ಸತ್ಯಾಗ್ರಹಿ

ಸತ್ಯಾಗ್ರಹಿ

ಪುಸ್ತಕದ ಲೇಖಕ/ಕವಿಯ ಹೆಸರು
ಸದಾನಂದ ಎನ್ ಪಾಟೀಲ
ಪ್ರಕಾಶಕರು
ಗುರುಕುಲ ಇಂಗ್ಲೀಷ್ ಮೀಡಿಯಂ ಸ್ಕೂಲ್, ಜೇವರ್ಗಿ-೫೮೫೩೧೦
ಪುಸ್ತಕದ ಬೆಲೆ
ನಮೂದಿಸಿಲ್ಲ, ಮುದ್ರಣ: ೨೦೨೩

ಸದಾನಂದ ಎನ್ ಪಾಟೀಲ್ ಅವರು ನಿರೂಪಿಸಿರುವ “ಸತ್ಯಾಗ್ರಹಿ" ಎನ್ನುವ ಕೃತಿಯು ಶ್ರೀ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಸಮರ್ಪಿಸಿದ ಅಭಿನಂದನಾ ಗ್ರಂಥ. ಹುಲ್ಲೂರು ಗ್ರಾಮದ ಶ್ರೀ ಸಂಗನಬಸಯ್ಯ ಹಿರೇಮಠ ಅವರ ಮಗ ಶ್ರೀ ಕೇದಾರಲಿಂಗಯ್ಯ ಅವರು ಪ್ರಾರಂಭದಿಂದಲೂ ಬಡವರ ಪರವಾದ, ರೈತರ ಪರವಾದ, ನ್ಯಾಯದ ಪರವಾದ, ಹೋರಾಟಗಳನ್ನು ಮಾಡುತ್ತಲೆ ಬೆಳೆದವರು ಎನ್ನುವುದು ಕೃತಿಗೆ ಮುನ್ನುಡಿಯನ್ನು ಬರೆದ ಪ್ರೊ. ಎಚ್.ಟಿ. ಪೋತೆ ಅವರ ಮಾತು. ಅವರು ಬರೆದ ಮುನ್ನುಡಿಯ ಆಯ್ದ ನುಡಿಗಳು ಇಲ್ಲಿವೆ…

