಸರಿಗೂ ಶರಣಾದೆ. ಈಗಲೂ ಜೈಲಿನಲ್ಲಿಯೇ ಜೀವನ ಕಳೆಯುತ್ತಿದ್ದೇನೆ. ನೀವು ತಿಳಿದಂತೆ ಅದಕ್ಕಾಗಿ ನಾನು ಪಶ್ಚಾತ್ತಾಪ ಪಡುತ್ತಿಲ್ಲ. ನನ್ನ ವಂಶದ ಮತ್ತು ಗೌಡರ ಜಾತಿಯ ಗೌರವ ಮರ್ಯಾದೆ ಕಾಪಾಡಿದ ಹೆಮ್ಮೆ ನನಗಿದೆ. ಭಾರತದ ಸಂಸ್ಕೃತಿಯ ಬೇರುಗಳು ಇರುವುದೇ ಇಲ್ಲಿನ ಜಾತಿ ವ್ಯವಸ್ಥೆಯ ಶ್ರೇಷ್ಠತೆಯ ಮೇಲೆ ಅಲ್ಲವೇ?

ನಮ್ಮ ವಂಶದಲ್ಲಿ ನಮ್ಮ ಚಿಕ್ಕಪ್ಪ ದೊಡ್ಡಪ್ಪ ಎಲ್ಲರಿಗೂ ಗಂಡು ಸಂತಾನಗಳೇ ಆಗಿತ್ತು. ಅದಕ್ಕೆ ಅಪವಾದ ಎಂಬಂತೆ ನಮ್ಮ ಮನೆಯಲ್ಲಿ ಒಂದು ಹೆಣ್ಣು ಮಗು ಜನಿಸಿತು. ಇಡೀ ವಂಶವೇ ಸಂಭ್ರಮ ಪಟ್ಟಿತಂತೆ. ಆಕೆಗೆ ಸುಮಂಗಳ ಅಂತ ಹೆಸರಿಟ್ಟು ಇಡೀ ಹಳ್ಳಿಗೇ ಊಟ ಹಾಕಿಸಿ ನಮ್ಮಪ್ಪ ಖುಷಿ ಪಟ್ಟರಂತೆ. ಆಕೆ ಹುಟ್ಟಿದ 4 ವರ್ಷದ ನಂತರ ನಾನು ಹುಟ್ಟಿದೆ‌. ನನಗೆ ನೆನಪಿರುವುದೇ ನಾನು ನನ್ನ ಅಕ್ಕನ ತೋಳ್ತೆಕ್ಕೆಯಲ್ಲಿ ಆಡುತ್ತಾ ಬೆಳೆದದ್ದು. ನಮ್ಮದು ಕೃಷಿ ಮನೆತನ. ಅಪ್ಪಾ ಅಮ್ಮ ಎಲ್ಲಾ ತೋಟದ ಕೆಲಸಗಳಿಗೆ ಹೋಗುತ್ತಿದ್ದರು. ನನ್ನ ಎಲ್ಲಾ ಜವಾಬ್ದಾರಿ ಅಕ್ಕನದೇ ಆಗಿತ್ತು. ನಾನು ಸದಾ ಅಕ್ಕನ ಕಂಕುಳಲ್ಲಿಯೇ ಇರುತ್ತಿದ್ದೆ. ಎಷ್ಟೋ ಬಾರಿ ಆಕೆ ಶಾಲೆಗೂ ಕೂಡ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು. ಮೇಷ್ಟ್ರುಗಳು ಬೈದರೂ ತೊಡೆಯ ಮೇಲೆ ಮಲಗಿಸಿಕೊಂಡಿರುತ್ತಿದ್ದಳು.

