ಯೋಗಪ್ರವೇಶ

ಯೋಗಪ್ರವೇಶ

ಪುಸ್ತಕದ ಲೇಖಕ/ಕವಿಯ ಹೆಸರು
ಅಜಿತ ಕುಮಾರ
ಪ್ರಕಾಶಕರು
ರಾಷ್ಟ್ರೋತ್ಠಾನ ಸಾಹಿತ್ಯ, ಬೆಂಗಳೂರು-೫೬೦೦೧೯
ಪುಸ್ತಕದ ಬೆಲೆ
ರೂ. ೩೦೦.೦೦, ಮುದ್ರಣ: ೨೦೨೨

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಅಜಿತ ಕುಮಾರ ಇವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿನಲ್ಲಿ ಆತ್ಮಸ್ಥೈರ್ಯ ಮತ್ತು ಆರೋಗ್ಯ ಕಾಪಾಡಲು ಕೈಗೊಂಡ ಯೋಗಾಭ್ಯಾಸದ ಕುರಿತಾದ ಸಮಗ್ರ ಪುಸ್ತಕ ‘ಯೋಗ ಪ್ರವೇಶ'. ೧೯೮೪ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿಯು ಬಹಳ ಜನಪ್ರಿಯವಾಗಿತ್ತು. ೧೯೯೦ರಲ್ಲಿ ಅಜಿತಕುಮಾರರ ಅಕಾಲಿಕ ನಿಧನದ ಬಳಿಕ ೨೦೧೯ರಲ್ಲಿ ಹಾಗೂ ೨೦೨೨ರಲ್ಲಿ ಈ ಕೃತಿಯು ಮರು ಮುದ್ರಣವಾಯಿತು. ಇಂಥಹ ಒಂದು ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಒಪ್ಪಿಸಿದ ಅಜಿತಕುಮಾರರ ಸಾಧನೆ ಸದಾ ಕಾಲ ಸ್ಮರಣೀಯವಾಗಿದೆ.

ಜನ ಸಾಮಾನ್ಯರಿಂದ ಗಗನಗಾಮಿಗಳವರೆಗೆ ಇಂದು ಎಲ್ಲ ಜನವರ್ಗಗಳನ್ನೂ ಯೋಗ ಆಕರ್ಷಿಸಿದೆ. ಹಿಂದೆ ಭಾರತದಲ್ಲಷ್ಟೇ ಪ್ರಚಲಿತವಾಗಿದ್ದ ಯೋಗ ಇಂದು ಜಗತ್ತಿನ ವಿವಿಧ ದೇಶಗಳಲ್ಲಿ ಹರಡಿ ಮಾನ್ಯತೆ ಪಡೆದುಕೊಂಡಿದೆ. ಯೋಗಾಭ್ಯಾಸ ಶರೀರದ ಆರೋಗ್ಯಕ್ಕೆ ಸಾಧನವಾಗಿರುವುದು ಮಾತ್ರವಲ್ಲದೆ ಮಾನಸಿಕ ಸ್ವಾಸ್ಥ್ಯಬುದ್ಧಿಯ ಪ್ರಖರತೆ, ಆಧ್ಯಾತ್ಮಿಕ ಪ್ರಗತಿಗಳಿಗೂ ದಾರಿ ಮನವರಿಕೆಯಾಗತೊಡಗಿದೆ. ಆರೋಗ್ಯ ರಕ್ಷಣೆಯಲ್ಲಷ್ಟೇ ಅಲ್ಲದೆ ಹಲವಾರು ರೋಗಗಳ ಚಿಕಿತ್ಸೆಯಲ್ಲಿಯೂ ಯೋಗಾಭ್ಯಾಸ ಪರಿಣಾಮಕಾರಿ ಪಾತ್ರ ವಹಿಸಬಲ್ಲದೆಂಬುದನ್ನು ಇತ್ತೀಚಿನ ವೈದ್ಯಶಾಸ್ತ್ರ ಸಮ್ಮತ ಪ್ರಯೋಗ ಪರೀಕ್ಷೆಗಳೂ ಸ್ಥಿರೀಕರಿಸಿವೆ.

