ಸಣ್ಣ ನೀರಾವರಿಗೆ ಬೇಕಿದೆ ಆದ್ಯತೆ

ಸಣ್ಣ ನೀರಾವರಿಗೆ ಬೇಕಿದೆ ಆದ್ಯತೆ

ಸಣ್ಣ ನೀರಾವರಿ ಯೋಜನೆಗಳ ೬ನೇ ಗಣತಿ ವರದಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದು, ಈ ವರದಿಯಲ್ಲಿನ ಅಂಶಗಳನ್ನು ಗಮನಿಸಿದರೆ ಕರ್ನಾಟಕದ ಸಣ್ಣ ನೀರಾವರಿ ಯೋಜನೆಗಳ ಸ್ಥಿತಿಗತಿ ಚಿಂತಾಜನಕವಾಗಿದೆ. ಕರ್ನಾಟಕದಲ್ಲಿ ಸಂಖ್ಯಾದೃಷ್ಟಿಯಿಂದ ಸಣ್ಣ ನೀರಾವರಿ ಯೋಜನೆಗಳು ಏರಿಕೆ ಕಂಡಿದ್ದರೂ ಸಾಮರ್ಥ್ಯ ಇಳಿಕೆಯಾಗಿರುವುದನ್ನು ರಾಜ್ಯ ಸರಕಾರ ಗಮನಿಸಬೇಕಿದೆ. ಐದನೇ ಗಣತಿಯ ವರದಿಗೆ ತುಲನೆ ಮಾಡಿ ನೋಡಿದರೆ ಆರನೇ ವರದಿಯಲ್ಲಿ ಯೋಜನೆಗಳ ಸಂಖ್ಯೆ ಪ್ರತಿಶತ ೫ರಷ್ಟು ಹೆಚ್ಚಿದೆ. ಯೋಜನೆಗಳ ಸಂಖ್ಯೆ ಹೆಚ್ಚಿದಂತೆ ನೀರಾವರಿ ಸಾಮರ್ಥ್ಯವೂ ಹೆಚ್ಚಳವಾಗಬೇಕು. ಆದರೆ ವ್ಯತಿರಿಕ್ತ ಸ್ಥಿತಿ ಇದೆ. ಐದನೇ ಗಣತಿಯಿಂದ ಆರನೇ ಗಣತಿಯ ಅವಧಿಯಲ್ಲಿ ಯೋಜನೆಗಳ ಸಾಮರ್ಥ್ಯ ೨೧.೫೩ ಲಕ್ಷ ಹೆಕ್ಟೇರ್ ಗಳಿಂದ ೨೬.೮೧ ಲಕ್ಷ ಹೆಕ್ಟೇರ್ ಗೆ ಕುಸಿದಿದೆ.

ಸಣ್ಣ ನೀರಾವರಿ ಯೋಜನೆಗಳ ಸಂಖ್ಯೆ ಪ್ರಕಾರ ದೇಶದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ನಂತರದಲ್ಲಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಂತರ್ಜಲ ಆಧಾರಿತ ಯೋಜನೆಗಳು ಗರಿಷ್ಟ ಪ್ರಮಾಣದಲ್ಲಿವೆ.

ಬೃಹತ್ ನೀರಾವರಿ ಯೋಜನೆಗಳಿಗಿಂತ ಸಣ್ಣ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಎಲ್ಲ ದೃಷ್ಟಿಯಿಂದಲೂ ಪರಿಣಾಮಕಾರಿ ಎಂಬುದು ಬಹುತೇಕ ತಜ್ಞರ ಇಂಗಿತವಾಗಿದೆ. ಬೃಹತ್ ನೀರಾವರಿ ಯೋಜನೆಗಳನ್ನು ಹಲವಾರು ಕಾರಣಗಳಿಂದ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ನೀರು ಬಳಕೆ ಮಾಡಿಕೊಳ್ಳುವುದು ಕಷ್ಟ. ಆದರೆ ಸಣ್ಣ ನೀರಾವರಿ ಯೋಜನೆಗಳನ್ನು ಇತಿ-ಮಿತಿಯಲ್ಲಿ ಅನುಷ್ಟಾನಕ್ಕೆ ತರುವ ಸಾಧ್ಯತೆಗಳು ಹೆಚ್ಚಿವೆ. 

