ರೈತ ಗಜೇಂದ್ರ ಸಿಂಗರ ಬಲಿದಾನದ ನಂತರ

ರೈತ ಗಜೇಂದ್ರ ಸಿಂಗರ ಬಲಿದಾನದ ನಂತರ

ಎಷ್ಟು ಬೇಗ ಮರೆತು ಬಿಡುತ್ತೇವೆ! ದಿನಾಂಕ ೨೨ ಎಪ್ರಿಲ್ ೨೦೧೫. ಸ್ಥಳ: ನವದೆಹಲಿ. ಸಂದರ್ಭ: ಆಮ್ ಆದ್ಮಿ ಪಕ್ಷ ಸಂಘಟಿಸಿದ್ದ ಸಾರ್ವಜನಿಕ ಪ್ರತಿಭಟನಾ ಕಾರ್ಯಕ್ರಮ. ರಾಜಸ್ಥಾನದ ದಾವುಸಾ ಜಿಲ್ಲೆಯ ಬಂಡಿಕುಯಿಯ ರೈತ ಗಜೇಂದ್ರ ಸಿಂಗ್ ಅಲ್ಲಿ ಒಂದು ಮರ ಏರಿ ನಿಂತು, ಕೈಯಲ್ಲಿ ಪೊರಕೆ ಹಿಡಿದು ಘೋಷಣೆ ಕೂಗುತ್ತಿದ್ದರು.
ಮುಂದಿನ ಕ್ಷಣದಲ್ಲಿ ಎಲ್ಲರ ಕಣ್ಣೆದುರಿನಲ್ಲಿ ಅವರ ದೇಹ ಅದೇ ಮರದಿಂದ ನೇತಾಡುತ್ತಿತ್ತು. ಮುಂದೆ ಆದದ್ದೇನು?
ರಾಜಕೀಯ ಪಕ್ಷಗಳಿಂದ ಕೆಸರೆರಚಾಟ. ಮಾಧ್ಯಮಗಳಿಂದ ಸಾಲುಸಾಲು ವರದಿಗಳು. ಈ ಎಲ್ಲ ಗದ್ದಲದಲ್ಲಿ ಅಂದಿನ ಪ್ರತಿಭಟನೆ ಯಾಕೆ? ಎಂಬುದನ್ನೇ ನಾವೆಲ್ಲ ಮರೆತಿದ್ದೇವೆ. ತಾನು ಅಂತಹ ಕಠೋರ ನಿರ್ಧಾರ ತೆಗೆದುಕೊಳ್ಳಲು ಕಾರಣಗಳೇನೆಂದು ಗಜೇಂದ್ರ ಸಿಂಗ್ ಕೈಬರಹದ ಚೀಟಿಯಲ್ಲಿ ಬರೆದಿಟ್ಟಿದ್ದರಲ್ಲ – ಆ ಕಾರಣಗಳೇನು ಎಂಬುದನ್ನೇ ಮರೆತಿದ್ದೇವೆ.
ನ್ಯಾಯಯುತ ಪರಿಹಾರದ ಹಕ್ಕು (ಬೆಳೆ ನಾಶವಾದಾಗ) ಆಗ್ರಹಕ್ಕಾಗಿ ಹಾಗೂ ಭೂಸ್ವಾಧೀನ, ಪುನರ್ನೆಲೆ ಮತ್ತು ಪುನರ್ವಸತಿ (ತಿದ್ದುಪಡಿ) ಸುಗ್ರೀವಾಜ್ನೆ ೨೦೧೫ರ ರೈತರಿಗೆ ಕಂಟಕವಾದ ಅಂಶಗಳನ್ನು ವಿರೋಧಿಸಲಿಕ್ಕಾಗಿ ಸಂಘಟಿಸಲಾಗಿತ್ತು ಅಂದಿನ ಪ್ರತಿಭಟನೆಯನ್ನು.
ಅದಾಗಿ ಒಂದು ವಾರದಲ್ಲಿ, ೧ ಮೇ ೨೦೧೫ರಂದು ಬುಂದೇಲ್ ಖಂಡಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗರಿಂದ ಮಹತ್ವದ ಘೋಷಣೆ: ರೈತರ ಬೆಳೆಯ ಶೇಕಡಾ ೩೩ (ಅಂದರೆ ಮೂರನೇ ಒಂದು ಭಾಗ) ನಾಶವಾದರೂ ರೈತರು ಬೆಳೆನಷ್ಟ ಪರಿಹಾರಕ್ಕೆ ಅರ್ಹರು (ಮುಂಚೆ ಬೆಳೆಯ ಶೇಕಡಾ ೫೦ ಭಾಗ ನಾಶವಾದರೆ ಮಾತ್ರ ರೈತರಿಗೆ ಪರಿಹಾರ ನೀಡಲಾಗುತ್ತಿತ್ತು) ಹಾಗೂ ಮಳೆಯಾಧಾರಿತ ಪ್ರದೇಶಗಳಲ್ಲಿ ಬೆಳೆ ಬೆಳೆಸುವ ರೈತರೂ ಒಳಸುರಿಗಳ ಸಬ್ಸಿಡಿ ರೂಪದಲ್ಲಿ ಪರಿಹಾರ ಪಡೆಯಬಹುದೆಂದು ಅವರಿಂದ ಘೋಷಣೆ (ಆದರೆ ಪ್ರತಿಯೊಬ್ಬ ರೈತನಿಗೆ ಗರಿಷ್ಠ ಕೇವಲ ೨ ಹೆಕ್ಟೇರ್ ಜಮೀನಿಗೆ ಮಾತ್ರ).
