ಸಾಕು ತಂದೆ ರೂಮಿ

ಸಾಕು ತಂದೆ ರೂಮಿ

ಪುಸ್ತಕದ ಲೇಖಕ/ಕವಿಯ ಹೆಸರು
ಎನ್ ಸಿ ಮಹೇಶ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೩೦.೦೦, ಮುದ್ರಣ : ೨೦೨೩

ನಾಟಕಗಳನ್ನು ಬರೆದು, ಮುದ್ರಿಸಿ ಹೊರತರುವ ನಾಟಕಕಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಬಹುಷಃ ಇದಕ್ಕೆ ಕಾರಣ ಬರೆದ ನಾಟಕಗಳು ರಂಗದ ಮೇಲೆ ಪ್ರದರ್ಶನ ಕಾಣುವುದು ಬಹಳ ಕಡಿಮೆ. ಈ ಕಾರಣದಿಂದ ಬರೆದ ನಾಟಕಗಳು ಪ್ರದರ್ಶನದ ಭಾಗ್ಯವಿಲ್ಲದೆ ಸೊರಗತೊಡಗಿವೆ. ದಶಕಗಳ ಹಿಂದೆ ರಂಗ ಮಂದಿರಗಳಲ್ಲಿ ಬಹಳಷ್ಟು ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಈಗ ಇವುಗಳ ಸಂಖ್ಯೆ ಬೆರಳೆಣಿಕೆಯಷ್ಟು. 

ಭರವಸೆಯ ನಾಟಕಕಾರ ಎನ್ ಸಿ ಮಹೇಶ್ ಅವರು ಬರೆದ ‘ಸಾಕು ತಂದೆ ರೂಮಿ' ಎಂಬ ನಾಟಕ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ನೂರು ಪುಟಗಳಲ್ಲಿ ಸತ್ವಯುತವಾಗಿರುವ ಕುತೂಹಲಕಾರಿಯಾದ ಕಥೆಯನ್ನು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸಿದ್ದಾರೆ ಲೇಖಕರು. ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಲೇಖಕ ವೀರಣ್ಣ ಮಡಿವಾಳರ. ಇವರ ಅಭಿಪ್ರಾಯದ ಆಯ್ದ ಭಾಗ ಇಲ್ಲಿದೆ... 

“ಬಹಳ ಕಾಲದ ನಂತರ ಈ ನಾಟಕ ನನ್ನಲ್ಲಿ ಹುಟ್ಟಿಸಿರುವ ಸಾಯಿಸಿರುವ ಭಾವಗಳನ್ನ ದಾಖಲಿಸಲು ಪದಗಳಿಗಾಗಿ ಹಗಲು ರಾತ್ರಿ ಹುಡುಕಾಡಿ ಸೋತು ಸಂಕಟಪಡುತ್ತಿದ್ದೇನೆ ಸಂಭ್ರಮಪಡುತ್ತಿದ್ದೇನೆ. ಇಂಥದೊಂದು ದಿವ್ಯ ಸಂದಿಗ್ಧಕ್ಕೆ ನನ್ನನ್ನ ನೂಕಿದ ಮಹೇಶ್‌ರಿಗೆ ಅಸೂಯೆಯ ಅಭಿನಂದನೆ ಸಲ್ಲಿಸುತ್ತಾ ರೂಮಿ ಎಂಬ ದೀಪ, ದೈವಿಕ ಹಕ್ಕಿ, ಅಸಮಾನ್ಯ ಜೀವ, ಅರಿವಿನ ಆಸ್ಫೋಟದ ಸದ್ದು, ಒಲವಿನ ಹಾಲಾಹಲದ ಸುಪ್ತನದಿಯ ಕಾಣಲು, ಕಾಣಿಸಲು, ಬೊಗಸೆಯಲ್ಲಿ ತುಂಬಿಕೊಳ್ಳಲು, ನಿಮಗೆ ದಾಟಿಸಲು ವ್ಯರ್ಥ ಮತ್ತು ಸಾರ್ಥಕ ಪ್ರಯತ್ನ ಮಾಡುತ್ತಿದ್ದೇನೆ. ಈ ಅಪರಾಧಕ್ಕೆ ನನ್ನನ್ನೇ ಆಯ್ಕೆ ಮಾಡಿಕೊಂಡ ‘ಸಾಕುತಂದೆ ರೂಮಿ’ಯ ಸೃಜನಶೀಲ ದೈತ್ಯ ಕಥೆಗಾರ ಕವಿ ಈ ಕಾಲದ ಬರವಣಿಗೆಯನ್ನ ಕನ್ನಡವನ್ನ ಸಹ್ಯಗೊಳಿಸುತ್ತಿರುವ ಕೆಲವೇ ಬರಹಗಾರರಲ್ಲಿ ಒಬ್ಬರಾದ ಎನ್.ಸಿ. ಮಹೇಶ್‌ರಿಗೆ ತ್ಯಾಂಕ್ಯೂ.

