ರಾಗಿ ಉಪ್ಪಿಟ್ಟು

ರಾಗಿ ಉಪ್ಪಿಟ್ಟು

ಬೇಕಿರುವ ಸಾಮಗ್ರಿ

ರವೆ - ಅರ್ಧ ಕಪ್, ರಾಗಿ ಹುಡಿ - ಅರ್ಧ ಕಪ್, ಸಾಸಿವೆ- ಅರ್ಧ ಚಮಚ, ಉದ್ದಿನಬೇಳೆ- ಅರ್ಧ ಚಮಚ, ಕಡಲೇಬೇಳೆ-ಅರ್ಧ ಚಮಚ, ಸ್ವಲ್ಪ ಗೋಡಂಬಿ, ಸ್ವಲ್ಪ ಎಣ್ಣೆ, ಈರುಳ್ಳಿ - ೧, ಹಸಿಮೆಣಸು- ೨, ಸಣ್ಣ ತುಂಡು ಶುಂಠಿ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ತುಪ್ಪ - ೧ ಚಮಚ, ಪುದಿನಾ ಸೊಪ್ಪು

ತಯಾರಿಸುವ ವಿಧಾನ

ಕಾದ ತವಾಗೆ ಒಂದು ಚಮಚ ಎಣ್ಣೆಯನ್ನು ಹಾಕಿ. ಅದಕ್ಕೆ ರವೆ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ರಾಗಿ ಹುಡಿಯನ್ನು ಸೇರಿಸಿ ಐದು ನಿಮಿಷ ಕಾಲ ಚೆನ್ನಾಗಿ ಹುರಿಯಿರಿ. ಅದನ್ನು ಒಲೆಯಿಂದ ತೆಗೆದು ಪಕ್ಕಕ್ಕೆ ಇಡಿ. ಕಾದ ತವಾಗೆ ಮತ್ತೆ ಎರಡು ಚಮಚ ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ, ಕಡಲೇ ಬೇಳೆ, ಗೋಡಂಬಿ ಹಾಕಿ ಚೆನ್ನಾಗಿ ಒಗ್ಗರಣೆ ತಯಾರಿಸಿ. 

ಇದಕ್ಕೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕರಿಬೇವು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಎರಡೂವರೆ ಕಪ್ ನೀರನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ. ಇದಕ್ಕೆ ಮೊದಲೇ ತೆಗೆದು ಇರಿಸಿದ್ದ ರಾಗಿ ಮತ್ತು ರವೆಯ ಮಿಶ್ರಣವನ್ನು ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಆಗಿ ಕುದಿಯುತ್ತಿರುವ ನೀರಿಗೆ ಸೇರಿಸಬೇಕು. ಹತ್ತು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಬೇಕು. ಕೊನೆಯಲ್ಲಿ ಒಂದು ಚಮಚ ತುಪ್ಪ ಮತ್ತು ಪುದೀನಾ ಸೊಪ್ಪನ್ನು ಸೇರಿಸಿ ಚೆನ್ನಾಗಿ ಬೆರೆಸಬೇಕು.