ರಂಜಾನ್ ಉಪವಾಸ : ದೇಹ ಮತ್ತು ಮನಸ್ಸುಗಳ ಶುದ್ದೀಕರಣ ವಿಧಾನ...

ರಂಜಾನ್ ಉಪವಾಸ : ದೇಹ ಮತ್ತು ಮನಸ್ಸುಗಳ ಶುದ್ದೀಕರಣ ವಿಧಾನ...

ಭಾರತೀಯ ಮುಸ್ಲಿಂ ಸಮುದಾಯದ ಆತ್ಮಾವಲೋಕನಕ್ಕೆ ಒಂದು ಶುಭ ಸಂದರ್ಭ. ಖುರಾನ್ - ಸಂವಿಧಾನ - ಹಿಂದುತ್ವ - ಭಾರತೀಯತೆ - ಇವುಗಳ ನಿಜ ಅರ್ಥದ ಹುಡುಕಾಟ ನಡೆಯುತ್ತಿರುವ ಸಂದರ್ಭದಲ್ಲಿ ರಂಜಾನ್ ಹಬ್ಬದ ಒಂದು ತಿಂಗಳ ದೀರ್ಘ ಉಪವಾಸ ವ್ರತ ಆರಂಭವಾಗಿದೆ. ಮೂರು ರೀತಿಯ ಭಾವನೆಗಳು ಈಗ ಮೇಲುಗೈ ಪಡೆದು ಚರ್ಚೆಯ ಮುನ್ನಲೆಗೆ ಬಂದಿದೆ.

ಒಂದು, ಮುಸ್ಲಿಂ ಯಾವುದೇ ದೇಶದಲ್ಲಿರಲಿ ಆತನ ಮೊದಲ ನಿಷ್ಠೆ ಖುರಾನ್ ಎಂಬ ಪವಿತ್ರ ಗ್ರಂಥದ ಆಚರಣೆಯೇ ಮುಖ್ಯವಾಗಬೇಕು. ಮುಸ್ಲಿಂ ಒಬ್ಬನ ನಿಜವಾದ ಬದುಕು ಇಹದಲ್ಲಿ ಇಲ್ಲ. ಅದು ಅಲ್ಲಾನ ಸ್ವರ್ಗದಲ್ಲಿ ಇದೆ. ಸಾವು ಬದುಕಿಗೆ ಅಲ್ಲಾನೇ ಪ್ರೇರಣೆ ಮತ್ತು ರಕ್ಷಣೆ ಎಂಬ ಮೂಲಭೂತವಾದಿ ಸಿದ್ದಾಂತ, ಜೊತೆಗೆ ಈ ದೇಶದಲ್ಲಿ ನಾವು ಸಹ ಮೂಲ ನಿವಾಸಿಗಳು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದೇವೆ. ನಮಗೂ ಈ ನೆಲದ ಮೇಲೆ ಎಲ್ಲಾ ರೀತಿಯ ಸಮಾನ ಹಕ್ಕುಗಳಿವೆ. ಇದು ಖುರಾನ್ ನುಡಿಗಳಲ್ಲ. ಆದರೆ ಮಾಧ್ಯಮ ಚರ್ಚೆಗಳಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರ ವಾದ ಮತ್ತು ಒಟ್ಟು ಸಾರಾಂಶ. ಇದನ್ನು ನೇರವಾಗಿ ಹೇಳದೆ ಬೇರೆ ಬೇರೆ ರೀತಿಯಲ್ಲಿ ಹೇಳುತ್ತಾರೆ.