ಇಲ್ಲಿ ನಾನು ಈ ಹೊತ್ತಿನ ಕನ್ನಡದ ನಾಟಕದ ಚಲನೆಯನ್ನ ಅದರ ಘನತೆಯನ್ನ ಸತ್ವವನ್ನ ಕುರಿತು ಮಾತನಾಡಲಾರೆ. ಕನ್ನಡ ನಾಟಕದ ಸತ್ವಶೀಲ ಚಲನೆ ನಿಂತು ಹೋಗಿ ಎರಡು ದಶಕಗಳೇ ಆದವು. ಇತ್ತೀಚಿನ ಕೆಲವರ ನಾಟಕ ರಚಿಸುವ ಪ್ರಯತ್ನಗಳು ತಮ್ಮೊಂದಿಗೆ ತಾವೇ ಮಾಡಿಕೊಳ್ಳುವ ನೋಡಿಕೊಳ್ಳುವ ಲಿಂಗಭೇದವಿಲ್ಲದ ಅಶಿಸ್ತಿನ ಕುಸ್ತಿಯಾಟದಂತಿವೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ.
ಇತ್ತೀಚಿನ ರಂಗಪ್ರಸ್ತುತಿಗಳು ಅನುವಾದಗಳ ಮೇಲೆ, ಕಾವ್ಯ, ಕಥೆ ಮತ್ತು ಕಾದಂಬರಿಗಳನ್ನ ರಂಗರೂಪಗಳಾಗಿ ಪರಿವರ್ತಿಸುವ ಅನಿವಾರ್ಯತೆಗೆ ಯಾಕೆ ತೆರೆದುಕೊಂಡಿವೆ ಎಂಬ ಕಡೆ ಗಮನಹರಿಸಿದರೆ ನಾಟಕ ಮತ್ತು ನಾಟಕಕಾರನ ಗೈರುಹಾಜರಿ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ. ಈ ಸೃಜನಶೀಲ ನಿರ್ವಾತದಲ್ಲಿ ಏನೂ ಬೆಳೆಯುತ್ತಿಲ್ಲ, ಮೊಳಕೆಯೊಡೆಯುತ್ತಿಲ್ಲ ಎಂದೂ ನಾನು ಹೇಳುತ್ತಿಲ್ಲ, ಆದರೆ ಅನುಭವಕ್ಕೆ ಬರುತ್ತಿಲ್ಲ, ಜನಮಾನಸದ ಇಂದ್ರಿಯಾನುಭವಕ್ಕೆ ಸಿಗುತ್ತಿಲ್ಲ ಎಂದಷ್ಟೇ ನನ್ನಂಥವರ ಕೊರಗು. ‘ಸಾಕುತಂದೆ ರೂಮಿ’ ಪದಾಡಂಬರವಿಲ್ಲದ, ಶಾಬ್ದಿಕ ಸರ್ಕಸ್ಸು ಮಾಡದ ಹೃದಯವಂತ ಮನಸ್ಸೊಂದನ್ನ ಹೃದಯದ ಚಲುವಿನಿಂದಲೇ ಕಾಣಿಸುವ, ಕಾವ್ಯದ ಜೀವರಕ್ತದಿಂದ ಗಾಢವಾಗಿ ತಾಕುವ ಒಂದು ಅಪರೂಪದ ಕಲಾಕೃತಿ. ಇದನ್ನ ಈ ಕಾಲದ ಕ್ಲಾಸಿಕ್ ಎಂದು ನಾನು ಹೇಳಬಹುದಾದರೂ ಆ ನಿರ್ಣಯವನ್ನ ಲೋಕಕ್ಕೆ ಮತ್ತು ಕಾಲಕ್ಕೇ ಬಿಟ್ಟುಬಿಡುವುದೊಳಿತು. ಕನ್ನಡದ ಮನಸ್ಸು ಒಂದು ಕೃತಿಯ ಮೌಲ್ಯಗಟ್ಟುವಿಕೆಯಲ್ಲಿ ಯಾವತ್ತಿಗೂ ಪ್ರಾಮಾಣಿಕವಾಗಿದೆ ಎಂಬುದು ನನ್ನಂಥ ಬಹುತೇಕರ ಅನುಭವ ಮತ್ತು ನಂಬಿಕೆ.