“ಶ್ರೀ ಕೇದಾರಲಿಂಗಯ್ಯ ಹಿರೇಮಠರು ನಿರಂತರವಾಗಿ ಐದು ದಶಕಗಳ ಕಾಲ ಸಾರ್ವಜನಿಕ ಸೇವೆಯಲ್ಲಿಯೇ ಜೀವನ ಸವೆಸಿದವರು, ರೈತರನ್ನು ಒಗ್ಗೂಡಿಸಿ ಮಲ್ಲಾಬಾದ ಏತ ನೀರಾವರಿ ಯೋಜನೆಗಾಗಿ ಹೋರಾಟ, ಉರುಳು ಸೇವೆ, ಸತ್ಯಾಗ್ರಹ ಹಮ್ಮಿಕೊಂಡು ರೈತರ ಬಾಳಿನಲ್ಲಿ ಬೆಳಕು ತುಂಬಲು ಶ್ರಮಿಸಿದವರು, ತಾಲೂಕಿನ ಪ್ರಮುಖ ಬೆಳೆಯಾದ ತೊಗರಿಬೆಳೆಗೆ ಬೆಂಬಲಬೆಲೆ ನೀಡಲು, ಕೀಟಬಾಧೆಯಿಂದ ಫಸಲು ಕೈಕೊಟ್ಟಾಗ, ರೈತರ ಬೆನ್ನಿಗೆ ನಿಂತು ಬೆಳೆ ಪರಿಹಾರ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು. ಇಡಿ ರಾಷ್ಟ್ರದಲ್ಲಿಯೇ ಹೆಚ್ಚು ಬೆಳೆ ವಿಮೆ ಪಡೆದ ತಾಲೂಕು ಜೇವರ್ಗಿ ಎಂಬ ಕೀರ್ತಿಗೆ ಶ್ರಮಿಸಿದವರು, ಕಬ್ಬಿಗೆ ನ್ಯಾಯಯುತವಾದ ಬೆಲೆ ಹಾಗೂ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿ, ರೈತರ ಕೆಲಸ ಮಾಡಿದವರು. ಕೋನಾ ಹಿಪ್ಪರಗಾ ಬ್ರಿಜ್ ನಿರ್ಮಾಣಕ್ಕಾಗಿ ರೈತರಲ್ಲಿ ಜಾಗೃತಿಯನ್ನುಂಟುಮಾಡಿ ಹೋರಾಟ ಮಾಡಿದವರು, ರೈತರ ಬಾಳಿನಲ್ಲಿ ಭರವಸೆಯ ಮಂದಹಾಸ ಮೂಡಿಸುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಪಾದಯಾತ್ರೆ ಮಾಡಿ ರೈತರು ಎದುರಿಸುತ್ತಿರುವ ಸಮಸ್ಯೆಗಳು, ಅವುಗಳಿಗೆ ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳೇನೆಂಬುವುದನ್ನು ಎಳೆ ಎಳೆಯಾಗಿ ವಿವರಿಸಿ ಸರ್ಕಾರದ ಕಣ್ಣು ತೆರೆಸುವ ಕಾರ್ಯ ಮಾಡಿದ ಶ್ರೇಯಸ್ಸು ಶ್ರೀ ಕೇದಾರಲಿಂಗಯ್ಯ ಅವರಿಗೆ ಸಲ್ಲುತ್ತದೆ. ಬಿದ್ದು ಹೋದ ತೊಗರಿಯ ಬೆಲೆಯನ್ನು, ಆದರೊಂದಿಗೆ ರೈತರ ಬದುಕನ್ನು ಮೇಲೆತ್ತಲು ಬೆಂಬಲ ಬೆಲೆ ಹಾಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ೮ ದಿನಗಳ ಕಾಲ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿ ರೈತರ ಮೊಗದಲ್ಲಿ ಮಂದಹಾಸ ಕಾಣುವಂತೆ ಮಾಡಿದ ಯಶಸ್ವಿ ಹೋರಾಟ ಮಾಡಿದವರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಮಹಾತ್ಮಾ ಗಾಂಧೀಯ ರೈತ ಕಲ್ಯಾಣ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಪ್ರಾಥಮಿಕ ಹಂತದಿಂದ ಕಾಲೇಜು ಹಂತದ ವರೆಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ಸಿನ ಹೆಜ್ಜೆ ಇಟ್ಟವರು, ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಮೂಲಕ ಸಾವಿರಾರು ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಪ್ರಾಮಾಣಿಕವಾದ ಪ್ರಯತ್ನ ಪಟ್ಟವರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಹಾಗೂ ಅಧ್ಯಕ್ಷರಾದ ಸಂದರ್ಭದಲ್ಲಿ ನೂರಾರು ರೈತರಿಗೆ ಸಾಲ ಸೌಲಭ್ಯ ಕಲ್ಪಿಸಿ, ಅವರ ಜೀವನ ಮಟ್ಟ ಸುಧಾರಿಸುವಲ್ಲಿ ಆರ್ಥಿಕವಾಗಿ ಸಫಲರಾಗುವಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಒಂದೆಡೆ ರಾಜಕೀಯ ಹೋರಾಟ ಇನ್ನೊಂದೆಡೆ ಸಾರ್ವಜನಿಕ ಸೇವೆ ಜೀವನದಲ್ಲಿ ಪಾಲಿಸಿಕೊಂಡು ಬಂದವರು, ಬಡವರ, ದೀನದಲಿತರ, ರೈತರ ಪರ ಇವೆರಡನ್ನೂ ತಮ್ಮ ಕೆಲಸ ಮಾಡಿದವರು. ಜೇವರ್ಗಿ ತಾಲೂಕಿನ ಸಮಗ್ರ ಸಮಸ್ಯೆಗಳ ಕುರಿತು ಅಧ್ಯಯನ ಮಾಡಿದವರು, ಕಲಬುರ್ಗಿವಾಣಿ ಪತ್ರಿಕೆಯ ಸಂಪಾದಕರಾಗಿ ಸಮರ್ಥವಾದ ಜವಾಬ್ದಾರಿಯನ್ನು ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಅವರ ಬದುಕಿನ ಬಹುಪಾಲು ಹೋರಾಟಗಳಿಂದ ಕಳೆದವರು. ರೈತರಿಗಾಗಿ ಬಡವರಿಗಾಗಿ ಜೀವನದುದ್ದಕ್ಕೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ದುಡಿದಿದ್ದಾರೆ.

