ಮಹಾವೀರ ಜಯಂತಿ

ಮಹಾವೀರ ಜಯಂತಿ

ತನ್ನ ೩೦ನೆಯ ವಯಸ್ಸಿನಲ್ಲಿ ಮನೆ, ಕುಟುಂಬ, ರಾಜ್ಯ ದೇಶ-ಕೋಶಗಳನ್ನು ತ್ಯಜಿಸಿ, ಪ್ರಾಪಂಚಿಕ ಕರ್ತವ್ಯವನ್ನು ಮರೆತು, ಆಂತರಿಕ ಶಾಂತಿ ಮತ್ತು ನೆಮ್ಮದಿಗಾಗಿ, ಅರಣ್ಯದತ್ತ ಹೋಗಿ ೧೨ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದ, ಜೈನ ಸಮುದಾಯದ ೨೪ನೆಯ ತೀರ್ಥಂಕರ ಮಹಾವೀರನ ಜಯಂತಿಯನ್ನು ಜೈನ ಸಮುದಾಯದವರು ಬಹಳ  ವಿಜೃಂಭಣೆಯಿಂದ ಆಚರಿಸುವರು. ಉತ್ತಮ ಶಿಸ್ತಿನ ಜೀವನ, ಅಹಿಂಸೆ, ಮಾತುಕೃತಿಯಲ್ಲಿ ಸಹ ನೋಯಿಸಬಾರದು ಎನುವ ತತ್ವ, ಸ್ವ ನಿಯಂತ್ರಣ, ಮೋಸ ಕಳ್ಳತನ ಮಾಡದಿರುವುದು, ಕಠಿಣ ಬ್ರಹ್ಮಚರ್ಯ ಪಾಲನೆ ಜೈನ ಧರ್ಮದ ತತ್ವಗಳು. ಶುದ್ಧ ನಿಯಂತ್ರಿತ ಜೀವನ, ನಂಬಿಕೆ, ಜ್ಞಾನ, ನಡವಳಿಕೆ ಆಚರಣೆಯಲ್ಲಿರಲಿ, ಇದು ಮೋಕ್ಷಕ್ಕೆ ದಾರಿಯೆಂದು ಬೋಧಿಸಿದರು. ಈ ಆತ್ಮವೆನ್ನುವುದು ಮಾನವ ದೇಹದ ತಿರುಳೆಂದರು.

ಮಹಾವೀರನ ಮೂರ್ತಿಯನ್ನಿಟ್ಟು ಪೂಜಿಸಿ, ವೈವಿಧ್ಯ ಭಕ್ಷ್ಯಗಳ ಸಮರ್ಪಣೆ ಮಾಡುವರು. ರಥದ ಮೇಲೆ ವಿಗ್ರಹವನ್ನಿಟ್ಟು ಮೆರವಣಿಗೆ, ಬಡವರಿಗೆ, ನಿರ್ಗತಿಕರಿಗೆ ಆಹಾರ ವಸ್ತು, ವಸ್ತ್ರ ವಿತರಿಸುವರು. ಪುಣ್ಯದಾರಿಯ ಕುರಿತು ಉಪನ್ಯಾಸ, ಸಾತ್ವಿಕ ಆಹಾರ ಸೇವನೆಯ ಬಗ್ಗೆ ಒತ್ತಿ ಹೇಳುವರು. ಬಾಲ್ಯದ ಹೆಸರು ವರ್ಧಮಾನ ಎಂದಿದ್ದ ಬಾಲಕನಿಗೆ ಜ್ಞಾನೋದಯವಾದ ಮೇಲೆ 'ವರ್ಧಮಾನ ಮಹಾವೀರ'ನೆಂದು ಕರೆಯಲಾಯಿತು. ಪುನ: ಪುನ: ಜನ್ಮ ತಾಳದ ಹಾಗೆ ವ್ಯವಹರಿಸಬೇಕು, ಮಾತು, ಮನಸ್ಸು ಎರಡರಲ್ಲೂ ಹಿಂಸಿಸಬಾರದೆಂದು ಕರೆಯಿತ್ತರು. ಜೈನ ಸಮುದಾಯದವರ ಅತ್ಯಂತ ಪವಿತ್ರ ಆಚರಣೆ ಮಹಾವೀರ ಜಯಂತಿ.

-ರತ್ನಾ ಕೆ.ಭಟ್ ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