‘ಸಾಕುತಂದೆ ರೂಮಿ’ ಯಲ್ಲಿ ಸಕಲ ಜೀವ ಪ್ರವಾಹದ ಜೀವಂತಿಕೆಯಿದೆ. ಇಲ್ಲಿ ಪಾತ್ರಗಳು ಮಾತ್ರ ಜೀವಿಸುತ್ತಿಲ್ಲ, ಕಾಲವೇ ತುಂಬು ಜೀವಂತಿಕೆಯಿಂದ ಜೀವಿಸುತ್ತಿದೆ. ಕಾಲವೆಂಬ ತುಂಬುಹೊಳೆಯಲ್ಲಿ ತೇಲಿ ಹೊರಟ ನೈದಿಲೆಗಳಂತೆ ಇಲ್ಲಿನ ಪಾತ್ರಗಳಿವೆ. ಹೃದಯದ ಕಣ್ಣು ತೆರೆದಷ್ಟೂ ಚಲುವು ಇಲ್ಲಿ ದಕ್ಕಲು ಸಾಧ್ಯವಿದೆ, ಸಾಧ್ಯಮಾಡಿಕೊಂಡ ವರಿಗೆ. ಇಂದಿನ ರಂಗಕೃತಿಗಳ ಬಹಳ ದೊಡ್ಡ ಶಕ್ತಿ ಮತ್ತು ಮಿತಿ, ಮಾತು. ಮಾತಿನ ಮಂಟಪಗಳಲ್ಲ, ಮಾತಿನ ಪರ್ವತಗಳೇ ಇಂದು ರಂಗಮಂದಿರ ತುಂಬಿವೆ ತುಂಬುತ್ತಿವೆ.