ಬದುಕಿನುದ್ದಕ್ಕೂ ಹೋರಾಟಗಳ ಮೂಲಕ ರೈತರಿಗಾಗಿ, ಬಡವರಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ, ರಾಜಿ ಇಲ್ಲದ ನಿಷ್ಟುರ ವ್ಯಕ್ತಿತ್ವ ರೂಪಿಸಿಕೊಂಡು ಬಂದಿದ್ದಾರೆ. ಅದಕ್ಕಾಗಿ ಯಾವತ್ತು ತಮ್ಮತನವನ್ನು ಬಿಟ್ಟು ಕೊಡದೆ ಬದ್ಧತೆಯ ಪ್ರಭುದ್ಧತೆಯ ನಿಲುವುಗಳನ್ನು ತಳೆದುಕೊಂಡು ಸಾವಿರಾರು ಸಂಕಷ್ಟಗಳನ್ನು ಎದುರುಸಿ ಸೋತು ಗೆದ್ದವರು, ಜೀವನವೆ ಹೋರಾಟ, ಸಂಘಟನೆ, ಸಾಮಾಜಿಕ ನ್ಯಾಯಕ್ಕಾಗಿ ಸಮರ್ಪಿಸಿಕೊಂಡಿದ್ದಾರೆ. ಆನೇಕ ವೇದಿಕೆಗಳಲ್ಲಿ ರಾಜ್ಯದ ಹಿರಿಯ ನಾಯಕರ ಮಾತುಗಳಲ್ಲಿ ಕೇದಾರಲಿಂಗಯ್ಯನವರು ವಿಧಾನಸಭೆಗೆ ಪ್ರವೇಶ ಮಾಡುವ ಎಲ್ಲಾ ಅರ್ಹತೆ ಹೊಂದಿದ ವ್ಯಕ್ತಿಯೆಂದು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೋನಾ ಹಿಪ್ಪರಗಾ ಬ್ರಿಜ್ ಕಂ ಬ್ಯಾರೇಜ್‌ ನಿರ್ಮಾಣಕ್ಕಾಗಿ ಮಾಡಿದ ಹೋರಾಟದ ಫಲವಾಗಿ ಇಂದು ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಜ್ ಕಂ ಬ್ಯಾರೇಜ್‌ನಿಂದಾಗಿ ಇಂದು ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾಗಿ ಕಾರ್ಯ ಮಾಡುತ್ತಿದೆ. ಡಾ. ವೀರಪ್ಪ ಮೋಯ್ಲಿಯವರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಮ್ಮ ತಾಲೂಕಿನ ತೊಗರಿ ಬೆಳೆಗೆ ಕೀಟಬಾಧೆ ತಗುಲಿ ರೈತರು ಕಂಗಾಲಾದ ಸಂದರ್ಭದಲ್ಲಿ ಅಪಾರ ಪ್ರಮಾಣದ ತೊಗರಿ ಬೆಳೆ ಪರಿಹಾರ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನಿರಂತರ ಕೀಟಬಾಧೆ, ಬೆಳೆನೆಟಿ, ಆಸ್ತಿರವಾದ ಬೆಲೆಯಿಂದಾಗಿ ತೊಗರಿ ಕಣಜ ಎಂದು ಕರೆಯಿಸಿಕೊಂಡ ರೈತರ ಬೆಳೆಗೆ ನ್ಯಾಯಯುತವಾದ ಬೆಲೆ ಸಿಗಬೇಕೆಂಬ ನಿಟ್ಟಿನಲ್ಲಿ ತಾಲೂಕಿನಾದ್ಯಂತ ೩೧ ದಿನಗಳ ಪಾದಯಾತ್ರೆ ಕೈಗೊಂಡು ೭ ದಿನಗಳ ಆಮರಣಾಂತ ಉಪವಾಸ ಸತ್ಯಾಗ್ರಹದ ಫಲವಾಗಿ ಸನ್ಮಾನ್ಯ ಶ್ರೀ ಧರ್ಮಸಿಂಗ ಅವರು ಮುಖ್ಯಮಂತ್ರಿಗಳಾಗಿದ್ದಾಗ 'ತೊಗರಿಬೋರ್ಡ' ರಚನೆ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ.

ಇಂತಹ ಶ್ರೇಷ್ಠ ವ್ಯಕ್ತಿತ್ವದ ಶ್ರೀ ಕೇದಾರಲಿಂಗಯ್ಯನವರ ನಿಷ್ಠೆ, ಪ್ರಾಮಣಿಕತೆ, ಹೋರಾಟದ ಮನೋಭಾವ, ಇಂದಿನ ಯುವ ಪೀಳಿಗೆ ಅನುಕರಿಸಬೇಕು ಮತ್ತು ಅನುಸರಿಸಬೇಕಾಗಿದೆ. ಇಂತಹ ಆಪ ರೂಪದ ವ್ಯಕ್ತಿತ್ವದ ಧೀಮಂತನಾಯಕನನ್ನು ಕುರಿತು ಅಭಿನಂದನಾ ಗ್ರಂಥ ಹೊರತರುತ್ತಿರುವ ಯುವ ಲೇಖಕ ಸದಾನಂದ ಪಾಟೀಲರು ಅಭಿನಂದನಾರ್ಹರು, ಇವರಿಂದ ಇನ್ನಷ್ಟು ಕೃತಿಗಳು ಹೊರಬರಲಿ' ಎಂದು ಆಶಿಸುತ್ತೇನೆ.” ಸುಮಾರು ೨೨೦ ಪುಟಗಳ ಈ ಅಭಿನಂದನಾ ಗ್ರಂಥವನ್ನು ಮಾಹಿತಿಗಾಗಿ ಓದಿ ನೋಡಬಹುದಾಗಿದೆ.