ಇದಕ್ಕೆ ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹರ್ಪಾಲ್ ಸಿಂಗರ ಪ್ರತಿಕ್ರಿಯೆ ಹೀಗಿದೆ: “ಬೆಳೆಗಳ ಫಸಲಿನ ಮಟ್ಟ ಶೇಕಡಾ ೧೦ಕ್ಕೆ ಕುಸಿದಿದ್ದು, ಬೆಳೆ ಬೆಳೆಸುವ ವೆಚ್ಚ ೧೬ ಪಟ್ಟು ಹೆಚ್ಚಾಗಿರುವ ಈಗಿನ ಸಂದರ್ಭದಲ್ಲಿ, ಬೆಳೆನಷ್ಟದ ಪರಿಹಾರವನ್ನು ಕೇವಲ ಎರಡು ಹೆಕ್ಟೇರ್ ಜಮೀನಿಗೆ ಸೀಮಿತಗೊಳಿಸುವುದು ಸರಿಯಲ್ಲ. ಪ್ರತಿಯೊಂದು ಜಿಲ್ಲೆಯಲ್ಲಿ ಶೇಕಡಾ ೫೫ಕ್ಕಿಂತ ಜಾಸ್ತಿ ಬೆಳೆ ನಾಶವಾಗಿದೆ. ಅದರಿಂದಾಗಿ ರೈತರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಅದುವೇ ಅವರನ್ನು ಆತ್ಮಹತ್ಯೆಗೆ ತಳ್ಳುತ್ತಿದೆ.”
ಅಖಿಲ ಭಾರತ ಕಿಸಾನ್ ಸಭಾದ ರಾಜಸ್ಥಾನದ ವಕ್ತಾರ ತಾರಾ ಸಿಂಗ್ ಸಿದ್ಧು ಹೀಗೆ ಆಗ್ರಹಿಸುತ್ತಾರೆ, “ರಾಜಸ್ಥಾನದ ಕೋಟಾ, ಬರ್ಮರ್ ಮತ್ತು ಜಾಲೋರ್ ಜಿಲ್ಲೆಗಳಲ್ಲಿ ಆಹಾರದ ಮತ್ತು ರೊಕ್ಕದ ಬೆಳೆಗಳಿಗೆ ತೀವ್ರ ನಷ್ಟವಾಗಿದೆ. ಜನವರಿ – ಫೆಬ್ರವರಿಯಲ್ಲಿ ಮತ್ತು ಮಾರ್ಚ್ ತಿಂಗಳಿನಲ್ಲಿ ಸುರಿದ ಆಲಿಕಲ್ಲು ಹಾಗೂ ಅಕಾಲಿಕ ಮಳೆಯಿಂದಾಗಿ ಅಪಾರ ಬೆಳೆನಷ್ಟವಾಗಿದೆ. ಇಂತಹ ಸನ್ನಿವೇಶದಲ್ಲಿ, ತಾಲೂಕು (ಬ್ಲಾಕ್) ಮಟ್ಟದ ಬೆಳೆನಷ್ಟ ಪರಿಗಣಿಸಿ ಪರಿಹಾರ ನೀಡುವುದು ಸರಿಯಲ್ಲ. ಯಾರಿಗೇ ಆದರೂ ಎಲ್ಲೇ ಆದರೂ ಬೆಳೆನಷ್ಟವಾದರೆ ಪರಿಹಾರ ನೀಡಬೇಕು. ತಾಲೂಕಿನ ಬದಲಾಗಿ, ಗ್ರಾಮವನ್ನು ಮೂಲಘಟಕವಾಗಿ ಪರಿಗಣಿಸಿ, ಪರಿಹಾರ ಪಾವತಿಸಬೇಕು.”
