ಲೋಕಾಯುಕ್ತಗೆ ಬಲ ಬೇಕು

ಲೋಕಾಯುಕ್ತಗೆ ಬಲ ಬೇಕು

ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಪುಂಖಾನುಪುಂಖ ಆಶ್ವಾಸನೆಗಳನ್ನು ನಮ್ಮ ರಾಜಕೀಯ ನೇತಾರರು, ಸರ್ಕಾರದಲ್ಲಿರುವ ಪ್ರಮುಖರು ನೀಡುತ್ತಲೇ ಇರುತ್ತಾರೆ. ಆದರೆ, ವಾಸ್ತವ ಪರಿಸ್ಥಿತಿ ಏನಿದೆ? ಆಡಳಿತ ಸುಧಾರಣೆಯ ಕುರಿತಂತೆ ಆದರ್ಶದ ಮಾತುಗಳನ್ನಾಡಿದರೂ, ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡದೆ ಜನಸಾಮಾನ್ಯರ ಕೆಲಸಗಳೇ ಆಗದಂಥ ಸ್ಥಿತಿ ಇದೆ. ಇದರಿಂದ ಶ್ರೀಸಾಮಾನ್ಯರು ರೋಸಿಹೋಗಿರುವುದು ಒಂದು ಕಡೆಯಾದರೆ, ಭಷ್ಟಾಚಾರಿಗಳ ಹೆಡೆಮುರಿ ಕಟ್ಟಬೇಕಾದ ಸಂಸ್ಥೆ ಅಥವಾ ಸಂಬಂಧಿತ ವ್ಯವಸ್ಥೆಗಳು ಸೂಕ್ತ ಅಧಿಕಾರ ಇಲ್ಲದೆ ಪರಿತಪಿಸುತ್ತಿವೆ ಎಂಬುದು ಅಪ್ರಿಯ ಸತ್ಯ. ಇದರಿಂದ ಭಷ್ಟಾಚಾರಿಗಳ ಮನೋಬಲ ಹೆಚ್ಚುತ್ತಿದೆಯೇ ಹೊರತು, ಜನಸಾಮಾನ್ಯರ ಸಂಕಷ್ಟವೇನೂ ಕಡಿಮೆಯಾಗುತ್ತಿಲ್ಲ. ಕಣ್ಣೆದುರಲ್ಲೇ ತಪ್ಪಿತಸ್ಥರನ್ನು ಕಂಡರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗದಂಥ ಅಸಹಾಯಕತೆ. ಹೀಗೆ ಕಾಟಾಚಾರಕ್ಕೆ ಸೃಜಿಸುವ ಸಂಸ್ಥೆಗಳಿಂದ, ಆಯೋಗಗಳಿಂದ ಹೇಗೆ ತಾನೆ ಸುಧಾರಣೆಯನ್ನು ನಿರೀಕ್ಷಿಸಲು ಸಾಧ್ಯ. ಪ್ರಸಕ್ತ, ಲೋಕಾಯುಕ್ತ ಸಂಸ್ಥೆ ಹೀಗೆ ಹಲ್ಲಿಲ್ಲದ ಹಾವಂತಾಗಿರುವುದು ಶೋಚನೀಯ.

ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್ ಟಿ ಒ) ಮಧ್ಯವರ್ತಿಗಳ ಹಾವಳಿ ಮಿತಿಮೀರಿರುವ ವಿಚಾರ ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿದೆ. ಪ್ರತಿಯೊಂದು ಆರ್ ಟಿ ಒ ಕಚೇರಿಯಲ್ಲಿ ಕನಿಷ್ಟ ಐದಾರು ಮಧ್ಯವರ್ತಿಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಆದರೆ, ಖಾಸಗಿ ವ್ಯಕ್ತಿಗಳಾಗಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಲೋಕಾಯುಕ್ತ ಪೊಲೀಸರಿಗೆ ಅಧಿಕಾರ ಇಲ್ಲದಾಗಿದೆ. ಕಳೆದ ವರ್ಷ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಬಹುತೇಕ ಆರ್ ಟಿ ಒ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪ್ರತಿ ಆರ್ ಟಿ ಒ ದಲ್ಲಿ ಸರಾಸರಿ ಐದಾರು ಮಧ್ಯವರ್ತಿಗಳು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ, ಲಕ್ಷಾಂತರ ರೂಪಾಯಿ ನಗದು ಕೂಡ ಪತ್ತೆಯಾಗಿತ್ತು. ದಾಳಿಯ ವೇಳೆ ಅಕ್ರಮದ ಬಗ್ಗೆ ಸಾಕಷ್ಟು ಸಾಂದರ್ಭಿಕ ಪುರಾವೆಗಳನ್ನು ಸಂಗ್ರಹಿಸಲಾಗಿದ್ದರೂ ಖಾಸಗಿ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಕಾಯ್ದೆಯಲ್ಲಿ ಅವಕಾಶವಿಲ್ಲದ ಕಾರಣ ಯಾವುದೇ ಬಂಧನಗಳನ್ನು ಮಾದಲು ಸಾಧ್ಯವಾಗಿಲ್ಲ. ಇದರಿಂದ ಸಂಬಂಧಿತ ಪ್ರಕರಣಗಳ ತನಿಖೆಗೆ ಅಡ್ಡಿಯಾಗಿದ್ದು, ತಪ್ಪಿತಸ್ಥರು ಬಚಾವಾಗುವ ಆತಂಕವೂ ಇದೆ. ಹೀಗಾಗದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮುಖ್ಯವಾಗಿ, ಲೋಕಾಯುಕ್ತಕ್ಕೆ ಇನ್ನೂ ಹೆಚ್ಚಿನ ಶಾಸನಾತ್ಮಕ ಅಧಿಕಾರ ನೀಡುವ ಅವಶ್ಯಕತೆ ಇದೆ. ಈಗಿರುವ ಸೀಮಿತ ಅಧಿಕಾರದಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳುವುದು ಕಷ್ಟಸಾಧ್ಯವೇ ಸರಿ.

ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಸಂಚಲನ ಸೃಷ್ಟಿಯಾಗಿ, ದೊಡ್ಡ ಸುದ್ದಿಯಾಗುತ್ತದೆಯಷ್ಟೇ. ಆದರೆ, ಮುಂದೆ ತನಿಖೆ ಸಾಗುವ ಬಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡ ಕುರಿತಂತೆ ಯಾವುದೇ ಸಂಗತಿಗಳು ಅಷ್ಟಾಗಿ ಬೆಳಕಿಗೆ ಬರುವುದೇ ಇಲ್ಲ. ಸೂಕ್ತ ಅಧಿಕಾರವೇ ಇಲ್ಲದಂಥ ಅಸಹಾಯಕ ಸ್ಥಿತಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾದರೂ ಹೇಗೆ? ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಿದೆ ಮತ್ತು ಲೋಕಾಯುಕ್ತವನ್ನು ಬಲಗೊಳಿಸಲು ಅಗತ್ಯ ಹೆಜ್ಜೆಗಳನ್ನು ಇರಿಸಬೇಕಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೫-೦೧-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