ಇನ್ನೊಂದು ವರ್ಗ, ಇದು ಈ ರಾಷ್ಟ್ರವನ್ನು ಜಾತ್ಯಾತೀತ ಆಧಾರದ ಮೇಲೆ ಮುನ್ನಡೆಸಲು ಇಚ್ಚಿಸುತ್ತದೆ. ಭಾರತಕ್ಕೆ ಮುಸ್ಲಿಮರ ಪ್ರವೇಶ ಯಾವಾಗ ಮತ್ತು ಹೇಗೇ ಆಗಿರಲಿ, ಭಾರತದ ವಿಭಜನೆಯ ಕಾರಣ ಏನೇ ಇರಲಿ, ಸ್ವಾತಂತ್ರ್ಯ ನಂತರ ಭಾರತ ಒಂದು ಗಣರಾಜ್ಯಗಳ ಒಕ್ಕೂಟ ಆದ ನಂತರ ಸಂವಿಧಾನಾತ್ಮಕವಾಗಿ ಇಲ್ಲಿನ ಪ್ರಜೆಗಳಾದ ಯಾರೇ ಆಗಿರಲಿ ಅವರಿಗೆ ಸಮಾನ ಹಕ್ಕುಗಳು ಮತ್ತು ಕರ್ತವ್ಯಗಳಿವೆ. ಮುಖ್ಯವಾಗಿ ಅಲ್ಪಸಂಖ್ಯಾತರಾದ ಮುಸ್ಲಿಮರು ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ಕೆಲವು ವಿಶೇಷ ಸೌಲಭ್ಯಗಳನ್ನು ಹೊಂದಿದ್ದಾರೆ. ಅದನ್ನು ಎಲ್ಲರೂ ಗೌರವಿಸಿ ಅವರನ್ನು ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳುವ ಕೆಲಸ ಆಗಬೇಕು ಎಂಬ ಅಭಿಪ್ರಾಯ ಹೊಂದಿರುವವರು. ಜೊತೆಗೆ ಇಲ್ಲಿನ ಜಾತಿ ಪದ್ದತಿಯ ಅಸಮಾನತೆಯ ಕಾರಣ ಹಿಂದುತ್ವವನ್ನು ಸಂಪೂರ್ಣವಾಗಿ ಒಪ್ಪದೆ ಭಾರತೀಯತೆಯನ್ನು ಸಂವಿಧಾನದ ಪ್ರಕಾರ ಒಪ್ಪುತ್ತಾರೆ. ಗಾಂಧಿಯ ನೈತಿಕತೆ ಮತ್ತು ಅಂಬೇಡ್ಕರ್ ಸಾಮಾಜಿಕತೆ ಇವರ ಚಿಂತನಾ ವಿಧಾನ.

ಮತ್ತೊಂದು ವರ್ಗ, ಇದು ಸನಾತನ ಧರ್ಮದ ನಂಬಿಕೆಗಳ ಮೇಲೆ ನಿರ್ಮಾಣವಾಗಿರುವ ಹಿಂದೂಗಳ ದೇಶ. ಮದ್ಯದಲ್ಲಿ ಕೆಲವು ಮುಸ್ಲಿಂ ದಾಳಿಕೋರರು ಇದನ್ನು ಆಕ್ರಮಿಸಿಕೊಂಡು ತಮ್ಮ ಸಂತತಿ ಬೆಳೆಯಲು ಕಾರಣವಾದರು. ಸ್ವಾತಂತ್ರ್ಯ ನಂತರ ಧರ್ಮದ ಆಧಾರದ ಮೇಲೆ ಪಾಕಿಸ್ತಾನ ರಚನೆಯಾದ ನಂತರವೂ ಗಾಂಧಿಯವರ ಚಿತಾವಣೆಯಿಂದ ಇಲ್ಲೇ ಉಳಿದವರು. ಮುಂದೆ ಆಡಳಿತ ಮಾಡಿದವರು ಇವರನ್ನು ಅತಿಯಾಗಿ ತುಷ್ಟೀಕರಿಸಿದ ಕಾರಣ ಇಂದು ದೇಶ ಇವರ ಹಿಂಸೆಯಿಂದ ನರಳುತ್ತಿದೆ. ಯಾವುದೇ ಕಾರಣಕ್ಕೂ ಅವರು ಮೇಲುಗೈ ಪಡೆಯದೆ ಎರಡನೇ ದರ್ಜೆಯ ಪ್ರಜೆಗಳಾಗೇ ಇರಬೇಕು. ಅವರಿಗೆ ಯಾವುದೇ ವಿಶೇಷ ಸ್ಥಾನಮಾನ ನೀಡಬಾರದು. ಮುಸ್ಲಿಂ ಜನಸಂಖ್ಯೆ ಹೆಚ್ಚಾದರೆ ಹಿಂದೂಗಳಿಗೆ ಅಪಾಯ. ಇದು ಸಂಪೂರ್ಣ ಹಿಂದು ರಾಷ್ಟ್ರ ಎಂಬ ಪ್ರತಿಪಾದನೆ ಇವರದು.

