ಮಳೆ ಬಂತೋ ಮಳೆ

ಮಳೆ ಬಂತೋ ಮಳೆ

ಕವನ

ಹನಿ ಹನಿಯ ನೀರು ಸುತ್ತೆಲ್ಲ ಹರಿದು

ನದಿಯಾಗಿ ಜೀವ ತಳೆಯೆ

ಜಲ ಜಲದ ರೂಪ ಮಣ್ಣಿನಲಿ ಬೆರೆತು

ಮುದದಿಂದ ಮುಂದೆ ಸಾಗೆ

 

ನೀರಾಟವಾಡಿ ಜಲಚರಕೆ ಖುಷಿಯು

ಇಳೆಗೀಗ ಹಸಿರೆ ಉಸಿರು

ಹೊಲದಲ್ಲಿ ಬೆಳೆಯು ನಳನಳಿಸುತಿರಲು

ವರುಣನಿಗೆ ಮತ್ತೆ ಗೆಲುವು

 

ಹೊಂಗನಸು ತೇಲಿ ರೈತನಿಗೆ ತಾಗೆ

ಹರುಹರುಷ ಮನಸಿನೊಳಗೆ

ಕನಸೆಲ್ಲ ಕರಗಿ ನನಸೊಳಗೆ ಬರಲು

ಮನೆಯೊಳಗೆ ಪ್ರೀತಿ ತೊಡುಗೆ

 

ಬಂತದೋ ಮಳೆಯು ವೈಯಾರದೊಳಗೆ

ಸುತ್ತೆಲ್ಲ ಮಿಂಚು ಸಿಡಿಲೆ

ಆಗಸದ ತುಂಬ ಹೊಂಗಿರಣದುಡುಗೆ

ಪ್ರಕೃತಿಯೊಳು ಸವಿಯ ಸಂಜೆ

***

ಸಾಹಿತ್ಯವು ಬೆಳಗಲಿ

ನನ್ನದೆನುತ ಸಾಗಬೇಡ ಕಾವ್ಯ ಸೊರಗಬಹುದು

ರಾಗ ತಾಳ ಲಯವು ಇರದೆ ಪ್ರೀತಿ ಕಳೆಯಬಹುದು

ಯತಿಯ ಗುಣವು ಸಾಲಲಿರಲಿ ಅಂತ್ಯ ಪ್ರಾಸವಿರಲಿ

ಉಪಮೆ ಅಲಂಕಾರಗಳು ನಡುವೆ ಕಾಣುತಿರಲಿ

 

ಜೀವ ಭಾವ ಸೌಂದರ್ಯ ಎದ್ದು ಕಾಣುತಿರಲಿ

ಓದುಗನ ಹೃದಯವನು ಅರಳಿಸುವಂತಿರಲಿ

ಹಾಡುಗಾರನ ಎದೆಯ ಮುಟ್ಟಿ ಹಾಡುವಂತಿರಲಿ

ಕೇಳುಗನ ಮನವ ಹೊಕ್ಕಿ ನಾಟ್ಯವಾಡುತಿರಲಿ

 

ಪದಕೆ ಪದವ ಹೆಣೆಯುತಿರಲು ಸೊಗಸು ಕಾಣುತಿರಲಿ

ಅರ್ಥದೊಳಗೆ ಮಿಂಚು ಇರಲು ಮತ್ತೆ ಸವಿಯು ಬರಲಿ

ಹೀಗೆ ಕಾವ್ಯ ಬರೆಯುತಿರಲು ಕನ್ನಡವು ಮೆರೆಯಲಿ

ಸಾಹಿತ್ಯವು ಬೆಳಗುತಿರಲು ನಾಡಗೀತೆ ಮೊಳಗಲಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್