ಆದರೆ ಕೇಂದ್ರ ಸರಕಾರ ಮಾಡಿದ್ದೇನು? ಆಲಿಕಲ್ಲಿ ಹಾಗೂ ಅಕಾಲಿಕ ಮಳೆ ಅಪ್ಪಳಿಸಿದ ೬ ತಿಂಗಳುಗಳ ನಂತರ, ೨೮ ಎಪ್ರಿಲ್ ೨೦೧೫ರಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಸಂಸತ್ತಿಗೆ ತಿಳಿಸಿದ್ದು: “೧೮೯ ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆನಷ್ಟವಾಗಿದೆ”. ಕೆಲವೇ ದಿನಗಳಲ್ಲಿ ಕೇಂದ್ರ ಸರಕಾರವು “ಬೆಳೆನಷ್ಟವಾದದ್ದು ಕೇವಲ ೭೫ ಲಕ್ಷ ಹೆಕ್ಟೇರುಗಳಲ್ಲಿ” ಎಂದು ಪರಿಷ್ಕೃತ ಮಾಹಿತಿ ಪ್ರಕಟಿಸಿತು! ಇದಕ್ಕೆ ಕೇಂದ್ರ ಸರಕಾರ ನೀಡಿದ ಕಾರಣ: ರಾಜ್ಯ ಸರಕಾರಗಳು ಬೆಳೆನಷ್ಟವಾದ ಪ್ರದೇಶದ ವಿಸ್ತೀರ್ಣವನ್ನು ಜಾಸ್ತಿ ತೋರಿಸಿವೆ. ಈ ದೇಶದ ಉದ್ದಗಲದಲ್ಲಿ ಬೇಸಾಯ ಮತ್ತು ಬೇಸಾಯಗಾರರು ಸಂಕಟದಲ್ಲಿ ನಲುಗುತ್ತಿರುವಾಗ ಇದೆಂತಹ ನಿಷ್ಕರುಣೆಯ ಧೋರಣೆ!
ಈ ಹಿನ್ನೆಲೆಯಲ್ಲಿ ಹಲವು ಜನಪರ ಸಂಘಟನೆಗಳು ಒಗ್ಗೂಡಿ ೫ ಮೇ ೨೦೧೫ರಂದು ನವದೆಹಲಿಯಲ್ಲಿ “ಭೂಮಿ ಅಧಿಕಾರ್ ಸಂಘರ್ಷ ಆಂದೋಲನ” ಎಂಬ ಬೃಹತ್ ಸಾರ್ವಜನಿಕ ಪ್ರತಿಭಟನಾ ಸಭೆ ನಡೆಸಿದವು. ಅದರ ಸಂಘಟಕರಲ್ಲಿ ಮುಂಚೂಣಿಯಲ್ಲಿದ್ದ ಅಖಿಲ ಭಾರತ ಕಿಸಾನ್ ಸಭಾದ ಬೇಡಿಕೆಗಳು ಹೀಗಿವೆ: ಎಲ್ಲ ಕೃಷಿ ಸಾಲಗಳ ಮನ್ನಾ; ಬೆಳೆವಿಮೆಯ ಪರಿಹಾರವನ್ನು ಪ್ರತಿಯೊಬ್ಬ ರೈತನ ಹೊಲದ ಬೆಳೆನಷ್ಟ ಆಧರಿಸಿ ಅಂದಾಜು ಮಾಡಬೇಕು; ಈ ಪರಿಹಾರವು ಬೆಳೆಯ ಕೃಷಿವೆಚ್ಚದ ಇಮ್ಮಡಿಗಿಂತ ಕಡಿಮೆ ಇರಬಾರದು; ಮೂರು ತಿಂಗಳಿನ ಕನಿಷ್ಠ ಮಜೂರಿಗೆ ಸಮಾನವಾದ ಪರಿಹಾರವನ್ನು ಕೃಷಿಕಾರ್ಮಿಕರಿಗೆ ಪಾವತಿಸಬೇಕು; ಅವರಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನ್ವಯ ಉದ್ಯೋಗ ಒದಗಿಸಬೇಕು.
ಈಗ, ೨೦೨೩ ಮುಗಿಯುತ್ತಾ ೨೦೨೪ರ ಹೊಸ್ತಿಲಲ್ಲಿ ನಿಂತಿರುವಾಗ ಪರಿಸ್ಥಿತಿ ಬದಲಾಗಿದೆಯೇ? ಇಲ್ಲ. ಕರ್ನಾಟಕದ ಪರಿಸ್ಥಿತಿಯಂತೂ ಶೋಚನೀಯ. ೨೦೨೩ರಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕಡಿಮೆಯಾದ ಕಾರಣ ಕರ್ನಾಟಕ ಸರಕಾರವು ಹಲವು ಒಳನಾಡಿನ ಜಿಲ್ಲೆಗಳ ೨೨೩ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ! ಆ ತಾಲೂಕುಗಳ ರೈತರ ಬವಣೆಗೆ ಕೊನೆಯಿಲ್ಲದಂತಾಗಿದೆ. ಕರ್ನಾಟಕ ಸರಕಾರ ಬರಪೀಡಿತ ತಾಲೂಕುಗಳ ರೈತರಿಗೆ ಘೋಷಿಸಿರುವ ತಲಾ ಪರಿಹಾರ ಕೇವಲ ೨,೦೦೦ ರೂಪಾಯಿ! ರೈತರ ಬವಣೆ ದೂರ ಮಾಡಲು ಇದು ಸಾಕೇ?  
ಈ ದೇಶದ ರೈತರ ಬವಣೆ ನಿವಾರಣೆಗಾಗಿ ಇನ್ನೆಷ್ಟು ರೈತರು ಬಲಿದಾನ ಮಾಡಬೇಕು?

ಸಾಂಕೇತಿಕ ಫೋಟೋ: ರೈತರ ಮತ್ತು ಕೃಷಿಯ ಭವಿಷ್ಯ ಅನಿಶ್ಚಿತ