ಇದು ಇಂದಿನ ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಸಾಮಾನ್ಯ ಜನರ ಸಾಮಾನ್ಯ ಅಭಿಪ್ರಾಯದ ಒಟ್ಟು ಸಾರಾಂಶ. ಇದರ ಜೊತೆಗೆ ರಾಜಕೀಯ ಪಕ್ಷಗಳ ಓಟು ಗಳಿಸುವ ತಂತ್ರಗಾರಿಕೆ ಮತ್ತು ಧಾರ್ಮಿಕ ಮುಖಂಡರ ಧರ್ಮದ ಅಫೀಮು ತಿನ್ನಿಸುವಿಕೆಯೂ ಸೇರಿ ಒಂದು ರೀತಿಯ ಗಲಭೆಕೋರ ಮನಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಜನರ ಮುಂದಿನ ಹೆಜ್ಜೆಗಳು ಹೇಗಿರಬೇಕು ಎಂಬುದೇ ಚರ್ಚೆಯ ಮುಖ್ಯ ವಿಷಯ.

ಸತ್ಯ ಏನೇ ಇದ್ದರು ಈ ಸಮಾಜ ನಡೆಯುವುದು ವಾಸ್ತವ ಪ್ರಜ್ಞೆಯಿಂದಲೇ. ಉಗ್ರ ‌ಹಿಂದುತ್ವವಾದಕ್ಕೆ ತಕ್ಕ ಉತ್ತರ ನೀಡಬೇಕೆಂದರೆ ಅದು ಸಂವಿಧಾನದಿಂದ ಮಾತ್ರ ಸಾಧ್ಯ.  ಖುರಾನ್ ನಿಂದ ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು. ಆ ಸಮುದಾಯದ ಧಾರ್ಮಿಕ ಮುಖಂಡರು ಮತ್ತು ಪ್ರಜ್ಞಾವಂತರು ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಇಲ್ಲದಿದ್ದರೆ ಖುರಾನ್ ಮತ್ತು ಭಗವದ್ಗೀತೆ ಮುಖಾಮುಖಿಯಾಗಿ ಧರ್ಮ ಯುದ್ಧದ ವಾತಾವರಣ ನಿರ್ಮಾಣವಾಗುತ್ತದೆ. 

ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ಕೆಲವು ಆಚರಣೆಗಳಿಗೆ ಕಾನೂನಿನ ಮಾನ್ಯತೆ ಇದ್ದರೂ ಸಹ ಅವು ಮೌಡ್ಯದ ಸಂಕೇತ ಮತ್ತು ಈ‌ ಆಧುನಿಕ ಕಾಲದಲ್ಲಿ ಅದರ ಅವಶ್ಯಕತೆ ಇಲ್ಲ ಎನಿಸಿದರೆ ಅದನ್ನು ವೈಜ್ಞಾನಿಕ ನೆಲೆಯಲ್ಲಿ ಮೆಟ್ಟಿ ನಿಲ್ಲುವ ಧೈರ್ಯ ತೋರಬೇಕು. ಉದಾಹರಣೆಗೆ ಕೆಲವು ಅರಬ್ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ನೀಡಲಾಗಿದೆ. ಹಾಗೆಯೇ ಇರಾನಿನ ಮಹಿಳೆಯರು ಕಬಡ್ಡಿ ಆಡಲು ಅದಕ್ಕೆ ಅನುಕೂಲಕರ ಬಟ್ಟೆ ತೊಡುತ್ತಾರೆ. ಹೀಗೆ ಇನ್ನೂ ಹಲವಾರು...