ಇತರ ಭಾರತೀಯ ಶಾಸ್ತ್ರ-ಕಲೆಗಳಂತೆ ಯೋಗಾಸನದ ಸೂಕ್ಷಾಂಶಗಳೂ ಗುರುಗಳ ಮೂಲಕವೇ ತಿಳಿಯುವಂಥವು. ಯೋಗಾಸನವೆಂದರೆ ಕೇವಲ ಕೆಲವು ವಿಶಿಷ್ಟ ಅಂಗಾಂಗ ಚಾಲೆನೆಗಳಲ್ಲ. ಯೋಗಾಸನದ ಪೂರ್ಣ ಪ್ರಯೋಜನ ದೊರೆಯಬೇಕಾದರೆ ಪ್ರತಿಯೊಂದು ಆಸನವನ್ನೊಡಗೂಡಿದ ಉಚ್ಚ್ವಾಸ ನಿಃಶ್ವಾಸ ಕ್ರಿಯೆ, ಆಸನಗಳ ಅನುಕ್ರಮ, ವಿಶಿಷ್ಟ ಶರೀರ ಧರ್ಮಗಳಿಗೆ ಹೊಂದುವ ಆಸನ ಆಯ್ಕೆ-ಇತ್ಯಾದಿ ನಾಲ್ಕಾರು ಅಂಶಗಳ ಪರಿಜ್ಞಾನ ಅಗತ್ಯವಾಗಿರುತ್ತದೆ. ಪ್ರತಿಯೊಂದು ಆಸನದ ವಿನ್ಯಾಸವನ್ನು ತಿಳಿಸುವುದರ ಜೊತೆಗೆ, ಸಾಧಕರಿಗೆ ಅತ್ಯವಶ್ಯವಾದ ಮತ್ತು ಒಂದೊಂದು ಆಸನಕ್ಕೆ ಸಂಬಂಧಿಸಿದ ವಿಶೇಷ ಪ್ರಕ್ರಿಯೆಗಳಿಗೂ ಶರೀರಶಾಸ್ತ್ರ ವಿವರಗಳಿಗೂ ಗಮನ ನೀಡಿದೆ “ಯೋಗಪ್ರವೇಶ".

ಅಜಿತ ಕುಮಾರ ಇವರು ತಮ್ಮ ಲೇಖಕರ ಮಾತಿನಲ್ಲಿ ಯಾವ ಉದ್ದೇಶದಿಂದ ಮತ್ತು ಯಾವ ಕಾರಣಗಳಿಂದ ಈ ಪುಸ್ತಕದನ್ನು ಬರೆಯಲಾಯಿತು ಎಂಬ ಬಗ್ಗೆ ತಮ್ಮದೇ ಮಾತಿನಲ್ಲಿ ಹೇಳಿದ್ದಾರೆ. ಅದರ ಆಯ್ದ ಭಾಗಗಳು ಹೀಗಿವೆ-

“ತುರ್ತು ಪರಿಸ್ಥಿತಿಯಲ್ಲಿ ನಾವೆಲ್ಲ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದಾಗ ಯೋಧ ಮೀಸಾ ಬಂದಿಗಳಿಗಾಗಿ ಯೋಗ ತರಗತಿ ನಡೆಯಲು ಪ್ರಾರಂಭ ಆಯಿತು. ರಾಷ್ಟ್ರೋತ್ಠಾನ ಪರಿಷತ್ತಿನ ಪ್ರಧಾನ ವ್ಯವಸ್ಥಾಪಕ ಶ್ರೀ ಮೈ ಚ ಜಯದೇವ ಅವರು ಆ ತರಗತಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ದಿನ ಕಳೆದಂತೆ ಗ್ರಂಥ ರಚನೆಯ ಕಲ್ಪನೆ ಮೂಡಿ ಬಂದಿತು. ನಾವಿಬ್ಬರೂ ಸುಮಾರು ಹದಿನಾರು ತಿಂಗಳು ಒಟ್ಟಿಗೆ ಇದ್ದಾಗ ಈ ಕಲ್ಪನೆ ಬಲವಾಗಿ, ಲೇಖನದ ಪ್ರಮುಖ ಭಾಗ ಅಲ್ಲಿಯೇ ತಯಾರಾಯಿತು. ಈ ತಯಾರಿಯಲ್ಲಿ ಅಲ್ಲಿದ್ದ ಎಲ್ಲ ಮಿತ್ರರೂ ನೆರವಾದರು.

