ಮೂಡುವುದೇ ಏಕರೂಪ ನಾಗರಿಕ ಸಂಹಿತೆಗೆ ರೆಕ್ಕೆ?

ಮೂಡುವುದೇ ಏಕರೂಪ ನಾಗರಿಕ ಸಂಹಿತೆಗೆ ರೆಕ್ಕೆ?

ಒಂದೇ ದೇಶಕ್ಕೆ ಎರಡೆರಡು ಕಾನೂನುಗಳ ಅಗತ್ಯವಿದೆಯೇ? ಸ್ವರಾಜ್ಯ ಗಳಿಕೆಯ ಬಳಿಕ, ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡಿರುವ ಭಾರತಕ್ಕೆ ಇದೊಂದು ಗಂಭೀರ ಸವಾಲು. ಬಹುಧರ್ಮೀಯರಿರುವ ಈ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಇರಬೇಕೆಂಬ ವಾದವನ್ನು ಎನ್ ಡಿ ಎ ಸರ್ಕಾರ ಎಂದಿನಿಂದಲೋ ಪ್ರತಿಪಾದಿಸಿದೆ. ಈ ದಿಶೆಯಲ್ಲಿ ರಾಷ್ಟ್ರೀಯ ಕಾನೂನು ಆಯೋಗ ಕೂಡಾ ಅಧ್ಯಯನ ನಡೆಸಿದ್ದು ನಾನಾ ಸಲಹೆ ಮತ್ತು ಅಭಿಪ್ರಾಯಗಳನ್ನು ಕ್ರೋಢೀಕರಿಸಿದೆ.

ಏಕರೂಪ ನಾಗರಿಕ ಸಂಹಿತೆ ವಿಚಾರ ಪ್ರಸ್ತಾಪ ಆದಾಗಲೆಲ್ಲ ಕೆಲ ರಾಜಕೀಯ ಪಕ್ಷಗಳು ವಿವಾದ ಸೃಷ್ಟಿಸುತ್ತಿವೆ. ಇದು ದೇಶದಲ್ಲಿ ಹೊಸದೇನಲ್ಲ. ಆದರೆ ಪ್ರಪಂಚದ ಯಾವುದೇ ದೇಶದ ಕಾನೂನು ಹಾಗೂ ಜಾರಿಯಲ್ಲಿರುವ ಕಟ್ಟಳೆಗಳನ್ನು ಗಂಭೀರವಾಗಿ ಪರಿಶೀಲಿಸಿದಾಗ ಅಲ್ಲಿನ ಬಹುಜನತೆಯ (ಮೆಜಾರಿಟಿ) ದೈನಂದಿನ ಬದುಕು, ಧರ್ಮ, ಸಂಸ್ಕೃತಿ, ಆಚಾರ, ಸಂಪ್ರದಾಯ ಇತ್ಯಾದಿಗಳಿಗೆ ಒತ್ತು ನೀಡುವ ಅಥವಾ ಪೂರಕವಾದಂತಹ  ಕಾನೂನುಗಳೇ ಆಚರಣೆಯಲ್ಲಿರುವುದು ಸರ್ವಸತ್ಯ.