ಮುಸ್ಲಿಂ ಸಮುದಾಯ ಪ್ರಜ್ಞಾವಂತ ಮತ್ತು ವೈಚಾರಿಕ ಪ್ರಜ್ಞೆಯ ನಾಯಕತ್ವದ ಕೊರತೆ ಎದುರಿಸುತ್ತಿದೆ. ಅಪರೂಪದ ಕೆಲವು ವ್ಯಕ್ತಿಗಳನ್ನು ಹೊರತುಪಡಿಸಿದರೆ ಸ್ಥಳೀಯ ಮಟ್ಟದಲ್ಲಿ ಅದು ದುರ್ಬಲವಾಗಿದೆ. ಕೆಲವು ಕಡೆ ಧಾರ್ಮಿಕ ನಾಯಕತ್ವ ಮತ್ತೆ ಕೆಲವು ಕಡೆ ರಾಜಕೀಯ ನಾಯಕತ್ವ ಪ್ರಾಮುಖ್ಯತೆ ಪಡೆಯುತ್ತಿದೆ. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ನಾಯಕತ್ವ ಬೆಳೆಯುತ್ತಿಲ್ಲ. ಇದು ಹೊಸ ತಲೆಮಾರಿಗೆ ಹೊಸ ರಕ್ತ ಹರಿಯಲು ತೊಡಕಾಗಿದೆ. 

ಅತಿ ವೇಗವಾಗಿ ಬೆಳೆಯುತ್ತಿರುವ ಯುವ ಮನಸ್ಸುಗಳಿಗೆ ರೋಲ್ ಮಾಡೆಲ್ ಗಳು ತುಂಬಾ ಅವಶ್ಯಕ. ಇಲ್ಲದಿದ್ದರೆ ಸಿನಿಮಾ ನಟರು ಅಥವಾ ರಾಜಕೀಯ ಅಧಿಕಾರ ಪಡೆದವರು ಆ ಜಾಗ ಆಕ್ರಮಿಸಿದರೆ ಅದು ಹಾದಿ ತಪ್ಪಿದಂತಾಗುತ್ತದೆ. ಏಕೆಂದರೆ ಕೆಲವು ಹಿಂದು ಮೂಲಭೂತವಾದಿ ವಿಭಜಕ ಶಕ್ತಿಗಳು ಕೆಟ್ಟ ಮುಸ್ಲಿಂ ನಾಯಕತ್ವದ ಹುಡುಕಾಟದಲ್ಲಿರುತ್ತವೆ. ಆ ರೀತಿಯ ಮನೋಭಾವದ ವ್ಯಕ್ತಿಗಳನ್ನು ಹುಡುಕಿ ಅವರಿಗೆ ಮುಖ್ಯ ವಾಹಿನಿಯ ಮಾಧ್ಯಮದಲ್ಲಿ ಚರ್ಚೆಗಳ ಮುಖಾಂತರ ವೇದಿಕೆ ಕಲ್ಪಿಸುತ್ತಾರೆ ಮತ್ತು ಅವರಿಗೆ ಉದ್ದೇಶ ಪೂರ್ವಕವಾಗಿಯೇ ಉತ್ತರಿಸಲು ಕಷ್ಟವಾಗುವ ದೇಶ ವಿರೋಧಿ ಅಥವಾ ಧರ್ಮ ವಿರೋಧಿ ಪ್ರಶ್ನೆಗಳನ್ನು ಕೇಳಿ ಗೊಂದಲ ಮೂಡಿಸಿ ಬಹುಸಂಖ್ಯಾತ  ಹಿಂದುಗಳು ಕೋಪಗೊಳ್ಳುವಂತೆ ಮಾಡುತ್ತಾರೆ. ಇದನ್ನು ಮೀರುವ ಭೌದ್ಧಿಕ ಮನೋಭಾವ ಬೆಳೆಸುವ ನಾಯಕತ್ವ ಬೇಕಾಗಿದೆ.

