ವೀಳ್ಯದೆಲೆ ದುಂಡಾಣು ಚುಕ್ಕೆ ರೋಗ ಮತ್ತು ನಿಯಂತ್ರಣ

ವೀಳ್ಯದೆಲೆ ದುಂಡಾಣು ಚುಕ್ಕೆ ರೋಗ ಮತ್ತು ನಿಯಂತ್ರಣ

ವೀಳ್ಯದೆಲೆಯು ಒಂದು ಪ್ರಮುಖ ತೋಟಗಾರಿಕಾ ಬೆಳೆಯಾಗಿದ್ದು. ಕರ್ನಾಟಕದಲ್ಲಿ ಇದರ ವಿಸ್ತೀರ್ಣ ೮೨೮೮ ಹೆಕ್ಟರ್ ಹಾಗೂ ಇಳುವರಿ ೧,೫೩,೬೦೦ ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ. ಈ ಬೆಳೆಯ ಬೆಳೆವಣಗೆಯ ಹಂತದಲ್ಲಿ ಅನೇಕ ರೋಗಗಳು ಬಾಧೆಗೊಳಗಾಗುತ್ತವೆ. ಅವುಗಳಲ್ಲಿ ಬುಡಕೊಳೆ ರೋಗ, ದುಂಡಾಣು ಎಲೆ ಚುಕ್ಕೆ ರೋಗ ಮತ್ತು ಚಿಬ್ಬುರೋಗ ಪ್ರಮುಖ ರೋಗಗಳಾಗಿದ್ದು ಅವುಗಳಲ್ಲಿ ದುಡಾಂಣು ಎಲೆಚುಕ್ಕೆ ರೋಗವು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತಿದೆ.

ಕರ್ನಾಟಕದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ವೀಳ್ಯದೆಲೆ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಹಾವೇರಿ, ದಾವಣಗೇರೆ, ಮೈಸೂರು ಮತ್ತು ಬಾಗಲಕೋಟೆ ಗಳಲ್ಲಿ ಈ ರೋಗವು ಅತೀ ಹೆಚ್ಚು ಹಾನಿಯನ್ನು ಉಂಟು ಮಾಡುವುದು ಕಂಡುಬಂದಿದೆ.

ರೋಗದ ಲಕ್ಷಣಗಳು: ಈ ರೋಗವು ಪ್ರಾರಂಭಿಕ ಹಂತದಲ್ಲಿ ಎಲೆಗಳ ಮೇಲೆ ನೀರಿನಿಂದ ಆವೃತ ಚುಕ್ಕೆಗಳನ್ನು ಹೊಂದಿದ್ದು ಕ್ರಮೇಣವಾಗಿ ಕಂದು ಬಣ್ಣಕ್ಕೆ ತಿರುಗುತ್ತವೆ. ಈ ಚುಕ್ಕೆಗಳ ಸುತ್ತ ಹಳದಿ ಬಣ್ಣವು ಆವೃತಗೊಂಡಿರುತ್ತದೆ. ರೋಗವು ಪಸರಿಸುತ್ತ ಎಲೆಯ ಹೆಚ್ಚಿನ ಭಾಗವನ್ನು ಆವರಿಸಿ ರೋಗ ಪೀಡಿತ ಭಾಗದಲ್ಲಿ ಸುಟ್ಟಂತೆ ಕಾಣುತ್ತದೆ. ರೋಗ ಪೀಡಿತ ಎಲೆಗಳು ತನ್ನ ಹೊಳಪನ್ನು ಕಳೆದುಕೊಂಡು ಹಳದಿ ಬಣ್ಣಕ್ಕೆ ತಿರುಗಿ ಉದುರಿ ಬೀಳುತ್ತದೆ. ವಾತಾವರಣದಲ್ಲಿ ಆರ್ದ್ರತೆ ಹೆಚ್ಚಾದಂತೆ ರೋಗದ ಸೊಂಕು ಕಾಂಡದ ಮೇಲೆ ಕಾಣಿಸಿಕೊಳ್ಳುತ್ತದೆ.