ಪ್ರೇಕ್ಷಕ ಈ ಶಬ್ದಯುದ್ಧದ ಬಲಿಪಶು. ನಟರಾಜ ಹುಳಿಯಾರರು ಹೇಳುವಂತೆ ‘ಇಡಿಯಾದ ಒಂದು ಸಂಕಲನದಲ್ಲಿ ಕಣ್ಮನ ಸೆಳೆಯುವ ಒಂದು ರೂಪಕ, ಸಾಲು ಸಿಕ್ಕರೂ ಅದು ಉತ್ತಮ ಸಂಕಲನ’ (ಇದೇ ಭಾವದಲ್ಲಿ ಅವರು ಹೇಳಿದ್ದಾರೆ, ನನಗೆ ದಕ್ಕಿದಂತೆ ನಾನಿಲ್ಲಿ ದಾಖಲಿಸಿರುವೆ). ಹಾಗೆ ಇಂದಿನ ನಾಟಕಗಳಲ್ಲಿ ಗಂಟೆಗಟ್ಟಲೆ ಕೂತು ವ್ಯವಧಾನದಿಂದ ಕಾದರೂ ಒಂದು ಎದೆತಾಕುವ ಮಾತಿಗೆ ಹಂಬಲಿಸಿದರೂ ಸಿಕ್ಕದೆ ಹೋಗಿದ್ದೇ ಬಹಳಷ್ಟು ಸಾರಿ ಸತ್ಯ. ಆದರೆ ಈ ಕೃತಿ ಅದಕ್ಕೆ ಅಪವಾದದಂತಿದೆ. ಇಲ್ಲಿ ನಮ್ಮ ಎಂದಿನ ಬದುಕಿನ ಸಹಜ ಸಂಭಾಷಣೆಗಳಿಲ್ಲ, ಸವಕಲು ವಾಚ್ಯ ಪದನಾಣ್ಯಗಳಿಲ್ಲ. ಇಲ್ಲಿರುವುದು ಸಾಗರ ಸಮೂಹದಿಂದ ಆಯ್ದು ತಂದ ಕೆಲವೇ ಹೃದ್ಯ ದಿವ್ಯ ಚಲುವಿನ ಆಕರ್ಷಕ ನಮ್ಮ ಬೆಲೆಗೆ ನಿಲುಕದ ಪದಾಭರಣಗಳು ಮತ್ತು ಇವು ಈ ಲೋಕದ ಸಂಭಾಷಣೆಗಳೂ ಅಲ್ಲ. ಇಲ್ಲಿರುವ ಪಾತ್ರಗಳೂ ನಮಗೆ ನಿತ್ಯ ಎದುರಾಗುವುದಿಲ್ಲ, ಹಾಗಂತ ಇವು ನಮ್ಮ ಅನುಭವಲೋಕದಿಂದ ದೂರದವುಗಳಲ್ಲ. ಇವು ಕಾಲವೇ ಹುಟ್ಟುಹಾಕುವ ಅಪರೂಪದ ಚೇತನಗಳು. ಸೃಜನಶೀಲ ತಪನದಿಂದ ಮಾತ್ರ ಹುಟ್ಟಬಹುದಾದ ದಿವ್ಯಾನುಭವಗಳು.

ಈ ನಾಟಕ ರೂಮಿಯ ಬದುಕನ್ನು ಪರಿಚಯಿಸುವ ಕೃತಿಯಲ್ಲ, ರೂಮಿಯ ಕಾವ್ಯಚೇತನವನ್ನ ಕಾಲದ ಅಗತ್ಯಕ್ಕೆ ತಕ್ಕಂತೆ ಸೃಜನಶೀಲವಾಗಿ ಬುದ್ಧಿ ಹೃದಯ ಆತ್ಮದಿಂದ ಸೃಷ್ಟಿಸಿರುವ ಅಪರೂಪದ ಕಲಾಕೃತಿ. ‘ಸಾಕುತಂದೆ ರೂಮಿ’ಯ ಶೀರ್ಷಿಕೆಯೇ ಧ್ವನಿಪೂರ್ಣವಾಗಿದೆ. ರೂಮಿ ಸಾಕಿದ ತಂದೆಯೂ ಹೌದು, ಸಾಕಪ್ಪಾ ತಂದೆ ಎನ್ನಿಸುವ ರೂಮಿಯೂ ಹೌದು, ನನ್ನನ್ನ ಸಾಕು ತಂದೆ ಎಂದು ದೈನ್ಯದಿಂದ ಬೇಡಿಕೊಳ್ಳಬೇಕೆನ್ನಿಸು ವಂಥ ರೂಮಿಯೂ ಹೌದು. ಇಲ್ಲಿರುವ ಪಾತ್ರಗಳು ಗಂಡು ಹೆಣ್ಣು ನಾಯಕ ನಾಯಕಿ ಖಳನಾಯಕ ಎಂಬ ನಮ್ಮ ಯಾವ ವಿಂಗಡನೆಗೂ ನಿಲುಕದಷ್ಟು ಗಾಢವಾಗಿವೆ. ಇಲ್ಲಿನ ಎಲ್ಲ ಪಾತ್ರಕ್ಕೂ ತಕ್ಕುದಾದ ನ್ಯಾಯ ದಕ್ಕಿದೆ. ಇಲ್ಲಿನ ಪಾತ್ರ ಮತ್ತು ಅಪಾತ್ರಗಳು ಪರಿಪೂರ್ಣತೆಗೆ ಹತ್ತಿರ ಇವೆ. ಇದು ಸೃಜನಶೀಲ ಪರಂಪರೆಯಲ್ಲಿ ಅಪರೂಪಕ್ಕೆ ಸಂಭವಿಸುವ ವಿದ್ಯಮಾನ. ಇಲ್ಲಿ ಹೂವು, ಹಕ್ಕಿ, ರೆಕ್ಕೆ, ಸೂರ್ಯ, ಚಂದ್ರ, ನಕ್ಷತ್ರಗಳೂ ಸಹ ರಕ್ತ ಮಾಂಸ ತುಂಬಿದ ಸಹಜ ಜೀವಂತ ಪಾತ್ರಗಳೇ ಆಗಿವೆ. ಅದು ಈ ಕಲಾಕೃತಿಯ ಹೆಗ್ಗಳಿಕೆ.