ನಮ್ಮದು ಚಾಮರಾಜನಗರ. ಆಕೆ ತುಂಬಾ ವಿದ್ಯಾವಂತೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ  ಮೈಸೂರಿನ ಕಾಲೇಜು ಸೇರುವವರೆಗೂ ನನಗೆ ಆಕೆಯೇ ಸ್ನಾನ ಊಟ ಮಾಡಿಸುತ್ತಿದ್ದಳು. ಆಕೆ ಮೈಸೂರಿನ ಹಾಸ್ಟೆಲ್ ಸೇರಿ ವಾರಕ್ಕೆ ಒಮ್ಮೆ ಮನೆಗೆ ಬರುತ್ತಿದ್ದಳು. ಪ್ರತಿ ವಾರ ಆಕೆ ಹೊರಡುವಾಗಲು ಆಕೆಯ ಜೊತೆ ಹೋಗಲು ರಂಪಾಟ ಮಾಡುತ್ತಿದ್ದೆ. ಹೀಗೆ ಕೆಲವು ‌ವರ್ಷಗಳು ಉರುಳಿದವು. ಆಕೆ ಎಂ ಎ (ಅರ್ಥಶಾಸ್ತ್ರ) ಅಂತಿಮ ವರ್ಷದಲ್ಲಿ ಓದುತ್ತಿದ್ದಳು. ನಾನು ಚಾಮರಾಜನಗರದಲ್ಲಿಯೇ ಎರಡನೇ ವರ್ಷದ ಬಿಎಸ್ಸಿ ಓದುತ್ತಿದ್ದೆ.

ಬರಸಿಡಿಲು ಬಡಿದ ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ಅಂದು ಶುಕ್ರವಾರ. ಸಂಜೆ 5 ಗಂಟೆಗೆ ನಾನು ಕಾಲೇಜು ಮುಗಿಸಿ ಮನೆಗೆ ಬಂದೆ. ಅಪ್ಪ ವ್ಯಗ್ರವಾಗಿದ್ದರು. ಅಮ್ಮ ತಲೆ ಚಚ್ಚಿಕೊಂಡು ಆಳುತ್ತಿದ್ದರು. ನಮ್ಮ ಚಿಕ್ಕಪ್ಪ ದೊಡ್ಡಪ್ಪಂದಿರು ಅಕ್ಕನನ್ನು ಕೆಟ್ಟ ಮಾತಿನಿಂದ ಬೈಯುತ್ತಿದ್ದರು. ನನಗೆ ವಿಷಯ ತಿಳಿಯಬಾರದೆಂದು ಅವರು ಪ್ರಯತ್ನಿಸಿದರು ನನಗೆ ಎಲ್ಲವೂ ಅರ್ಥವಾಯಿತು.

ಅಕ್ಕ ಮೈಸೂರು ಮಡಿಕೇರಿ ನಡುವೆ ಓಡಾಡುತ್ತಿದ್ದ KSRTC ಬಸ್ ನ ಕಂಡಕ್ಟರ್ ನನ್ನು ಪ್ರೀತಿಸುತ್ತಿದ್ದಳು. ಅವನ ಜೊತೆ ಓಡಾಡುತ್ತಿದ್ದಳು. ಅವನನ್ನೇ ಮದುವೆಯಾಗುತ್ತೇನೆ ಎಂದು ತೀರ್ಮಾನಿಸಿದ್ದಳು. ಇದು ಮನೆಯವರಿಗೆ ತಿಳಿದ ಮೇಲೆ ಪರೀಕ್ಷೆ ನೆಪ ಹೇಳಿ ಒಂದು ತಿಂಗಳಿನಿಂದ ಮನೆಗೆ ಬಂದಿರಲಿಲ್ಲ. ಅಪ್ಪ ಓದು ಮುಗಿದ ತಕ್ಷಣ ಆಕೆಗೆ ಮದುವೆ ಪ್ರಸ್ತಾಪ ಮಾಡಿದ್ದರಿಂದ ಆಕೆಯೇ ಇದನ್ನು ತಿರಸ್ಕರಿಸಿ ಅಪ್ಪನಿಗೆ ದೀರ್ಘ ಪತ್ರ ಬರೆದಿದ್ದಳು.

ನನಗೆ ಮೊದಲಿಗೆ ಸರಿಯಾಗಿ ಅರ್ಥವಾಗಲಿಲ್ಲ. ಪ್ರಾಣಕ್ಕಿಂತ ಹೆಚ್ಚಾಗಿ ನಾನು ಪ್ರೀತಿಸುವ ಅಕ್ಕನ ಸ್ವಾತಂತ್ರ್ಯಕ್ಕೆ ಇವರೇಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕೋಪ ಬಂತು. ಆದರೆ ಅಪ್ಪ ಅಮ್ಮ ನಿಜ ವಿಷಯ ತಿಳಿಸಿದಾಗ ಅಕ್ಕನ ಬಗ್ಗೆ ಕೋಪ ಬಂತು. ಪ್ರೀತಿ ಮಾಯವಾಗಿ ಅವಳ ಬಗ್ಗೆ ಅಸಹ್ಯ ಮೂಡಿತು. ಏಕೆ ಗೊತ್ತೆ. ಅತ್ಯಂತ ಬೆಳ್ಳಗಿನ ಸುಂದರಿಯಾಗಿದ್ದ ಅಕ್ಕ ಕಪ್ಪು ಬಣ್ಣದ ಅತ್ಯಂತ ಕೀಳು ಹೊಲೆ ಮಾದಿಗ ಜಾತಿಯ ಒಂದು ಹಳ್ಳಿಯ ಕೂಲಿ ಕಾರ್ಮಿಕನ ಮಗ ನವೀನ ಎಂಬ ಕಂಡಕ್ಟರ್ ಅನ್ನು ಪ್ರೀತಿಸುತ್ತಿದ್ದಳು.