ಎಣ್ಣೆಯುಕ್ತ / ನೀರಿನಿಂದ ಆವೃತವಾದಂತಹ ಕಪ್ಪು ಮಚ್ಚೆಗಳು ಕೆಳ ಭಾಗದ ಕಾಂಡ ಮತ್ತು ಗಿಣ್ಣು / ಕಣ್ಣುಗಳ ಮದ್ಯದಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಮಚ್ಚೆಗಳು ಗಾತ್ರ ಹೆಚ್ಚಾದಂತೆ ಎರಡು ದಿಕ್ಕಿನಲ್ಲೂ ಪಸರಿಸಿ ಗಿಡದ ಕಾಂಡದ ತುಂಬೆಲ್ಲಾ ಹರಡುತ್ತದೆ. ರೋಗ ಪೀಡಿತ ಕಾಂಡಗಳು ನಿಶಕ್ತಗೊಂಡು ಗಿಣ್ಣು/ಕಣ್ಣುಗಳ ಜಾಗದಲ್ಲಿ ಸುಲಭವಾಗಿ ಮುರಿದು ಹೋಗುತ್ತದೆ ಹಾಗೂ ಗಿಡಗಳು ಪೂರ್ತಿಒಣಗುತ್ತವೆ.

ರೋಗಾಣು: ಈ ರೋಗವು ಜಾಂಥೊಮೋನಾಸ್‌ ಆಕ್ಸೋನೊಪೋಡಿಸ್ ಪಿ.ವಿ ಬಿಟ್ಲಿಕೋಲ ಎಂಬ ದುಂಡಾಣುವಿನಿಂದ ಬರುತ್ತದೆ. ರೋಗವು ಹೆಚ್ಚಿನ ಆರ್ದ್ರತೆಯಿದ್ದಂತಹ ವಾತಾವರಣ ಅಥವಾ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮಳೆ ಹನಿಯಿಂದ ಮತ್ತು ತುಂತುರು ನೀರಿನಿಂದ ಹೆಚ್ಚಾಗಿ ಹರಡುತ್ತದೆ.

ಅನುಕೂಲಕರ ವಾತಾವರಣ: ೨-೩ ದಿನಗಳವರೆಗೆ ಮೋಡಕವಿದ ವಾತಾವರಣ,೨೮-೩೨ ಡಿಗ್ರಿ ಸೆ. ಉಷ್ಣಾಂಶ, ೮೫% ಕ್ಕಿಂತ ಆರ್ದ್ರತೆ ಹೆಚ್ಚಾದಲ್ಲಿ ತೀವ್ರತೆ ಹೆಚ್ಚುತ್ತದೆ. ಎಲೆ ಬಳ್ಳಿಯಲ್ಲಿ ಕಾಣಿಸಿಕೊಳ್ಳುವ ಸಹಯೋಗಿ ಕೀಟಗಳಿಂದ ಈ ರೋಗವು ಒಂದು ಎಲೆಯಿಂದ ಮತ್ತೊಂದು ಗಿಡಕ್ಕೆ ಹರಡಲು ಉತ್ತೇಜನ ನೀಡುತ್ತದೆ. ಉದುರಿ ಬಿದ್ದ ರೋಗಗ್ರಸ್ತ ಎಲೆಗಳಲ್ಲಿ ಸೋಂಕು ಉಳಿಯುತ್ತವೆ, ಇಂತಹ ಎಲೆಗಳಲ್ಲಿ ದುಡಾಂಣುವು ಬದುಕುಳಿದಿದ್ದು ಮುಂದಿನ ಬೆಳೆಗೆ ಮಳೆಯ ನೀರಿನ ಸಿಡಿತದೊಂದಿಗೆ ಪಸರಿಸುತ್ತದೆ. ತುಂತುರು ನೀರಾವರಿ ಆಳವಡಿಸಿದ ತೋಟದಲ್ಲಿ ಈ ರೋಗದ ತೀವ್ರತೆ ಹೆಚ್ಚಾಗಿ ಕಂಡು ಬಂದಿದೆ.