ಗಂಡು ಹೆಣ್ಣಿನ ಸಂಬಂಧವನ್ನ, ಗಂಡು ಗಂಡಿನ ಸಂಬಂಧವನ್ನ, ಹೆಣ್ಣು ಹೆಣ್ಣಿನ ಸಂಬಂಧವನ್ನ ನಮ್ಮ ಓದಿನ ರಾಜಕಾರಣ ಬಹಳಷ್ಟು ಸಂದರ್ಭಗಳಲ್ಲಿ ದೇಹಕೇಂದ್ರಿತ ವಾಗಿಯೇ ನೋಡುತ್ತದೆ. ಆದರೆ ಈ ಕೃತಿಯಲ್ಲಿ ರೂಮಿ ಕಾಲ ಕಾಲದ ನಮ್ಮ ಈ ಮಿತಿಯನ್ನ ತಿಳಿಗೊಳಿಸುವಂತೆ ಮನುಷ್ಯ ಸಂಬಂಧಗಳಿಗೆ ಬಹುದೊಡ್ಡ ಘನತೆಯನ್ನ ತರುತ್ತಾನೆ. ಶಂಸ್ ಮತ್ತು ರೂಮಿ, ರೂಮಿ ಮತ್ತು ಆತನ ಇನ್ನೊಬ್ಬ ಪ್ರೇಮಿ, ಅಲಾಲ್‌ದೀನ್ ಮತ್ತು ಕಿಮಿಯಾರ ನಡುವಿನ ಸಂಬಂಧವನ್ನ ನಮ್ಮ ಸಾಂಪ್ರದಾಯಿಕ ಅಥವಾ ಈಗಾಗಲೇ ಪರಂಪರಾಗತವಾಗಿ ನಿರೂಪಿಸಲಾಗಿರುವ ನೀತಿಯಂತೆ ಇಲ್ಲಿ ನಾವು ನೋಡಲಾಗುವುದಿಲ್ಲ. ಹಾಗೆ ನೋಡಿದರೆ ಮನುಷ್ಯ ಬದುಕಿಗೆ ಅಗತ್ಯವಾಗಿರುವ ನಾವು ತಿನ್ನುವ ಅನ್ನ ನೀರು ಗಾಳಿಯ ಆಚೆಗೆ ಏನೆಲ್ಲ ಬೇಕೋ ಅದೆಲ್ಲ ತುಂಬಿತುಳುಕುವ ಸಮೃದ್ಧ ಸರೋವರವನ್ನ ನಾವು ಕಾಣದೆ ಹೋಗಬಹುದು, ದಕ್ಕದೇ ಹೋಗಬಹುದು ನನಗಿನ್ನೂ ನೆನಪಿದೆ.

