ಸಚಿವರ ಬೇಜವಾಬ್ದಾರಿ ಹೇಳಿಕೆ

ಸಚಿವರ ಬೇಜವಾಬ್ದಾರಿ ಹೇಳಿಕೆ

ಸರ್ಕಾರ ಪರಿಹಾರ ನೀಡುತ್ತದೆ ಎಂಬ ಕಾರಣಕ್ಕೆ ರೈತರು ಬರಗಾಲ ಬರಲಿ ಎಂದು ಬಯಸುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ ಅವರು ಹೇಳಿರುವುದು ಅತ್ಯಂತ ಬೇಜವಾಬ್ದಾರಿತನದ ಹೇಳಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಬಡ ಜನರಿಗೆ ಅನುಕೂಲವಾಗಲೆಂದು ಐದು ಗ್ಯಾರಂಟಿಗಳನ್ನು ನೀಡಿದ ಕಾಂಗ್ರೆಸ್ ಸರಕಾರದಲ್ಲಿ ಸಕ್ಕರೆ, ಕೃಷಿ ಮಾರುಕಟ್ಟೆ ಮತ್ತು ಕೈಮಗ್ಗ ಸಚಿವರಾಗಿರುವ ಶಿವಾನಂದ ಪಾಟೀಲರು ರೈತರ ಬಗ್ಗೆ ಈ ರೀತಿಯ ಹೇಳಿಕೆ ನೀಡಿರುವುದು ವಿಪರ್ಯಾಸ.

ರೈತರನ್ನು ನಂಬಿಕೊಂಡು ಇತರರು ಜೀವನ ಮಾಡುತ್ತಿದ್ದಾರೆಯೇ ಹೊರತು, ರೈತರು ಯಾರನ್ನೂ ನಂಬಿಕೊಂಡಿಲ್ಲ. ಸರ್ಕಾರವನ್ನೊ, ಸರ್ಕಾರ ನೀಡುವ ಪರಿಹಾರ, ಪುಕ್ಕಟೆ ಬೀಜವನ್ನೊ ನಂಬಿಕೊಂಡು ಯಾರೂ ಕೃಷಿ ಮಾಡುವುದಿಲ್ಲ. ಬದಲಾಗಿ ಭೂಮಿ ತಾಯಿ ಹಾಗೂ ಮಳೆಯನ್ನು ನಂಬಿಕೊಂಡು ರೈತರು ಕೃಷಿ ಮಾಡುತ್ತಾರೆ. ರೈತರು ಯಾವತ್ತೂ ಶ್ರಮ ಜೀವಿಗಳು. ಅವರು ಶ್ರಮವನ್ನೇ ನಂಬಿರುವವರು. ಪ್ರತಿ ಬಾರಿಯೂ ಒಳ್ಳೆಯ ಬೆಳೆ ಬೆಳೆದು ಹಣ ಗಳಿಸಿ, ಮಕ್ಕಳನ್ನು ಓದಿಸಬೇಕು, ಮನೆ ಕಟ್ಟಿಸಬೇಕು, ಮಕ್ಕಳ ಮದುವೆ ಮಾಡಬೇಕು, ಹೆಂಡತಿಗೊಂದು ಒಳ್ಳೆಯ ಸೀರೆರೆ ಕೊಡಿಸಬೇಕು ಎಂದು ರೈತರು ಯೋಚಿಸುತ್ತಾರೆ. ಬರ ಬರಲಿ, ಮಳಿ ಜಾಸ್ತಿ ಬಂದು ಬೆಳೆ ಹಾಳಾಗಲಿ ಎಂದು ಯಾವ ರೈತನೂ ಆಶಿಸುವುದಿಲ್ಲ. ಹಾಗೆ ಬಯಸುವುದೇ ಆಗಿದ್ದಲ್ಲಿ ರೈತ ಕಷ್ಟಪಟ್ಟು ಹೊಲದಲ್ಲಿ, ದಿನವಿಡೀ ದುಡಿಯಬೇಕಾದ ಅಗತ್ಯ ಇರುತ್ತಿರಲಿಲ್ಲ. ಅಪ್ರಾಮಾಣಿಕ ಅಧಿಕಾರಿ, ಅಪ್ರಾಮಾಣಿಕ ರಾಜಕಾರಣಿಗಳು ಇರಬಹುದು. ಆದರೆ ಅಪ್ರಾಮಾಣಿಕ ರೈತ ಇರಲು ಸಾಧ್ಯವಿಲ್ಲ. ಯಾಕೆಂದರೆ ರೈತ ಆತನ ಹೊಲದಲ್ಲಿ ದುಡಿಯುತ್ತಾನೆ. ಆತನ ಜೀವನಕ್ಕಾಗಿ ಬೆಳೆಯುತ್ತಾನೆ. ಸ್ವಂತ ಬೆವರು ಸುರಿಸಿ ದುಡಿಯುತ್ತಾನೆ. ಹಾಗಾಗಿ ಆತ ಆತನಿಗೇ ಮೋಸ ಮಾಡಿಕೊಂಡು ಅಪ್ರಾಮಾಣಿಕನಾಗಲು ಸಾಧ್ಯವಿಲ್ಲ. 