ಸಮಗ್ರ ರೋಗ ಹತೋಟಿ ಕ್ರಮ: ರೋಗ ರಹಿತ ತೋಟದಿಂದ ಅಭಿವೃದ್ದಿ ಪಡಿಸಿದ ಆರೋಗ್ಯಕರ ಸಸಿಗಳನ್ನು ನಾಟಿಗೆ ಉಪಯೋಗಿಸಬೇಕು. ವೀಳ್ಯದೆಲೆ ತೋಟವನ್ನು ಕಳೆಮುಕ್ತವಾಗಿ ನಿರ್ವಹಿಸಬೇಕು. ರೋಗಪೀಡಿತ ಎಲೆ ಹಾಗೂ ಬಳ್ಳಿಯನ್ನು ಕಿತ್ತು ಸರಿಯಾದ ರೀತಿಯಲ್ಲಿ ನಾಶಪಡಿಸಲು ಭೂಮಿಯಲ್ಲಿ ಗುಂಡಿ ತೋಡಿ ಹೂತು ಹಾಕಬೇಕು ಅಥವಾ ಸುಟ್ಟು ಹಾಕಬೇಕು ಇದರಿಂದ ಎಲೆಗಳಲ್ಲಿ ಮತ್ತು ಬಳ್ಳಿಗಳಲ್ಲಿ ಉಳಿದುಕೊಂಡು ಪಸರಿಸುವ ಸೊಂಕನ್ನು ನಾಶಗೊಳಿಸಬಹುದು. ತುಂತುರು ನೀರಾವರಿ ಪದ್ದತಿ ಅಳವಡಿಸಬಾರದು.

ಬಳ್ಳಿ ಇಳಿಸಿದ ನಂತರ ರೋಗಗ್ರಸ್ಥ ಎಲೆಗಳು / ಬಳ್ಳಿಗಳು ಇದ್ದಲ್ಲಿ ರಸಸಾರ ೭ ಇರುವ ಶೇಕಡ ೧ ರ ಬೋರ್ಡೊದ್ರಾವಣವನ್ನು ನೆನೆಯುವಂತೆ ಸುರಿಯಬೇಕು. ಎಲೆ ಬಳ್ಳಿಯಲ್ಲಿ ಬರುವ ಕೀಟಗಳ ಹತೋಟಿ ಮಾಡಿದಾಗ ಈ ರೋಗದ ಪ್ರಸರಣೆಯನ್ನು ಕಡಿಮೆಗೊಳಿಸಬಹುದು. ಎಲೆಯನ್ನು ಕೊಯ್ಯುವಾಗ ರೋಗಗ್ರಸ್ಥ ಎಲೆಗಳಿಗೆ ಉಪಯೋಗಿಸುವ ಕಬ್ಬಿಣದ ಉಗುರನ್ನು (ಬ್ಲೇಡನ್ನು) ರೋಗರಹಿತ ಎಲೆಗಳನ್ನು ಕಟಾವು ಮಾಡಲು ಉಪಯೋಗಿಸಬಾರದು.

ರೋಗ ಕಾಣಸಿಕೊಂಡ ಪ್ರಾರಂಭಿಕ ಹಂತದಲ್ಲಿ ರೋಗಗ್ರಸ್ಥ ಎಲೆಗಳನ್ನು ತೆಗೆದು ಹಾಕಿ ನಂತರ ಅಂತಹ ಬಳ್ಳಿಗಳಿಗೆ ಸ್ಟೆçಪ್ಟೋಸೈಕ್ಲೀನ್ ೦.೫ ಗ್ರಾಂ.+ ತಾಮ್ರದ ಆಕ್ಸಿಕ್ಲೋರೈಡ್ ೩ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ೧೨ ರಿಂದ ೧೫ ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಜೈವಿಕ ನಿಯಂತ್ರಕಗಳನ್ನು ಕೊಟ್ಟಿಗೆ ಗೊಬ್ಬರದ ಜೊತೆ ಸೇರಿಸುವುದರಿಂದ ಬಳ್ಳಿಗಳಲ್ಲಿ ರೋಗನಿರೋಧಕತೆ ಹೆಚ್ಚಾಗುತ್ತದೆ.

ಮಾಹಿತಿ: ಮಧುಶ್ರೀ ಕೆರಕಲಮಟ್ಟಿ (ತೋಟಗಾರಿಕಾ ಮಹಾವಿದ್ಯಾಲಯ, ಬಾಗಲಕೋಟ) ಮತ್ತು ಶೃತಿ ಟಿ. ಎಚ್. (ಕೃಷಿ ವಿಶ್ವವಿದ್ಯಾಲಯ ರಾಯಚೂರು)

ಚಿತ್ರ ಕೃಪೆ: ಇಂಟರ್ನೆಟ್ ತಾಣ