ಲಂಬಿಸುವತ್ತ ಚಿತ್ತ

ಲಂಬಿಸುವತ್ತ ಚಿತ್ತ

ಕವನ

ಬದುಕು ಬದುಕಲಾಸೆ
ಗಟ್ಟಿಮುಟ್ಟಿನ ಎಲುಬು
ಪುಷ್ಟ ಮಾಂಸಲ ತೊಗಲು
ಬಿಸಿ ಆರದ ದೇಹ
ಹೊತ್ತು
ಬಸಿದು ಹೋಗುವ 
ಅರಿವಿಗೆ ಒಡ್ಡನ್ನಿಟ್ಟು
ಅಡ್ಡ ಗೋಡೆಯನ್ನೇರಿ
 ಕುಪ್ಪಳಿಸಿ 
ಹರಿವ ನಿರಂತರದಲ್ಲಿ 
ಉಗ್ಗಿ ನುಗ್ಗುವಾಸೆ

ಜನನದೀಚೆ ಬಾಲ್ಯದಾಚೆಯ 
ಜವ್ವನ 
ಲಂ    ಬಿ    ಸಿ
ಜರಾಮರಣ ಮರೆಸಿ 
ಹೆಮ್ಮರವಾಗಿ ಮೆರೆವಾಸೆ
ಭಾರ ಮಸೂರ ಹೊತ್ತು 
ವಿಶ್ವ ಓದುವಾಸೆ

ಸ್ವಹಿತದಿರಸು ಧರಿಸಿ
 ಸವೆದ ದಾರಿ ಜಾಡ ಹಿಡಿದು
 ನಡೆದು ನುಡಿದು 
ನುಡಿಸುವಾಸೆ
ಹೊರೆಯಾಸೆಗಳ 
ಹೊಸೆದು ಮತ್ತೆ 
ಮಕ್ಕಳ
ಮೊಮ್ಮಕ್ಕಳ
ಮರಿ ಸಂತಾನಗಳ
ಸುತ್ತ ಹುತ್ತವಾಗಿ
ಸತತ ಬೆಳೆಯುವಾಸೆ

ನೆನಪಿನಂಗಳದಲ್ಲಿ 
ಹಸಿರು ತೆನೆಗಳ ಒಟ್ಟಿ
ಕುಳಿತು ಕನವರಿಸಿ 
ಮೆಲ್ಲನೆ ಮೆಲ್ಲುವಾಸೆ
ಗಟ್ಟಿ ಉಸಿರು 
ತೊಡೆತಟ್ಟುವ ಕಸುವು
ಬಾಗದ ಬೆನ್ನು 
ನಡುಗದ ತಲೆ ಬುದ್ಧಿಗಳ
ಸುಪರ್ದಿನಲ್ಲಿಟ್ಟು 
ಹಸನ್ಮುಖನಾಗಿ 
ನಾನು ಅವನೇ 
ಅಂದಿದ್ದ ಥರದವನೇ 
ಅನ್ನಿಸಿಕೊಳ್ಳುವ 
 ಕಳಿತ ಆಸೆ
(ಕಾಯ ಬತ್ತಿಯೂ 
ಮನ ಹಣ್ಣಾಗದ ಹತಾಷೆ)

ಆಸೆ ರಹಿತ ಜೀವ
ಬೇಕೆಂದರೆ
ಪ್ರಬುದ್ಧ ಹೇಳಿಯಾನೆ
ತಂದೀರೇನು 
ಆಸೆ ತೊರೆದವನ 
ಮನೆಯಿಂದ
 ಹಿಡಿ ಸಾಸಿವೆ !?