ರಾಜಕೀಯ ಕಾರಣ ಹೊರತುಪಡಿಸಿಯೂ ಮುಸ್ಲಿಂ ಸಮುದಾಯವನ್ನು ಸಹಜ ಸ್ವಾಭಾವಿಕ ಸಹಾನುಭೂತಿ ಹೊಂದಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬೆಂಬಲಿಸುವ ಸಾಕಷ್ಟು ಹಿಂದುಗಳು ಸಹ ಇಲ್ಲಿ ಇದ್ದಾರೆ. ಯಾವುದೇ ಪ್ರತಿಭಟನೆ ಅಥವಾ ಚಳವಳಿ ಮಾಡುವ ಮುನ್ನ ಮುಸ್ಲಿಂ ಸಮುದಾಯ ಇದನ್ನು ಸದಾ ನೆನಪಿನಲ್ಲಿಟ್ಟುಕೊಂಡಿರಬೇಕು. ವಿದ್ವಂಸಕ ಶಕ್ತಿಗಳು ಎರಡೂ ಕಡೆ ಇರುತ್ತಾರೆ. ಹಾಗೆಯೇ ಪ್ರೀತಿಯ ಮನಸ್ಸುಗಳು ಸಹ ಎರಡೂ ಕಡೆ ಇರುತ್ತಾರೆ. ಉದ್ವೇಗದಲ್ಲಿ ಯಾವುದೇ ನಿರ್ಧಾರ ಒಳ್ಳೆಯದಲ್ಲ.

ಮನುಷ್ಯ ವಿರೋಧಿಯಾದ, ಹಿಂಸೆಯ ಪರವಾದ ಯಾವುದೇ ಅಂಶಗಳು ಅದು ಧರ್ಮ ಗ್ರಂಥಗಳಲ್ಲಿ ಇದ್ದರೂ ಸಹ ಹಿಂದು ಪ್ರಗತಿಪರರಂತೆ ಅದನ್ನು ಬಲವಾಗಿ ಖಂಡಿಸಬೇಕು ಮತ್ತು ಆ ರೀತಿಯ ಮನೋಭಾವದ ಜನರ ಸಂಖ್ಯೆ ಹೆಚ್ಚಾಗುವಂತೆ ಮಾಡಬೇಕು. ಎಲ್ಲಾ ಧರ್ಮದ ಎಲ್ಲಾ ಸಂಪ್ರದಾಯ ಆಚರಣೆಗಳು ಅನುಭವದಿಂದ ಅಳವಡಿಸಿಕೊಂಡ ಉತ್ತಮ ಅಂಶಗಳು ನಿಜ. ಆದರೆ ಕೆಲವೊಂದು ಆಚರಣೆಗಳು ಕಾಲದ ಪಯಣದಲ್ಲಿ ಅದರ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಮಾರ್ಪಡುತ್ತದೆ ಮತ್ತು ಅನವಶ್ಯಕ ಎನಿಸುತ್ತದೆ. ಅವುಗಳನ್ನು ಈ ಕ್ಷಣದ ಅರಿವಿನಲ್ಲಿ ಪುನರ್ ರೂಪಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರದು.

ಧರ್ಮ ದೇವರು ನಂಬಿಕೆಯ ಹಿನ್ನೆಲೆಯಲ್ಲಿ ಎಲ್ಲವನ್ನೂ ಎಲ್ಲಾ ಧರ್ಮದವರು ಸಮರ್ಥಿಸಿಕೊಳ್ಳುತ್ತಾರೆ. ಆ ಸಂಪ್ರದಾಯಗಳ ಹಿಂದಿನ ವೈಚಾರಿಕತೆಯನ್ನು ಈಗಲೂ ಹೇಳುತ್ತಾರೆ. ಆದರೆ ಅದರ ಈ ಕ್ಷಣದ ಫಲಿತಾಂಶ ಮುಖ್ಯವಾಗಬೇಕು. ವಿಜ್ಞಾನ ಇಂದು ತನ್ನೆಲ್ಲಾ ಮಿತಿಗಳ ನಡುವೆಯೂ ಜನರ ಜೀವನದ ಅವರ ದಿನನಿತ್ಯದ ಅವಶ್ಯಕತೆಗಳ ಭಾಗವಾಗಿರುವುದಕ್ಕೆ ಕಾರಣ ಸದಾ ಅದು ಅನುಸರಿಸುವ ಬದಲಾವಣೆಗಳು ಮತ್ತು ಮೇಲ್ದರ್ಜೆಗೆ ಏರಿಸುವ ಕಾರ್ಯತಂತ್ರಗಳು, ಸತ್ಯ ಒಪ್ಪಿಕೊಳ್ಳುವ ವಿನಯ ಹಾಗು ಸಾರ್ವತ್ರಿಕ ಖಚಿತತೆ ಕಾರಣವಾಗಿದೆ.