ಮಹೇಶ್ ಈ ಹಿಂದೆ ಬರೆದಿದ್ದ ನಾಟಕವೊಂದನ್ನ ಅದಿನ್ನೂ ಕಟ್ಟುವ ಹಂತದಲ್ಲಿದ್ದಾಗಲೇ ಇದನ್ನ ರಂಗರೂಪಕ್ಕೆ ತರಲು ಸಾಧ್ಯವಿಲ್ಲ ಎಂಬ ಅಘೋಷಿತ ನಿರ್ಣಯವನ್ನ ಮಾಡಲಾಗಿತ್ತು. ಅದಕ್ಕೆ ಬಹುಮುಖ್ಯ ಕಾರಣ ಆ ನಾಟಕದ ಅಸಂಗತತೆ. ಹಾಗಾಗಿ ಇದು ಸಾರ್ವಜನಿಕವಾಗಿ ಪ್ರದರ್ಶನಕ್ಕೆ ತಕ್ಕುದಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು. ಈ ಕುರಿತು ಮಹೇಶರಿಗೆ ಹೆಚ್ಚು ತಿಳಿದಿದೆ. ಅದನ್ನ ಅವರೇ ಬಹಿರಂಗ ಪಡಿಸಬೇಕು.

‘ಸಾಕುತಂದೆ ರೂಮಿ’ ನಾಟಕವನ್ನ ರಂಗಕೃತಿಯಾಗಿ ಓದಲು, ರಂಗದ ಮೇಲೆ ತರಲೂ ಒಂದು ಸಿದ್ಧತೆ ಬೇಕು. ಪ್ರೇಕ್ಷಕರಿಗೂ ಈ ನಾಟಕ ಸ್ವೀಕರಿಸಲು ಕೂಡ ಬಹುದೊಡ್ಡ ಮಾನಸಿಕ ಭಾವನಾತ್ಮಕ ಬೌದ್ಧಿಕ ಸಿದ್ಧತೆಯಂತೂ ಬೇಕೇ ಬೇಕು. ಇಲ್ಲದೆ ಹೋದರೆ ಕೆಲವರಿಗೆ ನಿರಾಶೆಯಾಗಬಹುದು, ಕೆಲವರಿಗೆ ಅಸಹನೀಯ ಎನ್ನಿಸಬಹುದು, ಎಲ್ಲೋ ಕೆಲವರಿಗೆ ಮುಕ್ತಮನಸ್ಸಿನಿಂದ ಹೋದವರಿಗೆ ಹೊಸದೇನೋ ದಕ್ಕಬಹುದು.

ಈ ನಾಟಕ ನಮ್ಮ ಈವರೆಗಿನ ತಿಳುವಳಿಕೆಯನ್ನ ಅಳಿಸಿಹಾಕಿ ಹೊಸ ಆಲೋಚನಾ ಕ್ರಮವನ್ನ ಹುಟ್ಟುಹಾಕುವ ಪರಿಗೆ ಬೆರಗುಮೂಡುತ್ತದೆ. ನಮ್ಮ ದೇಹದ ವ್ಯಾಖ್ಯಾನ, ನಮ್ಮ ಹೃದಯದ ವ್ಯಾಖ್ಯಾನ, ನಮ್ಮ ಉಸಿರಿನ ವ್ಯಾಖ್ಯಾನ ನಮ್ಮ ಬದುಕಿನ ವ್ಯಾಖ್ಯಾನ ಗಳನ್ನೆಲ್ಲ ಇದು ಹಿಂದಕ್ಕೆ ಸರಿಸಿ ಹೊಸದೇ ಆದ ದೃಷ್ಟಿಕೋನವನ್ನ ಹುಟ್ಟುಹಾಕುತ್ತದೆ. ಹಾಗಾಗಿ ಈ ಔನ್ನತ್ಯಕ್ಕೆ ತಲುಪುವುದು ಯಾವುದೇ ಒಬ್ಬ ಸೃಜನಶೀಲ ಬರಹಗಾರನ ಸಾರ್ಥಕತೆಯೇ ಸರಿ. ‘ಸಾಕುತಂದೆ ರೂಮಿ’ ಯ ಮೂಲಕ ಕನ್ನಡ ಸೃಜನಶೀಲ ನಾಟಕ ಪರಂಪರೆಗೆ ಕಾವ್ಯದ ಹೊಸ ತಂಗಾಳಿ ಬೀಸಿದಂತಾಗಿದೆ. ಈ ಸಿಹಿಗಾಳಿಯ ಸವಿ ಎಲ್ಲರ ಎದೆಗೂ ರುಚಿಸಲಿ.”