ಯೋಗ ಈ ನಾಡಿನಲ್ಲಿ ವ್ಯಕ್ತಿತ್ವ ವಿಕಾಸದ ಸಾಧನ. ಆರೋಗ್ಯ ಸುಧಾರಣೆಯ ತಂತ್ರ ಎಂಬ ನಂಬಿಕೆ ಎಲ್ಲರಲ್ಲಿಯೂ ಸಾಮಾನ್ಯವಾಗಿ ಉಂಟು. ಯೋಗಕ್ಕೆ ನಿಜವಾದ ವಾರಸುದಾರರು ತಾವೆಂಬ ಅರಿವೂ ಉಂಟು. ಆದರೆ ಯೋಗಜೀವನ ಆರಂಭ ಮಾಡಲು ಅನೇಕ ಭಯ, ಭ್ರಮೆಗಳು ಅಡ್ಡಿ ಮಾಡುತ್ತಿವೆ. ಈ ಭಯಗಳನ್ನು ನಿವಾರಿಸಿ, ಭ್ರಮೆಗಳನ್ನು ದೂರ ಸರಿಸಿ, ವಿಶ್ವಾಸದಿಂದ ಭದ್ರವಾದ ಹೆಜ್ಜೆ ಮುಂದಕ್ಕೆ, ಮೇಲಕ್ಕೆ ಇಡುವುದಕ್ಕೆ ನೆರವಾಗಲು ಈ ಗ್ರಂಥ ರಚನೆಯಾಗಿದೆ. ದೇಹದೇಗುಲದ ಬಾಗಿಲನ್ನು ತೆರೆದು ಮುಂದೆ ಹೋಗಲು, ಮನಮಂದಿರದ ಮೆಟ್ಟಿಲನ್ನು ಏರಿ ಹೋಗಲು ದಾರಿ ತೋರುವ ಕೈಮರ ‘ಯೋಗಪ್ರವೇಶ'. ಇದರಲ್ಲಿ ಕರಣೀಯ ಕ್ರಮಗಳು ಉಂಟೇ ಹೊರತು ವ್ಯಾಕರಣದ ಅಂಶಗಳಿಲ್ಲ. ಅನುಭವದ ಅನಿಸಿಕೆಗಳು ಉಂಟು; ಭಾವವಿಲಾಸದ ಸೊಬಗು ಇಲ್ಲಿಲ್ಲ. ಸಕಲರಿಗೆ ಹಿತವಾಗುತ್ತದೆ ಎಂಬ ಅರ್ಥದಲ್ಲಿ ಮಾತ್ರ ಇದು ಸಾಹಿತ್ಯ ಆಗಬಹುದು.

ಶಾರೀರಿಕ ಮಾನಸಿಕ ಸ್ವಾಸ್ಥ್ಯವೇ ಆರೋಗ್ಯ ಶರೀರದ ಆಲಸ್ಯವನ್ನು ತೊರೆದು ಸುಸ್ಥಿತಿಯನ್ನು ಪಡೆದು ಮನಸ್ಸಿನ ಚಾಂಚಲ್ಯವನ್ನು ನಷ್ಟಮಾಡಿ ಶಾಂತ ಮನೋಭಾವವನ್ನು ನಿರ್ಮಿಸುವುದೇ ಆರೋಗ್ಯ ಸಂಪಾದನೆಯ ಪ್ರಯತ್ನದ ಮೂಲ ಉದ್ಡೇಶ. ಈ ಉದ್ದೇಶವನ್ನು ಪೂರೈಸುವ ಪ್ರಯತ್ನದಲ್ಲಿ ‘ಯೋಗಪ್ರವೇಶ' ಪೋಷಕವಾಗಿರುವುದು.”

ಪರಿವಿಡಿಯಲ್ಲಿ ಯೋಗಪ್ರವೇಶದ ಬಗ್ಗೆ, ಯೋಗಾಸನಗಳ ಬಗ್ಗೆ, ನಮ್ಮ ಆರೋಗ್ಯ, ಯೋಗದ ಕಲ್ಪನೆ, ಪಂಚವಿಧ ಆಹಾರ, ಯೋಗಾಹಾರ, ಯೋಗ ಶಿಕ್ಷಕ, ಸ್ತ್ರೀಯರಿಗಾಗಿ ಯೋಗಾಸನ, ಸೂರ್ಯ ನಮಸ್ಕಾರ, ವಿವಿಧ ರೀತಿಯ ಆಸನಗಳು, ಪ್ರಾಣಾಯಾಮ, ಬಂಧಗಳು, ಧ್ಯಾನ ಮತ್ತು ಯೋಗಾಸನಗಳ ಪಟ್ಟಿಯನ್ನು ನೀಡಲಾಗಿದೆ. ಪುಸ್ತಕದಲ್ಲಿರುವ ಎಲ್ಲಾ ಆಸನಗಳಿಗೆ ಸೂಕ್ತವಾದ ರೇಖಾ ಚಿತ್ರಗಳನ್ನು ನೀಡಲಾಗಿದೆ. ಈ ೪೦೦ ಪುಟಗಳ ಸಮೃದ್ಧ ಗ್ರಂಥವು ಯೋಗ ಸಂಬಂಧಿ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ಸಹಕಾರಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.