ಇದಕ್ಕಿಂತ ಅವಮಾನ ಇನ್ನೊಂದಿದೆಯೇ. ಗೌಡರ ನಮ್ಮ ವಂಶ ಎಲ್ಲಿ. ದಲಿತನಾದ ಅವನ ಜಾತಿ ಎಲ್ಲಿ? ಕೆಲವೇ ದಿನಗಳಲ್ಲಿ ಒಂದು ಪ್ಲಾನ್ ಮಾಡಿಕೊಂಡು ನಾನು ಅಪ್ಪ ಚಿಕ್ಕಪ್ಪ ಅಕ್ಕನಿಗೆ ಗೊತ್ತಿಲ್ಲದಂತೆ ಸಂಜೆ ಅವಳಿದ್ದ ಹಾಸ್ಟೆಲ್ ಗೆ ಹೋಗಿ ಈ ಕ್ಷಣವೇ ಮನೆಗೆ ಹೊರಡಲು ಹೇಳಿದೆವು. ಆಕೆ ಇನ್ನೂ ಎರಡು ವಿಷಯಗಳ ಪರೀಕ್ಷೆ ಇದೆ ಆಮೇಲೆ ಬರುತ್ತೇನೆ ಎಂದಳು. ಅಪ್ಪನಿಗೆ ಪಿತ್ತ ನೆತ್ತಿಗೇರಿತು‌. ಆಕೆಯ ಸ್ನೇಹಿತರು ವಾರ್ಡನ್ ಮುಂದೆಯೇ ಅಪ್ಪ ಆಕೆಯ ತಲೆ ಕೂದಲು ಹಿಡಿದು ಸರಿಯಾಗಿ ಬಾರಿಸಿದರು. ನಾನು ಮತ್ತು ಚಿಕ್ಕಪ್ಪ ಸಹ ಕಾಲಿನಿಂದ ಒದ್ದು ಧರಧರ ಎಳೆದುಕೊಂಡು ಆವಳ ಬಟ್ಟೆ ಪುಸ್ತಕ ಎತ್ತಿಕೊಂಡು ಮೈಸೂರಿನಿಂದ ಬಸ್ಸಿನಲ್ಲಿ ಊರಿಗೆ ಕರೆದುಕೊಂಡು ಬಂದು ಮನೆಯಲ್ಲಿ ಕೂಡಿ ಹಾಕಿದೆವು. ಪರೀಕ್ಷೆ ಬರೆಯಲು ಬಿಡಲಿಲ್ಲ. ಪರೀಕ್ಷೆಗಿಂತ ನಮಗೆ ನಮ್ಮ ಜಾತಿಯ ಗೌರವವೇ ಮುಖ್ಯ ಅಲ್ಲವೇ? ಊರಿನಲ್ಲಿಯೇ ತೋಟದ ಕೆಲಸ ಮಾಡಿಕೊಂಡಿದ್ದ ನಮ್ಮ ಮಾವನ ಮಗನಿಗೆ ಏನೋ ಸುಳ್ಳು ಹೇಳಿ ಕೇವಲ ಎರಡೇ ತಿಂಗಳಲ್ಲಿ ಅಕ್ಕನಿಗೆ ಮದುವೆ ಮಾಡುವ ಏರ್ಪಾಡು ಮಾಡಿದೆವು. 