ಬರಗಾಲ, ಅತಿವೃಷ್ಟಿ ಅಥವಾ ರೋಗದಿಂದ ಬೆಳೆ ಹಾಳಾದರೆ ಸರ್ಕಾರ ನೀಡುವ ಪರಿಹಾರದಿಂದ ಯಾವ ರೈತನು ಜೀವಿಸುವುದು ಸಾಧ್ಯವಿಲ್ಲ. ರೈತನ ಬೆಳೆಗೆ ಸಿಗುವಷ್ಟು ಹಣವನ್ನು ಯಾವ ಸರ್ಕಾರವೂ ಪರಿಹಾರ ರೂಪದಲ್ಲಿ ನೀಡಿದ ಉದಾಹರಣೆಯಿಲ್ಲ. ಅದರಿಂದ ಯಾವ ರೈತನೂ ಜೀವನ ಮಾಡುವುದು ಸಾಧ್ಯವಿಲ್ಲ. ಆದರೆ ರಾಜಕೀಯಕ್ಕಾಗಿ ರೈತರನ್ನು ಸಾಕಷ್ಟು ಬಳಸಿಕೊಳ್ಳಲಾಗಿದೆ. ರೈತರ ಮೇಲಿನ ಕರುಣೆಯಿಂದ ರಾಜಕೀಯ ಕಾರಣಕ್ಕಾಗಿ ರೈತರ ಸಾಲ ಮನ್ನಾ ಮಾಡಿದ ಉದಾಹರಣೆಯೇ ಹೆಚ್ಚು. ಸರ್ಕಾರ ಪರಿಹಾರ ನೀಡುತ್ತದೆ, ಸರ್ಕಾರ ಸಾಲಮನ್ನಾ ಮಾಡುತ್ತದೆ ಎಂಬುದನ್ನು ನಂಬಿಕೊಂಡು ರೈತರು ಜೀವನ ನಡೆಸುವವರಾಗಿದ್ದರೆ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ.

ಇಷ್ಟು ಸರಳ ವಿಷಯ ಸಚಿವ ಶಿವಾನಂದ ಪಾಟೀಲರಿಗೆ ಅರ್ಥವಾಗದಿರುವುದು ಆಶ್ವರ್ಯ. ರಾಜಕಾರಣಿಗಳು ಲಾಭಕ್ಕಾಗಿ ರೈತರ ಹೆಸರನ್ನು ಸಾಕಷ್ಟು ಬಳಸಿಕೊಂಡಿರಬಹುದು. ಆದರೆ ರೈತರು ಯಾವತ್ತೂ ಸರ್ಕಾರ ಅಥವಾ ರಾಜಕಾರಣಿಗಳನ್ನು ನಂಬಿ ಕೃಷಿ ಮಾಡುವುದಿಲ್ಲ. ಅಂತಹ ಶ್ರಮಜೀವಿಗಳನ್ನು ಅನ್ಯಥಾ ಆರೋಪಿಸುವುದು ಅಕ್ಷಮ್ಯ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೬-೧೨-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