ಪ್ರಧಾನಿ ನರೇಂದ್ರ ಮೋದಿ ಮಂಗಳವಾರದಂದು ಮಧ್ಯಪ್ರದೇಶದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಭಾರತಕ್ಕೆ ಎರಡೆರಡು ಕಾನೂನುಗಳ ಅಗತ್ಯವಿದೆಯೇ ಎಂಬ ಸಂಗತಿಯನ್ನು ಈ ದೇಶದ ಜನತೆಯ ಮುಂದಿಟ್ಟಿದ್ದಾರೆ. ಹಿಂದೂಸ್ಥಾನದಲ್ಲಿ ಮುಸ್ಲಿಂ, ಕ್ರೈಸ್ತರೂ ಶತ, ಶತಮಾನಗಳಿಂದ ನೆಲೆಸಿರುವುದು ಇತಿಹಾಸ ಎಂಬುದೇನೋ ಸರಿ. ಈ ನೆಲದಲ್ಲಿ ತಮ್ಮ ಬದುಕನ್ನು ಹಸನು ಮಾಡಿಕೊಂಡು ನೂರಾರು ವರ್ಷಗಳಿಂದ ಜೀವಿಸುತ್ತಿರುವ ಹಿಂದೂಯೇತರ ಪ್ರಧಾನ ಧರ್ಮೀಯರು ಮತ್ತು ಧಾರ್ಮಿಕ ಮುಖ್ಯಸ್ಥರು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಪ್ರಾತ್ಯಕ್ಷಿಕವಾಗಿ ಆಲೋಚಿಸುವ ಸಂಕ್ರಮಣ ಕಾಲವಿದು. ತಾತ, ಮುತ್ತಾತಂದಿರ ಕಾಲದಿಂದಲೂ ಭಾರತೀಯ ನೆಲ, ಜಲ ಮತ್ತು ಗಾಳಿಯನ್ನೇ ಸೇವಿಸುತ್ತಿರುವವರು ದೇಶದ ಮೂಲನಿವಾಸಿಗಳಲ್ಲವೇ? ಅವರು ಅರಬ್, ಅಫ್ಘಾನಿಸ್ತಾನ, ಆಫ್ರಿಕಾ, ಬ್ರಿಟನ್ ನಿಂದ ಬಂದು ಇಲ್ಲಿಯೇ ಶಾಶ್ವತವಾಗಿ ನೆಲೆಸಿದ ಮೇಲೆ ಏಕರೂಪ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳುವುದರಿಂದ ಮೂಲ ಧಾರ್ಮಿಕ ಮೌಲ್ಯಗಳಿಗೆ ಯಾವ ಗಂಭೀರ ಹಾನಿ ಅಥವಾ ಲೋಪವಾಗದು. 

ದೇಶದ ಸಂಸತ್ ನಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ರಚನೆ ವಿಷಯ ಪ್ರಸ್ತಾಪ ಆದಾಗಲೆಲ್ಲ ಕೆಲ ರಾಜಕೀಯ ಪಕ್ಷಗಳು ಗದ್ದಲ ಮತ್ತು ಕೋಲಾಹಲ ಎಬ್ಬಿಸುತ್ತಿರುವುದು ಅರ್ಥಹೀನ. ಇದರ ಬದಲಾಗಿ ಉದ್ಡೇಶಿತ ಕಾನೂನಿನ ಸಾಧಕ, ಬಾಧಕಗಳ ಬಗ್ಗೆ ಸಂಸತ್ ಮುಕ್ತವಾಗಿ ಚರ್ಚೆ ನಡೆಸಬೇಕಿದೆ. ಇದು ಪ್ರಜಾಸತ್ತಾತ್ಮಕ ದೇಶದ ಜೀವಾಳ ಕೂಡಾ. ಸಾರ್ವತ್ರಿಕ ಚುನಾವಣೆಗಳ ಸಮಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೇವಲ ಮತಬ್ಯಾಂಕುಗಳಾಗಿ ಪರಿಗಣಿಸಿ ಸ್ವಾರ್ಥ ರಾಜಕಾರಣಕ್ಕೆ ಶರಣಾದ ಈ ದೇಶ ಹಲವಾರು ರಾಜಕೀಯ ಪಕ್ಷಗಳಿಗೆ ಏಕರೂಪ ನಾಗರಿಕ ಸಂಹಿತೆಯ ಚರ್ಚೆ, ವಿಮರ್ಶೆಗಳೇ ಬೇಕಿಲ್ಲ ! ಎಲ್ಲಿಯವರೆಗೆ ಅರ್ಥಹೀನ ಮತ್ತು ಅವಾಸ್ತವಿಕ ಧಾರ್ಮಿಕ ಮೌಢ್ಯ, ಮತಾಚಾರ ಪದ್ಧತಿ ಮುಂದುವರೆಯುವುದೋ ಅಲ್ಲಿಯವರೆಗೆ ಈ ದೇಶದಲ್ಲಿ ಧಾರ್ಮಿಕ ಸಂಕುಚಿತ, ಬಾಲಿಶ ಬಾಧಕ ಕಟ್ಟಳೆಗಳನ್ನು ಕಾನೂನಿನ ಮೂಲಕ ಕಿತ್ತೆಸೆಯಲು ಸಾಧ್ಯವಾಗದು. ಒಟ್ಟಿನಲ್ಲಿ ಈ ನೆಲದಲ್ಲಿ ಐತಿಹಾಸಿಕ ಕಾನೂನು ರಚನೆಗೊಂದು ಗಟ್ಟಿ ಪ್ರಯತ್ನವಾಗುತ್ತಿದೆ ಎಂಬುದಂತೂ ಸ್ಪಷ್ಟ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ:೨೮-೦೬-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