ಆದರೆ ಮದುವೆಗೆ ಕೇವಲ ಒಂದು ವಾರ ಇರುವಾಗ ಅಕ್ಕ ಯಾವ ಮಾಯೆಯಲ್ಲೋ ಮನೆಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಳು. ನಮಗೆ ಮೈ ಉರಿದು ಹೋಯಿತು. ಎಲ್ಲೆಲ್ಲೋ ಹುಡುಕಿ ಕೊನೆಗೆ ನವೀನನ ಮನೆಗೆ ಹೋದೆವು. ಅಲ್ಲಿಯೂ ಇರಲಿಲ್ಲ. ಅವರ ಅಪ್ಪ ಅಮ್ಮನಿಗೆ ಸರಿಯಾಗಿ ಭಾರಿಸಿ ಬಂದೆವು. ಅಪ್ಪ ಅವಳು ನಮ್ಮ ಪಾಲಿಗೆ ಸತ್ತಂತೆ ಎಂದು ಸುಮ್ಮನಾದರು. ನನಗೆ ಮಾತ್ರ ನಿದ್ದೆ ಹತ್ತಲಿಲ್ಲ. ನನಗೆ ಗೊತ್ತಿರುವ ಎಲ್ಲರಿಗೂ ಹೇಳಿ ಎಲ್ಲಾ ಕಡೆ ಹುಡುಕ ತೊಡಗಿದೆ. ನವೀನ ಸರ್ಕಾರಿ ಕಂಡಕ್ಟರ್ ಆಗಿದ್ದರೂ ಕೆಲಸವನ್ನೂ ಬಿಟ್ಟು ಓಡಿ ಹೋಗಿದ್ದ. ಇಬ್ಬರೂ ಮೇಜರ್ ಆಗಿದ್ದರಿಂದ ಪೋಲೀಸ್ ಕಂಪ್ಲೇಂಟ್ ಕೊಡಲಿಲ್ಲ.

ಸುಮಾರು ಹತ್ತು ತಿಂಗಳ ನಂತರ ಒಬ್ಬರಿಂದ ಸುದ್ದಿ ಬಂತು. ಬೆಂಗಳೂರಿನಲ್ಲಿ ಇಬ್ಬರೂ ಒಂದು ಮನೆ ಮಾಡಿ ಇದ್ದಾರೆ ಎಂದು. ಮನೆಯ ವಿಳಾಸ ಪತ್ತೆ ಹಚ್ಚಿ ಏನಾದರೂ ಮಾಡಿ ಅಕ್ಕನನ್ನು ಅವನಿಂದ ಬಿಡಿಸಿ ಕರೆದುಕೊಂಡು ಬರಲು ಪ್ರಯತ್ನಿಸಿದೆ. ಅವಳಿಗೆ ಪ್ರೀತಿಗಿಂತ ಜಾತಿಯ - ವಂಶದ ಮರ್ಯಾದೆಯ ಮಹತ್ವದ ಬಗ್ಗೆ ತುಂಬಾ ಬುದ್ದಿವಾದ ಹೇಳಿದೆ. ಆಕೆ ಒಪ್ಪಲಿಲ್ಲ.

ಅದಕ್ಕಿಂತ ಶಾಕಿಂಗ್ ನ್ಯೂಸ್ ಎಂದರೆ ಆಕೆ ಆರು ತಿಂಗಳ ಗರ್ಭಿಣಿಯಾಗಿದ್ದಳು. ಗೌಡ ಹೆಣ್ಣುಮಗಳ ಹೊಟ್ಟೆಯಲ್ಲಿ ದಲಿತ ಕೂಸು. ಛೆ...ಛೆ....ಛೆ.... ಒಪ್ಪಲು ಸಾಧ್ಯವೇ ಇಲ್ಲ. ನನಗೆ ನನ್ನ ಒಳಗಿನ ಸಂಕಟ ಶಮನಗೊಳಿಸಲು ಸಾಧ್ಯವಾಗಲಿಲ್ಲ. ಉಪಾಯ ಮಾಡಿ ಆಕೆಗೆ ಹೇಳಿದೆ. ಆಯಿತು, ಒಮ್ಮೆ ನಿನ್ನ ಗಂಡನ ಬಳಿ ಮಾತನಾಡುತ್ತೇನೆ. ಆತ ಎಷ್ಟು ಹೊತ್ತಿಗೆ ಬರುತ್ತಾನೆ ಎಂದು ಕೇಳಿದೆ. 