ಈ ನಿಟ್ಟಿನಲ್ಲಿ ಯುವ ಮತ್ತು ವಿದ್ಯಾವಂತ ಮುಸ್ಲಿಂ ಸಮುದಾಯ ಇನ್ನೊಮ್ಮೆ ಮುಕ್ತವಾಗಿ ಮತ್ತು ದಿಟ್ಟವಾಗಿ ಈ ಆಚರಣೆಗಳ ಬಗ್ಗೆ ಯೋಚಿಸಲಿ. ನೀವು ಒಪ್ಪಿ - ಬಿಡಿ ಅಥವಾ ಇದು ಸುಳ್ಳೋ - ನಿಜವೋ ಒಟ್ಟಿನಲ್ಲಿ ಜಾಗತಿಕವಾಗಿ ಇಸ್ಲಾಂ ಮತ್ತು ಭಯೋತ್ಪಾದನೆ ಒಂದಕ್ಕೊಂದು ತಳಕು ಹಾಕಿಕೊಂಡಿದೆ. ಅದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣಗಳು ಏನೇ ಇರಬಹುದು. ಎಲ್ಲಾ ಧರ್ಮಗಳಲ್ಲೂ ಭಯೋತ್ಪಾದನೆ ಇರಬಹುದು. ಆದರೆ  ಭಯೋತ್ಪಾದನೆ ಇರಾಕ್, ಸಿರಿಯಾ, ಆಪ್ಘನಿಸ್ತಾನ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಅತಿಹೆಚ್ಚು ಇರುವುದರಿಂದ ಅದು ಇಸ್ಲಾಂ ಭಯೋತ್ಪಾದನೆಯಾಗಿ ಬಿಂಬಿತವಾಗಿದೆ. ಕ್ರಿಶ್ಚಿಯನ್, ಯಹೂದಿ, ಬೌದ್ದ, ಸಿಖ್‌, ಹಿಂದೂ ಭಯೋತ್ಪಾದನೆ ಸಹ ಇದ್ದರೂ ಪ್ರಮುಖವಾಗಿ ಚರ್ಚಿತವಾಗುವುದು ಇಸ್ಲಾಂ ಭಯೋತ್ಪಾದನೆಯ ಬಗ್ಗೆ.