ಹಿಂದಿನ ಗಣತಿ ವರದಿ ಪ್ರಕಾರ ರಾಜ್ಯದ  ೧೩.೫೩ ಲಕ್ಷ ಸಣ್ಣ ನೀರಾವರಿ ಯೋಜನೆಗಳಿಗೆ ತುಲನೆ ಮಾಡಿದರೆ ಪ್ರಸ್ತುತ ಆರನೇ ವರದಿಯಂತೆ ೧೪.೦೫ ಲಕ್ಷಕ್ಕೆ ಏರಿಕೆಯಾಗಿದೆ. ಸಣ್ಣ ನೀರಾವರಿ ಯೋಜನೆಗಳಲ್ಲಿ ೬.೯೬ ಲಕ್ಷ ಮಧ್ಯಮ ಕೊಳವೆ ಬಾವಿ, ೩.೩೦ ಲಕ್ಷ ಆಳ ಕೊಳವೆ ಬಾವಿ, ೧.೩೪ ಲಕ್ಷ ತೆರೆದ ಕೊಳವೆ ಬಾವಿ ಯೋಜನೆಗಳಿವೆ ಎಂದು ವರದಿ ಹೇಳಿದೆ. ಈ ವರದಿ ಆಧರಿಸಿ ಹೇಳಬಹುದಾದರೆ ಸಾಮರ್ಥ್ಯ ಕಡಿಮೆಯಾಗಲು ಕೊಳವೆ ಬಾವಿಗಳ ವೈಫಲ್ಯ ಗೋಚರವಾಗುತ್ತದೆ. ಅಂತರ್ಜಲ ಕುಸಿದು ಕೊಳವೆ ಬಾವಿಗಳು ವಿಫಲವಾಗುವುದರಿಂದ ಯೋಜನೆಗಳ ಸಾಮರ್ಥ್ಯ ಕುಸಿದಿದೆ.

ಯೋಜನೆಗಳ ಅಂಕಿ ಅಂಶ ಗಮನಿಸಿದರೆ ಭೂಮಿ ಮೇಲ್ಮೈ ನೀರಾವರಿ ಯೋಜನೆಗಳ ಸಂಖ್ಯೆಗಿಂತ ಕೊಳವೆ ಬಾವಿ ಆಧಾರಿತ ಯೋಜನೆಗಳ ಸಂಖ್ಯೆ ಹೆಚ್ಚಿದೆ. ಅಂತರ್ಜಲ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಿದರೆ ಸಣ್ಣ ನೀರಾವರಿ ಯೋಜನೆಗಳ ಸಾಮರ್ಥ್ಯ ಕುಸಿಯದಂತೆ ನೋಡಿಕೊಳ್ಳಲು ಅವಕಾಶವಿದೆ. ಸಣ್ಣ ನೀರಾವರಿ ಯೋಜನೆಗಳಲ್ಲಿ ಖಾಸಗಿಯವರೂ ಇದ್ದಾರೆ. ಸರ್ಕಾರ ಜಲಮರುಪೂರಣಕ್ಕೆ ಆದ್ಯತೆ ನೀಡುವುದಷ್ಟೇ ಅಲ್ಲ, ರೈತರಿಗೆ ಉತ್ತೇಜನ ನೀಡಬೇಕು. ಅಂತರ್ಜಲ ವೃದ್ಧಿಗೆ ಇರುವ ಎಲ್ಲ ಅವಕಾಶಗಳನ್ನು ಬಳಕೆ ಮಾಡಿಕೊಳ್ಳುವಂತಾಗಬೇಕು. ಆಗ ಸಾಮರ್ಥ್ಯ ಕುಸಿತಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೮-೦೮-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