ಅವರೀಗ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಸಂಜೆ 6 ಗಂಟೆಗೆ ಬರುತ್ತಾರೆ ಎಂದಳು. ನಾನು ಬೇಡವೆಂದರೂ ಆಕೆಯೇ ನಾಟಿ ಕೋಳಿಸಾರು ಮುದ್ದೆ ಮಾಡಿ ಬಲವಂತದಿಂದ ಊಟ ಬಡಿಸಿದಳು. ಅಪ್ಪ ಅಮ್ಮನನ್ನು ನೆನಪಿಸಿಕೊಂಡು ತುಂಬಾ ಅತ್ತಳು. ನಾನು ಊಟ ಮಾಡಿ ಸ್ವಲ್ಪ ಸಮಯದ ನಂತರ ಮನೆಗೆ ಬರುವೆನು ಎಂದು ಹೇಳಿ ಹೊರಬಂದೆ.

ಮನಸ್ಸು ದೃಡವಾಗಿತ್ತು. ಜಾತಿ ಬಲವಾಗಿತ್ತು. ಬೆಂಗಳೂರಿನ ಶಿವಾಜಿ ನಗರದಲ್ಲಿ ಒಂದು ಹರಿತವಾದ ಚಾಕುವನ್ನು ಖರೀದಿ ಮಾಡಿದೆ. ಒಂದು ಬ್ಯಾಗಿನಲ್ಲಿ ಅದನ್ನು ಅಡಗಿಸಿ ಅಕ್ಕನ ಮನೆಯ ಕಡೆ ಹೊರಟೆ. ಮನೆ ತಲುಪಿದಾಗ ರಾತ್ರಿ ಸುಮಾರು 8 ಗಂಟೆ. ಅವರು ನಗರದಿಂದ ಸ್ವಲ್ಪ ಹೊರಭಾಗದಲ್ಲಿ ಕಡಿಮೆ ಜನ ಓಡಾಡುವ ಪ್ರದೇಶದಲ್ಲಿ ಇದ್ದರು.  ಮನೆ ಒಳಗೆ ಪ್ರವೇಶಿಸುತ್ತಿದ್ದಂತೆ ಆ ಕರಿಯ ಆತ್ಮೀಯತೆಯಿಂದ ಬರಮಾಡಿಕೊಂಡ. ಅಕ್ಕ ಟೀ ತಂದು ಕೊಟ್ಟಳು. ಟೀ ಕುಡಿಯುತ್ತಿದ್ದಂತೆ ಏಕಾಏಕಿ ಚಾಕು ತೆಗೆದು ಅವನಿಗೆ ‌ಚುಚ್ಚಿದೆ.

ನಂತರ… ಕೆಲವೇ ಕ್ಷಣಗಳಲ್ಲಿ ಆ ಕರಿಯ, ಆ ನನ್ನ ಅಕ್ಕನೆಂಬ ಸೂ..ಅವಳ ಹೊಟ್ಟೆಯಲ್ಲಿದ್ದ ಮಗು ಶವವಾದರು. ಅಲ್ಲಿಂದ ಓಡುತ್ತಾ ಬಂದು ಬಸ್ಸು ಹತ್ತಿ ರೈಲು ನಿಲ್ದಾಣದಲ್ಲಿ ಮುಖ ತೊಳೆದು ಕಾಫಿ ಕುಡಿದು ಮೈಸೂರು ರೈಲಿನಲ್ಲಿ ಪ್ರಯಾಣ ಮಾಡಿ ಅಲ್ಲಿಂದ ಬಸ್ಸಿನಲ್ಲಿ ಚಾಮರಾಜನಗರ ತಲುಪಿ ಮನೆಯವರಿಗೆ ವಿಷಯ ತಿಳಿಸಿ ಬೆಳಿಗ್ಗೆ ಸುಮಾರು 9 ಗಂಟೆಗೆ ಅಪ್ಪನೊಂದಿಗೆ ಅಲ್ಲಿನ ಪೋಲೀಸರಿಗೆ ಶರಣಾದೆ. ನನ್ನ ವಂಶದ ಗೌರವವನ್ನು, ಜಾತಿಯ ಘನತೆಯನ್ನು, ಭಾರತದ ಸಂಸ್ಕೃತಿಯನ್ನು ಉಳಿಸಿದ ಆತ್ಮತೃಪ್ತಿಯೊಂದಿಗೆ ಜೈಲು ಸೇರಿದೆ.