ಉಗ್ರರ ಕ್ರೌರ್ಯ ಮತ್ತು ಮುಗ್ಧರ ಅಸಹಾಯಕ ಮಾರಣ ಹೋಮ ಮಾಧ್ಯಮಗಳಲ್ಲಿ ಪ್ರಸಾರವಾಗವುದನ್ನು ನೋಡಿದರೆ ಕೋಪ ಮತ್ತು ದುಃಖ ಒಟ್ಟಿಗೇ ಉಂಟಾಗುತ್ತದೆ. ಅದಕ್ಕೆ ಕಾರಣರಾದವರ ಬಗ್ಗೆ ಯಾರಿಗೇ ಆಗಲಿ ಆಕ್ರೋಶ ಉಕ್ಕುತ್ತದೆ. ಇಂತಹ ಸೂಕ್ಷ್ಮ  ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ  ಇಸ್ಲಾಂ ಶಾಂತಿ ಸೌಹಾರ್ದತೆಯ ಸಂಕೇತ ಎಂದು ವಿಶ್ವಕ್ಕೇ ನಿರೂಪಿಸುವ ಬಹುದೊಡ್ಡ ಜವಾಬ್ದಾರಿ ಇರುವುದು ಮತ್ತು ಹೊರಬೇಕಾಗಿರುವುದು ಬಹುಶಃ ಜನಸಂಖ್ಯೆಯ ದೃಷ್ಟಿಯಿಂದ ಅತಿಹೆಚ್ಚು ಜನರನ್ನು ಒಟ್ಟಿಗೆ ಹೊಂದಿರುವ  ಭಾರತೀಯ ಮುಸ್ಲಿಮರದು. ಅದಕ್ಕೆ ಕಾರಣವೂ ಇದೆ. ಭಾರತೀಯ ನೆಲದ , ಜಾತ್ಯಾತೀತ ಸಂವಿಧಾನದ , ಸರ್ವ ಧರ್ಮಗಳ ಸಮನ್ವಯದ,  ಶಾಂತಿಯ ನಾಡಾದ ಇಲ್ಲಿನ ಗುಣಗಳನ್ನು ತಮ್ಮ ರಕ್ತದಲ್ಲಿಯೇ ಹೊಂದಿರುವ  ಬಹಳಷ್ಟು ಮುಸ್ಲಿಂಮರು . ತಮ್ಮ ಎಲ್ಲಾ ತೃಪ್ತಿ ಅತೃಪ್ತಿಗಳ ನಡುವೆಯೂ ಅನೇಕ ಶತಮಾನಗಳಿಂದ ವಿಭಿನ್ನ ಆಚರಣೆಗಳ ಹಿಂದೂಗಳ ಜೊತೆ ಸೌಹಾರ್ದತೆ ಮತ್ತು ಸಮನ್ವಯತೆಯಿಂದ ಜೀವಿಸುತ್ತಿರುವ ಅನುಭವ ಮತ್ತು ಇತಿಹಾಸ ಅವರಿಗಿದೆ. 

ಬುದ್ಧ ಮಹಾವೀರ ಗುರುನಾನಕ್ ರಂತ ಶಾಂತಿ ಸಹಿಷ್ಣುಗಳ ನಾಡಿನಲ್ಲಿ, ಬಸವ ವಿವೇಕಾನಂದ ಗಾಂಧಿ ಅಂಬೇಡ್ಕರ್ ರವರ ಸಾಮಾಜಿಕ ಸಮಾನತೆ ಮತ್ತು ಮಾನವೀಯ ಚಳವಳಿಯ ಈ ಮಣ್ಣಿನಲ್ಲೇ ಹುಟ್ಟಿದ ಮುಸ್ಲೀಮರು ಅವುಗಳ ಪ್ರಭಾವದಿಂದ  ಪ್ರೇರಿತರಾಗಿ ತಮ್ಮ ನಡವಳಿಕೆಗಳಲ್ಲಿ  ಅವರ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ. ಭಾರತೀಯರ ಜೀವನ ಶೈಲಿ, ಸರ್ವ ಧರ್ಮ‌ಸಹಿಷ್ಣತೆ, ಶಾಂತಿ ಸಹಬಾಳ್ವೆ ಅವರಿಗೆ ಮನವರಿಕೆಯಾಗಿದೆ. ಹಾಗೆಯೇ ಇಲ್ಲಿನ ಮೌಡ್ಯ ಅಜ್ಞಾನ  ರಾಜಕೀಯದಲ್ಲೂ ಕೂಡ ಅವರ ಪಾಲಿದೆ.