ಪ್ರೀತಿ ಒಂದು ನಾಟಕ. ಭ್ರಮೆ. ಜಾತಿಯೇ ಶ್ರೇಷ್ಠ. ಅದರಲ್ಲೂ ದಲಿತರು ಮೇಲ್ಜಾತಿಯವರಿಗೆ ಎಂದೂ ಸಮವಲ್ಲ. ಮಂಜೇಗೌಡನ ಅಂತರಾಳದ ಮಾತುಗಳು ಎಲ್ಲರಲ್ಲೂ ಪ್ರತಿಧ್ವನಿಸಿ ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಇಟ್ಟಿದೆ. ನವೀನನೆಂಬ ದಲಿತನ ಆತ್ಮ ಭೌದ್ದ ಧರ್ಮದತ್ತ ಸಾಗುತ್ತಿದೆ. ಸುಮಂಗಳಳ ಆತ್ಮ ಲಿಂಗಾಯತ ಧರ್ಮದ ದತ್ತ ವಾಲುತ್ತಿದೆ. 

ಹಿಂದೂ ಧರ್ಮ ಮಾತ್ರ ಕೆಲವರ ಸ್ವಾರ್ಥ ಮತ್ತು ಶ್ರೇಷ್ಠತೆಯ ವ್ಯಸನದಿಂದ ನರಳುತ್ತಿದೆ. ಸ್ವಾಮಿ ವಿವೇಕಾನಂದರು ಅಂದು ಭಾರತದ ಜಾತಿ ವ್ಯವಸ್ಥೆ ಹೇಗೆ ನಮ್ಮ ಇಡೀ ಆತ್ಮಶಕ್ತಿ ಸ್ವಾಭಿಮಾನ ಮತ್ತು ಸಂಸ್ಕೃತಿಯನ್ನು ನಾಶ ಮಾಡುತ್ತದೆ ಎಂದು ಹೇಳಿದ ಮಾತುಗಳು ಈಗ ನಿಜವಾಗುತ್ತಿದೆ. 

ಆದರು ಈಗಲೂ ಕಾಲ ಮಿಂಚಿಲ್ಲ. ಎಚ್ಚೆತ್ತುಕೊಂಡರೆ ಹಿಂದೂ ಧರ್ಮ ಜಗತ್ತಿನ ಅತ್ಯುತ್ತಮ ಸ್ವಾತಂತ್ರ್ಯ ಸಮಾನತೆ ಮತ್ತು ವೈಚಾರಿಕ ಜೀವನ ವಿಧಾನ ಆಗುವ ಎಲ್ಲಾ ಸಾಧ್ಯತೆ ಇದೆ. ಹಠ ಮಾಡಿ ಮೂರ್ಖತನದಿಂದ....ಅಸ್ಪೃಶ್ಯತೆ ಒಂದು ಹಿಂದಿನ ಜನ್ಮದ ಶಾಪ. ಈಗ ಅಸ್ಪೃಶ್ಯತೆಯೇ ಇಲ್ಲ. ಮೀಸಲಾತಿ ಈಗ ಅತ್ಯಂತ ಕೆಟ್ಟ ಕಾನೂನು. ಅವರು ಗಂಜಿ ಗಿರಾಕಿಗಳು. ಅವರಲ್ಲಿ ಯಾವುದೇ ಸಾಮರ್ಥ್ಯ ಇಲ್ಲ ಎಂದು ಕೋಟಿ ಕೋಟಿ ಭಾರತೀಯ ಪ್ರಜೆಗಳನ್ನು ಒಂದು ಗುಂಪು  ಮಾಡಿ ಹಿಯಾಳಿಸಿದರೆ,.

ಹಿಂದಿನ ತಪ್ಪಗಳಿಗೆ ದಲಿತರಲ್ಲಿ ಕ್ಷಮೆ ಕೇಳಿ ಅವರ ಆಂತರ್ಯದ ತುಮಲಗಳಿಗೆ ಧ್ವನಿಯಾಗಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಆಧ್ಯತೆ ನೀಡಿ ಅವರನ್ನು ಸಹೋದರರಂತೆ ಕಾಣದಿದ್ದರೆ, ಭೋಜನಗಳಲ್ಲಿ ಪಂಕ್ತಿಬೇದವನ್ನು ಯಾವುದೋ ನೆಪ ನೀಡಿ ಸಮರ್ಥಿಸುತ್ತಿದ್ದರೆ ಹಿಂದೂ ಧರ್ಮವೂ ಒಗ್ಗಟ್ಟಾಗುವುದಿಲ್ಲ ದೇಶವು ಉದ್ದಾರವಾಗುವುದಿಲ್ಲ. ಆಯ್ಕೆಗಳು ನಮ್ಮ ಮುಂದಿವೆ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಅಂತರ್ಜಾಲ ತಾಣ