ಪರ್ಷಿಯನ್ ಮತ್ತು ಅರಬ್ ದೇಶಗಳಷ್ಟು ಗಾಢ ಧಾರ್ಮಿಕ ಮೂಲಭೂತವಾದಿತನವನ್ನು ಹೊಂದದೆ, ಹಿಂಸೆ ಮತ್ತು ಅಮಾಯಕರ ಮಾರಣಹೋಮ ಖುರಾನ್ ನ ತತ್ವಗಳಿಗೆ ವಿರುದ್ಧವಾಗಿದೆ ಎಂದು ನಂಬಿ ಆಚರಿಸುವ ಮನೋಭಾವ ಅನೇಕ ಭಾರತೀಯ ಮುಸ್ಲೀಮರಲ್ಲಿ ಅಡಕವಾಗಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿನ ಹಿಂದೂ ಪ್ರಗತಿಪರರ ನಿಲುವುಗಳನ್ನು ಬಹುತೇಕ ಬೆಂಬಲಿಸುವ ಇವರು ಇನ್ನೂ ಹೆಚ್ಚು ಹೆಚ್ಚು ಧಾರ್ಮಿಕ ಅಂಧಶ್ರಧ್ಧೆಯನ್ನು ಕಡಿಮೆಗೊಳಿಸಿಕೊಳ್ಳುವ ಮೂಲಕ ಮತ್ತು ಭಯೋತ್ಪಾದಕ ಹಿಂಸೆಯನ್ನು ಖಂಡಿಸುವ ಮತ್ತು ತಡೆಯುವ ಮುಖಾಂತರ ಆಧುನಿಕತೆಗೆ ಮತ್ತು ವೈಚಾರಿಕತೆಗೆ ತಮ್ಮನ್ನು ಮುಕ್ತಗೊಳಿಸಿಕೊಂಡು ಇಡೀ ವಿಶ್ವಕ್ಕೇ ಶಾಂತಿ ಧೂತರಾಗುವ ಬಹುದೊಡ್ಡ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ರಂಜಾನ್ ಉಪವಾಸ ಆರಂಭದ ಈ ಶುಭ ಸಂದರ್ಭದಲ್ಲಿ ಆಶಿಸುತ್ತಾ.. ಏಕೆಂದರೆ ವಿಶ್ವದಲ್ಲಿ ಅನೇಕ ಧರ್ಮಗಳ ಹುಟ್ಟಿನ ಮತ್ತು ಸಮನ್ವಯದ ಹಾಗೂ ಭಿನ್ನತೆಯಲ್ಲೂ ಐಕ್ಯತೆಯನ್ನು ಹೊಂದಿದ ಏಕೈಕ ರಾಷ್ಟ್ರ ನಮ್ಮ ತಾಯ್ನಾಡು ಭಾರತ.

ಇಲ್ಲಿ ಮೌಡ್ಯವಿದೆ, ಹಿಂಸೆಯಿದೆ, ಅತಿರೇಕವಿದೆ, ಧಾರ್ಮಿಕ ಅಂಧಶ್ರದ್ದೆ ಇದೆ. ಬಹಳಷ್ಟು ಮೂಲಭೂತವಾದಿಗಳು ಧರ್ಮ ಮತ್ತು ದೇಶದ ಆಯ್ಕೆಯಲ್ಲಿ ಧರ್ಮವನ್ನು ಒಪ್ಪಿಕೊಳ್ಳುವ ಮೂರ್ಖತನವಿದೆ. ಹಿಂದೂ ಮೂಲಭೂತವಾದಿಗಳ ಪ್ರಚೋದನೆಗೆ ಸುಲಭವಾಗಿ ಬಲಿಯಾಗುವ ಹುಂಬುತನವಿದೆ. ಅದಕ್ಕಾಗಿಯೇ ಈ ನೆಲದ ನಮ್ಮದೇ ಸಂಸ್ಕೃತಿಯ ಕೇವಲ ಕೆಲವು ಭಿನ್ನ ಆಚರಣೆಗಳ ನಮ್ಮದೇ ಜನರ  ಆತ್ಮಾವಲೋಕನಕ್ಕಾಗಿ ಈ ಮನವಿ. ಈ ದೇಶ, ನಮ್ಮದು ಮತ್ತು ನಿಮ್ಮದು. ಯಾವುದೇ ಅಭದ್ರತೆ ಬೇಡ. ಎರಡು ಧರ್ಮಗಳು ವಿರುದ್ಧವಾಗುವ ಕ್ರಿಯೆಗಿಂತ ಅವುಗಳ ಐಕ್ಯವಾಗುವ, ಸಮನ್ವಯವಾಗುವ ದಿನಗಳು ಮುಂದೆ ಬರಲಿ ಎಂಬ ಆಶಯದೊಂದಿಗೆ..

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